ಕನ್ನಡ ಸುದ್ದಿ  /  ಕರ್ನಾಟಕ  /  ಮಡಿಕೇರಿ-ಮಂಗಳೂರು ಮಾರ್ಗದಲ್ಲಿ ರಾಜಾಸೀಟ್ ಬೆಟ್ಟದ ಕೆಳಗೆ ಅಪಾಯಕಾರಿ ಸೆಲ್ಫಿ ಸ್ಪಾಟ್‌; ದುಸ್ಸಾಹಸಕ್ಕೆ ಇಳಿಯದಂತೆ ಪ್ರವಾಸಿಗರಿಗೆ ಎಚ್ಚರಿಕೆ

ಮಡಿಕೇರಿ-ಮಂಗಳೂರು ಮಾರ್ಗದಲ್ಲಿ ರಾಜಾಸೀಟ್ ಬೆಟ್ಟದ ಕೆಳಗೆ ಅಪಾಯಕಾರಿ ಸೆಲ್ಫಿ ಸ್ಪಾಟ್‌; ದುಸ್ಸಾಹಸಕ್ಕೆ ಇಳಿಯದಂತೆ ಪ್ರವಾಸಿಗರಿಗೆ ಎಚ್ಚರಿಕೆ

ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು ಮಡಿಕೇರಿ. ರಾಜಾಸೀಟ್ ಬೆಟ್ಟದ ಕೆಳಗೆ ಮಡಿಕೇರಿ-ಮಂಗಳೂರು ಮಾರ್ಗದಲ್ಲಿ ಅಪಾಯಕಾರಿ ಸೆಲ್ಫಿ ಸ್ಪಾಟ್‌ ಒಂದು ಇದ್ದು, ಅಲ್ಲಿ ದುಸ್ಸಾಹಸಕ್ಕೆ ಇಳಿಯದಂತೆ ಪೊಲೀಸರು ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ್ದಾರೆ.

ಮಡಿಕೇರಿ-ಮಂಗಳೂರು ಮಾರ್ಗದಲ್ಲಿ ರಾಜಾಸೀಟ್ ಬೆಟ್ಟದ ಕೆಳಗೆ ಅಪಾಯಕಾರಿ ಸೆಲ್ಫಿ ಸ್ಪಾಟ್‌ ಇದ್ದು, ಅಲ್ಲಿ ದುಸ್ಸಾಹಸಕ್ಕೆ ಇಳಿಯದಂತೆ ಪ್ರವಾಸಿಗರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಮಡಿಕೇರಿ-ಮಂಗಳೂರು ಮಾರ್ಗದಲ್ಲಿ ರಾಜಾಸೀಟ್ ಬೆಟ್ಟದ ಕೆಳಗೆ ಅಪಾಯಕಾರಿ ಸೆಲ್ಫಿ ಸ್ಪಾಟ್‌ ಇದ್ದು, ಅಲ್ಲಿ ದುಸ್ಸಾಹಸಕ್ಕೆ ಇಳಿಯದಂತೆ ಪ್ರವಾಸಿಗರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. (Special Arrangement)

ಕೊಡಗು: ಮಡಿಕೇರಿ-ಮಂಗಳೂರು ರಸ್ತೆಯಲ್ಲಿ ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ವೃತ್ತದ ಮೂಲಕ ಮಂಗಳೂರು ರಸ್ತೆ ಕಡೆಗೆ ತೆರಳುವ ಮಾರ್ಗದಲ್ಲಿ ನಿರ್ಮಿಸಲಾಗಿರುವ ತಡೆಗೋಡೆ ಪ್ರದೇಶ ಈಗ ಅಪಾಯಕಾರಿ ಸೆಲ್ಫಿ ಸ್ಪಾಟ್ ಆಗಿಬಿಟ್ಟಿದೆ. ಇದು ರಾಜಾಸೀಟ್ ಬೆಟ್ಟದ ಬುಡದಲ್ಲೇ ಇದ್ದು, ಅದರಾಚೆಗೆ ಸಾವಿರ ಅಡಿಗೂ ಹೆಚ್ಚು ಪ್ರಪಾತವಿದೆ.

ಟ್ರೆಂಡಿಂಗ್​ ಸುದ್ದಿ

ರಾಜಾಸೀಟ್ ಬೆಟ್ಟದ ಕೆಳಗಿರುವ ಈ ತಡೆಗೋಡೆ ಪ್ರದೇಶ ಅಸುರಕ್ಷಿತವಾಗಿದ್ದು, ಸಾವಿರ ಅಡಿಗೂ ಹೆಚ್ಚು ಪ್ರಪಾತವನ್ನೂ ಹೊಂದಿದೆ. ಇದರ ಅರಿವೇ ಇಲ್ಲದ ಪ್ರವಾಸಿಗರು ಇಲ್ಲಿ ನಿಂತು ಸೆಲ್ಫಿ ತಗೊಳ್ಳುತ್ತಿದ್ದಾರೆ. ದೂರದ ಪರಿಸರ, ಪ್ರಕೃತಿ ಸೌಂದರ್ಯವನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿದ್ದಾರೆ. ಕೆಲವರು ತಡೆಗೋಡೆಯ ತುತ್ತತುದಿಗೆ ಹೋಗಿ ಸೆಲ್ಫಿ ಕ್ಲಿಕ್ಕಿಸುವುದು ಕಂಡುಬಂದಿದ್ದು, ನೋಡುಗರಲ್ಲಿ ಗಾಬರಿಹುಟ್ಟಿಸುತ್ತಿದ್ದಾರೆ. ಅವರಿಗೆ ಆ ಪ್ರದೇಶದ ಅಪಾಯದ ಅರಿವು ಇಲ್ಲದೇ ಇರುವುದು ಕಾರಣ.

ಅಪಾಯಕಾರಿ ಸೆಲ್ಫಿ ಸ್ಪಾಟ್ ಯಾಕೆ

ಪ್ರವಾಸಿಗರು, ಯುವಜನರು, ನವದಂಪತಿಗಳು, ಚಿಕ್ಕಮಕ್ಕಳು ಹೀಗೆ ಎಲ್ಲ ವಯೋಮಾನದವರು ಕೂಡ ಅಲ್ಲಿ ಸಣ್ಣ ತಡೆಗೋಡೆ ದಾಟಿ ಮುಂದೆ ಹೋಗಿ ಫೋಟೋ ಕ್ಲಿಕ್ಕಿಸುತ್ತಿದ್ದಾರೆ. ಆ ತಡೆಗೋಡೆ ದಾಟಿದರೆ ಆಚೆಗೆ ಸ್ವಲ್ಪ ನೆಲಭಾಗ ಕಂಡರೂ ಅದರಾಚೆಗೆ ಪ್ರಪಾತವಿದೆ.

ದೂರದ ಬೆಟ್ಟ, ಕೆಳಗಿನ ಬಯಲು ಪ್ರದೇಶಗಳು ಅಲ್ಲಿಂದ ಸ್ಪಷ್ಟವಾಗಿ ಗೋಚರಿಸುತ್ತಿರುವುದು ಪ್ರವಾಸಿಗರ ಸೆಲ್ಫಿ ಆಕರ್ಷಣೆಗೆ ಕಾರಣವಾಗಿದೆ. ಹಚ್ಚ ಹಸಿರು ವಾತಾವರಣ, ಕೆಲವೊಮ್ಮೆ ಮಂಜು ಮುಸುಕಿದ ವಾತಾವರಣ ಕೂಡ ಮನಸ್ಸಿಗೆ ಮುದ ನೀಡುವಂಥದ್ದು. ಮಳೆ ಬರುವಾಗ ಅಲ್ಲಿ ವಿಪರೀತ ಗಾಳಿ ಕೂಡ ಇರುತ್ತದೆ.

ಸ್ವಲ್ಲ ಎಚ್ಚರ ತಪ್ಪಿದರೂ ಪ್ರಪಾತಕ್ಕೆ ಉರುಳುವುದು ಖಚಿತ. ಕಣಿವೆಯಂತಿರುವ ಪ್ರದೇಶವಾದ ಕಾರಣ ಅಲ್ಲಿ ಉರುಳಿದವರನ್ನು ರಕ್ಷಿಸುವುದು ಕೂಡ ತ್ರಾಸದಾಯಕ ಕೆಲಸ. ಹೀಗಾಗಿ ಈಗ ಜಿಲ್ಲಾಡಳಿತ ಪ್ರವಾಸಿಗರನ್ನು ಎಚ್ಚರಿಸುವ ಕೆಲಸ ಶುರುಮಾಡಿದೆ.

ಭೂಕುಸಿತ ಸಂಭವಿಸಿದ ಸ್ಥಳದ ಸಮೀಪವೇ ಇದೆ

ಈ ಅಪಾಯಕಾರಿ ಸೆಲ್ಫಿ ಸ್ಪಾಟ್‌ 2018ರಲ್ಲಿ ಭಾರಿ ಭೂಕುಸಿತ ಸಂಭವಿಸಿದ ಪ್ರದೇಶದ ಸಮೀಪವೇ ಇದೆ. ಅಂದು ಭೂಕುಸಿತ ಉಂಟಾದಾಗ, ಈ ರಾಷ್ಟ್ರೀಯ ಹೆದ್ದಾರಿಯೇ ಕಡಿದು ಹೋಗುವ ಅಪಾಯಕಾರಿ ಪರಿಸ್ಥಿತಿ ಉಂಟಾಗಿತ್ತು. ಹೀಗಾಗಿ ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ತಡೆಗೋಡೆ ನಿರ್ಮಿಸಿದೆ. ಇದಾದ ಬಳಿಕ ಅಲ್ಲಿ ಅತ್ತ ಯಾರೂ ಹೋಗದಂತೆ ಬಿದುರಿನ ತಡೆಬೇಲಿ ನಿರ್ಮಿಸಿತ್ತು. ಆದರೆ ಅದು ಮಳೆ,ಗಾಳಿ, ಬಿಸಿಲಿಗೆ ನಾಶವಾಗಿ ಹೋಗಿದೆ. ಇಲ್ಲೀಗ ಮದ್ಯ, ಬಿಯರ್ ಬಾಟಲಿಗಳು ತುಂಬಿಕೊಂಡಿವೆ.

ತಾತ್ಕಾಲಿಕ ಕ್ರಮವಾಗಿ ಪೊಲೀಸರು ಈಗ ಈ ಜಾಗಕ್ಕೆ ಎಚ್ಚರಿಕೆಯ ಟೇಪ್ ಅಳವಡಿಸಿದ್ದಾರೆ. ಅತ್ತ ಹೋಗದಂತೆ ಪ್ರವಾಸಿಗರನ್ನು ಎಚ್ಚರಿಸುವ ಕೆಲಸವನ್ನೂ ಪೊಲೀಸರು ಮಾಡುತ್ತಿದ್ದಾರೆ. ಒಂದೊಮ್ಮೆ ಈ ಎಚ್ಚರಿಕೆಯನ್ನೆಲ್ಲ ಮೀರಿ ರೀಲ್ಸ್ ಮಾಡುವುದು, ಫೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಅಪ್ಡೇಟ್ ಮಾಡುವುದು ಕಂಡುಬಂದರೆ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್ಚರಿಸಿದ್ದಾರೆ.

ಟಿ20 ವರ್ಲ್ಡ್‌ಕಪ್ 2024