ಕನ್ನಡ ಸುದ್ದಿ  /  ಕರ್ನಾಟಕ  /  Kolar Result: 4 ದಶಕದ ಬಳಿಕ ಕೋಲಾರದಲ್ಲಿ ಜನತಾ ದಳಕ್ಕೆ ಗೆಲುವು; ಕಾಂಗ್ರೆಸ್‌ನ ಕೆವಿ ಗೌತಮ್ ವಿರುದ್ಧ ಜೆಡಿಎಸ್‌ನ ಮಲ್ಲೇಶ್ ಬಾಬುಗೆ ಜಯ

Kolar Result: 4 ದಶಕದ ಬಳಿಕ ಕೋಲಾರದಲ್ಲಿ ಜನತಾ ದಳಕ್ಕೆ ಗೆಲುವು; ಕಾಂಗ್ರೆಸ್‌ನ ಕೆವಿ ಗೌತಮ್ ವಿರುದ್ಧ ಜೆಡಿಎಸ್‌ನ ಮಲ್ಲೇಶ್ ಬಾಬುಗೆ ಜಯ

ಕೋಲಾರ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024: ಕೋಲಾರ ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಜೆಡಿಎಸ್ (ಎನ್‌ಡಿಎ) ಅಭ್ಯರ್ಥಿ ಮಲ್ಲೇಶ್ ಬಾಬು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗೌತಮ್ 71,388 ಮತಗಳ ಅಂತರದಿಂದ ಸೋಲೊಪ್ಪಿಕೊಂಡಿದ್ದಾರೆ. Kolar Lok Sabha Elections Result.

4 ದಶಕದ ಬಳಿಕ ಕೋಲಾರದಲ್ಲಿ ಜನತಾ ದಳಕ್ಕೆ ಗೆಲುವು; ಕಾಂಗ್ರೆಸ್ ಅಭ್ಯರ್ಥಿ ಕೆವಿ ಗೌತಮ್ ಮಣಿಸಿ ಜೆಡಿಎಸ್‌ನ ಮಲ್ಲೇಶ್ ಬಾಬುಗೆ ಜಯ
4 ದಶಕದ ಬಳಿಕ ಕೋಲಾರದಲ್ಲಿ ಜನತಾ ದಳಕ್ಕೆ ಗೆಲುವು; ಕಾಂಗ್ರೆಸ್ ಅಭ್ಯರ್ಥಿ ಕೆವಿ ಗೌತಮ್ ಮಣಿಸಿ ಜೆಡಿಎಸ್‌ನ ಮಲ್ಲೇಶ್ ಬಾಬುಗೆ ಜಯ

ಕೋಲಾರ: ಚಿನ್ನ, ರೇಷ್ಮೆ, ತರಕಾರಿ ಹಾಗೂ ಹಾಲು ಉತ್ಪಾದನೆಗೆ ಖ್ಯಾತಿಯಾಗಿರುವ ಕೋಲಾರದಲ್ಲಿ (Kolar Lok Sabha Election Result 2024) 40 ವರ್ಷಗಳ ಬಳಿಕ ಜನತಾ ದಳ ಗೆಲುವಿನ ನಗೆ ಬೀರಿದೆ. ಜೆಡಿಎಸ್‌ ಅಭ್ಯರ್ಥಿ ಮಲ್ಲೇಶ್ ಬಾಬು (JDS Candidate Mallesh Babu) ಕಾಂಗ್ರೆಸ್‌ನ ಕೆವಿ ಗೌತಮ್ ಅವರನ್ನು (Congress Candidate KV Gowtham) 71,388 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ. ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು 6,91,481 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಕೆವಿ ಗೌತಮ್ 6,20,093 ಗಳಿಸಿದ್ದಾರೆ. ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿಎರಡು ಬಾರಿ ಪರಾಭವಗೊಂಡಿದ್ದ ಮಲ್ಲೇಶ್ ಬಾಬುಗೆ ಈ ಬಾರಿ ಜೆಡಿಎಸ್ ಕೋಲಾರದ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ನೀಡಿತ್ತು. ಇವರು ಮಾಜಿ ಐಎಎಸ್ ಅಧಿಕಾರಿಯಾಗಿದ್ದ ದಿವಂಗತ ಮುನಿಸ್ವಾಮಿ ಅವರ ಪುತ್ರ.

ಟ್ರೆಂಡಿಂಗ್​ ಸುದ್ದಿ

ಮಲ್ಲೇಶ್ ಬಾಬು ಅವರ ತಾಯಿ ಮಂಗಮ್ಮ ಮುನಿಸ್ವಾಮಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮಂಗಮ್ಮ ಮುನಿಸ್ವಾಮಿ 2009ರಲ್ಲಿ ಬಿಜೆಪಿಯಿಂದ ಲೋಕಸಭೆಗೆ ಸ್ಪರ್ಧಿಸಿ ಕೆಎಚ್ ಮುನಿಯಪ್ಪ ವಿರುದ್ಧ ಸೋಲು ಕಂಡಿದ್ದರು. ಇದೇ ಮೊದಲ ಬಾರಿಗೆ ಇವರ ಪುತ್ರ ಮಲ್ಲೇಶ್ ಬಾಬು ಜೆಡಿಎಸ್‌ನಿಂದ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿದು ಜಯಭೇರಿ ಬಾರಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಕೆವಿ ಗೌತಮ್ ಅವರ ಹಿನ್ನಲೆಯನ್ನು ನೋಡುವುದಾದರೆ, ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾಗಿರುವ ಕೆವಿ ಗೌತಮ್ ಸಿವಿಲ್ ಎಂಜಿನಿಯರಿಂಗ್ ಪಡೆದಿದ್ದಾರೆ. ಇವರು ಬೆಂಗಳೂರು ಮಾಜಿ ಮೇಯರ್ ವಿಜಯಕುಮಾರ್ ಅವರ ಪುತ್ರ. ಪರಿಶಿಷ್ಟಜಾತಿಯ ಎಡಗೈ ಸಮುದಾಯಕ್ಕೆ ಸೇರಿದವರು. ಕೋಲಾರದಲ್ಲಿ ಈ ಬಾರಿ ಸಚಿವ ಕೆಎಚ್ ಮುನಿಯಪ್ಪ ಮತ್ತು ರಮೇಶ್ ಕುಮಾರ್ ಬಣಗಳ ನಡುವೆ ಟಿಕೆಟ್ ಫೈಟ್ ನಡೆದಿತ್ತು. ಕೆಎಚ್‌ ಮುನಿಯಪ್ಪ ತಮ್ಮ ಅಳಿಯ ಪೆದ್ದನ್ನ ಅವರಿಗೆ ಟಿಕೆಟ್ ಕೊಡಬೇಕೆಂದು ಪಟ್ಟು ಹಿಡಿದಿದ್ದರು. ಆದರೆ ಇದಕ್ಕೆ ರಮೇಶ್ ಕುಮಾರ್ ಬಣ ತೀವ್ರ ವಿರೋಧ ವ್ಯಕ್ತಪಡಿಸಿ ಶಾಸಕರು ರಾಜೀನಾಮೆ ನೀಡುವ ಬೆಳವಣಿಗೆ ನಡೆದು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕಾಂಗ್ರೆಸ್‌ನ ಗಮನ ಸೆಳೆದಿತ್ತು. ಅಂತಿಮವಾಗಿ ಎರಡೂ ಬಣಗಳನ್ನು ತಪ್ಪಿಸಿ ಬೆಂಗಳೂರು ಮೂಲದ ಕೆವಿ ಗೌತಮ್‌ಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಆದರೆ ಗೌತಮ್ ಸೋಲು ಕಂಡಿದ್ದಾರೆ.

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8 ಕ್ಷೇತ್ರಗಳಿದ್ದು, ಮಾಲೂರು, ಬಂಗಾರಪೇಟೆ, ಶ್ರೀನಿವಾಸಪುರ, ಕೋಲಾರ, ಕೆಜಿಎಫ್, ಮುಳಬಾಗಿಲು ಸೇರಿ 6 ಕ್ಷೇತ್ರಗಳು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಹಾಗೂ ಚಿಂತಾಮಣಿ ವಿಧಾನಸಭಾ ಕ್ಷೇತ್ರಗಳು ಕೋಲಾರ ಕ್ಷೇತ್ರಕ್ಕೆ ಸೇರಿವೆ. 8 ಕ್ಷೇತ್ರಗಳಲ್ಲಿ ಮುಳಬಾಗಿಲು, ಶ್ರೀನಿವಾಸಪುರ ಹಾಗೂ ಶಿಡ್ಲಘಟ್ಟದಲ್ಲಿ ಜೆಡಿಎಸ್ ಶಾಸಕರಿದ್ದು, ಉಳಿದ 5 ವಿಧಾನಸಭಾ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಎಸ್ ಮುನಿಸ್ವಾಮಿ ಕಾಂಗ್ರೆಸ್ ಹಿರಿಯ ನಾಯಕ ಕೆಎಚ್ ಮುನಿಯಪ್ಪ ಅವರನ್ನು 2,09,704 ಮತಗಳ ಅಂತರದಿಂದ ಸೋಲಿಸಿದ್ದರು. ಕೋಲಾರ ಕ್ಷೇತ್ರದಲ್ಲಿ 17,08,565 ಮತದಾರರು ಇದ್ದು, 8,45,696 ಪುರುಷರು ಹಾಗೂ 8,62,716 ಮಹಿಳಾ ಮತದಾರರು ಇದ್ದಾರೆ. ಇಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮತದಾರರು ಅಧಿಕವಾಗಿದ್ದು, ಯಾವುದೇ ಪಕ್ಷದ ಅಭ್ಯರ್ಥಿ ಗೆದ್ದರೂ ಇವರ ಪಾತ್ರ ನಿರ್ಣಾಯಕವಾಗಿರುತ್ತದೆ. ಇನ್ನ ಪರಿಶಿಷ್ಟ ಸಮುದಾಯಗಳ ನಂತರದ ಸ್ಥಾನಪದಲ್ಲಿ ಒಕ್ಕಲಿಗ ಮತದಾರರು ಇದ್ದರೆ, 3ನೇ ಸ್ಥಾನಗಲ್ಲಿ ಮುಸ್ಲಿಂ ಮತದಾರರು ಇದ್ದಾರೆ.

ಕೋಲಾರ ಲೋಕಸಭಾ ಕ್ಷೇತ್ರದ ಚುನಾವಣಾ ಇತಿಹಾಸ

1952 ರಿಂದ 1962ರ ವರೆಗೆ ದೊಡ್ಡತಿಮ್ಮಯ್ಯ ಅವರು 3 ಸಲ ಗೆಲುವು ಸಾಧಿಸಿದ್ದರು. 1962ರಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳಾಗಿ ವಿಂಗಡಣೆ ಮಾಡಲಾಯಿತು. ಬಳಿಕ ಈ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿ ಮಾರ್ಪಟ್ಟಿತು. 1967 ರಿಂದ 1980 ರವರೆಗೆ ಜೆವೈ ಕೃಷ್ಣನ್ ಜಯ ಗಳಿಸಿದ್ದರು. 1984ರ ಚುನಾವಣೆಯಲ್ಲಿ ಜನತಾ ಪಕ್ಷದ ವಿ ವೆಂಕಟೇಶ್ ಗೆಲುವಿನ ಮೂಲಕ ಕಾಂಗ್ರೆಸ್ ನಾಯಕರ ದೊಡ್ಡ ಪೆಟ್ಟು ನೀಡಿದ್ದರು. 1989 ರಲ್ಲಿ ಮತ್ತೆ ಕಾಂಗ್ರೆಸ್‌ನ ವೈ ರಾಮಕೃಷ್ಣ ಗೆಲ್ಲುವ ಮೂಲಕ ಕ್ಷೇತ್ರವನ್ನು ಕೈ ವಶಪಡಿಸಿಕೊಂಡಿತು.

ಇಲ್ಲಿಯವರೆಗೆ ರಾಜಕಾರಣದಿಂದ ದೂರವೇ ಉಳಿದಿದ್ದ ವಕೀಲರಾದ ಕೆಎಚ್ ಮುನಿಯಪ್ಪ 1991ರಲ್ಲಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಾರೆ. ಮೊದಲ ಪ್ರಯತ್ನದಲ್ಲೇ ಜಯದೊಂದಿಗೆ ಲೋಕಸಭೆಯನ್ನು ಪ್ರವೇಶಿಸುತ್ತಾರೆ. ಆ ಬಳಿಕ ಸತತ 7 ಬಾರಿ 2019ವರೆಗೆ ಕ್ಷೇತ್ರದ ಸಂಸದರಾಗಿ ಸೇವೆ ಸಲ್ಲಿಸಿದ್ದರು. 2019 ಚುನಾವಣೆಯಲ್ಲಿ ಬಿಜೆಪಿಯ ಎಸ್‌ ಮುನಿಸ್ವಾಮಿ ವಿರುದ್ಧ ದೊಡ್ಡ ಅಂತರದಲ್ಲಿಲ ಸೋಲು ಕಾಣಬೇಕಾಯಿತು. ಕೆಎಚ್ ಭದ್ರಕೋಟೆಯನ್ನು ಸೋಲಿಸುವ ಮೂಲಕ ಬಿಜೆಪಿ ಇಲ್ಲಿ ಇತಿಹಾಸ ಬರೆದಿದೆ. ಆದರೆ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದ ಕಾರಣ ಬಿಜೆಪಿ ಕೋಲಾರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿತ್ತು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024