Kodagu News: ಮುಂದಿನ ತಿಂಗಳು ಕೊಡಗಿನ ತಲಕಾವೇರಿಯಲ್ಲಿ ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ; ಈ ಬಾರಿ ವಿಶೇಷ ಏನು
Kodagu News ಕೊಡಗಿನ ಪ್ರಮುಖ ಉತ್ಸವವಾದ ತಲಕಾವೇರಿ ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವವು 2024 ಅಕ್ಟೋಬರ್ 17ರಂದು ಬೆಳಗಿನ 7.40ಕ್ಕೆ ಸಂಭವಿಸಲಿದೆ. ಇದಕ್ಕೆ ಕೊಡಗಿನಲ್ಲಿ ಸಿದ್ದತೆಯೂ ಶುರುವಾಗಿದೆ.
ಮಡಿಕೇರಿ: ಕೊಡಗು ಮಾತ್ರವಲ್ಲದೇ ಕೊಡಗಿನ ಹೊರ ಭಾಗದಲ್ಲಿರುವ ಕಾವೇರಿ ಭಕ್ತರಿಗೆ ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಅಪೂರ್ವ ಕ್ಷಣ. ಪ್ರತಿ ವರ್ಷ ತುಲಾ ಸಂಕ್ರಮಣಕ್ಕೆ ಸಹಸ್ರಾರು ಭಕ್ತರು ಸೇರಿ ಕಾವೇರಿಯಲ್ಲಿ ಮಿಂದೇಳುತ್ತಾರೆ. ಇದಾದ ನಂತರ ಒಂದು ತಿಂಗಳ ಕಾಲವೂ ಕಾವೇರಿ ಭಕ್ತರು ತಲಕಾವೇರಿಗೆ ಆಗಮಿಸಿ ಭಕ್ತಿ ಭಾವ ಮೆರೆಯುತ್ತಾರೆ. ಈ ಬಾರಿ ಅಕ್ಟೋಬರ್ 17 ರಂದು ಬೆಳಗ್ಗೆ 7.40 ಗಂಟೆಗೆ ಪವಿತ್ರ ತೀರ್ಥೋದ್ಭವ ನಿಗದಿಯಾಗಿದೆ. ಇದಕ್ಕಾಗಿ ಕೊಡಗಿನ ಭಾಗಮಂಡಲ, ತಲಕಾವೇರಿಯಲ್ಲಿ ಈಗಿನಿಂದಲೇ ಸಿದ್ದತೆಗಳು ಶುರುವಾಗಲಿವೆ.
ತುಲಾ ಮಾಸದ ಮೊದಲ ದಿನವಾದ ತುಲಾ ಸಂಕ್ರಮಣದಂದು ಪ್ರತಿ ವರ್ಷ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ಕಾಣಿಸಿಕೊಳ್ಳುತ್ತಾಳೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಪವಿತ್ರ ಕ್ಷೇತ್ರ ತಲಕಾವೇರಿಯ ಭ್ರಹ್ಮಕುಂಡಿಕೆಯಲ್ಲಿ ಕಾವೇರಿ ತಾಯಿ ಭಕ್ತರಿಗೆ ದರ್ಶನ ನೀಡುತ್ತಾಳೆ. ಈ ಪವಿತ್ರ ಘಳಿಗೆಯನ್ನು ಕಣ್ತುಂಬಿಕೊಳ್ಳಲು ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ತೀರ್ಥೋದ್ಭವದ ಈ ವಿಸ್ಮಯ ನೋಡಲು ಜನರು ಗಂಟೆಗಳಿಗೂ ಮುಂಚೆ ಬಂದು ಕಾದುನಿಲ್ಲುತ್ತಾರೆ.
ತಲಕಾವೇರಿ ಉತ್ಸವ ಈ ಬಾರಿ ಬೆಳಿಗ್ಗೆ ಬಂದಿರುವುದರಿಂದ ರಾತ್ರಿಯಿಂದಲೇ ಭಕ್ತರು ಆಗಮಿಸುವ ಸಾಧ್ಯತೆ ಅಧಿಕ. ಇದಕ್ಕಾಗಿ ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಗೊಂದಲಕ್ಕೆ ಅವಕಾಶವಿಲ್ಲದ ರೀತಿ ಉತ್ಸವ ನಡೆಸಲು ಕೊಡಗು ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳು ಮುಂದಾಗಿವೆ.
ಪವಿತ್ರ ತೀರ್ಥೋದ್ಭವ ಸಂಬಂಧ ತಲಕಾವೇರಿಯಲ್ಲಿ ಭಕ್ತಾಧಿಗಳಿಗೆ ಯಾವುದೇ ರೀತಿ ಕಿರಿಕಿರಿ ಉಂಟಾಗದಂತೆ ಅಧಿಕಾರಿಗಳು ಗಮನಹರಿಸಬೇಕು.ಮಳೆ ಕಡಿಮೆಯಾಗಿದ್ದು, ಕೂಡಲೇ ರಸ್ತೆ ನಿರ್ವಹಣೆ ಕೈಗೊಳ್ಳಬೇಕು. ರಸ್ತೆ ಬದಿ ಕಾಡನನ್ನು ಕಡಿಬೇಕು. ಗಿಡ ಗಂಟೆ ಸಂಬಂಧ ಅರಣ್ಯ ಅಧಿಕಾರಿಗಳು ತಗಾದೆ ತೆಗೆಯಬಾರದು. ಪೊಲೀಸ್ ಇಲಾಖೆ ಅಧಿಕಾರಿಗಳು ಪವಿತ್ರ ತೀರ್ಥೋದ್ಭವ ಸಂಬಂಧ ಅಗತ್ಯ ಬಂದೋಬಸ್ತ್ ಮಾಡಬೇಕು.ಸಾರಿಗೆ ಇಲಾಖೆ ಅಧಿಕಾರಿಗಳು ಅಗತ್ಯ ಬಸ್ ಸೌಲಭ್ಯ ಒದಗಿಸುವುದು, ಕಾವೇರಿ ನೀರಾವರಿ ನಿಗಮ, ಸೆಸ್ಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ತಮ್ಮ ಹಂತದಲ್ಲಿ ಅಗತ್ಯ ತಯಾರಿ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಶನಿವಾರ ಭಾಗಮಂಡಲದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸೂಚನೆ ನೀಡಿದ್ದಾರೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ಭಕ್ತಾಧಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸಬೇಕು. ನಾಡಿನ ಜೀವನದಿ ತಲಕಾವೇರಿಯ ಪವಿತ್ರ ತೀರ್ಥೋದ್ಭವ ಒಂದು ವಿಶಿಷ್ಟವಾಗಿದ್ದು, ಪವಿತ್ರ ತೀರ್ಥೋದ್ಭವ ಕಣ್ತುಂಬಿಕೊಳ್ಳಲು ಭಕ್ತಾಧಿಗಳಿಗೆ ಅಗತ್ಯ ಕನಿಷ್ಠ ಮೂಲ ಸೌಲಭ್ಯ ಕಲ್ಪಿಸಬೇಕು. ಆ ನಿಟ್ಟಿನಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಕ್ರಮವಹಿಸುವಂತೆ ಸೂಚಿಸಿದರು.
ಮಡಿಕೇರಿ-ಭಾಗಮಂಡಲ, ಕರಿಕೆ-ಭಾಗಮಂಡಲ, ವಿರಾಜಪೇಟೆ-ಭಾಗಮಂಡಲ ರಸ್ತೆಗುಂಡಿ ಮುಚ್ಚಬೇಕು. ರಸ್ತೆ ನಿರ್ವಹಣೆ ಮಾಡಬೇಕು. ಹಾಗೆಯೇ ಭಾಗಮಂಡಲ-ತಲಕಾವೇರಿ ರಸ್ತೆ ಸರಿಪಡಿಸಬೇಕು, ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು. ತಾತ್ಕಾಲಿಕ ಶೌಚಾಲಯ, ಕುಡಿಯುವ ನೀರು ಮತ್ತಿತರ ಸೌಲಭ್ಯ ಕಲ್ಪಿಸುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಕೆಎಸ್‍ಆರ್‍ಸಿ ವಿಭಾಗದ ಅಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್,
ನೀರಾವರಿ ಇಲಾಖೆಯ ಇಇ ಪುಟ್ಟಸ್ವಾಮಿ, ಲೋಕೋಪಯೋಗಿ ಇಲಾಖೆಯ ಇಇ ಸಿದ್ದೇಗೌಡ, ಸೆಸ್ಕ್ ಇಇ ಅನಿತಾ ಬಾಯಿ, ನಗರಸಭೆ ಪೌರಾಯುಕ್ತರಾದ ವಿಜಯ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ, ದಸರಾ ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ತೆನ್ನಿರಾ ಮೈನಾ ಮಾತನಾಡಿದರು. ಸ್ಥಳೀಯರಾದ ಬಿ.ಎಸ್.ತಮ್ಮಯ್ಯ, ಪುಲಿಯಂಡ ಜಗದೀಶ್, ಸುನಿಲ್ ಪತ್ರಾವೋ, ಪ್ರಮೋದ್, ಕೆ.ಜೆ.ಭರತ್ ಇತರರು ಹಲವು ವಿಚಾರಗಳ ಕುರಿತು ಪ್ರಸ್ತಾಪಿಸಿದರು. ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ, ಬಲ್ಲಡ್ಕ ಅಪ್ಪಾಜಿ, ಕಾಳನ ರವಿ, ಇತರರು ಇದ್ದರು.