ಕೊಡಗು ವೃತ್ತಕ್ಕೆ ಕೊನೆಗೂ ಅರಣ್ಯ ಸಂರಕ್ಷಣಾಧಿಕಾರಿ ನೇಮಕ, ಸೋನಾಲ್‌ ವ್ರಿಶ್ನಿ ನೂತನ ಸಿಎಫ್‌
ಕನ್ನಡ ಸುದ್ದಿ  /  ಕರ್ನಾಟಕ  /  ಕೊಡಗು ವೃತ್ತಕ್ಕೆ ಕೊನೆಗೂ ಅರಣ್ಯ ಸಂರಕ್ಷಣಾಧಿಕಾರಿ ನೇಮಕ, ಸೋನಾಲ್‌ ವ್ರಿಶ್ನಿ ನೂತನ ಸಿಎಫ್‌

ಕೊಡಗು ವೃತ್ತಕ್ಕೆ ಕೊನೆಗೂ ಅರಣ್ಯ ಸಂರಕ್ಷಣಾಧಿಕಾರಿ ನೇಮಕ, ಸೋನಾಲ್‌ ವ್ರಿಶ್ನಿ ನೂತನ ಸಿಎಫ್‌

ಸಾಕಷ್ಟು ಸಮಸ್ಯೆಗಳಿಂದ ಕಾಯಂ ಅಧಿಕಾರಿಯ ನಿರೀಕ್ಷೆಯಲ್ಲಿದ್ದ ಕೊಡಗು ಅರಣ್ಯ ವೃತ್ತಕ್ಕೆ ಈಗ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಯ ಸೋನಾಲ್‌ ವ್ರಿಶ್ನಿಅ ವರನ್ನು ನೇಮಕ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.

ಕೊಡಗು ವೃತ್ತ ಸಂರಕ್ಷಣಾಧಿಕಾರಿಯಾಗಿ ನೇಮಕಗೊಂಡ ಸೋನಾಲ್‌ ವ್ರಿಶ್ನಿ.
ಕೊಡಗು ವೃತ್ತ ಸಂರಕ್ಷಣಾಧಿಕಾರಿಯಾಗಿ ನೇಮಕಗೊಂಡ ಸೋನಾಲ್‌ ವ್ರಿಶ್ನಿ.

ಮಡಿಕೇರಿ: ವನ್ಯಜೀವಿ,ಅರಣ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆಗಳಿದ್ದರೂ ಕೊಡಗು ಅರಣ್ಯ ವೃತ್ತಕ್ಕೆ ಕಾಯಂ ಅಧಿಕಾರಿ ನೇಮಿಸಲು ಮೀನ ಮೇಷ ಮಾಡುತ್ತಲೇ ಇದ್ದ ಕರ್ನಾಟಕ ಸರ್ಕಾರ ಕೊನೆಗೂ ಅಧಿಕಾರಿಯೊಬ್ಬರನ್ನು ನೇಮಕ ಮಾಡಿದೆ. ಐದು ತಿಂಗಳ ಹಿಂದೆಯಷ್ಟೇ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ಬಡ್ತಿ ಪಡೆದು ಚಿಕ್ಕಮಗಳೂರಿನ ಕಾರ್ಯಯೋಜನೆ ವಿಭಾಗದಲ್ಲಿಯೇ ಮುಂದುವರಿದಿದ್ದ ಸೋನಾಲ್‌ ವ್ರಿಶ್ನಿ ಅವರನ್ನು ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿಯನ್ನಾಗಿ ಸರ್ಕಾರ ನೇಮಿಸಿ ಆದೇಶ ಹೊರಡಿಸಿದೆ. ಸುಮಾರು ಐದು ತಿಂಗಳಿನಿಂದ ಈ ಹುದ್ದೆ ಖಾಲಿ ಇತ್ತು. ಇದಕ್ಕೂ ಮೊದಲು ಕೂಡ ಈ ಹುದ್ದೆಗೆ ಯಾರನ್ನೂ ನೇಮಿಸಿರಲಿಲ್ಲ. ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಮನೋಜ್‌ ತ್ರಿಪಾಠಿ ಅವರು ಬಡ್ತಿ ಪಡೆದು ಉನ್ನತ ಹುದ್ದೆಗೆ ಹೋಗಿದ್ದರಿಂದ ಈ ಹುದ್ದೆ ಖಾಲಿ ಇತ್ತು. ಈಗ ಸೋನಾಲ್‌ ವ್ರಿಶ್ನಿ ಅವರ ನೇಮಕವಾಗಿದೆ.

ಸೋನಾಲ್‌ ಎಲ್ಲಿಯವರು

ಸೋನಾಲ್‌ ಅವರು ಮೂಲತಃ ಉತ್ತರ ಪ್ರದೇಶದವರು 2011ನೇ ಬ್ಯಾಚ್‌ನ ಐಎಫ್‌ಎಸ್‌ ಅಧಿಕಾರಿ. ಗದಗ, ಧಾರವಾಡ ಜಿಲ್ಲೆಗಳಲ್ಲಿ ಡಿಸಿಎಫ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ಐಎಫ್‌ಎಸ್‌ ಅಧಿಕಾರಿಯಾಗಿ ಸದ್ಯ ಚಿಕ್ಕಮಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿಯಾಗಿರುವ ಯಶಪಾಲ್‌ ಕ್ಷೀರಸಾಗರ್‌ ಅವರ ಪತ್ನಿಯಾಗಿರುವ ಸೋನಾಲ್‌ ಅವರು ಚಿಕ್ಕಮಗಳೂರು ಕಾರ್ಯ ಯೋಜನೆಯಲ್ಲಿ ಡಿಸಿಎಫ್‌ ಆಗಿದ್ದರು. ಐದು ತಿಂಗಳ ಹಿಂದೆ ಬಡ್ತಿಯೊಂದಿಗೆ ಅದೇ ಹುದ್ದೆಯಲ್ಲಿದ್ದರು. ಈಗ ಸರ್ಕಾರ ಅವರನ್ನು ಕೊಡಗಿಗೆ ನಿಯೋಜಿಸಿದೆ.

ಅರಣ್ಯದ ವಿಚಾರದಲ್ಲಿ ಅತೀ ಸೂಕ್ಷ್ಮವಾಗಿರುವ ಈ ಜಿಲ್ಲೆಗೆ ಪೂರ್ಣ ಪ್ರಮಾಣದ ಹುದ್ದೆಯನ್ನು ಅರಣ್ಯ ಇಲಾಖೆ ನಿಯೋಜಿಸುತ್ತಾ ಬಂದಿದೆ. ಈಗ ಮಾತ್ರ ಈ ಹುದ್ದೆ ಖಾಲಿಯಿದ್ದು, ಒಬ್ಬರು ಅಧಿಕಾರಿ ಪ್ರಭಾರ ಮುಗಿಸಿ ಈಗ ಮತ್ತೊಬ್ಬರಿಗೆ ಪ್ರಭಾರ ವಹಿಸಲಾಗಿದೆ. ಮನೋಜ್‌ ತ್ರಿಪಾಠಿ ಅವರ ಬಳಿಕ ಡಾ.ಮಾಲತಿ ಪ್ರಿಯಾ ಕೊಡಗು ಉಸ್ತುವಾರಿಯಾಗಿದ್ದರು. ಈಗ ಹಾಸನ ವೃತ್ತ ಸಂರಕ್ಷಣಾಧಿಕಾರಿ ವಿ.ಏಡುಕೊಂಡಲು ಅವರಿಗೆ ಉಸ್ತುವಾರಿ ನೀಡಲಾಗಿತ್ತು. ಹಾಸನ, ಚಿಕ್ಕಮಗಳೂರು ಸಹಿತ ಹಲವು ವೃತ್ತಗಳಿಗೆ ಅಧಿಕಾರಿಗಳನ್ನು ನಿಯೋಜಿಸಿದ್ದರೂ ಕೊಡಗಿಗೆ ನಿಯೋಜಿಸದೇ ಇರುವುದು ಆಕ್ರೋಶಕ್ಕೆ ಕಾರಣವಾಗಿತ್ತು.

ಕೊಡಗಿನಲ್ಲಿ ಕಾಡಾನೆ ಹಾವಳಿಯಿಂದ ಜನ ಸಾಯುತ್ತಿರುವುದು ಹೆಚ್ಚುತ್ತಲೇ ಇದೆ. ಮತ್ತೊಂದು ಕಡೆ ಆನೆಗಳೂ ಜೀವ ಬಿಡುತ್ತಿವೆ. ಇದರೊಟ್ಟಿಗೆ ಹುಲಿಗಳ ಸಂಖ್ಯೆಯೂ ಅಧಿಕವಾಗಿದೆ. ಅವುಗಳ ಸಂಘರ್ಷವೂ ಹೆಚ್ಚೇ ಇದೆ.

ಸ್ಥಳೀಯರು ಹೇಳೋದೇನು

ಕೊಡಗಿನಲ್ಲಿ ಜಿಲ್ಲಾಧಿಕಾರಿ ಹುದ್ದೆಗಿಂತಲೂ ಪ್ರಮುಖವಾದದ್ದು ಅರಣ್ಯ ವೃತ್ತ ಸಂರಕ್ಷಣಾಧಿಕಾರಿ ಹುದ್ದೆ. ಕರ್ನಾಟಕದಲ್ಲಿ ಉತ್ತರ ಕನ್ನಡ, ಚಾಮರಾಜನಗರದ ನಂತರ ಪ್ರಮುಖ ಅರಣ್ಯ ಹೊಂದಿರುವ ಜಿಲ್ಲೆ ಕೊಡಗು. ದಶಕಗಳಿಂದಲೂ ಇಲ್ಲಿ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳನ್ನು ವೃತ್ತದ ಮುಖ್ಯಸ್ಥರಾಗಿ ನಿಯೋಜಿಸುತ್ತಾ ಬಂದಿದೆ. ಹುಣಸೂರು ವನ್ಯಜೀವಿ ವ್ಯಾಪ್ತಿಯ ನಾಗರಹೊಳೆಯ ಉಸ್ತುವಾರಿಯೂ ಸೇರಿದಂತೆ ಕೊಡಗಿನ ವ್ಯಾಪ್ತಿಯಲ್ಲಿ ಮೂರು ವನ್ಯಜೀವಿ ವಿಭಾಗಗಳು, ಸಾಮಾನ್ಯ ವಿಭಾಗಗಳೂ ವೃತ್ತ ಸಂರಕ್ಷಣಾಧಿಕಾರಿ ವ್ಯಾಪ್ತಿಗೆ ಬರುತ್ತವೆ. ಕಾಯಂ ಅಧಿಕಾರಿಯೇ ಇಲ್ಲದೇ ಇದ್ದರೆ ಸಮಸ್ಯೆ ಹೆಚ್ಚು ಎನ್ನುವುದು ಕೊಡಗಿನ ಪರಿಸರ ಪ್ರೇಮಿಗಳ ಅಭಿಪ್ರಾಯ.

ಕೊಡಗಿನಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆ ಖಾಲಿ ಇದ್ದುದು ಕಡಿಮೆ. ಮೊದಲಿನಿಂದಲೂ ದಕ್ಷ ಹಾಗೂ ಜನರೊಂದಿಗೆ ಒಡನಾಟ ಇಟ್ಟುಕೊಂಡು ಕೆಲಸ ಮಾಡಿದ ಅಧಿಕಾರಿಗಳನ್ನು ನಿಯೋಜಿಸುತ್ತಾ ಬರಲಾಗಿದೆ. ಪ್ರಭಾರ ಇದ್ದರೂ ಅವರು ತಮ್ಮ ವಿಭಾಗ ನೋಡಿಕೊಳ್ಳುವುದು ಬಿಟ್ಟು ಇಲ್ಲಿ ಪೂರ್ಣ ಪ್ರಮಾಣದಲ್ಲಿ ನೋಡಲಾಗದು. ಸಾಕಷ್ಟು ಇಲಾಖೆ ಅಧಿಕಾರಿಗಳು ಬೇರೆ ಬೇರೆ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅರಣ್ಯ ಇಲಾಖೆಯಲ್ಲಿ ಸೇವೆ ಮಾಡಲು ಕೊಡಗಿನಂತ ಸೂಕ್ಷ್ಮ ಪ್ರದೇಶಗಳಿಗೆ ಬರಲು ಹಿಂದೇಟು ಹಾಕುವುದೂ ನಡೆದಿದೆ. ಸರ್ಕಾರ ಕೂಡಲೇ ಕೊಡಗಿಗೆ ಪೂರ್ಣ ಪ್ರಮಾಣದ ಅಧಿಕಾರಿ ನಿಯೋಜಿಸಬೇಕು ಎನ್ನುವುದು ಕೊಡಗಿನ ಹಿರಿಯರೊಬ್ಬರ ಆಗ್ರಹ.

ಮತ್ತೊಂದು ಹುದ್ದೆಯೂ ಖಾಲಿ

ಕೊಡಗಿನಲ್ಲಿ ಎರಡು ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳಿವೆ. ಒಂದು ಹುದ್ದೆ ಅರಣ್ಯ ವೃತ್ತದ್ದಾದರೆ, ಮತ್ತೊಂದು ಹುದ್ದೆ ಸಂಶೋಧನೆ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆ. ಈ ಹುದ್ದೆಯೂ ಖಾಲಿಯಿದೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.