Wayanad Land slides: ವಯನಾಡು ಭೂಕುಸಿತದಲ್ಲಿ ಸಿಲುಕಿದ್ದ ಕೊಡಗು ಮೂಲದ ಮಹಿಳೆ,ಮಗ ಸೇರಿ ಕುಟುಂಬದ 7 ಮಂದಿಯ ಮೃತದೇಹ ಪತ್ತೆ
Kodagu News ಕೇರಳದ ಭೂಕುಸಿತದಡಿ ಸಿಲುಕಿದ ಕೊಡಗು ಮೂಲದ ತಾಯಿ ಹಾಗೂ ಮಗ ಸೇರಿ ಆ ಕುಟುಂಬದವರ ಶವಗಳು ಪತ್ತೆಯಾಗಿವೆ.
ಮಡಿಕೇರಿ: ಕೇರಳದ ವಯನಾಡಿನಲ್ಲಿ ಕಳೆದ ವಾರ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಇದೆ. ಮೇಪ್ಪಾಡಿ ಪಂಚಾಯಿತಿ ವ್ಯಾಪ್ತಿಯ ನಾಲ್ಕೈದು ಹಳ್ಳಿಗಳು ನಾಮಾವಶೇಷವಾಗಿದ್ದು, ಪ್ರವಾಹದ ಮಣ್ಣಿನಡಿ ಸಿಲುಕಿದ ದೇಹಗಳನ್ನು ಪತ್ತೆ ಮಾಡುವ ಕಾರ್ಯ ಮುಂದುವರಿದಿದೆ. ಮೂಲತಃ ಕೊಡಗಿನ ಮಹಿಳೆಯೊಬ್ಬರು ಹಾಗೂ ಆತನ ಪುತ್ರ ಸೇರಿ ಒಂದೇ ಕುಟುಂಬದ 7 ಮಂದಿಯ ಮೃತದೇಹಗಳು ಭಾನುವಾರ ಪತ್ತೆಯಾಗಿದೆ. ಕುಟುಂಬದವರ ಮನವಿ ಮೇರೆಗೆ ರಕ್ಷಣಾ ಸಿಬ್ಬಂದಿ ಕೇರಳದ ಮೇಪ್ಪಾಡಿ ಬಳಿ ಹುಡುಕಾಟ ನಡೆಸಿದ್ದರು. ನಾಲ್ಕು ದಿನದಿಂದ ನಿರಂತರ ಹುಡುಕಾಟದ ಬಳಿಕ ಶವ ಪತ್ತೆಯಾಗಿದೆ. ಅದರಲ್ಲೂ ತಾಯಿ ಹಾಗೂ ಮಗನ ಶವಗಳೂ ಸಮೀಪದಲ್ಲಿಯೇ ದೊರೆತಿವೆ. ಶವಗಳ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.
ಕೊಡಗಿನ ಕುಶಾಲನಗರ ತಾಲ್ಲೂಕಿನ ನಲ್ವತ್ತೇಕರೆ ನಿವಾಸಿ ಪೊನ್ನಮ್ಮ ಎಂಬವರ ಪುತ್ರಿ ದಿವ್ಯಾ (35) ಹಾಗೂ ಅವರ ಪುತ್ರ ಲಕ್ಷಿತ್( 10) ಅವರ ಶವಗಳು ದೊರೆತಿವೆ. ಇವರದ್ದೇ ಕುಟುಂಬದ ಇನ್ನೂ ಆರು ಮಂದಿಯ ಶವಗಳೂ ಈಗ ದೊರೆತಿವೆ.
ದಿವ್ಯಾ ಅವರನ್ನುವಯನಾಡು ಜಿಲ್ಲೆಯ ಚೂರಲ್ ಮಲೈಗೆ ಕೆಲವು ವರ್ಷಗಳ ಹಿಂದೆಯೇ ಮದುವೆ ಮಾಡಿ ಕೊಡಲಾಗಿತ್ತು. ಕುಶಾಲನಗರದಲ್ಲಿಯೇ ಕೆಲಸ ಮಾಡುತ್ತಿದ್ದ ಅವರು ಆನಂತರ ಕೇರಳದಕ್ಕೆ ತೆರಳಿದ ಮೇಲೆ ಅಲ್ಲಿ ಸೇವೆ ಮುಂದುವರೆಸಿದ್ದರು. ಸದ್ಯ ದಿವ್ಯಾ ವಯನಾಡುವಿನ ಮಿಮ್ಸ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆಗಾಗ ಕುಟುಂಬದವರೊಂದಿಗೆ ಮಾತನಾಡಿದ್ದರು. ದುರ್ಘಟನೆ ನಡೆದ ಹಿಂದಿನ ದಿನವೂ ತಾಯಿಯೊಂದಿಗೆ ಮಾತನಾಡಿದ್ದರು. ಆನಂತರ ಏಕಾಏಕಿ ದುರಂತ ಸಂಭವಿಸಿತ್ತು. ದಿವ್ಯಾ ಅವರು ವಾಸಿಸುವ ಮನೆಯ ಬಳಿಯೇ ಭಾರೀ ಪ್ರವಾಹ ಬಂದು ಭೂ ಕುಸಿತ ಉಂಟಾಗಿ ಇಡೀ ಕುಟುಂಬ ಕೊಚ್ಚಿಕೊಂಡು ಹೋಗಿತ್ತು. ಭೂಕುಸಿತದ ಬಳಿಕ ದಿವ್ಯಾ ಸೇರಿದಂತೆ ಕುಟುಂಬದ 9 ಮಂದಿ ನಾಪತ್ತೆಯಾಗಿದ್ದರು. ಕುಟುಂಬದವರು ಹುಡುಕಾಟ ನಡೆಸಿದ್ದರು. ಆದರೆ ಪ್ರಯೋಜನವಾಗಿರಲಿಲ್ಲ. ಈ ಬೆಳವಣಿಗೆ ನಂತರ
ಮಗಳು ಹಾಗೂ ಕುಟುಂಬಸ್ಥರನ್ನು ಹುಡುಕಿಕೊಡುವಂತೆ ಪೊನ್ನಮ್ಮ ಕೇರಳ ಹಾಗೂ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದ್ದರು.
ಇದರ ನಡುವೆಯೂ ಹುಡುಕಾಟವನ್ನು ರಕ್ಷಣಾ ಪಡೆಗಳು ಮುಂದುವರೆಸಿದ್ದರು. ಕೊನೆಗೂ ಕುಟುಂಬದ 9 ಮಂದಿಯ ಪೈಕಿ 8 ಮಂದಿಯ ಮೃತದೇಹ ಪತ್ತೆಯಾಗಿದೆ. ದಿವ್ಯಾ ಹಾಗೂ ಮಗ ಲಕ್ಷಿತ್ ಮೃತದೇಹ ಒಟ್ಟಿಗೆ ಪತ್ತೆಯಾಗಿವೆ. ಇನ್ನೊಬ್ಬರ ದೇಹಕ್ಕಾಗಿ ಹುಡುಕಾಟ ಮುಂದುವರಿದಿದೆ. ಮರಣೋತ್ತರ ಪರೀಕ್ಷೆ ನಂತರ ಕೇರಳದಲ್ಲಿಯೇ ದಿವ್ಯಾ ಹಾಗೂ ಪುತ್ರ, ಕುಟುಂಬದ ಇತರರ ಅಂತ್ಯಕ್ರಿಯೆ ನಡೆದಿದೆ.
ಕರ್ನಾಟಕದ ಚಾಮರಾಜನಗರ, ಮಂಡ್ಯ, ಕೊಡಗು ಸೇರಿದಂತೆ ಹಲವು ಭಾಗದವರು ಕೇರಳದೊಂದಿಗೆ ನಂಟು ಹೊಂದಿದ್ದಾರೆ.ಅಲ್ಲಿಯೇ ಬದುಕು ಕಟ್ಟಿಕೊಂಡಿದ್ದರೂ ಊರಿನ ನಂಟು ಬಿಟ್ಟಿಲ್ಲ. ಚಾಮರಾಜನಗರ ಹಾಗೂ ಗುಂಡ್ಲುಪೇಟೆಯ ಎರಡು ಕುಟುಂಬದವರು ಭೂಕುಸಿತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅದೇ ರೀತಿ ಮಂಡ್ಯ ಜಿಲ್ಲೆ ಕೆಆರ್‌ಪೇಟೆ ತಾಲ್ಲೂಕು ಕತ್ತರ ಘಟ್ಟದ ಅಜ್ಜಿ ಹಾಗೂ ಮೊಮ್ಮಗ ಪ್ರಾಣ ಕಳೆದುಕೊಂಡಿದ್ದರು. ಈಗ ಕೊಡಗಿನ ಮೂಲದ ಕುಟುಂಬದ ಶವ ಪತ್ತೆಯಾಗಿವೆ.