ಕನ್ನಡ ಸುದ್ದಿ  /  ಕರ್ನಾಟಕ  /  ಸೋಮವಾರಪೇಟೆ: ಸಿಹಿಯೂಟದ ವಿಚಾರಕ್ಕೆ ಗಲಾಟೆ; ನಿಶ್ಚಿತಾರ್ಥದ ಉಂಗುರ ವಧುವಿನತ್ತ ಎಸೆದು ಹೋದ ತುಮಕೂರು ವರ

ಸೋಮವಾರಪೇಟೆ: ಸಿಹಿಯೂಟದ ವಿಚಾರಕ್ಕೆ ಗಲಾಟೆ; ನಿಶ್ಚಿತಾರ್ಥದ ಉಂಗುರ ವಧುವಿನತ್ತ ಎಸೆದು ಹೋದ ತುಮಕೂರು ವರ

ಸೋಮವಾರಪೇಟೆಯಲ್ಲಿ ಭಾನವಾರ ರಾತ್ರಿ ಸಿಹಿಊಟದ ವಿಚಾರಕ್ಕೆ ಗಲಾಟೆ ನಡೆದು, ತುಮಕೂರು ವರ ತನ್ನ ನಿಶ್ಚಿತಾರ್ಥದ ಉಂಗುರ ವಧುವಿನತ್ತ ಎಸೆದು ಹೋದ ಘಟನೆ ನಡೆದಿದೆ. ವಧು ಕೂಡ ತನಗೆ ಈ ಮದುವೆ ಬೇಡ ಎಂದು ಹೇಳಿದ್ದರಿಂದ ಸೋಮವಾರ ನಡೆಯಬೇಕಾಗಿದ್ದ ಮದುವೆ ರದ್ದಾಗಿದೆ. ಸಿಹಿಯೂಟದ ನೆಪದಲ್ಲಿ ಮದುವೆ ಮುರಿದುಹೋದ ವಿದ್ಯಮಾನದ ವಿವರ ಇಲ್ಲಿದೆ.

ಸೋಮವಾರಪೇಟೆಯಲ್ಲಿ ಭಾನುವಾರ ರಾತ್ರಿ ಸಿಹಿಯೂಟದ ವಿಚಾರಕ್ಕೆ ಗಲಾಟೆ ನಡೆದಿದ್ದು, ತುಮಕೂರು ವರ ನಿಶ್ಚಿತಾರ್ಥದ ಉಂಗುರ ವಧುವಿನತ್ತ ಎಸೆದು ಹೋದ ಘಟನೆ ನಡೆದಿದೆ. ಸಿಹಿಯೂಟದ ನೆಪದಲ್ಲಿ ಮದುವೆ ಮುರಿದುಬಿತ್ತು.
ಸೋಮವಾರಪೇಟೆಯಲ್ಲಿ ಭಾನುವಾರ ರಾತ್ರಿ ಸಿಹಿಯೂಟದ ವಿಚಾರಕ್ಕೆ ಗಲಾಟೆ ನಡೆದಿದ್ದು, ತುಮಕೂರು ವರ ನಿಶ್ಚಿತಾರ್ಥದ ಉಂಗುರ ವಧುವಿನತ್ತ ಎಸೆದು ಹೋದ ಘಟನೆ ನಡೆದಿದೆ. ಸಿಹಿಯೂಟದ ನೆಪದಲ್ಲಿ ಮದುವೆ ಮುರಿದುಬಿತ್ತು. (Pratinidhi)

ಸೋಮವಾರಪೇಟೆ: ಮದುವೆ ಮುಹೂರ್ತಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇರುವಾಗ ಊಟ ತಿಂಡಿ ವಿಚಾರಕ್ಕೆ ಭಾವಿ ಬೀಗರ ನಡುವೆ ಗಲಾಟೆ ನಡೆದು, ವರ ತನ್ನ ನಿಶ್ಚಿತಾರ್ಥದ ಉಂಗುರವನ್ನು ವಧುವಿನತ್ತ ಎಸೆದು ಹೋದ. ಇದರೊಂದಿಗೆ ಸಿಹಿಯೂಟದ ನೆಪದಲ್ಲಿ ಮದುವೆಯೊಂದು ಮುರಿದು ಬಿದ್ದ ವಿಲಕ್ಷಣ ಘಟನೆ ಸೋಮವಾರಪೇಟೆಯಿಂದ ವರದಿಯಾಗಿದೆ.

ಟ್ರೆಂಡಿಂಗ್​ ಸುದ್ದಿ

ವರನ ಕಡೆಯವರು ಊಟದ ವಿಚಾರಕ್ಕೆ ಮಾಡಿದ ತಗಾದೆಯಿಂದಾಗಿ ಸೋಮವಾರಪೇಟೆಯ ಜಾನಕಿ ಕನ್ವೆನ್‌ಷನ್ ಹಾಲ್‌ನಲ್ಲಿ ನಡೆಯಬೇಕಾಗಿದ್ದ ಮದುವೆಯೇ ರದ್ದುಗೊಂಡಿದ್ದು, ವಧುವಿನ ಬಳಗ ಪೊಲೀಸ್‌ ಠಾಣೆಗೆ ಬಂದು ಆಕ್ರೋಶ, ಅಸಮಾಧಾನ ತೋಡಿಕೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ ಎಂದು ಮೈಸೂರಿನ ಸ್ಥಳೀಯ ಪತ್ರಿಕೆ "ಪ್ರತಿನಿಧಿ" ವರದಿ ಮಾಡಿದೆ.

ಸಿಹಿಯೂಟದ ನೆಪದಲ್ಲಿ ಮದುವೆ ಮುರಿದುದು ಹೇಗೆ

ವಧು ಮತ್ತು ವರ ಇಬ್ಬರೂ ಬೆಂಗಳೂರಿನಲ್ಲಿ ಖಾಸಗಿ ಕಂಪನಿಗಳಲ್ಲಿ ಕೆಲಸದಲ್ಲಿರುವವರು. ವರ ತುಮಕೂರು ಜಿಲ್ಲೆಯವನು. ವಧು ಸೋಮವಾರಪೇಟೆ ಸಮೀಪದ ಹಾನಗಲ್ಲು ಗ್ರಾಮದ ಸಿದ್ದಾರ್ಥ ಬಡಾವಣೆಯವರು. ಇವರಿಬ್ಬರ ನಡುವೆ ವಿವಾಹ ನಿಶ್ಚಯವಾಗಿದ್ದು. ಸೋಮವಾರ (ಮೇ 6) ಸೋಮವಾರಪೇಟೆಯ ಜಾನಕಿ ಕನ್ವೆನ್‌ಷನ್ ಹಾಲ್‌ನಲ್ಲಿ ಮದುವೆ ನಡೆಯಬೇಕಾಗಿತ್ತು.

ವರನ ಕಡೆಯವರು ಭಾನುವಾರ (ಮೇ 5) ಸಂಜೆಯೇ ತುಮಕೂರಿನಿಂದ ಸೋಮವಾರಪೇಟೆಗೆ ಆಗಮಿಸಿದ್ದರು. ವಧುವಿನ ಕಡೆಯವರು ಕಲ್ಯಾಣಮಂಟಪಕ್ಕೆ ಬರಲು ತಡವಾದ ಕಾರಣ ವರನ ಕಡೆಯವರು ಪಟ್ಟಣದ ಲಾಡ್ಜ್‌ನಲ್ಲಿ ಕೊಠಡಿ ಪಡೆದು ತಂಗಿದ್ದರು.

ಸಂಜೆ 6 ಗಂಟೆಗೆ ವಧುವಿನ ಕಡೆಯವರು ಕಲ್ಯಾಣ ಮಂಟಕ್ಕೆ ಬಂದಿದ್ದು, ವರನ ಕಡೆಯವರಿಗೆ ಫೋನ್ ಮಾಡಿ ತಿಳಿಸಿದರೂ, ಅವರು ರಾತ್ರಿ 9ಕ್ಕೆ ಕಲ್ಯಾಣ ಮಂಟಪಕ್ಕೆ ಬಂದರು. ಹಾಗೆ ಬರುವಾಗಲೇ ಕುಪಿತರಾಗಿದ್ದ ಅವರು, ವಧುವಿನ ಮನೆಯವರೊಂದಿಗೆ ಮುನಿಸಿಕೊಂಡು ರಾತ್ರಿಗೆ ಸಿಹಿಊಟದ ವ್ಯವಸ್ಥೆ ಮಾಡಿಲ್ಲ ಎಂಬ ಕಾರಣಕ್ಕೆ ಬೈಯತೊಡಗಿದರು. ಇದು ವಾಕ್ಸಮರಕ್ಕೆ, ಜಗಳಕ್ಕೆ ಕಾರಣವಾಯಿತು.

ಈ ಜಗಳದ ನಡುವೆ ವರ ತನ್ನ ಕೈಯಲ್ಲಿದ್ದ ನಿಶ್ಚಿತಾರ್ಥದ ಉಂಗುರವನ್ನು ವಧುವಿನ ಕಡೆಗೆ ಎಸೆದು "ನನಗೆ ಮದುವೆ ಬೇಡ, ನಾನು ತೊಡಿಸಿದ್ದ ರಿಂಗ್ ವಾಪಸ್ ಕೊಡು" ಎಂದು ಕೇಳಿದ್ದಾನೆ. ಕೂಡಲೇ ವಧು ತನ್ನ ಕೈಯಲ್ಲಿದ್ದ ನಿಶ್ಚಿತಾರ್ಥದ ಉಂಗುರವನ್ನು ವಾಪಸ್ ಕೊಟ್ಟಿದ್ದಾಳೆ. ಅಲ್ಲಿಂದ ಪ್ರಕರಣ ಪೊಲೀಸ್ ಠಾಣೆಗೆ ಸ್ಥಳಾಂತರವಾಗಿದೆ.

ಪೊಲೀಸ್ ಠಾಣೆಯಲ್ಲಿ ನಡೆದುದು ಇಷ್ಟು

ರಾತ್ರಿ ಊಟದ ವ್ಯವಸ್ಥೆ ವಿಚಾರದಲ್ಲಿ ಸಹನೆ ತೋರದ ವರನ ಕಡೆಯವರು ಜಗಳ ಶುರುಮಾಡಿದ್ದಾರೆ. ವರ ಅವರನ್ನು ಸಮಾಧಾನ ಪಡಿಸದೆ, ನನ್ನ ಪೋಷಕರನ್ನು ಅವಮಾನ ಮಾಡಿದ್ದಾನೆ. ಈತನನ್ನು ಮದುವೆಯಾದರೆ ಮುಂದೆ ನನ್ನ ಭವಿಷ್ಯ ಚೆನ್ನಾಗಿರಲ್ಲ. ಈತ ನನ್ನನ್ನು ಚೆನ್ನಾಗಿ ನೋಡಿಕೊಳ್ಳಲ್ಲ. ನನ್ನಿಂದ ಮಾತ್ರ ಎಲ್ಲವನ್ನೂ ಅಪೇಕ್ಷಿಸುವ ಮನೋಭಾವ ಇದು. ಮದುವೆ ಮಂಟಪದಲ್ಲಿ ಊಟದ ವಿಚಾರಕ್ಕೆ ಇಷ್ಟೆಲ್ಲ ರಾದ್ಧಾಂತ ಮಾಡಿದ್ದಲ್ಲದೆ, ನಿಶ್ಚಿತಾರ್ಥದ ಉಂಗುರವನ್ನು ಕಳಚಿ ನನ್ನೆಡೆಗೆ ಎಸೆದ ಕಾರಣ ನನಗೆ ಈ ಮದುವೆ ಬೇಡ ಎಂದು ವಧು ಪೊಲೀಸ್ ಠಾಣೆಯಲ್ಲಿ ತಿಳಿಸಿದ್ದಾಳೆ.

ಮದುವೆ ಮಾತುಕತೆ ವೇಳೆ 100 ಗ್ರಾಂ ಚಿನ್ನ, ಬೆಂಗಳೂರಿನಲ್ಲಿ 10 ಲಕ್ಷ ರೂಪಾಯಿ ಸೈಟ್‌, ವಾಸಕ್ಕೆ ಅಪಾರ್ಟ್‌ಮೆಂಟ್‌ ಕೊಡಿಸಬೇಕು ಎಂದು ವರನ ಕಡೆಯವರು ವಧುವಿನ ಮನೆಯವರಲ್ಲಿ ಬೇಡಿಕೆ ಇರಿಸಿದ್ದರು. ಮದುವೆಗೆ ಮೊದಲು ನೀಡಿದ ಚಿನ್ನದಲ್ಲಿ ಕೇವಲ 60 ಗ್ರಾಂ ತೂಕ ಮತ್ತು 10 ಲಕ್ಷ ರೂಪಾಯಿ ಸೈಟ್ ಕೊಡಿಸದ ಕಾರಣ, ಊಟದ ನೆಪದಲ್ಲಿ ಖ್ಯಾತೆ ತೆಗೆದರು ಎಂದು ವಧುವಿನ ಕಡೆಯವರು ದೂರಿದ್ದಾರೆ.

ಇದರೊಂದಿಗೆ ಮದುವೆ ಮುರಿದು ಹೋಗಿರುವುದು ಖಾತ್ರಿಯಾದ ನಂತರ ಪೊಲೀಸರು ಎರಡೂ ಕಡೆಯವರಿಂದ ದೂರು ಸ್ವೀಕರಿಸಿ ಹಿಂಬರಹ ನೀಡಿದರು. ಅಲ್ಲದೆ, ಮದುವೆಗೆ ಸಂಬಂಧಿಸಿದ ಹಣಕಾಸಿನ ವಿಚಾರವನ್ನು ಮಾತುಕತೆ ನಡೆಸಿ ಇತ್ಯರ್ಥ ಮಾಡುವಂತೆ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.

IPL_Entry_Point