Kodagu News: ಕೊಡಗಿನಲ್ಲಿ ಅಂಚೆ ಕಚೇರಿಗೆ ಕನ್ನ ಹಾಕಿ ಪಾಸ್‌ಪುಸ್ತಕಗಳ ಜತೆ ಡಿವಿಆರ್‌ ಅನ್ನೂ ಹೊತ್ತೊಯ್ದ ಮೂವರ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  Kodagu News: ಕೊಡಗಿನಲ್ಲಿ ಅಂಚೆ ಕಚೇರಿಗೆ ಕನ್ನ ಹಾಕಿ ಪಾಸ್‌ಪುಸ್ತಕಗಳ ಜತೆ ಡಿವಿಆರ್‌ ಅನ್ನೂ ಹೊತ್ತೊಯ್ದ ಮೂವರ ಬಂಧನ

Kodagu News: ಕೊಡಗಿನಲ್ಲಿ ಅಂಚೆ ಕಚೇರಿಗೆ ಕನ್ನ ಹಾಕಿ ಪಾಸ್‌ಪುಸ್ತಕಗಳ ಜತೆ ಡಿವಿಆರ್‌ ಅನ್ನೂ ಹೊತ್ತೊಯ್ದ ಮೂವರ ಬಂಧನ

Kodagu News: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನಲ್ಲಿ ಅಂಚೆ ಕಚೇರಿಗೆ ಕನ್ನ ಹಾಕಿ ಅಲ್ಲಿನ ದಾಖಲೆಗಳನ್ನು ಹೊತ್ತೊಯ್ದ ಮೂವರನ್ನು ಬಂಧಿಸಲಾಗಿದೆ.

ಕೊಡಗಲ್ಲಿ ಅಂಚೆ ಕಚೇರಿ ಕಳ್ಳತನ ಮಾಡಿದವರು ಸಿಕ್ಕಿಬಿದ್ದಿದ್ದಾರೆ.
ಕೊಡಗಲ್ಲಿ ಅಂಚೆ ಕಚೇರಿ ಕಳ್ಳತನ ಮಾಡಿದವರು ಸಿಕ್ಕಿಬಿದ್ದಿದ್ದಾರೆ.

Kodagu News: ದೊಡ್ಡ ದೊಡ್ಡ ಅಂಗಡಿ, ಮನೆಗಳಿಗೆ ಕನ್ನ ಹಾಕಿರುವವರ ಬಗ್ಗೆ ಕೇಳಿದ್ದೀರಿ. ಬ್ಯಾಂಕ್‌, ಎಟಿಎಂಗಳಿಗೆ ನುಗ್ಗಿ ದರೋಡೆ ಮಾಡಿರುವವರನ್ನು ನೋಡಿದ್ದೀರಿ. ಆದರೆ ಇಲ್ಲಿ ಕಳ್ಳರು ನುಗ್ಗಿರುವುದು ಅಂಚೆ ಕಚೇರಿಗೆ. ಅದೂ ಹಳ್ಳಿಯೊಂದರ ಪುಟ್ಟ ಅಂಚೆ ಕಚೇರಿಗೆ. ಅವರು ಅಲ್ಲಿ ಏನೂ ಸಿಗದೇ ಇದ್ದಾಗ ಹೊತ್ತೊಯ್ದಿದ್ದು ಕೆಲವು ಗ್ರಾಹಕರ ಪಾಸ್‌ಪುಸ್ತಕಗಳು ಹಾಗೂ ಅಂಚೆ ಸ್ಟಾಂಪ್‌ ಹಾಗೂ ಖಜಾನೆ ಬಾಕ್ಸ್‌ ಅನ್ನು. ಕೊಡಗಿನಲ್ಲಿ ಅಂಚೆ ಕಚೇರಿಯೊಂದರಲ್ಲಿ ಕಳ್ಳತನ ನಡೆಸಿ ಸಿಕ್ಕಿ ಬಿದ್ದಿರುವ ಪ್ರಕರಣವಿದು. ಎರಡೂವರೆ ತಿಂಗಳ ಹಿಂದೆ ನಡೆದಿದ್ದ ಕೊಡಗು ಜಿಲ್ಲೆ ವೀರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲ ಗ್ರಾಮದ ಅಂಚೆ ಕಚೇರಿ ಕಳ್ಳತನ ಪ್ರಕರಣವನ್ನು ಕೊಡಗು ಜಿಲ್ಲಾ ಪೊಲೀಸರು ಬೇಧಿಸಿದ್ದಾರೆ. ಆಗ ಅವರು ಕದ್ದಿರುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ವಿರಾಜಪೇಟೆ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಬಿಟ್ಟಂಗಾಲದಲ್ಲಿ 2024ರ ನವೆಂಬರ್‌ 30ರಂದು ಕಳ್ಳತನ ಪ್ರಕರಣ ನಡೆದಿತ್ತು. ಅದು ಗ್ರಾಮದ ಅಂಚೆ ಕಚೇರಿ ಬೀಗ ಮುರಿದು ಕಳ್ಳತನ ಮಾಡಲಾಗಿತ್ತು. ಕಚೇರಿಯಲ್ಲಿನ ಖಜಾನೆ ಬಾಕ್ಸ್‌, ಹಲವಾರು ಸ್ಟಾಂಪ್‌ಗಳು ಹಾಗೂ ಗ್ರಾಹಕರಿಗೆ ಸೇರಿದ ಪಾಸ್‌ಪುಸ್ತಕಗಳನ್ನು ಕಳುವು ಮಾಡಲಾಗಿತ್ತು. ಅಲ್ಲದೇ ಅಂಚೆ ಕಚೇರಿಗೆ ಅಳವಡಿಸಿದ್ದ ಸಿಸಿಟಿವಿಯ ಡಿವಿಆರ್‌ ಅನ್ನು ಹೊತ್ತುಕೊಂಡು ಹೋಗಿದ್ದರು ಕಳ್ಳರು. ಬಿಟ್ಟಂಗಾಲ ಗ್ರಾಮದಲ್ಲಿ ಅದೇ ದಿನ ಶೆಡ್‌ನಲ್ಲಿ ನಿಲ್ಲಿಸಿದ್ದ ಕಾರನ್ನು ಕೂಡ ಅಪಹರಿಸಲಾಗಿತ್ತು. ಅದು ಬಿಟ್ಟಂಗಾಲ ಗ್ರಾಮದ ಮಾಚಯ್ಯ ಎಂಬುವವರಿಗೆ ಸೇರಿದ ಕಾರಾಗಿತ್ತು.

ಪೊಲೀಸರು ತನಿಖೆ ಕೈಗೊಂಡಿದ್ದರು. ಕಳ್ಳತನ ಮಾಡಿದ ಆರೋಪಿಗಳ ಹುಡುಕಾಟದಲ್ಲಿದ್ದರು. ಈ ವೇಳೆ ನಾಲಾಡಿ ಕಕ್ಕಬ್ಬೆ ಗ್ರಾಮದ ಕೆ.ಸಿ. ಅಶೋಕ ಅಲಿಯಾಸ್ ಕುಡಿಯರ ಅಶೋಕ (35), ಸೋಮವಾರಪೇಟೆ ಕಿಬ್ಬೆಟ್ಟ ಅಯ್ಯಪ್ಪ ಕಾಲೋನಿಯ ಕೆ. ಪಿ. ಕೀರ್ತಿ (25) ಮತ್ತು ಸೋಮವಾರಪೇಟೆ ರೆಂಜರ್ ಬ್ಲಾಕಿನ ರಿಯಾಜ್ ಅಲಿಯಾಸ್ ಸಾಬು (26) ಎಂಬುವವರು ಮತ್ತೊಂದು ಕಡೆ ಕಳ್ಳತನ ಮಾಡಲು ಯತ್ನಿಸುವಾಗ ಸಿಕ್ಕಿಬಿದ್ದಿದ್ದರು. ಆಗ ಬಿಟ್ಟಂಗಾಲದ ಕಳ್ಳತನದ ಮಾಹಿತಿಯೂ ಹೊರ ಬಿದ್ದಿದೆ.

ಆರೋಪಿಗಳಿಂದ ಸಿಸಿಟಿವಿ ಡಿವಿಆರ್ ಮತ್ತು ರೂ. 930 ಮೌಲ್ಯ ದ ಸ್ಟ್ಯಾಂಪ್ ಗಳು, ಮಾರುತಿ ಓಮ್ನಿ ವ್ಯಾನ್ (KA-04 N 5010), ಎರಡು ದ್ವಿಚಕ್ರ ವಾಹನಗಳು (KA-12-K-9059 - ಹೀರೋ ಫ್ಯಾಷನ್ ಪ್ರೋ ಮತ್ತು KA-55-J- 0861), ಮರ ಕುಯ್ಯುವ ಯಂತ್ರ, ಒಂದು ಏರ್ ಗನ್, 200 ಕೆ.ಜಿ. ಕಾಫಿ, 250 ಕೆ.ಜಿ. ಕರಿಮೆಣಸು, 30 ಗ್ರಾಂ ಚಿನ್ನ, 229 ಗ್ರಾಂ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ.

ವಿರಾಜಪೇಟೆ ಉಪವಿಭಾಗ ಡಿಎಸ್ಪಿ ಮಹೇಶ್ ಕುಮಾರ್, ವಿರಾಜಪೇಟೆ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ, ಸಬ್ ಇನ್ಸ್ ಪೆಕ್ಟರ್ ಗಳಾದ ಲತಾ ಮತ್ತು ವಾಣಿಶ್ರೀ ಹಾಗೂ ಉಪ ವಿಭಾಗ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳು ಮತ್ತು ತಾಂತ್ರಿಕ ಸಿಬ್ಬಂದಿಗಳನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಎಸ್ಪಿ ರಾಮರಾಜನ್‌ ತಿಳಿಸಿದ್ದಾರೆ.

ಇದೇ ಆರೋಪಿಗಳು ಕೊಡಗಿನ ಮಡಿಕೇರಿ ಗ್ರಾಮಾಂತರ, ಭಾಗಮಂಡಲ, , ಕುಶಾಲನಗರ ಗ್ರಾಮಾಂತರ, ಗೋಣಿಕೊಪ್ಪಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚಿನ್ನ - ಬೆಳ್ಳಿ ಆಭರಣಗಳು, ದ್ವಿಚಕ್ರ ವಾಹನ, ಮರ ಕುಯ್ಯುವ ಯಂತ್ರವನ್ನು ಕಳ್ಳತನ ಮಾಡಿರುವುದು ವಿಚಾರಣೆ ವೇಳೆ ಪತ್ತೆಯಾಗಿದೆ. ಆ ಪ್ರಕರಣದ ತನಿಖೆಯನ್ನು ಕೈಗೊಳ್ಳಲಾಗಿದೆ.

ವಿದೇಶಿಗರ ಹಣದ ಪರ್ಸ್‌ ವಾಪಸ್‌

ತಲಕಾವೇರಿ ಉಪ ಠಾಣೆಯ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಬಿದ್ದು ಸಿಕ್ಕಿದ ರೂ.40,000 ಹಣ ಮತ್ತು 40,000 ಯುಎಸ್ ಡಾಲರ್ ಇರುವ ಪರ್ಸನ್ನು ಅದರ ವಾರಸುದಾರರಿಗೆ ಭಾಗಮಂಡಲ ಠಾಣೆಯ ಸಿಬ್ಬಂದಿ ಎಸ್‌.ಎಸ್.ಜಯಪ್ರಕಾಶ್‌ ಅವರು ಹಿಂತಿರುಗಿಸಿದ್ದಾರೆ. ವಿದೇಶಿಗರು ಕೊಡಗು ಪ್ರವಾಸ ಬಂದಾಗ ಹಣದ ಪರ್ಸ್‌ ಕಳೆದುಕೊಂಡಿದ್ದರು. ಇದು ಜಯಪ್ರಕಾಶ್‌ ಅವ ಕೈಗೆ ಸಿಕ್ಕಿದ್ದು ಅದನ್ನು ಸಂಬಂಧಿಸಿದವರಿಗೆ ವಾಪಸ್‌ ನೀಡಲಾಗಿದೆ. ಎಸ್‌ಐ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಪಕರಾಗಿರುವ ಕೆ. ರಾಮರಾಜನ್ ಅವರು ಶ್ಲಾಘಿಸಿದ್ದಾರೆ.

ಕೊಡಗಲ್ಲಿ ಸೈಬರ್‌ ಜಾಗೃತಿ

ಸೈಬರ್ ವಂಚನೆ ಪ್ರಕರಣಗಳು ಮತ್ತು ಮೊಬೈಲ್ ಕಳ್ಳತನ ಹಾಗೂ ನಕಲಿ ಸಿಮ್ ಕಾರ್ಡ್ ಗಳ ಬಳಕೆಯಿಂದ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಕಾರಣದಿಂದಾಗಿ ಮಡಿಕೇರಿ ನಗರದ ಮೊಬೈಲ್ ಅಂಗಡಿಯ ಮಾಲೀಕರಿಗೆ ಹಾಗೂ ಸಿಮ್ ಕಾರ್ಡ್ ವಿತರಕರಿಗೆ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಸೈಬರ್ ಅಪರಾಧದ ಬಗ್ಗೆ ಜಾಗೃತಿ ಸಭೆ ಏರ್ಪಡಿಸಲಾಗಿತ್ತು.

ಮುಂದಿನ ದಿನಗಳಲ್ಲಿ ಸಿಮ್ ಕಾರ್ಡ್ ವಿತರಣೆ ಹಾಗೂ ಹಳೆಯ ಮೊಬೈಲ್ ಗಳ ಮಾರಾಟ ಹಾಗೂ ಖರೀದಿ ಸಂದರ್ಭದಲ್ಲಿ ನೊಂದಣಿ ಪುಸ್ತಕ ನಿರ್ವಹಣೆ, ಸಂಪೂರ್ಣ ವಿಳಾಸ ಪಡೆದುಕೊಳ್ಳುವುದು, ಗುರುತಿನ ಚೀಟಿ ಹಾಗೂ ಮೊಬೈಲ್ ನಂಬರ್ ಪಡೆದುಕೊಳ್ಳುವುದು ಸೇರಿದಂತೆ ಹಲವು ಅಂಶಗಳ ಬಗ್ಗೆ ಕೊಡಗು ಸಿಇಎನ್ ಠಾಣೆಯ ಡಿಎಸ್ಪಿ ರವಿ ಅವರು ಜಾಗೃತಿ ಮೂಡಿಸಿದರು.

 

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner