Kodagu News: ಕೊಡಗಿನಲ್ಲಿ ಕಾಡಾನೆ ತುಳಿದು ವೃದ್ದ ಸಾವು, ಕೆಲಸ ಮುಗಿಸಿ ಬರುವಾಗ ದುರ್ಘಟನೆ
ಕೊಡಗಿನಲ್ಲಿ ಕಾಡಾನೆ ಹಾವಳಿ ಮುಂದುವರೆದಿದ್ದು, ಕೆಲಸ ಮುಗಿಸಿಕೊಂಡು ಬರುತ್ತಿದ್ದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ.

ಮಡಿಕೇರಿ: ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವ್ಯಕ್ತಿಯೊಬ್ಬರು ಕಾಡಾನೆ ತುಳಿದು ಮೃತಪಟ್ಟಿರುವ ಘಟನೆ ಕೊಡಗಿನಲ್ಲಿ ನಡೆದಿದೆ. ಮಡಿಕೇರಿ ನಗರದಿಂದ ಸ್ವಲ್ಪವೇ ದೂರವಿರುವ ನಿಶಾನಿ ಬೆಟ್ಟದ ಸಮೀಪದಲ್ಲಿ ಘಟನೆ ನಡೆದಿದೆ. ಮೃತರನ್ನು ಗಾಳಿಬೀಡು ಗ್ರಾಮದ ವರಡ ನಿವಾಸಿ ಅಪ್ಪಚ್ಚ( 60) ಎಂದು ಗುರುತಿಸಲಾಗಿದೆ. ಕೊಡಗಿನಲ್ಲಿ ಕಾಡಾನೆ ಹಾವಳಿಯಿಂದ ಜನ ಜೀವ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇವೆ. ಈಗ ಮತ್ತೆ ಪ್ರಕರಣ ಮರುಕಳಿಸಿದೆ.
ಕೆಲಸಕ್ಕೆಂದು ಹೋಗಿದ್ದ ಅಪ್ಪಚ್ಚ ಮನೆಗೆ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಕುಟುಂಬದವರು ಹುಡುಕಾಟ ನಡೆಸಿದ್ದರು. ಆದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರೂ ಕೂಡ ಪತ್ತೆಗೆ ಕ್ರಮ ವಹಿಸಿದ್ದರು.
ಈ ನಡುವೆ ಗಾಳಿ ಬೀಡು ಸಮೀಪದ ನಿಶಾನಿ ಬೆಟ್ಟದ ಬಳಿ ವ್ಯಕ್ತಿಯೊಬ್ಬ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದನ್ನು ಟ್ರಕ್ಕಿಂಗ್‌ಗೆ ತೆರಳಿದವರು ಗಮನಿಸಿದ್ದರು. ಇದನ್ನು ಅವರು ಸ್ಥಳೀಯರ ಗಮನಕ್ಕೆ ತಂದಿದ್ದರು. ಆನಂತರ ಪೊಲೀಸರಿಗೆ ಮಾಹಿತಿ ತಿಳಿದು ಬಂದು ತಪಾಸಣೆ ನಡೆಸಿದಾಗ ಆನೆ ದಾಳಿಯಿಂದ ವ್ಯಕ್ತಿ ಮೃತಪಟ್ಟಿರುವುದು ಕಂಡು ಬಂದಿತ್ತು. ಅಪ್ಪಚ್ಚ ಅವರ ಕುಟುಂಬದವರೂ ಗುರುತಿಸಿದ್ದರು. ಆನಂತರ ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿತ್ತು.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನೆ ದಾಳಿ ಮಾಡಿರುವ ಕುರಿತಾಗಿಯೂ ವಿವರಗಳನ್ನು ಸಂಗ್ರಹಿಸಿದ್ದಾರೆ.
ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬಕ್ಕೆ ಅಪ್ಪಚ್ಚರನ್ನು ಕಳೆದುಕೊಂಡು ತೊಂದರೆಯಾಗಿದೆ. ಅರಣ್ಯ ಇಲಾಖೆ ಪರಿಹಾರ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.
ಈ ಭಾಗದಲ್ಲಿ ಕಾಡಾನೆ ಹಾವಳಿಯಿದೆ. ಆನೆಗಳು ಯಾವ ಕ್ಷಣದಲ್ಲಾದರೂ ಬರಬಹುದು. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ಆಗ್ರಹಿಸಿದರು.
ಕೆಲ ದಿನಗಳ ಹಿಂದೆಯಷ್ಟೇ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬ ಮೃತಪಟ್ಟಿದ್ದ. ಕಳೆದ ವರ್ಷವಂತೂ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಡಾನೆ ದಾಳಿ, ಸಾವಿನ ಪ್ರಕರಣಗಳು ವರದಿಯಾಗಿದ್ದವು.
