Kodagu Rains: ಕೊಡಗಿನಲ್ಲಿ ಭಾರೀ ಮಳೆ, ತ್ರಿವೇಣಿ ಸಂಗಮ ಜಲಾವೃತ, ಮಡಿಕೇರಿಯಲ್ಲಿ ಬರೆಕುಸಿತ, ಶಾಲೆಗಳಿಗೆ ರಜೆ
Rain Updates ಕೊಡಗು ಜಿಲ್ಲೆಯಲ್ಲಿ( Kodagu Rains) ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನೂ ಮಳೆ ಹೆಚ್ಚುವ ನಿರೀಕ್ಷೆಯಿದೆ.
ಮಡಿಕೇರಿ: ಕೊಡಗಿನಲ್ಲಿ ಎಡಬಿಡದೇ ಮಳೆ ಸುರಿಯುತ್ತಿದೆ. ಬುಧವಾರ ರಾತ್ರಿಯಿಡೀ ಹಲವು ಕಡೆ ಸುರಿದ ಮಳೆ ಗುರುವಾರ ಬೆಳಗ್ಗೆ ನಂತರವೂ ಮುಂದುವರಿದಿದೆ. ಕೊಡಗಿನಲ್ಲಿ ಉಗಮವಾಗುವ ಕಾವೇರಿ ನದಿ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಕಾವೇರಿ ಉಗಮ ಸ್ಥಾನ ತಲಕಾವೇರಿ ಭಾಗದಲ್ಲಿ ಮಳೆಯಾಗುತ್ತಿದೆ. ತ್ರಿವೇಣಿ ಸಂಗಮವಾದ ಭಾಗ ಮಂಡಲದಲ್ಲಿ ಜಲಾವೃತ ಸನ್ನಿವೇಶ ಕಂಡು ಬಂದಿದೆ. ನಿರಂತರ ಮಳೆಯಾಗುತ್ತಿರುವುದರಿಂದ ಮಡಿಕೇರಿ ನಗರದಲ್ಲಿ ಬರೆ ಕುಸಿತವೂ ಆಗಿದೆ. ಮಳೆಯ ಕಾರಣದಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯು ಕೆಲವು ಭಾಗಗಳಲ್ಲಿ ಗುರುವಾರ ಶಾಲೆಗಳಿಗೆ ರಜೆ ಘೋಷಣೆ ಮಾಡಿದೆ. ಮಳೆ ಪ್ರಮಾಣ ಹೆಚ್ಚುವ ಮುನ್ಸೂಚನೆ ಇರುವುದರಿಂದ ಜಿಲ್ಲಾಡಳಿತವು ಪರಿಸ್ಥಿತಿ ನಿಭಾಯಿಸಲು ಸಿದ್ದತೆ ಮಾಡಿಕೊಳ್ಳುತ್ತಿದೆ.
ಕರ್ನಾಟಕದ ಕಾಶ್ಮೀರ ಎಂದೇ ಕರೆಯುವ ಕೊಡಗಿನಲ್ಲಿ ಮುಂಗಾರು ಮಳೆ ಸಹಜವಾಗಿಯೇ ಇರುತ್ತದೆ. ಕಳೆದ ವರ್ಷ ಕೊರತೆ ಉಂಟಾಗಿತ್ತು. ಆದರೆ ಈ ಬಾರಿ ಈಗಾಗಲೇ ಜಿಲ್ಲೆಗೆ ಮುಂಗಾರು ಪ್ರವೇಶಿಸಿ ಉತ್ತಮವಾಗಿಯೇ ಮಳೆಯಾಗುತ್ತಿದೆ. ಕೊಡಗಿನಲ್ಲಿ ಅತಿಹೆಚ್ಚು ಮಳೆಯಾಗುವ ಹಲವು ಪ್ರದೇಶಗಳಲ್ಲಿ ಮಳೆ ಸುರಿಯುತ್ತಿದೆ. ತಿಂಗಳ ಹಿಂದೆಯಷ್ಟೇ ಸೊರಗಿದ್ದ ಕಾವೇರಿ ನದಿ ಮುಂಗಾರು ಮಳೆಗೆ ಜೀವ ಪಡೆದುಕೊಂಡಿದೆ.
ಗುರುವಾರ ಬೆಳಗ್ಗೆಯ ಮಾಹಿತಿ ಪ್ರಕಾರ ಭಾಗಮಂಡಲ - 212ಮಿ.ಮೀ, ಮಡಿಕೇರಿ - 158.6ಮಿ.ಮೀ, ಸಂಪಾಜೆ - 138.5ಮಿ.ಮೀ, ನಾಪೋಕ್ಲು- 131.20ಮಿ.ಮೀ, ಪೊನಂಪೇಟೆ - 120ಮಿ.ಮೀ, ಹುದಿಕೆರೆ - 120ಮಿ.ಮೀ, ವಿರಾಜಪೇಟೆ- 106ಮಿ.ಮೀ, ಅಮ್ಮತ್ತಿ - 101ಮಿ.ಮೀ, ಶಾಂತಹಳ್ಳಿ - 93ಮಿ.ಮೀ, ಶ್ರೀಮಂಗಲ - 88.2ಮಿ.ಮೀ, ಬಾಳೆಲೆ - 76 ಮಿಮೀ, ಸುಂಟಿಕೊಪ್ಪ- 64ಮಿ.ಮೀ, ಕುಶಾಲನಗರ - 31ಮಿ.ಮೀ, ಸೋಮವಾರಪೇಟೆ - 30ಮಿ.ಮೀ ಮಳೆಯಾಗಿದೆ.
ಕೊಡಗಿನ ತಲಕಾವೇರಿ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಭಾಗಮಂಡಲ ಭಾಗದಲ್ಲಿ ಪ್ರವಾಹ ಸ್ಥಿತಿ ನಿಧಾನವಾಗಿ ನಿರ್ಮಾಣವಾಗುತ್ತಿದೆ. ಎರಡು ದಿನ ಮಳೆ ಬಂದಿದ್ದರಿಂದ ಭಾಗಮಂಡಲ ಜಲಾವೃತವಾಗುತ್ತಿದೆ. ತ್ರಿವೇಣಿ ಸಂಗಮದಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಅದು ರಸ್ತೆಗೂ ಬಂದಿದೆ. ದೇವಸ್ಥಾನವೂ ಜಲಾವೃತವಾಗುವ ಆತಂಕವಿದೆ.
ಕೊಡಗಿನಲ್ಲಿ ಮುಂದಿನ ಕೆಲವು ದಿನ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕೇಂದ್ರ ನೀಡಿದೆ. ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ ತಾಲ್ಲೂಕುಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿರಿ: ಕೊಡಗಿನಲ್ಲೆ ಮಳೆ ವೈಭವ ಹೇಗಿದೆ ನೋಡಿ
ಧಾರಾಕಾರ ಮಳೆಗೆ ಬರೆ ಕುಸಿತ
ಕಳೆದೆರಡು ದಿನಗಳಿಂದ ಮಡಿಕೇರಿ ಸುತ್ತಮುತ್ತ ತೀವ್ರ ಮಳೆಯಾಗುತ್ತಿದೆ. ಮಡಿಕೇರಿಯಲ್ಲಿ ಸುರಿದ ಭಾರಿ ಮಳೆಗೆ ತ್ಯಾಗರಾಜ ಕಾಲೊನಿಯಲ್ಲಿ ಬರೆ ಕುಸಿತ ಉಂಟಾಗಿದೆ. ಇದರಿಂದಾಗಿ ಮೂರು ಮನೆಗಳಿಗೆ ಹಾನಿ ಉಂಟಾಗಿದೆ. ಬರೆ ಕುಸಿದ ಪರಿಣಾಮವಾಗಿ ವಿದ್ಯುತ್ ಕಂಬಗಳು ಸಂಪೂರ್ಣವಾಗಿ ನೆಲಕಚ್ಚಿವೆ. ಘಟನೆ ನಡೆದ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಬರೆ ಇನ್ನಷ್ಟು ಕುಸಿಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದ್ದಾರೆ.
ಶಾಲೆಗಳಿಗೆ ರಜೆ
ಸೋಮವಾರಪೇಟೆ ಹಾಗು ಕುಶಾಲನಗರ ತಾಲೂಕಿನಲ್ಲಿ ತೀವ್ರ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿನ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ (ಇಂದು) ಜೂ.27 ರಂದು ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿನ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಗುರುವಾರದಂದು ರಜೆ ಘೋಷಿಸಲಾಗಿದೆ. ನಾಳಿನ ಪರಿಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ಮಾಡಲಾಗುವುದು ಎಂದು ಸೋಮವಾರಪೇಟೆ ಬಿಇಒ ತಿಳಿಸಿದ್ದಾರೆ.