ಸೋಮವಾರಪೇಟೆಯ 16 ವರ್ಷದ ಬಾಲಕಿಯ ಹತ್ಯೆ ಕೇಸ್‌; ಪೈಶಾಚಿಕ ಕೃತ್ಯವೆಸಗಿದ ಆರೋಪಿಯ ಬಂಧನ, ಕತ್ತರಿಸಿ ಕೊಂಡೊಯ್ದ ತಲೆ ಪತ್ತೆ- 5 ಮುಖ್ಯ ಅಂಶ
ಕನ್ನಡ ಸುದ್ದಿ  /  ಕರ್ನಾಟಕ  /  ಸೋಮವಾರಪೇಟೆಯ 16 ವರ್ಷದ ಬಾಲಕಿಯ ಹತ್ಯೆ ಕೇಸ್‌; ಪೈಶಾಚಿಕ ಕೃತ್ಯವೆಸಗಿದ ಆರೋಪಿಯ ಬಂಧನ, ಕತ್ತರಿಸಿ ಕೊಂಡೊಯ್ದ ತಲೆ ಪತ್ತೆ- 5 ಮುಖ್ಯ ಅಂಶ

ಸೋಮವಾರಪೇಟೆಯ 16 ವರ್ಷದ ಬಾಲಕಿಯ ಹತ್ಯೆ ಕೇಸ್‌; ಪೈಶಾಚಿಕ ಕೃತ್ಯವೆಸಗಿದ ಆರೋಪಿಯ ಬಂಧನ, ಕತ್ತರಿಸಿ ಕೊಂಡೊಯ್ದ ತಲೆ ಪತ್ತೆ- 5 ಮುಖ್ಯ ಅಂಶ

ಹೃದಯ ತಲ್ಲಣಗೊಳಿಸುವಂತಹ ಸೋಮವಾರಪೇಟೆಯ 16 ವರ್ಷದ ಬಾಲಕಿಯ ಹತ್ಯೆ ಕೇಸ್‌ನ ತನಿಖೆ ನಡೆಸುತ್ತಿರುವ ಪೊಲೀಸರು, ಪೈಶಾಚಿಕ ಕೃತ್ಯವೆಸಗಿದ ಆರೋಪಿಯ ಬಂಧಿಸಿದ್ದಾರೆ. ಆರೋಪಿಯನ್ನು ಜೊತೆಗೆ ಕರೆದೊಯ್ದು ಸ್ಥಳಮಹಜರು ಪ್ರಕ್ರಿಯೆ ಚಾಲ್ತಿಯಲ್ಲಿರುವಾಗ, ಆತ ಕತ್ತರಿಸಿ ಕೊಂಡೊಯ್ದ ತಲೆ ಪತ್ತೆಯಾಗಿದೆ. ಈ ವಿದ್ಯಮಾನದ ಪ್ರಮುಖ 5 ಅಂಶ ಇಲ್ಲಿದೆ.

ಸೋಮವಾರಪೇಟೆಯ 16 ವರ್ಷದ ಬಾಲಕಿಯ ಹತ್ಯೆ ಕೇಸ್‌ನಲ್ಲಿ ಪೈಶಾಚಿಕ ಕೃತ್ಯವೆಸಗಿದ ಆರೋಪಿ ಪ್ರಕಾಶ್‌ನ ಬಂಧನವಾಗಿದೆ.
ಸೋಮವಾರಪೇಟೆಯ 16 ವರ್ಷದ ಬಾಲಕಿಯ ಹತ್ಯೆ ಕೇಸ್‌ನಲ್ಲಿ ಪೈಶಾಚಿಕ ಕೃತ್ಯವೆಸಗಿದ ಆರೋಪಿ ಪ್ರಕಾಶ್‌ನ ಬಂಧನವಾಗಿದೆ.

ಸೋಮವಾರಪೇಟೆ: ಹೃದಯ ತಲ್ಲಣಗೊಳಿಸಿದ ಸೋಮವಾರಪೇಟೆಯ 16 ವರ್ಷದ ಬಾಲಕಿಯ ದಾರುಣ ಹತ್ಯೆ ಕೇಸ್‌ನ ತನಿಖೆಯಲ್ಲಿ ಪೊಲೀಸರು ಪ್ರಗತಿ ಸಾಧಿಸಿದ್ದಾರೆ. ಪೈಶಾಚಿಕ ಕೃತ್ಯವಸೆಗಿ ತಲೆಮರೆಸಿಕೊಂಡಿದ್ದ ಆರೋಪಿ 32 ವರ್ಷ ವಯಸ್ಸಿನ ಪ್ರಕಾಶ್ (ಓಂಕಾರಪ್ಪ) ನನ್ನು ಪೊಲೀಸರು ಇಂದು (ಮೇ 11) ಬಂಧಿಸಿದ್ದಾರೆ.

ಸೋಮವಾರಪೇಟೆ ಸಮೀಪದ ಸೂರ್ಲಬ್ಬಿ ಗ್ರಾಮದಲ್ಲಿ ಈ ದಾರುಣ ಘಟನೆ ಗುರುವಾರ (ಮೇ 9) ಸಂಜೆ ನಡೆದಿತ್ತು. ಬೆಳಗ್ಗೆ ಬಾಲಕಿಯ ಜೊತೆಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರಕಾಶ್, ಮದುವೆಗೆ ಎರಡು ವರ್ಷ ಕಾಯುವುದಕ್ಕೆ ಅಧಿಕಾರಿಗಳು ಹೇಳಿದ್ದರಿಂದ ವಿಚಲಿತನಾಗಿ ಪೈಶಾಚಿಕ ಕೃತ್ಯವೆಸಗಿದ್ದ. ಅಮಾನವೀಯ ರೀತಿಯಲ್ಲಿ ವರ್ತಿಸಿದ ಪ್ರಕಾಶ್, ಬಾಲಕಿಯ ತಲೆ ಕತ್ತರಿಸಿ ಕೊಂಡೊಯ್ದಿದ್ದ. ಇದಾದ ಬಳಿಕ ಆತ ತಲೆಮರೆಸಿಕೊಂಡಿದ್ದ.

ಬಾಲಕಿಯ ಮೃತದೇಹದ ಮುಂಡ ಮಾತ್ರ ಪತ್ತೆಯಾಗಿತ್ತು. ಪೊಲೀಸರು ಬಾಲಕಿಯ ತಲೆಗಾಗಿ ಹುಡುಕಾಟ ನಡೆಸಿದ್ದರು. ಜೊತೆಗೆ ಆರೋಪಿ ಪ್ರಕಾಶ್‌ ಬಂಧನಕ್ಕೂ ಶೋಧ ನಡೆಸಿದ್ದರು. ಇಂದು (ಮೇ 11) ಆರೋಪಿಯ ಬಂಧನವಾಗಿದ್ದು, ಆತನನ್ನು ಸ್ಥಳ ಮಹಜರು ನಡೆಸಲು ಕೊಂಡೊಯ್ದ ವೇಳೆ, ಬಾಲಕಿಯ ತಲೆ ಪೊದೆಗಳ ನಡುವೆ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸೂರ್ಲಬ್ಬಿಯಲ್ಲಿ ಬಾಲಕಿಯ ದಾರುಣ ಹತ್ಯೆ, ವಿವಾಹ ಮುಂದೂಡಿದ್ದಕ್ಕೆ ಪೈಶಾಚಿಕ ಕೃತ್ಯ - 5 ಮುಖ್ಯ ಅಂಶ

1) ಕೊಡಗು ಜಿಲ್ಲೆ, ಸೋಮವಾರಪೇಟೆ ಸಮೀಪದ ಸೂರ್ಲಬ್ಬಿ ಗ್ರಾಮದಲ್ಲಿ ಆರೋಪಿ ಪ್ರಕಾಶ್ (ಓಂಕಾರಪ್ಪ) ಮತ್ತು ಬಾಲಕಿ ಮೀನಾ ನಿಶ್ಚಿತಾರ್ಥ ಗುರವಾರ (ಮೇ9) ನಡೆಯಿತು. ಮೀನಾ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯಾಗಿದ್ದು ಪರೀಕ್ಷೆಯ ಫಲಿತಾಂಶ ನೋಡಿ ಅದರ ಸಂಭ್ರಮದಲ್ಲಿರುವಾಗಲೇ ಮದುವೆ ನಿಶ್ಚಿತಾರ್ಥ ನಡೆಯಿತು.

2) ಬಾಲಕಿ ಮೀನಾ 16 ವರ್ಷದವಳು. ಆಕೆಗೆ ಪ್ರಾಯ ಪೂರ್ತಿಯಾಗಲು ಇನ್ನೂ ಎರಡು ವರ್ಷ ಇದೆ ಎಂಬುದು ಅರಿವಿದ್ದವರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ಹೀಗಾಗಿ, ಅಧಿಕಾರಿಗಳು ಮೀನಾ ಮನೆಗೆ ಧಾವಿಸಿ ಬಂದಿದ್ದರು. ಪ್ರಕಾಶ್ ಮತ್ತು ಮೀನಾ ಪಾಲಕರನ್ನು ಕೂರಿಸಿಕೊಂಡು ಬುದ್ಧಿವಾದ ಹೇಳಿದ್ದರು. ಅಲ್ಲದೆ ಈಗ ವಿವಾಹವಾದರೆ ಪೋಕ್ಸೋ ಕಾಯ್ದೆ ಪ್ರಕಾರ ಕೇಸ್ ಆಗುತ್ತದೆ ಎಂಬುದನ್ನು ವಿವರಿಸಿದ್ದರು.

3) ಅಧಿಕಾರಿಗಳ ಬುದ್ಧಿವಾದದಿಂದ ವಿಚಲಿತರಾದ ಪಾಲಕರು ಮದುವೆಯನ್ನು ಎರಡು ವರ್ಷ ಮುಂದೂಡಲು ತೀರ್ಮಾನಿಸಿದರು. ಅದನ್ನು ಅಧಿಕಾರಿಗಳಿಗೂ ಖಚಿತಪಡಿಸಿ, ಭರವಸೆ ನೀಡಿದರು. ಅಧಿಕಾರಿಗಳು ಅತ್ತ ಹೋಗುತ್ತಲೇ ಪ್ರಕಾಶ್ ಮತ್ತು ಮನೆಯವರು ಅವರ ಮನೆಗೆ ಹೋದರು.

4) ಪ್ರಕಾಶ್ ಈ ವಿದ್ಯಮಾನದಿಂದ ಬಹಳ ವಿಚಲಿತನಾಗಿದ್ದ. ಗುರುವಾರ ಸಂಜೆ 5.30ರ ಹೊತ್ತಿಗೆ ತನ್ನ ಮನೆಯಲ್ಲಿದ್ದ ಮಾರಕಾಸ್ತ್ರ ಹಿಡಿದು ನೇರವಾಗಿ ಬಾಲಕಿಯ ಮನೆಗೆ ಬಂದಿದ್ದ. ಬಾಲಕಿಯ ಪಾಲಕರ ಮೇಲೆ ಹಲ್ಲೆ ನಡೆಸಿ, ಬಾಲಕಿಯನ್ನು ಹಿಡಿದೆಳೆದುಕೊಂಡು ಹೋಗಿದ್ದ, ಆಕೆಯ ತಲೆ ಕಡಿದು ಅದನ್ನೆತ್ತಿಕೊಂಡು ಹೋಗಿದ್ದ.

5) ಪೊಲೀಸರು ಸ್ಥಳಕ್ಕಾಗಮಿಸಿ ಕೇಸ್ ದಾಖಲಿಸಿಕೊಂಡರು. ಬಾಲಕಿಯ ಪಾಲಕರನ್ನು ಆಸ್ಪತ್ರೆಗೆ ದಾಖಲಿಸಿದ್ದು, ತಾಯಿಯ ಸ್ಥಿತಿ ಗಂಭೀರವಾಗಿದೆ. ಬಾಲಕಿಯ ತಲೆ ಇಲ್ಲದ ಶವ ಅಲ್ಲಿ ಸಿಕ್ಕಿದ್ದು, ಅದನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಿದ್ದರು. ಬಳಿಕ ಬಾಲಕಿಯ ತಲೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ತಲೆಮರೆಸಿಕೊಂಡ ಆರೋಪಿಯನ್ನು ಬಂಧಿಸಲು ಶೋಧ ನಡೆಸಿದ್ದರು.

ಆರೋಪಿ ಪ್ರಕಾಶ್ ಆತ್ಮಹತ್ಯೆ ಮಾಡಿಕೊಂಡ ವದಂತಿ

ಪೈಶಾಚಿಕ ಕೃತ್ಯವೆಸಗಿ ಬಾಲಕಿಯ ತಲೆಯೊಂದಿಗೆ ಪರಾರಿಯಾಗಿದ್ದ ಪ್ರಕಾಶ ತಲೆಮರೆಸಿಕೊಂಡಿದ್ದ. ಪೊಲೀಸರು ಶೋಧ ನಡೆಸಿದರೂ ಸಿಕ್ಕಿಬಿದ್ದಿರಲಿಲ್ಲ. ಹೀಗಾಗಿ ನಿನ್ನೆ (ಮೇ 10) ಪ್ರಕಾಶ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ವದಂತಿ ಹರಡಿತ್ತು. ಆದರೆ ಇದು ನಿಜವಲ್ಲ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Whats_app_banner