ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ: ನಾಗರಹೊಳೆ ಭಾಗದಲ್ಲಿಎರಡು ಕಡೆ ಅರಣ್ಯ ಸಫಾರಿ ರದ್ದು, ಕಾಕನ ಕೋಟೆ ಸಫಾರಿ ಕೇಂದ್ರ ಉಂಟು
ಕೊಡಗು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣದಿಂದಾಗಿ ಅರಣ್ಯ ಸಫಾರಿಯನ್ನು ನಾಗರಹೊಳೆಯಲ್ಲಿ ರದ್ದು ಮಾಡಲಾಗಿದೆ. ನಾಗರಹೊಳೆಯ ನಾಣಚ್ಚಿಗೇಟ್ ಹಾಗೂ ವೀರನಹೊಸಹಳ್ಳಿಯಲ್ಲಿ ಸಫಾರಿ ಇರುವುದಿಲ್ಲ.

ಕೊಡಗು: ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು. ನಾಗರಹೊಳೆ ಭಾಗದಲ್ಲೂ ಎಡಬಿಡದೇ ಮಳೆ ಸುರಿಯುತ್ತಿದೆ. ಕೊಡಗಿನ ಭಾಗದಲ್ಲಂತೂ ನಾಲ್ಕು ದಿನದಿಂದ ಮಳೆಯಾಗುತ್ತಿದ್ದು. ಜನಜೀವನ ಅಸ್ತವ್ಯಸ್ತಗೊಂಡಿದೆ. ಇದರ ನಡುವೆ ಭಾರೀ ಮಳೆ ಕಾರಣದಿಂದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಎರಡು ಕಡೆಗಳಲ್ಲಿ ಸಫಾರಿಯನ್ನು ಅನಿರ್ದಿಷ್ಟ ಕಾಲದವರೆಗೂ ಬಂದ್ ಮಾಡಲಾಗಿದೆ. ಕೊಡಗಿನ ಕುಟ್ಟ ಸಮೀಪದ ನಾಣಚ್ಚಿ ಗೇಟ್ ಭಾಗ ಹಾಗೂ ಮೈಸೂರು ಜಿಲ್ಲೆಯ ವೀರನಹೊಸಹಳ್ಳಿ ವಲಯ ವ್ಯಾಪ್ತಿಯಲ್ಲಿರುವ ವೀರನಹೊಸಹಳ್ಳಿಯ ಸಫಾರಿಯನ್ನು ರದ್ದುಪಡಿಸಲಾಗಿದೆ. ಆದರೆ ಎಚ್‌ಡಿ ಕೋಟೆ ತಾಲ್ಲೂಕಿನ ದಮ್ಮನಕಟ್ಟೆ ಬಳಿ ಇರುವ ಕಾಕನಕೋಟೆ ಸಫಾರಿ ಕೇಂದ್ರದಲ್ಲಿ ಎಂದಿನಂತೆ ಸಫಾರಿಗಳು ಮುಂದುವರಿಯಲಿವೆ ಎಂದು ನಾಗರಹೊಳೆ ವಲಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅನನ್ಯಕುಮಾರ್ ಮಾಹಿತಿಯನ್ನು ನೀಡಿದ್ದಾರೆ.
ಕೊಡಗು ಭಾಗದಲ್ಲಿ ಮಳೆಯ ಪ್ರಮಾಣ ಅಧಿಕವಾಗಿ ಅರಣ್ಯದಲ್ಲೂ ಸಂಚಾರ ಸುಲಭವಲ್ಲ. ಅದರಲ್ಲೂ ಅರಣ್ಯದೊಳಗೆ ಸಫಾರಿ ಮಾರ್ಗಗಳಲ್ಲಿ ವಾಹನಗಳು ಸಿಲುಕಿಕೊಳ್ಳುವ ಸಾಧ್ಯತೆಗಳಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ನಾಗರಹೊಳೆಯಲ್ಲಿ ಸಫಾರಿ ಬಂದ್ ಮಾಡಲಾಗಿದೆ. ಅದರಲ್ಲೂ ಕೊಡಗು, ಮೈಸೂರಿನ ಹುಣಸೂರು ಭಾಗದಲ್ಲಿ ಮಳೆಯಾಗಿರುವುದರಿಂದ ಅನಿವಾರ್ಯವಾಗಿ ಎರಡು ಸಫಾರಿ ಬಂದ್ ಮಾಡಲಾಗಿದೆ. ಆರಂಭದ ದಿನಾಂಕವನ್ನು ಮುಂದೆ ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯ ಕಾರಣದಿಂದ, ಸಫಾರಿ ವಾಹನಗಳು ನಾಗರಹೊಳೆ ವನ್ಯಜೀವಿ ವಲಯದ ಸಫಾರಿ ವಲಯದಲ್ಲಿನ ರಸ್ತೆಗಳಲ್ಲಿ ಸಂಚರಿಸುವುದು ಕಷ್ಟಸಾಧ್ಯವಾಗಿರುತ್ತದೆ. ಈ ಕಾರಣದಿಂದ, ದಿನಾಂಕ 2025ರ ಮೇ 28ರಿಂದ ಮಳೆ ನಿಲ್ಲುವವರೆಗೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಾಣಚ್ಚಿ ಗೇಟ್ ಹಾಗೂ ವೀರನಹೊಸಹಳ್ಳಿ ಗೇಟ್ ನಿಂದ ಇಲಾಖಾ ಸಫಾರಿಯನ್ನು ನಿಲ್ಲಿಸಲಾಗಿರುತ್ತದೆ.ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ದಮ್ಮನಕಟ್ಟೆ (ಕಬಿನಿ) ಸಫಾರಿ ಎಂದಿನಂತೆ ಮುಂದುವರೆಯುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಮೊದಲು ಜೂನ್ ಒಂದರಿಂದ ಸಫಾರಿ ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತಾದರೂ ಭಾರೀ ಮಳೆ ಇರುವುದರಿಂದ ಬುಧವಾರದಿಂದ ನಾಗರಹೊಳೆ ಭಾಗದಲ್ಲಿ ಸಫಾರಿ ಬಂದ್ ಆಗಲಿದೆ.
ಇದಲ್ಲದೇ ನಾಗರಹೊಳೆಯ ಇನ್ನೊಂದು ಪ್ರಮುಖ ಸಫಾರಿಯಾಗಿರುವ ಮೈಸೂರು ಜಿಲ್ಲೆ. ಎಚ್‌ಡಿಕೋಟೆ ತಾಲ್ಲೂಕಿನ ಕೇರಳದ ಮಾನಂದವಾಡಿ- ಮೈಸೂರು ರಸ್ತೆಯಲ್ಲಿರುವ ದಮ್ಮನಕಟ್ಟೆಯ ಕಾಕನಕೋಟೆ ಸಫಾರಿ ಎಂದಿನಂತೆ ಕಾರ್ಯನಿರ್ವಹಿಸಲಿದೆ. ನಾಗರಹೊಳೆಯ ಅಂತರಸಂತೆ, ಡಿಬಿಕುಪ್ಪೆ ಭಾಗದಲ್ಲಿ ಹೆಚ್ಚಿನ ಮಳೆಯಾಗದೇ ಯಾವುದೇ ಅಡ್ಡಿ ಇಲ್ಲದಿರುವುದರಿಂದ ಅಲ್ಲಿ ಸಫಾರಿ ಯಥಾರೀತಿ ಇರಲಿದೆ.
ಉಳಿದಂತೆ ಬಂಡೀಪುರ, ಭದ್ರಾ, ಮಲೈಮಹದೇಶ್ವರ ಬೆಟ್ಟ ಸಹಿತ ಹಲವು ಕಡೆಗಳಲ್ಲಿ ಸಫಾರಿಯಲ್ಲಿ ಯಾವುದೇ ಅಡಚಣೆಯಿಲ್ಲ. ಅಲ್ಲೇನಾದರೂ ಭಾರೀ ಮಳೆಯಾಗಿ ಅಡಚಣೆಯಾದರೆ ನಿರ್ಧಾರವನ್ನು ಸ್ಥಳೀಯವಾಗಿ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ನಾಗರಹೊಳೆಗೆ ನಿತ್ಯ ನೂರಾರು ಪ್ರವಾಸಿಗರು ಬರುತ್ತಾರೆ. ಅದರಲ್ಲಿ ಕೆಲವರು ಸಫಾರಿ ಹೋಗಲು ಬಯಸುತ್ತಾರೆ. ಈ ಕಾರಣದಿಂದ ಮೂರು ಕಡೆಗಳಲ್ಲಿ ಸಫಾರಿ ವ್ಯವಸ್ಥೆಯನ್ನು ಕರ್ನಾಟಕ ಅರಣ್ಯ ಇಲಾಖೆ ಮಾಡಿಕೊಟ್ಟಿದೆ. ಮೊದಲು ನಾಗರಹೊಳೆಯಿಂದಲೇ ಇದ್ದ ಸಫಾರಿಯನ್ನು ರದ್ದುಪಡಿಸಿ ಕೊಡಗಿನ ಕುಟ್ಟ ಬಳಿ ಇರುವ ನಾಣಚ್ಚಿ ಗೇಟ್ ಹಾಗೂ ಮೈಸೂರು ಜಿಲ್ಲೆಯ ವೀರನಹೊಸಹಳ್ಳಿಯಲ್ಲಿರುವ ಅರಣ್ಯಪ್ರವೇಶ ದ್ವಾರದಿಂದಲೇ ಸಫಾರಿ ಕರೆದುಕೊಂಡು ಹೋಗಲು ಕೇಂದ್ರ ತೆರೆಯಲಾಗಿದೆ. ಇನ್ನು ಕಬಿನಿ ಹಿನ್ನೀರಿನೊಂದಿಗೆ ನಾಗರಹೊಳೆ ಹಾಗೂ ಬಂಡೀಪುರದ ಅರಣ್ಯ ಸಂಪತ್ತು ಹಾಗೂ ವನ್ಯಜೀವಿಗಳನ್ನು ವೀಕ್ಷಿಸಲು ಆಗಮಿಸುವವರಿಗೆ ಕಾಕನಕೋಟೆ ಸಫಾರಿ ಕೇಂದ್ರವಿದೆ. ಇಲ್ಲಿ ಅರಣ್ಯ ಇಲಾಖೆಯವರು ಸಾಮಾನ್ಯರ ಜತೆಗೆ ರೆಸಾರ್ಟ್‌ಗಳಲ್ಲಿ ವಾಸ್ತವ್ಯ ಮಾಡುವವರಿಗೂ ಸಫಾರಿ ವ್ಯವಸ್ಥೆ ಮಾಡುತ್ತಾರೆ. ಮೂರೂ ಕಡೆಗಳಲ್ಲಿ ಸಫಾರಿಗೆ ಸಾಕಷ್ಟು ಬೇಡಿಕೆಯಿದೆ.