Kodagu News: ಕೊಡಗಿನಲ್ಲಿ ದಂಪತಿ ಅಡ್ಡಗಟ್ಟಿ 6 ಲಕ್ಷ ರೂ. ದರೋಡೆ, 7 ಮಂದಿ ಆರೋಪಿಗಳ ಬಂಧನ-kodagu news kodagu police arrest 7 inter district robbers of dakshina kannada in somwarpet couple robbery case ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Kodagu News: ಕೊಡಗಿನಲ್ಲಿ ದಂಪತಿ ಅಡ್ಡಗಟ್ಟಿ 6 ಲಕ್ಷ ರೂ. ದರೋಡೆ, 7 ಮಂದಿ ಆರೋಪಿಗಳ ಬಂಧನ

Kodagu News: ಕೊಡಗಿನಲ್ಲಿ ದಂಪತಿ ಅಡ್ಡಗಟ್ಟಿ 6 ಲಕ್ಷ ರೂ. ದರೋಡೆ, 7 ಮಂದಿ ಆರೋಪಿಗಳ ಬಂಧನ

Kodagu Crime ಕೊಡಗು ಜಿಲ್ಲೆಯ ಸೋಮವಾರ ಪೇಟೆ ಬಳಿ ನಡೆದಿದ್ದ ದರೋಡೆ ಪ್ರಕರಣವನ್ನು( Kodagu Robbery) ಬೇಧಿಸಿ ದಕ್ಷಿಣ ಕನ್ನಡದ ಆರೋಪಿಗಳನ್ನು ಕೊಡಗು ಪೊಲೀಸರು( Kodagu Police) ಬಂಧಿಸಿದ್ದಾರೆ.

ಸೋಮವಾರಪೇಟೆ ತಾಲ್ಲೂಕಿನಲ್ಲಿ ದರೋಡೆ ಪ್ರಕರಣದ ಬೇಧಿಸಿದ ಪೊಲೀಸರು.
ಸೋಮವಾರಪೇಟೆ ತಾಲ್ಲೂಕಿನಲ್ಲಿ ದರೋಡೆ ಪ್ರಕರಣದ ಬೇಧಿಸಿದ ಪೊಲೀಸರು.

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ದಂಪತಿ ತಡೆದು ಭಾರೀ ಪ್ರಮಾಣದಲ್ಲಿ ದರೋಡೆ ನಡೆಸಿದ್ದ ಏಳು ಮಂದಿಯನ್ನು ತ್ವರಿತಗತಿಯಲ್ಲಿ ಬಂಧಿಸಿರುವ ಕೊಡಗಿನ ಪೊಲೀಸರು ಅವರಿಂದ ಹಣ, ಮೊಬೈಲ್‌ ಹಾಗೂ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ದಂಪತಿಯ ನಿತ್ಯ ವಹಿವಾಟು, ಚಲನವಲನಗಳನ್ನು ತಿಳಿದವರೇ ಈ ಕೃತ್ಯ ಮಾಡಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದರೋಡೆಕೋರರನ್ನು ಬಂಧಿಸಿದ್ದಾರೆ. ಇವರೆಲ್ಲಾ ಅಂತರ ಜಿಲ್ಲಾ ದರೋಡೆಕೋರರು ಎನ್ನುವುದು ತನಿಖೆಯಿಂದ ಬಯಲಾಗಿದೆ. ಕೊಡಗು ಮಾತ್ರವಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪ್ರಕರಣಗಳಲ್ಲಿ ಕೆಲವರು ಭಾಗಿಯಾಗಿರುವುದು ವಿಚಾರಣೆ ವೇಳೆ ಗೊತ್ತಾಗಿದೆ. ಇನ್ನೂ ಹಲವು ಕಡೆ ಇವರು ದರೋಡೆ ಕೃತ್ಯ ಎಸಗಿರುವ ಅನುಮಾನಗಳಿದ್ದು ತನಿಖೆ ಮುಂದುವರೆದಿದೆ.

ದಕ್ಷಿಣ ಕನ್ನಡ ಜಿಲ್ಲೆ ಕನ್ಯಾನ ದ ಸತೀಶ್ ರೈ (54), ಕುದಮಾರು ಗ್ರಾಮದ ರೋಷನ್ ಕೆ (32), ವಿಟ್ಲ ಪಡ್ನ್ ರು ಗ್ರಾಮದ ಗಣೇಶ ಕೆ. (28), ವೀರಕಂಬ ಗ್ರಾಮದ ಕುಸುಮಕರ (39), ಸೋಮವಾರಪೇಟೆ ವೆಂಕಟೇಶ್ವರ ಬ್ಲಾಕ್ ನ ವಿನೋದ್ ಕುಮಾರ್ ಹೆಚ್.ಪಿ. (36), ವಿರಾಜಪೇಟೆ ಶಿವಕೇರಿಯ ಸೂರ್ಯಪ್ರಸಾದ್ ಅಲಿಯಾಸ್ ಭಟ್ಟ (43), ಸೋಮವಾರ ಪೇಟೆ ತಾಲ್ಲೂಕು ಹೆಬ್ಬಾಲೆ ಗ್ರಾಮದ ಮೋಹನ್ ಕುಮಾರ್ ಬಿ (45) ಎಂಬುವವರನ್ನು ಪ್ರಕರಣದಲ್ಲಿ ಬಂಧಿಸಲಾಗಿದೆ.

ಇವರಲ್ಲಿ ರೋಷನ್, ಸತೀಶ್ ರೈ, ಗಣೇಶ ಮತ್ತು ಕುಸುಮಕರ ಇವರು ಅಂತರ್ ಜಿಲ್ಲಾ ದರೋಡೆಕೊರರ ತಂಡವಾಗಿದ್ದು, ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬಯಲಾಗಿದೆ. ಪ್ರಕರಣದಲ್ಲಿ ಭಾಗಿಗಳಾಗಿರುವ ಇನ್ನುಳಿದ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರೆದಿದೆ.

ಕೊಡಗಿನ ಸೋಮವಾರಪೇಟೆ ತಾಲ್ಲೂಕಿನಲ್ಲಿ ಸ್ಕೂಟರ್ ನಲ್ಲಿ ತೆರಳುತ್ತಿದ್ದ ದಂಪತಿಯನ್ನು ಹತ್ತು ದಿನದ ಹಿಂದೆಯಷ್ಟೇ ಅಡ್ಡಗಟ್ಟಿ ಹಲ್ಲೆ ಮಾಡಿ ರೂ. 6,18,000 ನಗದು ಹಣ ಮತ್ತು ಮೂರು ಮೊಬೈಲ್ ಗಳನ್ನು ದರೋಡೆ ಮಾಡಲಾಗಿತ್ತು. ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಿಬ್ಬೆಟ್ಟ ಗ್ರಾಮದ ಕೆ.ಎಂ. ನೇಮರಾಜ್ ಎಂಬುವವರು 2024 ರ ಜುಲೈ 29 ರಂದು ರಾತ್ರಿ 8.45 ರ ಹೊತ್ತಿಗೆ ಪತ್ನಿಯೊಂದಿಗೆ ಹೊರಟಿದ್ದರು.

ಸೋಮವಾರಪೇಟೆ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಅನುಷಾ ಮಾರ್ಕೆಟಿಂಗ್ ಏಜೇನ್ಸಿ ಹೆಸರಿನಲ್ಲಿ ತಮ್ಮ ಅಂಗಡಿಯ ವ್ಯಾಪಾರ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದರು. ಕಿಬ್ಬೆಟ್ಟ ರಸ್ತೆಯಲ್ಲಿರುವ ತಿರುವಿನಲ್ಲಿ ಅಪರಿಚಿತ ವ್ಯಕ್ತಿಗಳು ಕಾರು ಮತ್ತು ಬೈಕ್ ನಲ್ಲಿ ಬಂದು ಅಡ್ಡಗಟ್ಟಿ ಖಾರದ ಪುಡಿ ಎರಚಿ ಸ್ಕೂಟರ್ ನಿಂದ ತಳ್ಳಿ ಬೀಳಿಸಿದ್ದೂ ಅಲ್ಲದೇ ನೇಮರಾಜ್ ರವರ ಪತ್ನಿ ಮೇಲೆ ಹಲ್ಲೆ ಮಾಡಿ ರೂ. 6.18 ಲಕ್ಷ ರೂ ನಗದು ಮತ್ತು 3 ಮೊಬೈಲ್ ಗಳಿದ್ದ ಬ್ಯಾಗ್ ನ್ನು ಕಿತ್ತುಕೊಂಡು ಹೋಗಿದ್ದರು. ಈ ಸಂಬಂಧ ಅಂದೇ ರಾತ್ರಿ ಸೋಮವಾರಪೇಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಸೋಮವಾರಪೇಟೆ ಉಪವಿಭಾಗ ಡಿವೈಎಸ್ಪಿ ಡಿ.ವಿ. ಗಂಗಾಧರಪ್ಪ ಅವರ ಉಸ್ತುವಾರಿಯಲ್ಲಿ ಸೋಮವಾರಪೇಟೆ ಪಿ.ಐ. ಮುದ್ದು ಮಾದೇವ, ಪಿಎಸ್ಐ ಗೋಪಾಲ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ತನಿಖೆ ನಡೆಸಲಾಗಿತ್ತು.

ವಾರದಿಂದ ಮಾಹಿತಿ ಕಲೆ ಹಾಕುತ್ತಿದ್ದ ಪೊಲೀಸರು ಕೊನೆಗೂ ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ . 3,02,000 ಹಣ, ಕೃತ್ಯಕ್ಕೆ ಬಳಸಿದ ಒಂದು ಸ್ಯಾಂಟ್ರೋ ಮತ್ತು ಒಂದು ಮಾರುತಿ ಸ್ವಿಫ್ಟ್ ಕಾರು ಹಾಗೂ 9 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಮೂರು ಲಕ್ಷ ರೂ.ಗಳನ್ನು ಏಳು ಮಂದಿ ಖರ್ಚು ಮಾಡಿಕೊಂಡಿರುವುದು ವಿಚಾರಣೆ ವೇಳೆ ಬಯಲಾಗಿದೆ ಎಂದು ಕೊಡಗು ಎಸ್ಪಿ ರಾಮರಾಜನ್‌ ತಿಳಿಸಿದ್ದಾರೆ.