Kodagu News: ಕೊಡಗಿನಲ್ಲಿ ಬೆಳ್ಳಿಂಬೆಳಿಗ್ಗೆ ಕಾಡಾನೆ ದಾಳಿಗೆ ವೃದ್ದೆ ಬಲಿ: ಅರಣ್ಯ ಇಲಾಖೆ ವಿರುದ್ದ ಹೆಚ್ಚಿದ ಆಕ್ರೋಶ-kodagu news wild elephant attack in kodagu nagarahole border elder woman died villagers angry over forest department kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Kodagu News: ಕೊಡಗಿನಲ್ಲಿ ಬೆಳ್ಳಿಂಬೆಳಿಗ್ಗೆ ಕಾಡಾನೆ ದಾಳಿಗೆ ವೃದ್ದೆ ಬಲಿ: ಅರಣ್ಯ ಇಲಾಖೆ ವಿರುದ್ದ ಹೆಚ್ಚಿದ ಆಕ್ರೋಶ

Kodagu News: ಕೊಡಗಿನಲ್ಲಿ ಬೆಳ್ಳಿಂಬೆಳಿಗ್ಗೆ ಕಾಡಾನೆ ದಾಳಿಗೆ ವೃದ್ದೆ ಬಲಿ: ಅರಣ್ಯ ಇಲಾಖೆ ವಿರುದ್ದ ಹೆಚ್ಚಿದ ಆಕ್ರೋಶ

Elephant Attack ಕಾಡಾನೆ ದಾಳಿಯಿಂದ ವೃದ್ದೆಯೊಬ್ಬರು ಮೃತಪಟ್ಟಿರುವ ಘಟನೆ ಕೊಡಗಿನಲ್ಲಿ ಶುಕ್ರವಾರ ನಡೆದಿದೆ.

ಕೊಡಗಿನಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿಯಾದ ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದರು.
ಕೊಡಗಿನಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿಯಾದ ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದರು.

ಮಡಿಕೇರಿ: ಬೆಳಿಗ್ಗೆ ಎದ್ದು ಇನ್ನೇನು ಮನೆಯಿಂದ ಹೊರಬಂದು ನಡೆದು ಹೋಗಬೇಕು ಎನ್ನುವಷ್ಟರಲ್ಲಿ ಕಾಡಾನೆಯೊಂದು ದಾಳಿ ಮಾಡಿಯೇ ಬಿಟ್ಟಿತು. ಆನೆ ದಾಳಿ ಮಾಡುವ ಮುನ್ಸೂಚನೆಯೂ ಇಲ್ಲದೇ ಹೊರಟಿದ್ದ ಮಹಿಳೆ ಅದಕ್ಕೆ ಸಿಲುಕಿ ಜೀವ ಕಳೆದುಕೊಂಡರು. ಮನೆಯಿಂದ ಹೊರಟ ಆ ಮಹಿಳೆ ಬಂದಿದ್ದು ಹೆಣವಾಗಿ. ಇದು ಕೊಡಗಿನಲ್ಲಿ ಶುಕ್ರವಾರ ಬೆಳಿಗ್ಗೆ ಕಾಡಾನೆ ದಾಳಿಯಿಂದ ಮಹಿಳೆಯೊಬ್ಬರು ಜೀವ ಕಳೆದು ಕೊಂಡ ಘಟನೆ. ಇಂತಹ ಘಟನೆಗಳು ಕೊಡಗಿನಲ್ಲಿ ಅಧಿಕವಾಗಿವೆ. ಕಾಡಾನೆ ಹಾವಳಿಯಿಂದ ಜನ ಜೀವಭಯದ ನಡುವೆಯೇ ಬದುಕುವ ಸನ್ನಿವೇಶ ಎದುರಾಗಿದೆ. ಅರಣ್ಯ ಇಲಾಖೆ ವಿರುದ್ದ ಜನ ಆಕ್ರೋಶ ಹೊರ ಹಾಕಿದ್ದು. ಕಾಡಾನೆ ಉಪಟಳ ತಡೆಯುವಂತೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಕೊಡಗಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಂತೆ ಇರುವ ಪೊನ್ನಂಪೇಟೆ ತಾಲ್ಲೂಕಿನ ಚನ್ನಂಗಿ ಗ್ರಾಮದಲ್ಲಿ ನಡೆದ ಘಟನೆಯಿದು. ಗ್ರಾಮದ ಕಾತಯಿ(72 ) ಎಂಬುವವರು ಬೆಳಿಗ್ಗೆ ಮನೆಯಿಂದ ಹೊರ ಬಂದಿದ್ದರು. ಮಗನ ಮನೆಯಿಂದ ಬರುತ್ತಿದ್ದಾಗ ಏಕಾಏಕಿ ಕಾಡಾನೆ ರಸ್ತೆಯಲ್ಲಿಯೇ ದಾಳಿ ಮಾಡಿತು. ಕಾಡಿನ ಗಡಿ ಭಾಗವಾದ ಇಲ್ಲಿನ ಅರಣ್ಯ ಪ್ರದೇಶದಲ್ಲಿ ಆನೆ ನಿಂತಿರುವುದೂ ಗೊತ್ತಾಗುವುದಿಲ್ಲ. ಏಕಾಏಕಿ ಆನೆ ದಾಳಿ ನಡೆಸಿದ್ದರಿಂದ ಮಹಿಳೆ ತಪ್ಪಿಸಿಕೊಳ್ಳಲು ಆಗದೇ ಮೃತಪಟ್ಟರು. ಆನೆ ಮಹಿಳೆಯ ಎದೆಭಾಗದಲ್ಲಿ ತುಳಿದಿದ್ದರಿಂದ ಆಕೆ ಜೀವ ಕಳೆದುಕೊಂಡಿದ್ದಾರೆ.

ಆಕೆ ಚೀರಿಕೊಂಡಿದ್ದನ್ನು ಕೇಳಿದ ಸ್ಥಳೀಯರು ಓಡಿ ಬಂದರೂ ಅವರ ಜೀವ ಹೋಗಿತ್ತು. ಆನೆ ಅಲ್ಲೇ ಇರುವ ಮಾಹಿತಿ ಇದ್ದುದರಿಂದಲೇ ಕೂಡಲೇ ಅರಣ್ಯ ಇಲಾಖೆ ಹಾಗೂ ಸ್ಥಳೀಯ ಪೊಲೀಸರಿಗೂ ಸುದ್ದಿಮುಟ್ಟಿಸಿದರು. ಅರಣ್ಯ ಸಿಬ್ಬಂದಿ ಆಗಮಿಸಿ ಆನೆಯನ್ನು ಕಾಡಿನತ್ತ ಅಟ್ಟಲು ಮುಂದಾದರು.

ಮಹಿಳೆಯ ಶವವನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಒಪ್ಪಿಸಲಾಗುತ್ತದೆ. ಅಲ್ಲದೇ ಮಹಿಳೆಯ ಕುಟುಂಬಕ್ಕೆ ಪರಿಹಾರವನ್ನೂ ನೀಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಾಗಹೊಳೆಯ ಗಡಿಯಂಚಿನಲ್ಲಿ ಹಲವಾರು ಗ್ರಾಮಗಳಿವೆ. ಇದಲ್ಲದೇ ಕೊಡಗಿನ ಬಹಳಷ್ಟು ಗ್ರಾಮಗಳಲ್ಲಿ ಕಾಡಾನೆ ಉಪಟಳವಿದೆ. ಸಮೀಪ ಎಸ್ಟೇಟ್‌ ಗಳಲ್ಲಿ ಕಾಡಾನೆಗಳು ಸುತ್ತುತ್ತಿವೆ. ಹಲವಾರು ಹಳ್ಳಿಗಳಿಗೆ ಕಾಡಾನೆ ಬಾರದಂತೆ ತಡೆಯಲು ತಡೆಗೋಡೆ ನಿರ್ಮಿಸುವ ಮನವಿಯನ್ನೂ ಈಗಾಗಲೇ ಸಲ್ಲಿಸಲಾಗಿದೆ. ಅರಣ್ಯ ಇಲಾಖೆ ನಮ್ಮ ಅಹವಾಲನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದು ಸ್ಥಳೀಯರ ಆರೋಪ.

ಚನ್ನಂಗಿಯಲ್ಲಿ ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ಸ್ಥಳೀಯರು ಅರಣ್ಯ ನಡವಳಿಕೆ ವಿರುದ್ದ ಅಸಮಾಧಾನ ಹೊರ ಹಾಕಿದರು.