ಮಡಿಕೇರಿ ದಸರಾ ಗೊತ್ತು, ಕೊಡಗು ಕಾಫಿ ದಸರಾ ಗೊತ್ತೆ, ಮೊದಲ ಬಾರಿ ಅಕ್ಟೋಬರ್‌ 6ರಿಂದ ಆಯೋಜನೆ, ಏನಿದರ ವಿಶೇಷ-kodagu news madikeri dasara will include coffee dasara first time for 2 days 2024 october 6 kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಮಡಿಕೇರಿ ದಸರಾ ಗೊತ್ತು, ಕೊಡಗು ಕಾಫಿ ದಸರಾ ಗೊತ್ತೆ, ಮೊದಲ ಬಾರಿ ಅಕ್ಟೋಬರ್‌ 6ರಿಂದ ಆಯೋಜನೆ, ಏನಿದರ ವಿಶೇಷ

ಮಡಿಕೇರಿ ದಸರಾ ಗೊತ್ತು, ಕೊಡಗು ಕಾಫಿ ದಸರಾ ಗೊತ್ತೆ, ಮೊದಲ ಬಾರಿ ಅಕ್ಟೋಬರ್‌ 6ರಿಂದ ಆಯೋಜನೆ, ಏನಿದರ ವಿಶೇಷ

Kodagu Coffee Dasara 2024 ಕಾಫಿಯ ತವರು ಕೊಡಗಿನಲ್ಲಿ ಈ ಬಾರಿ ದಸರಾದೊಂದಿಗೆ ಕಾಫಿ ದಸರಾವೂ ಸೇರ್ಪಡೆಯಾಗಲಿದೆ.ಎರಡು ದಿನಗಳ ಕಾಲ ಕಾಫಿಯ ಇತ್ತೀಚಿನ ಬೆಳವಣಿಗೆಗಳ ಕುರಿತು ಮಾಹಿತಿ ವಿನಿಮಯ ಮಾಡಿಕೊಳ್ಳಲು ಕಾಫಿ ದಸರಾ ವೇದಿಕೆಯಾಗಲಿದೆ.

ಕೊಡಗಿನ ದಸರಾದಲ್ಲಿ ಮೊದಲ ಬಾರಿಗೆ ಕಾಫಿ ದಸರಾವೂ ಸೇರ್ಪಡೆಯಾಗಲಿದೆ.
ಕೊಡಗಿನ ದಸರಾದಲ್ಲಿ ಮೊದಲ ಬಾರಿಗೆ ಕಾಫಿ ದಸರಾವೂ ಸೇರ್ಪಡೆಯಾಗಲಿದೆ.

ಮಡಿಕೇರಿ: ಕೊಡಗಿನ ಕಾಫಿ ಗೊತ್ತು, ಮಡಿಕೇರಿ ದಸರಾ ಗೊತ್ತು. ಆದರೆ ಕಾಫಿ ದಸರಾ ಗೊತ್ತಿರಲಿಲ್ಲ. ಏಕೆಂದರೆ ಇಂತಹದೊಂದು ಉತ್ಸವ, ಕಾರ್ಯಕ್ರಮ ಹಿಂದೆಂದೂ ಆಯೋಜನೆ ಆಗಿರಲಿಲ್ಲ. ಕೊಡಗಿನ ಜನರ ಜೀವನಾಡಿ ಹಾಗೂ ಬ್ರಾಂಡ್‌ ಆಗಿರುವ ಕಾಫಿ ಕುರಿತು ಗಮನ ಸೆಳೆಯುವ ಸಂಬಂಧ ಮೊದಲ ಬಾರಿಗೆ ಕೊಡಗಿನಲ್ಲಿ ಕಾಫಿ ದಸರಾವನ್ನು ಆಯೋಜಿಸಲಾಗುತ್ತಿದೆ. ಅದು ದಸರಾ ವೇಳೆಯೇ ಇದನ್ನು ಏರ್ಪಡಿಸಿ ಕೊಡಗಿನವರಿಗೆ ಮಾತ್ರವಲ್ಲದೇ ಈ ವೇಳೆ ಜಿಲ್ಲೆಗೆ ಬರುವವರಿಗೆ ಈ ಕುರಿತು ತಿಳಿಸುವುದು, ಕಾಫಿ ಬೆಳೆಗಾರನ್ನು ಒಟ್ಟುಗೂಡಿಸಿ ಬೇಕು ಬೇಡಗಳ ಕುರಿತು ಚರ್ಚಿಸಿ ಅವರ ವಿಶ್ವಾಸ ಪಡೆಯುವುದು ಇದರಲ್ಲಿ ಸೇರಿದೆ. ಮಡಿಕೇರಿಯ ಶಾಸಕ ಡಾ.ಮಂಥರ್‌ಗೌಡ ಕಾಫಿ ಉತ್ಸವ ಆಯೋಜನೆಗೆ ಆಸಕ್ತಿ ತೋರಿ ಅದನ್ನು ಆಗು ಮಾಡುತ್ತಿದ್ದಾರೆ.

ಕೊಡಗು ಜನರ ಬದುಕೇ ಆಗಿರುವ ಕಾಫಿ ಏರಳಿತಗಳು ಹಲವು. ಬೆಳೆ, ಮಾರುಕಟ್ಟೆ, ಬಳಕೆ ಹೀಗೆ ಹಲವು ಆಯಾಮಗಳಿವೆ. ಈ ಹಿನ್ನೆಲೆಯಲ್ಲಿ ಮಡಿಕೇರಿ ದಸರಾ ಉತ್ಸವದಲ್ಲಿ ಅ.6 ಮತ್ತು 7 ರಂದು ಕಾಫಿ ದಸರಾವೂ ಇರಲಿದೆ. ಈ ಉತ್ಸವದ ಮೂಲಕ ಕೃಷಿಕ ವರ್ಗಕ್ಕೆ ಕಾಫಿಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳ ಹೆಚ್ಚಿನ ಮಾಹಿತಿ ದೊರಕುವಂತಾಗಬೇಕೆಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಸಲಹೆ.

ಮಕ್ಕಳ ದಸರಾ, ಮಹಿಳಾ ದಸರಾ, ಯುವದಸರಾ, ಜಾನಪದ ದಸರಾದಂತೆಯೇ ಕಾಫಿ ದಸರಾ ಕೂಡ ಜನಾಕರ್ಷಣೆ ಪಡೆಯಬೇಕು, ಜಿಲ್ಲೆಯಾದ್ಯಂತಲಿನ ಕೃಷಿಕರಿಗೆ ಕಾಫಿ ದಸರಾ ಉತ್ಸವದ ಪ್ರಯೋಜನ ದೊರಕುವಂತಾಗಬೇಕು, ಕಾಫಿಗೆ ಸಂಬಂಧಿಸಿದ ಮಾಹಿತಿ ಮಾತ್ರವಲ್ಲದೇ ತೋಟಗಾರಿಕೆ ಬೆಳೆಗಳು, ಕೃಷಿ ಪದ್ದತಿ, ಜೇನು ಕೃಷಿ, ಬಿದಿರು ಕೃಷಿ, ಹೈನೋದ್ಯಮ, ಸೇರಿದಂತೆ ಪರ್ಯಾಯ ಕೃಷಿ ಮಾಹಿತಿಯೂ ಕಾಫಿ ದಸರಾದಲ್ಲಿ ದೊರಕಬೇಕೆಂದು ತಿಳಿಸಲಾಗಿದೆ.

ಕರ್ನಾಟಕ ಬೆಳೆಗಾರರ ಸಂಘ, ಕೊಡಗು ಪ್ಲಾಂಟರ್ಸ್ ಅಸೋಯೇಷನ್, ಕಾಫಿ ಮಂಡಳಿ, ಸೇರಿದಂತೆ ಕೃಷಿಗೆ ಸಂಬಂಧಿಸಿದ ವಿವಿಧ ಸಂಘಟನೆಗಳೂ ಕಾಫಿ ದಸರಾದಲ್ಲಿ ಪಾಲ್ಗೊಂಡು ಜಿಲ್ಲೆಯ ಕೃಷಿ ಕ್ಷೇತ್ರಕ್ಕೆ ಪ್ರಯೋಜನಕಾರಿಯಾದ ಮಾಹಿತಿ ನೀಡುವಂತೆ ಕಾರ್ಯಕ್ರಮ ರೂಪಿಸಬೇಕು. ಉತ್ತಮ ಗುಣಮಟ್ಟದಲ್ಲಿ ಮಳಿಗೆಗಳನ್ನು ನಿರ್ಮಿಸಿ, ಎಲ್ಲಾ ಸೌಲಭ್ಯ ಒದಗಿಸಬೇಕು, ಮಳಿಗೆಗಳಲ್ಲಿ ಕಾಫಿ ಕೆಪೆಯನ್ನು ಕೂಡ ತೆರೆಯುವ ಮೂಲಕ ಕಾಫಿ ಕ್ಷೇತ್ರದ ನವೀನತೆಯ ಪರಿಚಯ ಮಾಡಿಕೊಡಬೇಕೆಂಬ ಎಂಬ ಸಲಹೆಯನ್ನೂ ನೀಡಲಾಯಿತು.

ಕಾಫಿ ಮಂಡಳಿ ಅಧ್ಯಕ್ಷರಾದ ದಿನೇಶ್ ಸೇರಿದಂತೆ ಕಾಫಿ ಮತ್ತು ಇತರ ಕೃಷಿ ತಜ್ಞರನ್ನೂ ಕಾಫಿ ದಸರಾಕ್ಕೆ ಆಹ್ವಾನಿಸಿ ಉತ್ತಮ ಮಾಹಿತಿಯನ್ನು ಬೆಳೆಗಾರರಿಗೆ ನೀಡಬೇಕು. ಇದು ಬೆಳೆಯುವವರು, ಮಾರಾಟಗಾರರು ಹಾಗೂ ಬಳಕೆದಾರರ ಕೊಂಡಿಯಂತೆ ಕಾರ್ಯನಿರ್ವಹಿಸಬೇಕು ಎನ್ನುವುದು ಸಲಹೆ.

ಅಕ್ಟೋಬರ್ 6 ರಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಮತ್ತು 7 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮಳಿಗೆಗಳನ್ನು ತೆರೆಯಲಾಗುತ್ತದೆ. 32 ಮಳಿಗೆಗಳಿಗೆ ಸ್ಳಳಾವಕಾಶ ಕಲ್ಪಿಸಲಾಗಿದೆ. ಎರಡೂ ದಿನಗಳ ಕಾಲ ಮಧ್ಯಾಹ್ನ 11 ಗಂಟೆಯಿಂದ 1 ಗಂಟೆಯವರೆಗೂ ಕೃಷಿ ರಂಗಕ್ಕೆ ಸಂಬಂಧಿಸಿದ ವಿಚಾರಸಂಕಿರಣಗಳನ್ನು ಬೆಳೆಗಾರ ಸಂಘಟನೆಗಳ ಪ್ರಮುಖರೊಂದಿಗೆ ಚರ್ಚಿಸಿ ನಿರ್ಧರಿಸಲಾಗಿದೆ, ಭವಿಷ್ಯದಲ್ಲಿ ಕಾಫಿ ಸೇರಿದಂತೆ ಕೃಷಿ ಕ್ಷೇತ್ರದ ಆಗುಹೋಗುಗಳ ಬಗ್ಗೆ ಕೃಷಿಕರಿಗೆ ತಜ್ಞರು ಮಾಹಿತಿ ನೀಡುವಂತೆ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು. ಕಾಫಿ ದಸರಾಕ್ಕೆ ಸಂಬಂಧಿಸಿದ ಲೋಗೋವನ್ನು ಬಿಡುಗಡೆಗೊಳಿಸಲಾಗುತ್ತದೆ ಎನ್ನುವುದು ದಸರಾ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಎಚ್‌.ಟಿ.ಅನಿಲ್‌ ಹೇಳಿಕೆ.

ಕಾಫಿ ದಸರಾದಲ್ಲಿ ಪಾಲ್ಗೊಂಡ ಕೃಷಿಕ ಸಮುದಾಯದವರು ವಿಷಯ ತಜ್ಞರೊಂದಿಗೆ ಪ್ರಶ್ನೆಗಳನ್ನು ಕೇಳಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ, ಕಾಫಿ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಇದೇ ಮೊದಲ ಬಾರಿಗೆ ದಿನೇಶ್ ಅವರೂ ಕಾಫಿ ದಸರಾದಲ್ಲಿ ಪಾಲ್ಗೊಳ್ಳುತ್ತಿರುವುದು ಕೂಡ ಕಾಫಿ ಕೃಷಿಕರಿಗೆ ಸಂತೋಷದ ವಿಚಾರವಾಗಿದೆ ಎನ್ನುತ್ತಾರೆ ಕರ್ನಾಟಕ ಬೆಳೆಗಾರರ ಸಂಘದ ನಿರ್ದೇಶಕ ಕೆ.ಕೆ.ವಿಶ್ವನಾಥ್.

ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ನಂದಾ ಬೆಳ್ಯಪ್ಪ, ಕರ್ನಾಟಕ ಬೆಳೆಗಾರರ ಸಂಘದ ಅಧ್ಯಕ್ಷ ಕೆ.ರಾಜೀವ್ ಕೂಡ ಕಾಫಿ ದಸರಾ ಸ್ವಾಗತಿಸಿ ಕಾಫಿ ಜಿಲ್ಲೆಯಾದ ಕೊಡಗಿನ ದಸರಾ ಉತ್ಸವದಲ್ಲಿ ಕಾಫಿ ಕುರಿತು ಮಾಹಿತಿ ನೀಡುವ ಕಾರ್ಯಕ್ರಮ ಶ್ಲಾಘನೀಯ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಡಗು ವರ್ಷಕ್ಕೆ ಸುಮಾರು 1,10,730 ಮೆಟ್ರಿಲ್‌ ಟನ್‌ ಕಾಫಿಯನ್ನು ಉತ್ಪಾದಿಸುತ್ತಿದ್ದು, ಇದು ಕರ್ನಾಟಕದ ಶೇ 50 ಮತ್ತು ಭಾರತದ ಉತ್ಪಾದನೆಯ ಶೇ.35 ರಷ್ಟಿದೆ. ಕಾಫಿ ಕೃಷಿಯು ಕಾರ್ಮಿಕ ಪ್ರಧಾನವಾಗಿದ್ದು ಕೊಡಗಿನ ಕಾಫಿ ತೋಟಗಳಲ್ಲಿ ಶೇ. 51ರಷ್ಟು ಉದ್ಯೋಗ ಸೃಷ್ಟಿಯಾಗುತ್ತಿದೆ. ಸ್ಥಳೀಯ ಪ್ರದೇಶದ ನಿರ್ದಿಷ್ಟ ಪರಿಸರ ಸ್ಥಿತಿಯನ್ನು ಅವಲಂಬಿಸಿ ಕಾಫಿ ಕೃಷಿಯನ್ನು ಮಾಡಲಾಗುತ್ತಿದೆ.

 

mysore-dasara_Entry_Point