ಕೋಡಿಮಠದ ಶ್ರೀ ಭವಿಷ್ಯ: ಭಾರತದಲ್ಲಿ ಮತ್ತೆ ರೋಗದಿಂದ ಪ್ರಾಣಾಪಾಯದ ಭೀತಿ, ಮೇಘ ಸ್ಪೋಟದ ಭಯ, ಮತೀಯ ಗಲಭೆಗಳ ಆತಂಕ
ಭಾರತದಲ್ಲಿ ಮುಂದಿನ ಆರು ತಿಂಗಳ ಕಾಲ ಸನ್ನಿವೇಶ ಹೇಗಿರಲಿದೆ. ಮಳೆ, ಆರೋಗ್ಯ, ಅಧಿಕಾರದ ವಿಚಾರದಲ್ಲಿ ಏನು ಆಗಬಹುದು ಎಂದು ತಮ್ಮದೇ ಶೈಲಿಯಲ್ಲಿ ಭವಿಷ್ಯ ನುಡಿದಿದ್ದಾರೆ ಕೋಡಿ ಮಠದ ಸ್ವಾಮೀಜಿ.

ಬೆಳಗಾವಿ: ಭಾರತದಲ್ಲಿ ವಾಯು ಸಂಬಂಧಿ ಕಾಯಿಲೆಗಳು ಹೆಚ್ಚಾಗಬಹುದು ಎಂದು ನಾನು ಈ ಮೊದಲೇ ಹೇಳಿದ್ದೆ. ಅದರಲ್ಲೂ ಈಗಾಗಲೇ ಭಾರತವನ್ನು ಕಾಡಿರುವ ಕೋವಿಡ್ ಎನ್ನುವ ಮಹಾಮಾರಿ ತೊಂದರೆ ಕೊಡಬಹುದು. ಇದು ಐದು ವರ್ಷ ಇರಲಿದ್ದು. ಭಾರತೀಯರನ್ನು ಕಾಡಲಿದೆ ಎಂದು ಹೇಳಿದ್ದೆ. ಈಗ ಮತ್ತೆ ಉಸಿರಾಟದ ಸಮಸ್ಯೆ ಹಲವರಲ್ಲಿ ಕಾಡುತ್ತಿದ್ದು. ಕೋವಿಡ್ ಭಯ ಅಲ್ಲಲ್ಲಿ ಕಾಣಿಸುತ್ತಿದೆ. ಇದಲ್ಲದೇ ಭಾರತಕ್ಕೆ ಹಿಮಾಲಯದಿಂದ ಮತ್ತೆ ತೊಂದರೆಯಿದೆ. ಅದೂ ಮೇಘಸ್ಪೋಟವೂ ಆಗಿ ಸಾಕಷ್ಟು ನಷ್ಟ ಆಗಬಹುದು ಎನ್ನುವ ಭಯವಂತೂ ಇದೆ. ಭಾರತದಲ್ಲಿ ಮತೀಯ ಗಲಭೆಗಳು ಹೆಚ್ಚಲಿವೆ. ಯುದ್ದದ ಭಯ ಸದ್ಯಕ್ಕೆ ನಿಲ್ಲುವುದಿಲ್ಲ. ಭಾರತ ಮಾತ್ರವಲ್ಲದೇ ಜಗತ್ತಿನ ಹಲವು ದೇಶಗಳು ಇದೇ ರೀತಿಯ ಯುದ್ದ ಭೀತಿಯನ್ನು ಈ ವರ್ಷದುದ್ದಕ್ಕೂ ಎದುರಿಸಲಿವೆ.
ಇದು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಕೋಡಿ ಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿ ಅವರು ಹೇಳಿರುವ ಭವಿಷ್ಯ. ಬೆಳಗಾವಿಯಲ್ಲಿ ಕಾರ್ಯಕ್ರಮಗಳಿಗೆಂದು ಆಗಮಿಸಿರುವ ಸ್ವಾಮೀಜಿ ಶನಿವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆಗೆ ಮಾತನಾಡಿದರು. ಈಗಾಗಲೇ ಅವರು ಪ್ರಸ್ತಾಪಿಸುತ್ತಾ ಬಂದಿರುವ ಹಲವಾರು ವಿಷಯಗಳನ್ನು ಮತ್ತೆ ಈಗಿನ ಸಂದರ್ಭಕ್ಕೆ ಪೂರಕವಾಗಿ ಪ್ರಸ್ತಾಪ ಮಾಡಿದರು.
ಕಳೆದ ಕೆಲ ವರ್ಷದಿಂದ ನಾನು ಹೇಳುತ್ತಲೇ ಇದ್ದೇನೆ. ಉಸಿರಾಟ, ವಾಯು ಸಂಬಂಧದ ಕಾಯಿಲೆ ನಮ್ಮನ್ನು ಬಾಧಿಸಲಿದೆ ಎಂದು. ಈಗಾಗಲೇ ಕೊರೋನಾ ನಮ್ಮನ್ನು ಸಾಕಷ್ಟು ಕಾಡಿದೆ. ಈಗಲೂ ಅಲ್ಲಲ್ಲಿ ಕೊರೊನಾ ಸಂಬಂಧದ ಪ್ರಕರಣಗಳು ಕಾಣಿಸುತ್ತಿವೆ. ಇದು ನಮ್ಮನ್ನು ಇನ್ನೂ ಕಾಡಲಿದೆ. ಐದು ವರ್ಷ ಈ ಮಹಾಮಾರಿ ಇರಲಿದೆ ಎನ್ನುವುದನ್ನು ನಾನು ಹೇಳಿದ್ದೇನೆ. ಈಗಲೂ ಅದು ನಿಂತಿಲ್ಲ. ಕೆಲವು ಕಡೆಗಳಲ್ಲಿ ಕೊರೊನಾ ಪ್ರಕರಣಗಳು, ಉಸಿರಾಟದ ಸಮಸ್ಯೆಯಿಂದ ಜನ ಬಳಲುತ್ತಿರುವುದು ನಡೆದೇ ಇದೆ. ಈ ಸಂವತ್ಸರ ಫಲದಲ್ಲಿ ಒಂದು ಹೊಸ ರೋಗ ಬರೋ ಸೂಚನೆ ಇದೆ ಎಂದಿದ್ದೆ. ವಾಯು ರೂಪದಲ್ಲಿ ಬರುತ್ತದೆ ಆಗಲೇ ಬಂದಿದೆ. ಇದು ಎಲ್ಲ ಕಡೆ ಆವರಿಸುತ್ತದೆ, ಈ ರೋಗ ಮತ್ತೊಂದು ರೂಪವನ್ನು ತಾಳಬಹುದು. ನಾವು ದೇವರ ಪ್ರಾರ್ಥಿಸಬೇಕು ಎನ್ನುವುದು ಸ್ವಾಮೀಜಿ ಸಲಹೆ.
ಭಾರತದ ಹಿಮಾಲಯದ ತಪ್ಪಲ್ಲಿನಲ್ಲಿ ಮೇಘ ಸ್ಪೋಟ ಮತ್ತೊಮ್ಮೆ ಆಗಲಿದೆ. ಭಾರೀ ಮಳೆಯಿಂದ ಜನರಿಗೆ ತೊಂದರೆಯೂ ಆಗಲಿದೆ. ಈ ಹಿಂದೆಯೂ ಹಿಮಾಲಯದ ಭಾಗದಲ್ಲಿ ಭಾರೀ ಮಳೆಯಿಂದ ಅನಾಹುತಗಳೇ ಆಗಿವೆ. ಭೂಕಂಪಗಳು ಅಲ್ಲಲ್ಲಿ ಆಗಲಿವೆ ಎಂದರು ಸ್ವಾಮೀಜಿ.
ಭಾರತದಲ್ಲಿ ಮತೀಯ ಗಲಭೆಗಳು ಹೆಚ್ಚಾಗಲಿವೆ. ಯುದ್ದದ ಭಯವೂ ಇರಲಿದೆ. ಈಗಾಗಲೇ ಭಾರತವು ಕೆಲ ದಿನಗಳ ಹಿಂದೆ ಯುದ್ದದ ಭೀತಿ ಅನುಭವಿಸಿದೆ. ಭಾರತ ಮಾತ್ರವಲ್ಲದೇ ಹಲವು ದೇಶಗಳಲ್ಲೂ ಇಂತಹದೇ ಯುದ್ದದ ಆತಂಕ ಇರಲಿದೆ. ಇದರೊಟ್ಟಿಗೆ ಮತೀಯ ಗಲಭೆಗಳಿಂದ ಜನ ತೊಂದರೆ ಅನುಭವಿಸುವ ಸಾಧ್ಯತೆಯೂ ಇದೆ ಎಂದು ಸ್ವಾಮೀಜಿ ಹೇಳಿದರು.
ಭಾರತದಲ್ಲಿ ರಾಜನ ಅರಮನೆಗೆ ಕಾರ್ಮೋಡ ಕವಿದಿದೆ ಎನ್ನಿಸುತ್ತದೆ. ಕೆಲವು ರಾಜಕೀಯ ನೇತಾರರಿಗೂ ತೊಂದರೆ ಇದೆ ಎಂದು ನಾನು ಹೇಳಿದ್ದೇನೆ. ಅದು ಭಾರತ ಇಲ್ಲವೇ ಕರ್ನಾಟಕದಲ್ಲೂ ಆಗಬಹುದು ಎಂದು ತಿಳಿಸಿದರು.
ಕರ್ನಾಟಕದ ರಾಜಕಾರಣದಲ್ಲಿ ಅಧಿಕಾರ ಬದಲಾವಣೆ ಪರ್ವ ಆಗಲಿದೆಯಾ ಇಲ್ಲವೋ ಎನ್ನುವುದನ್ನು ನೋಡಲು ನಾವು ಸಂಕ್ರಾಂತಿ ಭವಿಷ್ಯದವರೆಗೂ ಕಾಯಬೇಕು. ಎರಡು ಕಾಲದಲ್ಲಿ ನಾವು ಭವಿಷ್ಯವನ್ನು ಗುರುತಿಸುತ್ತೇವೆ. ಅದರಲ್ಲಿ ಸಂಕ್ರಾಂತಿ ಅವಧಿಯ ಭವಿಷ್ಯವೂ ಪ್ರಮುಖವಾದದ್ದು. ಆ ಹೊತ್ತಿಗೆ ಏನಾಗಲಿದೆ ಎನ್ನುವುದನ್ನು ಹೇಳುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಸ್ವಾಮೀಜಿ ಉತ್ತರಿಸಿದರು.