Kodagu Huttari 2024: ಕೊಡಗಿನ ಹುತ್ತರಿ 2024 ಗೆ ದಿನಾಂಕ, ಸಮಯ ನಿಗದಿ; ಹೇಗಿರಲಿದೆ ಕೊಡಗು ಸುಗ್ಗಿ ಹಬ್ಬದ ವಿಶೇಷ ಆಚರಣೆ
ಕನ್ನಡ ಸುದ್ದಿ  /  ಕರ್ನಾಟಕ  /  Kodagu Huttari 2024: ಕೊಡಗಿನ ಹುತ್ತರಿ 2024 ಗೆ ದಿನಾಂಕ, ಸಮಯ ನಿಗದಿ; ಹೇಗಿರಲಿದೆ ಕೊಡಗು ಸುಗ್ಗಿ ಹಬ್ಬದ ವಿಶೇಷ ಆಚರಣೆ

Kodagu Huttari 2024: ಕೊಡಗಿನ ಹುತ್ತರಿ 2024 ಗೆ ದಿನಾಂಕ, ಸಮಯ ನಿಗದಿ; ಹೇಗಿರಲಿದೆ ಕೊಡಗು ಸುಗ್ಗಿ ಹಬ್ಬದ ವಿಶೇಷ ಆಚರಣೆ

Kodagu Huttari 2024: ಕೊಡಗಿನಲ್ಲಿ ಈಗ ಭೂರಮೆಯ ಹಚ್ಚ ಹಸುರಿನ ಸೊಬಗು ನೋಡುವುದೇ ಚಂದ. ಇದರ ಮುನ್ಸೂಚನೆಯೇ ಹುತ್ತರಿ ಹಬ್ಬ. ಈ ಬಾರಿ ಹುತ್ತರಿ ಹಬ್ಬದ ಮುಹೂರ್ತವನ್ನು ನಿಗದಿ ಮಾಡಲಾಗಿದೆ.

ಕೊಡಗಿನಲ್ಲಿ ಹುತ್ತರಿ ಹಬ್ಬ2024 ಡಿಸೆಂಬರ್‌ ತಿಂಗಳಿನಲ್ಲಿ ನಡೆಸಲು ಮುಹೂರ್ತ ನಿಗದಿ ಮಾಡಲಾಗಿದೆ.
ಕೊಡಗಿನಲ್ಲಿ ಹುತ್ತರಿ ಹಬ್ಬ2024 ಡಿಸೆಂಬರ್‌ ತಿಂಗಳಿನಲ್ಲಿ ನಡೆಸಲು ಮುಹೂರ್ತ ನಿಗದಿ ಮಾಡಲಾಗಿದೆ.

Kodagu Huttari 2024: ಕೊಡಗಿನ ಪ್ರಮುಖ ಸುಗ್ಗಿ ಹಬ್ಬವಾದ ಹುತ್ತರಿಯನ್ನು ಈ ಬಾರಿ ಡಿಸೆಂಬರ್‌ 14 ರಂದು ಸಡಗರ, ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಗಿದೆ.ಮಡಿಕೇರಿ ಸಮೀಪದ ನಾಪೊಕ್ಲು ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ದಿನಾಂಕ ನಿಗದಿಪಡಿಸಲಾಗಿದೆ. ಅಲ್ಲದೇ ಡಿಸೆಂಬರ್‌ 14 ರ ಶನಿವಾರ ನಡೆಯಲಿರುವ ಹುತ್ತರಿ ಹಬ್ಬದ ಚಟುವಟಿಕೆಯ ಸಮಯವನ್ನೂ ಅಂತಿಮಗೊಳಿಸಲಾಗಿದೆ.ಈ ಬಾರಿ ಕೊಡಗಿನ ಎಲ್ಲೆಡೆ ಡಿಸೆಂಬರ್‌ 14 ರ ಶನಿವಾರ ರಾತ್ರಿ 7.50ಕ್ಕೆ ನೆರೆ ಕಟ್ಟುವುದು, ರಾತ್ರಿ 8.50ಕ್ಕೆ ಕದಿರು ತೆಗೆಯುವುದು ರಾತ್ರಿ 9.50ಕ್ಕೆ ಊಟೋಪಚಾರ ಇರಲಿದೆ.ಹಿಂದಿನ ದಿನ ಅಂದರೆ ಡಿಸೆಂಬರ್‌ 14 ರ ಶನಿವಾರ ರಾತ್ರಿ ಪಾಡಿ ಇಗ್ಗುತ್ತಪ್ಪ ದೇವಸ್ಥಾನದಲ್ಲಿ ರಾತ್ರಿ 7.30 ನೆರೆ ಕಟ್ಟುವುದು ರಾತ್ರಿ 8.30 ಕದಿರು ತೆಗೆಯುವುದು ಹಾಗೂ ರಾತ್ರಿ 9.30 ಊಟೋಪಚಾರದ ಸಮಯವನ್ನು ನಿಗದಿ ಮಾಡಿಕೊಳ್ಳಲಾಗಿದೆ.

ಕೊಡಗಿನಲ್ಲಿ ಹುತ್ತರಿ ಹಬ್ಬ ಆಚರಣೆ ಸಂಬಂಧ ಕೊಡವ ಸಮುದಾಯದ ಕುಟುಂಬಗಳ ಹಿರಿಯ ಸಭೆ ಅವರ ಆರಾಧ್ಯ ದೈವವಾದ ಕಕ್ಕಬೆಯ ಪಾಡಿ ಇಗ್ಗುತ್ತಪ್ಪ ದೇಗುಲಲ್ಲಿ ನಡೆಸಲಾಗುತ್ತದೆ. ಶುಕ್ರವಾರವೂ ಹಿರಿಯರ ಸಮ್ಮುಖದಲ್ಲಿ ಈ ಸಾಲಿನ ಹುತ್ತರಿ ಹಬ್ಬದ ಮುಹೂರ್ತವನ್ನು ಡಿಸೆಂಬರ್‌ 14 ರ ಶನಿವಾರ ನಿಗದಿಪಡಿಸಿ ದಿನಾಂಕ, ಸಮಯವನ್ನು ಅಂತಿಮಗೊಳಿಸಲಾಯಿತು.

ಸಂಭ್ರಮಕ್ಕೆ ಸಂಪ್ರದಾಯದ ಮೆರಗು

ಕೊಡಗಿನಲ್ಲಿ ನವೆಂಬರ್‌ ಡಿಸೆಂಬರ್‌ ಅಂದರೆ ಅಗಾಧ ಚಳಿ. ಜತೆಗೆ ಎಲ್ಲೆಡೆ ಬೆಳೆ ಬಂದ ಸಂತಸ. ನಾಲ್ಕೈದು ತಿಂಗಳ ಹಿಂದೆ ಮಳೆ ಬಿದ್ದ ಕಾಲಕ್ಕೆ ಬಿತ್ತಿದ್ದ ಭತ್ತ ಈಗ ಫಲ ನೀಡುವ ಸಮಯ. ಕೃಷಿ ಮಾಡಿದ ಫಲವನ್ನು ಹುತ್ತರಿಯ ಸಡಗರದೊಂದಿಗೆ ಆಚರಿಸುವ ಸಂಪ್ರದಾಯ ಕೊಡಗಿನಲ್ಲಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.

ಕೊಡಗಿನವರ ಪ್ರಮುಖ ದೇಗುಲವಾದ ಪಾಡಿ ಇಗ್ಗುತಪ್ಪನಿಗೆ ಕದಿರು ಕೊಯ್ದು ಮೊದಲು ಅರ್ಪಿಸುವುದು ವಾಡಿಕೆ. ಇಲ್ಲಿ ಮೊದಲ ಪೂಜೆ ಆಗಿ ಹುತ್ತರಿ ಹಬ್ಬ ಶುರುವಾದ ನಂತರ ಇಡೀ ಕೊಡಗಿನಾದ್ಯಂತ ಹುತ್ತರಿ ಆಚರಿಸಲಾಗುತ್ತದೆ. ಅಲ್ಲದೇ ಕೊಡಗಿನವರು ಇರುವ ಎಲ್ಲ ಕಡೆಯು ಆಯಾ ಸಂಘ ಸಂಸ್ಥೆಗಳ ಅಡಿಯಲ್ಲಿ ಹುತ್ತರಿಯನ್ನು ಆಚರಿಸಲಾಗುತ್ತದೆ. ಮೈಸೂರು, ಬೆಂಗಳೂರು, ಮಂಗಳೂರು ಸೇರಿದಂತೆ ಇತರೆಡೆಯೂ ಇದು ನಡೆಯಲಿದೆ. ಆದರೆ ಕೊಡಗಿನಲ್ಲಿ ಮಾತ್ರ ಹುತ್ತರಿ ಹಬ್ಬದ ಸಂತಸ ಕೊಂಚ ಹೆಚ್ಚೇ ಇರಲಿದ್ದು. ಎಲ್ಲರೂ ತಂತಮ್ಮ ಪ್ರದೇಶದಲ್ಲಿ ಹುತ್ತರಿಯನ್ನು ಆಚರಿಸಿ ಸಿಹಿ ತಿಂದು ಪಟಾಕಿ ಸಿಡಿಸಿ ಸಂಭ್ರಮಿಸಲಿದ್ದಾರೆ.

ಆಚರಣೆ ಹಿನ್ನೆಲೆ ಏನು

ಕೊಡಗಿನಲ್ಲಿ ಹುತ್ತರಿ ಅಥವಾ ಪುತ್ತರಿ ಹಬ್ಬ ಎರಡು ದಿನಗಳಲ್ಲಿ ಇರುತ್ತದೆ. ಅದರಲ್ಲಿ ಮೊದಲನೆಯದ್ದು ಪಾಡಿ ಪೊಳ್ದ್. ಎರಡನೆಯದ್ದು ನಾಡ್ ಪೊಳ್ದ್. ಮೊದಲ ದಿನ ಪಾಡಿಯ ಇಗ್ಗುತ್ತಪ್ಪ ದೇವಸ್ಥಾನದ ಗದ್ದೆಯಿಂದ ಕದಿರು ತರಲಾಗುತ್ತದೆ. ಇನ್ನೊಂದು ಇದರ ಮರುದಿನ ಕೊಡಗಿನಾದ್ಯಂತ ಕದಿರನ್ನು ಮನೆಗೆ ತರುವ ನಾಡ ಹಬ್ಬ. ಈ ಹಬ್ಬವನ್ನು ಇಡೀ ಕುಟುಂಬದವರು ಒಟ್ಟಾಗಿ ಆಚರಿಸುವುದು ವಿಶೇಷ. ಕೋಲಾಟ ಸಹಿತ ಸಾಂಸ್ಕೃತಿಕ ವೈಭವಗಳು ಹುತ್ತರಿ ವೇಳೆ ಕುಟುಂಬಗಳನ್ನು ಬೆಸೆಯುತ್ತವೆ. ಹಿರಿಯರು, ಯುವಕ ಯುವತಿಯರು ಸಾಂಪ್ರದಾಯಿಕ ಕೊಡಗು ಉಡುಗೆಯಲ್ಲಿ ಹುತ್ತರಿ ಆಚರಿಸುತ್ತಾರೆ. ಮಕ್ಕಳೂ ಕೂಡ ಸಡಗರ ಹೆಚ್ಚಿಸುತ್ತಾರೆ.

ಹುತ್ತರಿ ಹಬ್ಬಕ್ಕೆ ದಿನಾಂಕ ನಿಗದಿಯಾದ ಒಂದು ವಾರ ಮೊದಲೇ ಚಟುವಟಿಕೆಗಳು ಶುರುವಾಗುತ್ತವೆ. ಕದಿರು ತೆಗೆಯುವ ದಿನಕ್ಕೆ ಒಂದು ವಾರಕ್ಕೆ ಮೊದಲು ಪುತ್ತರಿ ಹಬ್ಬದ ಸಂದರ್ಭದಲ್ಲಿ ನಡೆಯಲಿರುವ ಕೋಲಾಟ, ಪರಿಯ ಕಳಿ ಸೇರಿ ಹಲವು ಆಟಗಳ ತಾಲೀಮಿಗೆ ಈಡು ತೆಗೆಯುವುದು ಎನ್ನುತ್ತಾರೆ. ರಾತ್ರಿ ವೇಳೆ ಪ್ರತಿ ಕುಟುಂಬದಿಂದ ಒಬ್ಬನಂತೆ ಭಾಗವಹಿಸುತ್ತಾರೆ. ದಿನಾಂಕ ನಿಗದಿಯಾಗಿರುವುದರಿಂದ ತರಬೇತಿಗಳು ಇನ್ನೇನು ಶುರುವಾಗಲಿದ್ದು ಇನ್ನು ಎರಡು ವಾರಗಳ ಕಾಲ ಕೊಡಗಿನಲ್ಲಿ ಹುತ್ತರಿ ಸಂಭ್ರಮ ಮನೆ ಮಾಡಲಿದೆ.

ಹೊಸ ಅಕ್ಕಿ ಪಾಯಸದ ಜತೆಗೆ ಸವಿ

ಇನ್ನು ಕೊಡವ ಭಾಷೆಯಲ್ಲಿ ಪುದಿಯ ಅರಿ ಎಂದರೆ ಅದು ಹೊಸ ಅಕ್ಕಿ ಅಂತ ಹೆಸರು. ಪುದಿಯ ಅರಿ ಎನ್ನುವುದನ್ನು ಕನ್ನಡದಲ್ಲಿ ಹುತ್ತರಿ ಎನ್ನುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಹೊಸ ಅಕ್ಕಿ ರೂಪದಲ್ಲಿ ಭತ್ತದ ಕದಿರನ್ನು ಮನೆಗೆ ತರುವ ಸುಗ್ಗಿ ಹಬ್ಬವೇ ಹುತ್ತರಿ.

ರೋಹಿಣಿ ನಕ್ಷತ್ರವಿರುವ ಹುಣ್ಣಿಮೆಯ ರಾತ್ರಿ ಹೊಸ ಬೆಳೆ ಕದಿರು ತೆಗೆದು ಮೊದಲು ಮನೆಗೆ ತರಲು ಪ್ರಶಸ್ತವಾದ ಸಮಯವೆಂದು ನಂಬಿಕೆ. ಈ ಮುಹೂರ್ತ ಸಾಮಾನ್ಯವಾಗಿ ನವೆಂಬರ್ ಅಂತ್ಯ ಇಲ್ಲವೇ ಡಿಸೆಂಬರ್‌ ಮೊದಲ ವಾರ ಬರುತ್ತದೆ. ಹುಣ್ಣಿಮೆಯಂದು ರೋಹಿಣಿ ನಕ್ಷತ್ರ ಬಾರದಿದ್ದರೆ ಕೃತಿಕಾ ನಕ್ಷತ್ರವಾದರೂ ಒಳ್ಳೆಯದೆನ್ನುವ ನಂಬಿಕೆ ಕೊಡಗಿನವರಲ್ಲಿದೆ. ಅಂದು ಹುತ್ತರಿ ಹಬ್ಬದ ವಿಶೇಷ ಹೊಸ ಅಕ್ಕಿಯ ಪಾಯಸ ತಯಾರಿಸಲಾಗುತ್ತದೆ. ಹೊಸ ಅಕ್ಕಿಯ ಜೊತೆ ಹಾಲು, ತೆಂಗಿನ ಕಾಯಿ, ಬೆಲ್ಲ ಅಥವಾ ಸಕ್ಕರೆ ಸೇರಿಸಿ ಅಕ್ಕಿ ಪಾಯಸ ತಯಾರಿಸಿ ಪೂಜೆ ಮಾಡಿ ಸಂಭ್ರಮದಿಂದ ಸೇವಿಸಲಾಗುತ್ತದೆ. ಈ ಹಬ್ಬದಲ್ಲಿ ಅಕ್ಕಿಯಿಂದ ತಯಾರಿಸುವ ತಂಬಿಟ್ಟು ಸಹ ಪ್ರಮುಖ ಅಡುಗೆಯಾಗಿದೆ. ವಿಶೇಷ ಅಡುಗೆ, ನೃತ್ಯ, ಪಟಾಕಿ ಸಿಡಿಸುವ ಖುಷಿ ಜೋರಾಗಿರುತ್ತದೆ.

ಕೊಡಗಿನ ಹುತ್ತರಿ ಹಬ್ಬಕ್ಕೆ ಶುಕ್ರವಾರದಂದು ಮುಹೂರ್ತ ನಿಗದಿ ಮಾಡಲಾಗಿದೆ.
ಕೊಡಗಿನ ಹುತ್ತರಿ ಹಬ್ಬಕ್ಕೆ ಶುಕ್ರವಾರದಂದು ಮುಹೂರ್ತ ನಿಗದಿ ಮಾಡಲಾಗಿದೆ.
Whats_app_banner