ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವೆಬ್ಸೈಟನ್ನೇ ಹ್ಯಾಕ್ ಮಾಡಿದ ಫೇಲಾದ ವಿದ್ಯಾರ್ಥಿಗಳು; ಮಾರ್ಕ್ಸ್ ಶೀಟ್ ತಿದ್ದುಪಡಿ
Bengaluru North University: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಯುಯುಸಿಎಂಎಸ್ ಪೋರ್ಟಲ್ ಅನ್ನು ವಿದ್ಯಾರ್ಥಿಗಳು ಹ್ಯಾಕ್ ಮಾಡಲಾಗಿದ್ದು, ಅಂಕಪಟ್ಟಿಯನ್ನು ತಿದ್ದುಪಡಿ ಮಾಡಿದ್ದಾರೆ.
ಕೋಲಾರ: ಇಲ್ಲಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಯುನಿಫೈಡ್ ಯೂನಿವರ್ಸಿಟಿ ಕಾಲೇಜ್ ಮ್ಯಾನೇಜ್ಮೆಂಟ್ ಸಿಸ್ಟಮ್ (UUCMS) ಪೋರ್ಟಲ್ ಇತ್ತೀಚೆಗೆ ಹ್ಯಾಕ್ ಆಗಿದ್ದು, ಫೇಲ್ ಆಗಿರುವ ಪದವಿ ವಿದ್ಯಾರ್ಥಿಗಳ ಅಂಕಗಳನ್ನು ತಿದ್ದಲಾಗಿದೆ. ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿ ಮೂವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ವಿಶ್ವವಿದ್ಯಾನಿಲಯದ ಕುಲಸಚಿವರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಕೋಲಾರ ಜಿಲ್ಲಾ ಸೈಬರ್ ಕ್ರೈಂ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಪೊಲೀಸರು ಗಿರೀಶ್, ಸಂದೇಶ್ ಮತ್ತು ಸೂರ್ಯ ಎಂಬುವರನ್ನು ಬಂಧಿಸಿದ್ದಾರೆ.
ಗಿರೀಶ್ ಮತ್ತು ಸಂದೇಶ್ ಕ್ರಮವಾಗಿ ಕೋಲಾರದ ಎಂಎನ್‌ಜಿ ಪ್ರಿ-ಯೂನಿವರ್ಸಿಟಿ ಕಾಲೇಜು ಮತ್ತು ಸ್ಮಾರ್ಟ್ ಪದವಿ ಕಾಲೇಜಿನ ಟ್ರಸ್ಟಿಗಳಾಗಿದ್ದಾರೆ. ಸೂರ್ಯ ಕಾಲೇಜಿನ ವಿದ್ಯಾರ್ಥಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ರಾಜ್ಯ ಸರ್ಕಾರವು ಉನ್ನತ ಮಟ್ಟದ ತನಿಖೆ ನಡೆಸಲಿದೆ. ಅಲ್ಲದೆ, ಯುಯುಸಿಎಂಎಸ್ ಪೋರ್ಟಲ್ ಭದ್ರತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸುವಂತೆ ಕರೆ ನೀಡಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದ ನಂತರ ಯುಯುಸಿಎಂಎಸ್ ಪೋರ್ಟಲ್ ಅನ್ನು ಸ್ಥಾಪಿಸಲಾಯಿತು. ವಿದ್ಯಾರ್ಥಿಗಳ ನೋಂದಣಿ, ಶುಲ್ಕ ಪಾವತಿ ಮತ್ತು ಪರೀಕ್ಷಾ ಫಲಿತಾಂಶಗಳ ಘೋಷಣೆ ಸೇರಿದಂತೆ ಎಲ್ಲಾ ಕಾರ್ಯಗಳನ್ನು ಪೋರ್ಟಲ್ ಮೂಲಕ ಮಾಡಲಾಗುತ್ತಿದೆ.
ಆರೋಪಿಗಳು ರಿಜಿಸ್ಟ್ರಾರ್ ತಿಪ್ಪೇಸ್ವಾಮಿ ಅವರ ಲಾಗಿನ್ ಪಿನ್ ಮತ್ತು ಪಾಸ್ವರ್ಡ್ಗಳನ್ನು ದುರುಪಯೋಗಪಡಿಸಿಕೊಂಡು ಪೋರ್ಟಲ್‌ಗೆ ಕನ್ನ ಹಾಕಿದ್ದು, 60ಕ್ಕೂ ಹೆಚ್ಚು ವಿದ್ಯಾರ್ಥಿಗಳ ಅಂಕಗಳನ್ನು ತಿದ್ದಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಪ್ರತಿ ವಿದ್ಯಾರ್ಥಿಯಿಂದ 15 ಸಾವಿರದಿಂದ 20 ಸಾವಿರದವರೆಗೆ ಪಡೆದಿದ್ದಾರೆ. ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರದಲ್ಲಿ ಆರೋಪಿಯೊಬ್ಬ ವಿದ್ಯಾರ್ಥಿಯಿಂದ ಹಣ ಪಡೆಯಲು ಬಂದಿದ್ದಾಗ ಹ್ಯಾಕಿಂಗ್ ನಡೆದಿರುವುದು ಬೆಳಕಿಗೆ ಬಂದಿದೆ. ಪೊಲೀಸರ ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ.
ಕುಲಪತಿ ನಿರಂಜನ್ ಹೇಳಿದ್ದೇನು?
ಪೊಲೀಸ್ ಅಧಿಕಾರಿಯೊಬ್ಬರು, ಬಂಧಿತ ಮೂವರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಇದ್ದು, ತನಿಖೆ ಮುಂದುವರಿದಿದೆ. ಕುಲಪತಿ ನಿರಂಜನ್ ಮಾತನಾಡಿ, ಅಂಕಪಟ್ಟಿ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳ ವಿವರ ನೀಡುವಂತೆ ಪೊಲೀಸರಿಗೆ ಮನವಿ ಮಾಡಲಾಗಿದೆ. ಪೊಲೀಸ್ ವರದಿಯನ್ನು ಸ್ವೀಕರಿಸಿದ ನಂತರ, ಆ ವಿದ್ಯಾರ್ಥಿಗಳ ಪದವಿಯನ್ನು ತಡೆಹಿಡಿಯಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಉನ್ನತ ಮಟ್ಟದ ತನಿಖೆಗೆ ಒತ್ತಾಯ
ಏತನ್ಮಧ್ಯೆ, ವಿದ್ಯಾರ್ಥಿಗಳು ಯುಯುಸಿಎಂಎಸ್ ಪೋರ್ಟಲ್‌ನ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ನಿಟ್ಟಿನಲ್ಲಿ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದಾರೆ. ಇದು ಅತ್ಯಂತ ಗಂಭೀರ ಸಮಸ್ಯೆಯಾಗಿದ್ದು, ಸರ್ಕಾರವು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಅಂತಿಮ ವರ್ಷದ ಪದವಿ ವಿದ್ಯಾರ್ಥಿ ಗೌತಮ್ (ಹೆಸರು ಬದಲಾಯಿಸಲಾಗಿದೆ) ಒತ್ತಾಯಿಸಿದ್ದಾರೆ.
ಸಚಿವ ಎಂಸಿ ಸುಧಾಕರ್ ಹೇಳಿದ್ಧೇನು?
ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ಅವರು, “ಪೋರ್ಟಲ್ ಹ್ಯಾಕ್ ಆಗಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಪ್ರಕರಣದ ತನಿಖೆಗೆ ತನಿಖೆಗೆ ಆದೇಶಿಸಲಾಗುವುದು ಮತ್ತು ಪೋರ್ಟಲ್ ಮತ್ತು ವಿದ್ಯಾರ್ಥಿಗಳ ಡೇಟಾವನ್ನು ರಕ್ಷಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.