Kodagu News: ಕೊಡಗಲ್ಲಿ ಹಾಡಹಗಲೇ ಹಸು ಮೇಲೆರಗಿದ ಹುಲಿ; ಆತಂಕದಲ್ಲಿ ಜನತೆ
tiger attack in Kodagu ಕೊಡಗಿನ ವಿರಾಜಪೇಟೆ ತಾಲ್ಲೂಕಿನಲ್ಲಿ ಹುಲಿ ದಾಳಿಯಿಂದ ಹಸುವೊಂದು ಮೃತಪಟ್ಟಿದೆ. ನಾಗರಹೊಳೆ ಅರಣ್ಯ( Nagarahole Tiger reserve) ದಿಂದ ಹೊರ ಬರುವ ಹುಲಿಗಳು ದಾಳಿ ಮಾಡುತ್ತಿವೆ ಎನ್ನುವುದು ಕೊಡಗಿನ( Kodagu) ಜನರ ಆರೋಪವಾಗಿದೆ.
ಮಡಿಕೇರಿ: ಕೊಡಗಿನಲ್ಲಿ ವನ್ಯಜೀವಿಗಳ ಉಪಟಳ ಜಾಸ್ತಿಯಾಗಿದೆ. ಕಾಡಾನೆಗಳ ದಾಳಿಯಿಂದ ತಿಂಗಳ ಅಂತರದಲ್ಲಿ ಐವರು ಮೃತಪಟ್ಟ ಘಟನೆಗಳು ನಡೆದಿರುವಾಗಲೇ ಈಗ ಹುಲಿ ದಾಳಿ ಸದ್ದು ಕೇಳಿ ಬರುತ್ತಿದೆ. ಅದರಲ್ಲೂ ಹಾಡ ಹಾಗಲೇ ಹುಲಿ ಕಾಣಿಸಿಕೊಂಡು ವಿದ್ಯಾರ್ಥಿಗಳಲ್ಲೂ ಭಯ ಹೆಚ್ಚಿದೆ.
ಮೈಸೂರು ಜಿಲ್ಲೆಯಲ್ಲಿ ಬಾಲಕನೊಬ್ಬನನ್ನು ಹುಲಿ ಕೊಂದು ಹಾಕಿ ಸೆರೆ ಕಾರ್ಯಾಚರಣೆ ನಡೆಯುತ್ತಿರುವಾಗಲೇ ಮತ್ತೊಂದು ದಾಳಿ ಪ್ರಕರಣ ವರದಿಯಾಗಿದ್ದು, ಈ ಭಾಗದ ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ.
ಮನೆ ಬಳಿಯೇ ನುಗ್ಗಿದ ಹುಲಿ
ಮನೆಯ ಸಮೀಪವೇ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಹಾಡಹಗಲಿನಲ್ಲೇ ಹುಲಿಯೊಂದು ದಾಳಿ ಮಾಡಿ ಬಲಿ ತೆಗೆದುಕೊಂಡ ಘಟನೆ ವಿರಾಜಪೇಟೆ ತಾಲೂಕಿನ ಮಾಲ್ದಾರೆ ಸಮೀಪದ ಆಸ್ಥಾನ ಹಾಡಿಯಲ್ಲಿ ನಡೆದಿದೆ.
ಹಸುವನ್ನು ಮೇಯಲು ಬಿಟ್ಟು ಮನೆಗೆ ಊಟಕ್ಕೆ ತೆರಳಿದ ಸಂದರ್ಭ ಸ್ಥಳೀಯರ ಕಣ್ಣೆದುರಲ್ಲೇ ಹುಲಿ ದಾಳಿ ಮಾಡಿ ಹಸುವನ್ನು ಬಲಿ ತೆಗೆದುಕೊಂಡಿದೆ. ಸಮೀಪದಲ್ಲಿದ್ದವರ ಕಿರುಚಾಟದಿಂದ ಹುಲಿ ಸಮೀಪದ ಅರಣ್ಯಕ್ಕೆ ತೆರಳಿದ್ದುಸ್ಥಳೀಯರು ಭಯಬೀತರಾಗಿದ್ದಾರೆ.
ಪರಿಹಾರಕ್ಕೆ ಒತ್ತಾಯ
ಸ್ವಾಮಿ ಎಂಬವರಿಗೆ ಸೇರಿದ ಅಂದಾಜು 2 ವರ್ಷ ಪ್ರಾಯದ ಹಸು ಹುಲಿ ದಾಳಿಗೆ ಬಲಿಯಾಗಿದೆ.
ಹುಲಿ ದಾಳಿಯಿಂದ ನನಗೆ ಸುಮಾರು 40 ಸಾವಿರ ರೂ. ನಷ್ಟ ಉಂಟಾಗಿದ್ದು ಪರಿಹಾರ ನೀಡಬೇಕೆಂದು ಸ್ವಾಮಿ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.
ಈ ಹಿಂದೆಯೂ ಸ್ವಾಮಿ ಎಂಬವರಿಗೆ ಸೇರಿದ ಹಸುವೊಂದನ್ನ ಹುಲಿ ದಾಳಿ ಮಾಡಿ ಗಂಭೀರ ಗಾಯಗೊಳಿಸಿತ್ತು. ಇದೀಗ ಮತ್ತೊಂದು ಹಸುವನ್ನ ಹುಲಿ ಬಲಿ ತೆಗೆದುಕೊಂಡು ಹಾಡಹಗಲಿನಲ್ಲೂ ಸಾರ್ವಜನಿಕವಾಗಿ ಹುಲಿ ಕಾಣಿಸಿಕೊಳ್ಳುತ್ತಿದ್ದು, ಶಾಲಾ ವಿದ್ಯಾರ್ಥಿಗಳು, ಕಾರ್ಮಿಕರು, ಭಯಬೀತರಾಗಿದ್ದಾರೆ.
ಸಿಬ್ಬಂದಿ ದೌಡು
ಕಾಡು ಪ್ರಾಣಿಗಳ ಭಯದ ನಡುವೆ ಜೀವನ ನಡೆಸುತ್ತಿರುವ ಸುತ್ತಮುತ್ತಲಿನ ನಿವಾಸಿಗಳು ಮನೆಯಿಂದ ಹೊರ ಬರಲು ಸಾದ್ಯವಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದು, ಕೂಡಲೇ ಹುಲಿ ಸೆರೆ ಹಿಡಿಯಬೇಕೆಂದು ಸ್ಥಳಿಯರು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಉಪ ವಲಯ ಅರಣ್ಯ ಅಧಿಕಾರಿ ಶರಣ್ ಕುಮಾರ್ ವಿಭೂತಿ, ಅರಣ್ಯ ರಕ್ಷಕ ಮಣಿಕಂಠ, ಸಿಬ್ಬಂದಿಗಳಾದ ಕೃಷ್ಣಪ್ಪ,ಶಶಿ, ಗ್ರಾ.ಪಂ ಉಪಾಧ್ಯಕ್ಷ ಕುಂಞಣ್ಣ ಸೇರಿದಂತೆ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹುಲಿ ಕಾಟ ನಿರಂತರ
ಈ ಭಾಗದಲ್ಲಿ ಹುಲಿ ಆಗಾಗ ಕಾಣಿಸಿಕೊಳ್ಳುತ್ತಿದೆ. ಕೆಲ ದಿನಗಳ ಹಿಂದೆ ಹಸುವಿನ ಮೇಲೆ ದಾಳಿ ಮಾಡಿತ್ತು. ಅರಣ್ಯ ಇಲಾಖೆಯವರು ಕಾರ್ಯಾಚರಣೆ ಕೈಗೊಂಡರೂ ಮತ್ತೆ ಹುಲಿ ದಾಳಿ ಮಾಡಿದೆ. ಅದರಲ್ಲೂ ಹಾಡಹಗಲೇ ಹುಲಿ ಕಾಣಿಸಿಕೊಂಡು ಸಾಮಾನ್ಯ ಜನರಿಗೂ ಭಯ ಆಗುತ್ತಿದೆ. ಕೂಡಲೇ ಹುಲಿ ಸೆರೆಗೆ ಅರಣ್ಯ ಇಲಾಖೆ ಗಮನ ಹರಿಸಬೇಕು. ಜನ ಭಯಮುಕ್ತವಾಗಿ ಬದುಕುವಂತಾಗಬೇಕು ಎಂಬುದು ಸ್ಥಳೀಯರ ಆಗ್ರಹ.
ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಂತೆ ಹಲವು ಹಳ್ಳಿಗಳಿವೆ. ಗಡಿಯಂಚಿನಲ್ಲಿಯೇ ಹುಲಿಗಳು ಸಂಚರಿಸುತ್ತಿರುವ ಮಾಹಿತಿ ಅರಣ್ಯ ಇಲಾಖೆಗೆ ಇದೆ. ಹುಲಿಗಳ ಮೇಲೆ ಸಿಬ್ಬಂದಿ ಕೂಡ ನಿಗಾ ಇರಿಸಿದ್ದಾರೆ. ಆದರೂ ಕೆಲವೊಮ್ಮೆ ಇಂತಹ ಘಟನೆಗಳು ನಡೆಯುತ್ತವೆ. ಈಗಾಗಲೇ ಕೂಂಬಿಂಗ್ ಮೂಲಕ ಹುಲಿ ಜಾಡು ಪತ್ತೆಗೆ ಕ್ರಮ ವಹಿಸಲಾಗಿದೆ ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಹೇಳುತ್ತಾರೆ.
ಮೈಸೂರು ಜಿಲ್ಲೆ ಎಚ್‌ಡಿಕೋಟೆ ತಾಲ್ಲೂಕಿನಲ್ಲೂ ಕೆಲ ದಿನಗಳ ಹಿಂದೆ ಹುಲಿ ದಾಳಿ ಮಾಡಿ ಬಾಲಕನೊಬ್ಬನನ್ನು ಸಾಯಿಸಿತ್ತು. ಆ ಹುಲಿ ಸೆರೆಗೆ ಕಾರ್ಯಾಚರಣೆ ಮುಂದುವರಿದಿದೆ.
ಇದೇ ರೀತಿ ಹುಣಸೂರು ತಾಲ್ಲೂಕಿನ ಹನಗೋಡು ಸಮೀಪವೂ ಹುಲಿ ದಾಳಿ ಮಾಡಿ ರೈತರೊಬ್ಬರ ಹಸುವನ್ನು ಕೊಂದು ಹಾಕಿದ್ದು. ಅಲ್ಲಿಯೂ ಹುಲಿ ಪತ್ತೆ ಕಾರ್ಯಾಚರಣೆ ನಡೆಸಲಾಗುತ್ತಿದೆ.
( ವರದಿ: ಎ.ಆರ್.ವೆಂಕಟೇಶ್ ಹಾಸನ)