Kodagu tiger death: ಕೊಡಗಿನಲ್ಲಿ ಜಾನುವಾರು ಮೇಲೆ ದಾಳಿ ಮಾಡುತ್ತಿದ್ದ ಹುಲಿ ಶವ ಕಾಫಿ ತೋಟದಲ್ಲಿ ಪತ್ತೆ
ಕನ್ನಡ ಸುದ್ದಿ  /  ಕರ್ನಾಟಕ  /  Kodagu Tiger Death: ಕೊಡಗಿನಲ್ಲಿ ಜಾನುವಾರು ಮೇಲೆ ದಾಳಿ ಮಾಡುತ್ತಿದ್ದ ಹುಲಿ ಶವ ಕಾಫಿ ತೋಟದಲ್ಲಿ ಪತ್ತೆ

Kodagu tiger death: ಕೊಡಗಿನಲ್ಲಿ ಜಾನುವಾರು ಮೇಲೆ ದಾಳಿ ಮಾಡುತ್ತಿದ್ದ ಹುಲಿ ಶವ ಕಾಫಿ ತೋಟದಲ್ಲಿ ಪತ್ತೆ

Tiger Death ಕೊಡಗಿನಲ್ಲಿ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ವಯಸ್ಸಾದ ಹುಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗುರುವಾರ ಮರಣೋತ್ತರ ಪರೀಕ್ಷೆ ನಡೆಯಲಿದೆ.

ಕೊಡಗಿನಲ್ಲಿ ಹುಲಿ ಮೃತಪಟ್ಟಿರುವ ವರದಿಯಾಗಿದೆ. ( ಸಾಂಧರ್ಭಿಕ ಚಿತ್ರ)
ಕೊಡಗಿನಲ್ಲಿ ಹುಲಿ ಮೃತಪಟ್ಟಿರುವ ವರದಿಯಾಗಿದೆ. ( ಸಾಂಧರ್ಭಿಕ ಚಿತ್ರ)

ಮಡಿಕೇರಿ: ದಕ್ಷಿಣ ಕೊಡಗಿನಲ್ಲಿ ಕೆಲ ದಿನಗಳಿಂದ ಜಾನುವಾರಗಳ ಮೇಲೆ ದಾಳಿ ಮಾಡುತ್ತಲೇ ಉಪಟಳ ನೀಡುತ್ತಿದ್ದ ಹುಲಿಯೊಂದು ಬುಧವಾರ ಮೃತಪಟ್ಟಿದೆ. ಕೊಡಗಿನ ವೀರಾಜಪೇಟೆ ವಲಯ ವ್ಯಾಪ್ತಿಯ ಕಾಫಿ ತೋಟದಲ್ಲಿ 12 ವರ್ಷದ ಹುಲಿ ಮೃತ ದೇಹ ಪತ್ತೆಯಾಗಿದ್ದು, ಇದೇ ಹುಲಿ ಕೆಲ ದಿನಗಳಿಂದ ಈ ಭಾಗದಲ್ಲಿ ತೊಂದರೆ ನೀಡುತ್ತಿತ್ತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಹುಲಿ ಸೆರೆಗೆ ಎರಡು ದಿನದಿಂದ ಅರಣ್ಯ ಇಲಾಖೆ ಕಾರ್ಯಾಚರಣೆ ಕೂಡ ನಡೆಸುತ್ತಿತ್ತು.ಅಷ್ಟರ ಒಳಗೆ ಹುಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ದಕ್ಷಿಣ ಕೊಡಗಿನ ಭಾಗದಲ್ಲಿ ಹಲವು ವರ್ಷಗಳಿಂದ ಹುಲಿ ಉಪಟಳ ಹೆಚ್ಚಿದೆ. ಕಳೆದ ವರ್ಷವೂ ಇದೇ ರೀತಿ ಕಾಫಿ ತೋಟದಲ್ಲಿ ಹುಲಿ ಇರುವ, ದಾಳಿ ಮಾಡಿರುವ ಪ್ರಕರಣಗಳು ವರದಿಯಾಗಿದ್ದವು. ಜಾನುವಾರುಗಳನ್ನು ತಿಂದು ಹಾಕಿರುವ ಬಗ್ಗೆಯೂ ದೂರುಗಳು ದಾಖಲಾಗಿದ್ದವು.

ಕೆಲ ದಿನಗಳಿಂದ ವೀರಾಜಪೇಟೆ ವಿಭಾಗದ ವ್ಯಾಪ್ತಿಯ ವೀರಾಜಪೇಟೆ ವಲಯ ವ್ಯಾಪ್ತಿಯಲ್ಲಿ ಹುಲಿಯೊಂದು ಕಾಫಿ ತೋಟಗಳಲ್ಲಿಯೇ ಸುತ್ತುತ್ತಿತ್ತು. ಮೂರ್ನಾಲ್ಕು ಕಡೆಗಳಲ್ಲಿ ದನಗಳ ಮೇಲೆ ದಾಳಿ ಮಾಡಿ ತಿಂದು ಹಾಕಿತ್ತು. ಹುಲಿಯ ಕುರಿತು ಮಾಹಿತಿ ಕಲೆ ಹಾಕಿದಾಗ ಅದಕ್ಕೆ ವಯಸ್ಸಾಗಿರುವುದು ಕಂಡು ಬಂದಿತ್ತು. ಈ ಕಾರಣದಿಂದಲೇ ಅರಣ್ಯದಿಂದ ಹೊರ ದೂಡಲ್ಪಟ್ಟು ಕಾಫಿ ತೋಟಗಳಲ್ಲಿ ಸುತ್ತುತ್ತಿರುವುದು ತಿಳಿದಿತ್ತು. ಆದರೆ ಮನುಷ್ಯರ ಮೇಲೆ ದಾಳಿ ಮಾಡಿದ ವರದಿಯಾಗಿರಲಿಲ್ಲ.

ಆದರೆ ಹುಲಿ ಮೂರ್ನಾಲ್ಕು ಕಡೆ ಹಸುಗಳ ಮೇಲೆ ದಾಳಿ ಮಾಡಿದ್ದರಿಂದ ಜನರ ಮೇಲೂ ದಾಳಿ ಆಗಬಹುದು ಎನ್ನುವ ಮುನ್ನೆಚ್ಚರಿಕೆಯಿಂದ ಹುಲಿ ಸೆರೆಗೆ ಅನುಮತಿ ನೀಡಲಾಗಿತ್ತು. ಆನೆಗಳನ್ನು ಬಳಸಿ ಸೋಮವಾರದಿಂದಲೇ ಹುಲಿ ಸೆರೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಹುಲಿ ಮಾತ್ರ ಪತ್ತೆಯಾಗಿರಲಿಲ್ಲ.

ಬುಧವಾರವೂ ಆನೆಗಳನ್ನು ಬಳಸಿ ಕಾರ್ಯಾಚರಣೆ ನಡೆಸುತ್ತಿರುವಾಗ ಕಾಫಿ ತೋಟವೊಂದರಲ್ಲಿ ಹುಲಿ ಮೃತಪಟ್ಟಿರುವುದು ಕಂಡು ಬಂದಿತ್ತು. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದಾಗ ಈ ಭಾಗದಲ್ಲಿ ಸುತ್ತುತ್ತಿದ್ದ ಹುಲಿ ಇದೇ ಇರಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದರು.

ಹುಲಿ ದೇಹದ ಭಾಗಗಳಲ್ಲಿ ಗಾಯಗಳಾಗಿವೆ. ಇನ್ನೊಂದು ಹುಲಿಯೊಂದಿಗೆ ಕಾದಾಡಿರುವ ಶಂಕೆಯಿದೆ. ಅದನ್ನು ಬಿಟ್ಟರೆ ಹುಲಿ ದೇಹದ ಭಾಗಗಳು ಕದಲಿಲ್ಲ. ಹಲ್ಲು, ಉಗುರು, ಚರ್ಮ ಸಹಿತ ಇತರೆ ಭಾಗಗಳು ಇವೆ. ಇದರಿಂದ ಆಂತರಿಕ ಕಾದಾಟದಿಂದ ಹುಲಿ ಸತ್ತಿರುವ ಶಂಕೆಯಿದೆ. ಗುರುವಾರ ಮರಣೋತ್ತರ ಪರೀಕ್ಷೆ ನಡೆಯಲಿದ್ದು. ನಿಖರ ಕಾರಣ ತಿಳಿಯಲಿದೆ ಎಂದು ಕರ್ನಾಟಕ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ಎಸ್.ಎಸ್‌.ಲಿಂಗರಾಜು ತಿಳಿಸಿದ್ಧಾರೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ( NTCA) ಶಿಷ್ಟಾಚಾರದ ಪ್ರಕಾರವೇ ಮರಣೋತ್ತರ ಪರೀಕ್ಷೆ, ಅಂತ್ಯಕ್ರಿಯೆಯನ್ನು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು, ಸ್ವಯಂ ಸೇವಾ ಸಂಘಟನೆ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

Whats_app_banner