ಕೊಳ್ಳೇಗಾಲದ ಮಾಜಿ ಶಾಸಕ, ಕರ್ನಾಟಕ ಉಗ್ರಾಣ ನಿಗಮದ ಅಧ್ಯಕ್ಷ ಎಸ್ ಜಯಣ್ಣ ವಿಧಿವಶ, ನಾಳೆ ಅಂತ್ಯಸಂಸ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ
ಕನ್ನಡ ಸುದ್ದಿ  /  ಕರ್ನಾಟಕ  /  ಕೊಳ್ಳೇಗಾಲದ ಮಾಜಿ ಶಾಸಕ, ಕರ್ನಾಟಕ ಉಗ್ರಾಣ ನಿಗಮದ ಅಧ್ಯಕ್ಷ ಎಸ್ ಜಯಣ್ಣ ವಿಧಿವಶ, ನಾಳೆ ಅಂತ್ಯಸಂಸ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

ಕೊಳ್ಳೇಗಾಲದ ಮಾಜಿ ಶಾಸಕ, ಕರ್ನಾಟಕ ಉಗ್ರಾಣ ನಿಗಮದ ಅಧ್ಯಕ್ಷ ಎಸ್ ಜಯಣ್ಣ ವಿಧಿವಶ, ನಾಳೆ ಅಂತ್ಯಸಂಸ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

Kollegal Ex MLA S Jayanna: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ಕೊಳ್ಳೇಗಾಲದ ಮಾಜಿ ಶಾಸಕ, ಕರ್ನಾಟಕ ಉಗ್ರಾಣ ನಿಗಮದ ಅಧ್ಯಕ್ಷ ಎಸ್ ಜಯಣ್ಣ ವಿಧಿವಶರಾದರು. ಇಂದು (ಡಿಸೆಂಬರ್ 10) ಮಧ್ಯಾಹ್ನ ಹೃದಯಾಘಾತಕ್ಕೆ ಒಳಗಾದ ಜಯಣ್ಣ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅವರು ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಕೊಳ್ಳೇಗಾಲದ ಮಾಜಿ ಶಾಸಕ, ಕರ್ನಾಟಕ ಉಗ್ರಾಣ ನಿಗಮದ ಅಧ್ಯಕ್ಷ ಎಸ್ ಜಯಣ್ಣ ಅವರು ಮಂಗಳವಾರ (ಡಿಸೆಂಬರ್ 10) ವಿಧಿವಶರಾದರು.
ಕೊಳ್ಳೇಗಾಲದ ಮಾಜಿ ಶಾಸಕ, ಕರ್ನಾಟಕ ಉಗ್ರಾಣ ನಿಗಮದ ಅಧ್ಯಕ್ಷ ಎಸ್ ಜಯಣ್ಣ ಅವರು ಮಂಗಳವಾರ (ಡಿಸೆಂಬರ್ 10) ವಿಧಿವಶರಾದರು.

ಚಾಮರಾಜನಗರ: ಕೊಳ್ಳೇಗಾಲ ಕ್ಷೇತ್ರದ ಮಾಜಿ ಶಾಸಕ, ಕರ್ನಾಟಕ ರಾಜ್ಯ ಉಗ್ರಾಣ ನಿಮಗದ ಅಧ್ಯಕ್ಷ ಎಸ್ ಜಯಣ್ಣ ಇಂದು (ಡಿಸೆಂಬರ್ 10) ಮಧ್ಯಾಹ್ನ 12 ಗಂಟೆ ಸುಮಾರಿಗೆ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ಧಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಡಿಸೆಂಬರ್ 12ಕ್ಕೆ ಜಯಣ್ಣ ಅವರ ನೂತನ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ಇದ್ದ ಕಾರಣ, ಬಂಧು ಮಿತ್ರರನ್ನು ಆಹ್ವಾನಿಸುವುದಕ್ಕಾಗಿ ಅವರು ತೆರಳುತ್ತಿದ್ದಾಗ ಹೃದಯಾಘಾತವಾಗಿತ್ತು. ಕೊಳ್ಳೇಗಾಲದ ತಾಲೂಕಿನ ಉತ್ತಂಬಳ್ಳಿ ಬಳಿ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಏಕಾಕಿಯಾಗಿ ಅವರಿಗೆ ಕೆಮ್ಮು ಹಾಗೂ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದರು. ಮೃತರ ಅಂತ್ಯಕ್ರಿಯೆಯನ್ನು ನಾಳೆ ಚಾಮರಾಜನಗರ ಜಿಲ್ಲೆ ಮಾಂಬಳ್ಳಿ ಗ್ರಾಮದಲ್ಲಿ ನಡೆಸಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಕೊಳ್ಳೇಗಾಲ ಮಾಜಿ ಶಾಸಕ ಎಸ್‌ ಜಯಣ್ಣ ಯಾರು?

ಕೊಳ್ಳೇಗಾಲದ ಮಾಜಿ ಶಾಸಕ ಎಸ್ ಜಯಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿದ್ದರು. ಜಯಣ್ಣ ಅವರು 1952ರ ಸೆಪ್ಟೆಂಬರ್ 9 ರಂದು ಜನಿಸಿದರು. 1994 ರಲ್ಲಿ ಜೆಡಿಎಸ್ ನಿಂದ ಮತ್ತು 2013 ರಿಂದ 2018 ರವರೆಗೆ ಕಾಂಗ್ರೆಸ್‌ನಿಂದ ಶಾಸಕರಾಗಿದ್ದರು. ಅನಾರೋಗ್ಯದ ಕಾರಣ 2018ರಲ್ಲಿ ಕಾಂಗ್ರೆಸ್ ಪಕ್ಷದಿಂದ ಅವರಿಗೆ ಟಿಕೆಟ್ ಕೊಟ್ಟಿರಲಿಲ್ಲ. ಈ ಬಾರಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಅವರನ್ನು ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಕಳೆದ ಶನಿವಾರ ಕೊಳ್ಳೆಗಾಲಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರು ಜಯಣ್ಣ ಅವರ ನೂತನ ನಿವಾಸಕ್ಕೆ ಭೇಟಿ ನೀಡಿ ನಾಮಫಲಕ ಅನಾವರಣ ಮಾಡಿದ್ದರು.

ಉಗ್ರಾಣ ನಿಗಮದ ಅಧ್ಯಕ್ಷ ಜಯಣ್ಣ ಅವರ ನಿಧನ ನೋವುಂಟು ಮಾಡಿದೆ; ಸಿಎಂ ಸಿದ್ದರಾಮಯ್ಯ

ಕೊಳ್ಳೇಗಾಲದ ಮಾಜಿ ಶಾಸಕರು, ಉಗ್ರಾಣ ನಿಗಮದ ಅಧ್ಯಕ್ಷರು ಆದ ಜಯಣ್ಣ ಅವರ ನಿಧನ ನೋವುಂಟು ಮಾಡಿದೆ. ಎಸ್.ಎಂ.ಕೃಷ್ಣ ಅವರ ಸಾವಿನ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಜಯಣ್ಣ ಅವರ ಸಾವಿನ ಸುದ್ದಿ ಮತ್ತೊಂದು ಆಘಾತ ತಂದಿದೆ. ಜಯಣ್ಣ ನನ್ನ ಆತ್ಮೀಯರು. ನಮ್ಮ ನಡುವೆ ದೀರ್ಘಕಾಲದ ಒಡನಾಟವಿತ್ತು. 1994 ರಲ್ಲಿ ಜೆಡಿಎಸ್ ನಿಂದ ಹಾಗೂ 2013ರಲ್ಲಿ ಕಾಂಗ್ರೆಸ್ ಪಕ್ಷದಿಂದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದರು. ಪಕ್ಷ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮವಹಿಸಿ ಕೆಲಸ ಮಾಡಿದ್ದ ಜಯಣ್ಣ ಜನಾನುರಾಗಿ ಶಾಸಕರಾಗಿದ್ದರು. ಜನರ ಕಷ್ಟಗಳಿಗೆ ಸದಾ ಮಿಡಿಯುತ್ತಿದ್ದರು. ಡಿಸೆಂಬರ್ ಏಳರಂದು ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನನ್ನ ಜೊತೆಗಿದ್ದರು. ಅವರ ಮನೆಯಲ್ಲಿಯೇ ಊಟ ಮಾಡಿ ಬಂದಿದ್ದೆ. ಜಯಣ್ಣ ಅವರ ಸಾವು ವೈಯಕ್ತಿಕವಾಗಿ ಆಘಾತ ತಂದಿದೆ. ಅವರ ನಿಧನದಿಂದ ಜನಾನುರಾಗಿ ರಾಜಕಾರಣಿಯನ್ನು ನಾಡು ಕಳೆದುಕೊಂಡಂತಾಗಿದೆ. ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

Whats_app_banner