ಕೊಪ್ಪಳದ ತೊಗಲುಗೊಂಬೆಯಾಟ ಕಲಾವಿದೆ 96 ವರ್ಷದ ಭೀಮವ್ವಗೆ ಪದ್ಮಶ್ರೀ ಪ್ರಶಸ್ತಿ ಗೌರವ; 7 ದಶಕಗಳ ಕಲಾ ಕೃಷಿಯಲ್ಲಿ ಭೀಮವ್ವರ ಹಾದಿ ಹೀಗಿತ್ತು
ಕನ್ನಡ ಸುದ್ದಿ  /  ಕರ್ನಾಟಕ  /  ಕೊಪ್ಪಳದ ತೊಗಲುಗೊಂಬೆಯಾಟ ಕಲಾವಿದೆ 96 ವರ್ಷದ ಭೀಮವ್ವಗೆ ಪದ್ಮಶ್ರೀ ಪ್ರಶಸ್ತಿ ಗೌರವ; 7 ದಶಕಗಳ ಕಲಾ ಕೃಷಿಯಲ್ಲಿ ಭೀಮವ್ವರ ಹಾದಿ ಹೀಗಿತ್ತು

ಕೊಪ್ಪಳದ ತೊಗಲುಗೊಂಬೆಯಾಟ ಕಲಾವಿದೆ 96 ವರ್ಷದ ಭೀಮವ್ವಗೆ ಪದ್ಮಶ್ರೀ ಪ್ರಶಸ್ತಿ ಗೌರವ; 7 ದಶಕಗಳ ಕಲಾ ಕೃಷಿಯಲ್ಲಿ ಭೀಮವ್ವರ ಹಾದಿ ಹೀಗಿತ್ತು

ತೊಗಲುಗೊಂಬೆಯಾಟದ ಕಲಾ ಕ್ಷೇತ್ರದಲ್ಲಿ ಬರೋಬ್ಬರಿ 70 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕೊಪ್ಪಳ ಜಿಲ್ಲೆಯ ಮೋರನಾಳ ಗ್ರಾಮದ 96 ವರ್ಷದ ವೃದ್ಧೆ ಭೀಮವ್ವಗೆ ಕೇಂದ್ರ ಸರ್ಕಾರ ನೀಡುವ ದೇಶದ ಅತ್ಯುನ್ನತ ಗೌರವವಾದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರು ನಡೆದು ಬಂದ ಹಾದಿ ಇಲ್ಲಿದೆ.

Bhimavva Doddabalappa: ಪದ್ಮಶ್ರೀ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿರುವ ಕೊಪ್ಪಳ ಜಿಲ್ಲೆ ಮೊರನಾಳ ಗ್ರಾಮದ ಶಿಳ್ಳೇಕ್ಯಾತರ ಕುಟುಂಬದ ಭೀಮವ್ವ ದೊಡ್ಡಬಾಳಪ್ಪ.
Bhimavva Doddabalappa: ಪದ್ಮಶ್ರೀ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿರುವ ಕೊಪ್ಪಳ ಜಿಲ್ಲೆ ಮೊರನಾಳ ಗ್ರಾಮದ ಶಿಳ್ಳೇಕ್ಯಾತರ ಕುಟುಂಬದ ಭೀಮವ್ವ ದೊಡ್ಡಬಾಳಪ್ಪ.

ಕೊಪ್ಪಳ: ತೊಗಲುಗೊಂಬೆಯಾಟದಲ್ಲಿ ಸುದೀರ್ಘ ಸೇವೆ ಸಲ್ಲಿಸರುವ ಕೊಪ್ಪಳ ಜಿಲ್ಲೆ ಮೋರನಾಳ ಗ್ರಾಮದ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಅವರಿಗೆ ಕೇಂದ್ರ ಸರ್ಕಾರ ನೀಡುವ ದೇಶದ ಮೂರನೇ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭೀಮವ್ವ ಅವರಿಗೆ 96 ವರ್ಷ ವಯಸ್ಸಾಗಿದ್ದು, ಬರೋಬ್ಬರಿಗೆ 70 ವರ್ಷಗಳಿಂದ ತೊಗಲುಗೊಂಬೆಯಾಟ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 14ನೇ ವಯಸ್ಸಿನವರಾಗಿದ್ದಾಗ ಇವರು ತಮ್ಮ ಮೊದಲ ತೊಗಲುಗೊಂಬೆಯಾಟ ಪ್ರದರ್ಶನವನ್ನು ನೀಡಿದ್ದರು. ರಾಜ್ಯದಲ್ಲಿ ಮಾತ್ರವಲ್ಲದೆ, ದೇಶ-ವಿದೇಶಗಳಲ್ಲಿ ಭೀಮವ್ವ ಪ್ರದರ್ಶನ ನೀಡಿ ಜಗತ್ತಿನಾದ್ಯಂತ ಜನ ಮೆಚ್ಚುಗೆಯನ್ನು ಪಡೆದಿದ್ದಾರೆ. 2025ರ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಬಾರಿ ಪದ್ಮ ಶ್ರೀ ಪ್ರಶಸ್ತಿಗೆ ಭೀಮವ್ವ ಅವರನ್ನು ಆಯ್ಕೆ ಮಾಡಿರುವುದು ನಾಡಿಗೆ ಹೆಮ್ಮೆಯ ವಿಚಾರವಾಗಿದೆ. ತೊಗಲುಗೊಂಬೆಯಾಟ ಕಲೆಯಲ್ಲಿ ಭೀಮವ್ವ ಅವರು ನಡೆದು ಬಂದ ಹಾದಿ ಹೇಗಿತ್ತು ಎಂಬುದನ್ನು ಇಲ್ಲಿ ತಿಳಿಯೋಣ.

ಶಿಳ್ಳೆಕ್ಯಾತರ ಜನಾಂಗದಲ್ಲಿ ಕೊಪ್ಪಳ ಜಿಲ್ಲೆಯ ಹನುಮನ ಕಟ್ಟಿ ಗ್ರಾಮದ ಸಂಜೀವಪ್ಪ, ಹೊಳಿಯಮ್ಮ ಕಲಾದಂಪತಿಗೆ 5ನೇ ಮಗಳಾಗಿ ಜನಿಸಿದವರು ಭೀಮವ್ವ. ಇವರಿಗೆ ಕಲೆ ರಕ್ತಗತವಾಗಿ ಬಂದಿದೆ. ತಂದೆ, ಅಜ್ಜ, ಮುತ್ತಜ್ಜನ ಕಾಲದಿಂದ ಬಂದಿರುವ ಈ ಕಲೆ ಭೀಮವ್ವನಿಗೆ ಯಾರೂ ಕಲಿಸಿ ಕೊಡಬೇಕಾಗಿರಲಿಲ್ಲ. ಇವರ ಅಜ್ಜನ ಕಲಾ ಪ್ರತಿಭೆ, ಕಲಾ ಪ್ರದರ್ಶನಕ್ಕೆ ಮಾರುಹೋಗಿದ್ದ ನಿಜಾಮ ಸರ್ಕಾರ ಆಗ ಇವರಿಗೆ ಭೂಮಿಯನ್ನು ಉಂಬಳಿಯಾಗಿ ಕೊಟ್ಟದ್ದು ಗಮನಾರ್ಹ ಸಂಗತಿ. ಮೋರನಾಳ ಗ್ರಾಮದ ದೊಡ್ಡಬಾಳಪ್ಪನನ್ನು ಪತಿಯನ್ನಾಗಿ ಪಡೆದು ಬಂದ ಮೇಲೆ ಇಲ್ಲಿಯೂ ಅದೇ ಕಲೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಇವರ ಪತಿಯ ಮನೆಯಲ್ಲೂ ತೋಗಲುಗೊಂಬೆಯಾಟ ಕಲೆ ಪರಂಪರೆಯಾಗಿಯೇ ಬಂದಿತ್ತು.

ಹಾಡು, ವಾದ್ಯ ಸೇರಿದಂತೆ ಗೊಂಬೆಯಾಟದ ಎಲ್ಲಾ ಅನುಭವ ಪಡೆದುಕೊಂಡಿದ್ದ ಭೀಮವ್ವ

ಭೀಮವ್ವ ಕಲಾಪ್ರದರ್ಶನದಲ್ಲಿ ಹಾಡುಗಾರಿಕೆ, ವಾದ್ಯ ನುಡಿಸುವುದು ಸೇರಿದಂತೆ ಈ ಕಲೆಯ ಎಲ್ಲಾ ಅನುಭವವನ್ನು ಪಡೆದುಕೊಂಡಿದ್ದಾರೆ. ಭೀಮವ್ವನ ನಾಡಿನಾದ್ಯಂತ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ಅದರಲ್ಲೂ ಕೊಪ್ಪಳ, ಉಡುಪಿ, ಚಿತ್ರದುರ್ಗಕ ಬೆಂಗಳೂರು, ಕಲಬುರ್ಗಿ, ದೆಹಲಿ ಮುಂತಾದ ಸ್ಥಳಗಳಲ್ಲಿ ನೀಡಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೆ, ಅಮೆರಿಕ, ಜಪಾನ್, ಸ್ವಿಜರ್ ಲ್ಯಾಂಡ್, ಜರ್ಮನಿ, ಇಟಲಿ, ಫ್ರಾನ್ಸ್, ಸೌದಿ ಅರೇಬಿಯಾ, ಐರ್ಲೆಂಡ್, ಪ್ಯಾರಿಸ್, ದುಬೈ ಸೇರಿದಂತೆ ಹಲವು ದೇಶಗಳಲ್ಲಿ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಭೀಮವ್ವಗೆ ಸಿಕ್ಕಿರುವ ಪ್ರಶಸ್ತಿಗಳು

1992 ರಲ್ಲಿ ಜಪಾನ್ ದೇಶದಲ್ಲಿ ತೊಗಲುಗೊಂಬೆಯಾಟ ಪ್ರದರ್ಶನ ನೀಡಿ ಜಪಾನ್ ನ ಗೌರವಕ್ಕೆ ಪಾತ್ರರಾಗಿದ್ದಾರೆ. 1992 ರಲ್ಲಿ ಟೆಹ್ರಾನ್ ಇಂಟರ್ ನ್ಯಾಷನಲ್ ಪ್ರಶಸ್ತಿ, 63ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಉಡುಪಿ ಪ್ರದೇಶಿಕ ರಂಗ ಕಲೆಗಳ ಅಧ್ಯಯನ ಕೇಂದ್ರ ಪ್ರಶಸ್ತಿ, ಕರ್ನಾಟಕ ಜಾನಪದ-ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಗೊಂಬೆ ಪರಂಪರೆ ಪ್ರಶಸ್ತಿ ಜೊತೆಗೆ ರಾಜ್ಯೋತ್ಸವ ಪ್ರಶಸ್ತಿಗಳಿಗೆ ಭೀಮವ್ವ ಪಾತ್ರರಾಗಿದ್ದಾರೆ. ಇದೀಗ 2025ನೇ ಸಾಲಿನಲ್ಲಿ ದೇಶದ ಅತ್ಯುನ್ನತ ಗೌರವ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಜೀವನಕ್ಕಾಗಿ ಊರೂರು ತಿರುಗಿ ತೊಗಲುಗೊಂಬೆಯಾಟ ಪ್ರದರ್ಶನ

ಭೀಮವ್ವ ಅವರು ತೊಗಲುಗೊಂಬೆಯಾಟ ಪ್ರದರ್ಶನದ ಸಲುವಾಗಿ ವಿದೇಶ-ವಿದೇಶಗಳನ್ನು ಸುತ್ತಿ ಬಂದಿರುವ ಹಿರಿಯ ಕಲಾವಿದೆ. ಆದರೆ ಆರಂಭದಿಂದಲೂ ಕಷ್ಟದ ದಿನಗಳನ್ನು ಕಂಡಿದ್ದಾರೆ. ಶಿಳ್ಳೇಕ್ಯಾತ ಜನರ ಉದ್ಯೋಗವೇ ಈ ತೊಗಲುಗೊಂಬೆಯಾಟ ಪ್ರದರ್ಶನ ನೀಡುವುದು. ಹಳ್ಳಿ ಹಳ್ಳಿಗೂ ತಿರುಗಿ ಪ್ರದರ್ಶನ ನೀಡಿ ಅಲ್ಲಿಯ ಜನರು ನೀಡುತ್ತಿದ್ದ ದವಸ-ಧಾನ್ಯಗಳಿಂದ ಸಂಗ್ರಹಿಸಿಕೊಂಡು ಬಂದು ವರ್ಷವೀಡಿ ಜೀವನ ಸಾಗಿಸುವವರು. ಇವರದ್ದು ಒಂದು ರೀತಿಯ ಅಲೆಮಾರಿ ಜೀವನ ಆಗಿತ್ತು.

ತೊಗಲುಗೊಂಬೆಗಳನ್ನು ಹೇಗೆ ತಯಾರಿಸುತ್ತಿದ್ದರು

ಜಿಂಕೆ ಮತ್ತು ಮೇಕೆ ಚರ್ಮವನ್ನು ಚೆನ್ನಾಗಿ ಹದಗೊಳಿಸಿ ಸರಿಯಾದ ಆಕಾರದಲ್ಲಿ ಪಾತ್ರಗಳಿಗೆ ತಕ್ಕಂತೆ ರೂಪಕೊಟ್ಟು, ಕತ್ತರಿಸಿ ಅದಕ್ಕೆ ಬಣ್ಣಹಚ್ಚಿ ಗೊಂಬೆಗಳ ಕೈಕಾಲುಗಳು ಚಲಿಸುವಂತೆ ಮಾಡಿ ಸೂತ್ರದಾರ ಅವುಗಳನನ್ನು ತಮ್ಮ ಕಥೆಗೆ ತಕ್ಕಂತೆ ಚಲನೆ ಮಾಡಿಸುವುದು, ಓಡಾಡಿಸುತ್ತ ಕುಣಿಸುತ್ತಾರೆ. ನಾಲ್ಕಾರು ಅಡಿಯ ಜಾಗದಲ್ಲಿ ರಂಗಭೂಮಿ ನಿರ್ಮಿಸಿಕೊಂಡು ತೆಳುವಾದ ಪರದೆ ಕಟ್ಟಿ ಹಿಂದೆ ಗೊಂಬೆಗಳು ಸ್ಪಷ್ಟವಾಗಿ ಕಾಣುವಂತೆ ಬೆಳಕಿನ ವ್ಯವಸ್ಥೆ ಮಾಡಿಕೊಂಡು ಪ್ರದರ್ಶನ ನೀಡುತ್ತಿದ್ದರು.

ಸೂತ್ರದದಾರರ ಕಟ್ಟಿ ಅವುಗಳನ್ನು ಸೂತ್ರದಾರ ತನ್ನ ಬೆರಳಿಗೆ ಹಾಕಿಕೊಂಡು ಸಂದರ್ಭಕ್ಕೆ ತಕ್ಕಂತೆ ಪಾತ್ರಗಳನ್ನು ಓಡಾಡಿಸುತ್ತಾರೆ. ಗಂಡು ಹೆಣ್ಣಿನ ಧ್ವನಿಯಲ್ಲಿ ತಾನೇ ಮಾತುಗಳನ್ನು ಹೇಳುತ್ತಾನೆ. ಮೂರ್ನಾಲ್ಕು ಜನ ಹಿಮ್ಮೇಳ ಕಲಾವಿದರು ಹಾಡನ್ನು ಮುಂದುವರಿಸುತ್ತಾರೆ. ತಾಳ, ಮೃದಂಗ, ಹಾರ್ಮೋನಿಯಂ, ಗೆಜ್ಜೆ ಇವರ ವಾದ್ಯಗಳಾಗಿದ್ದವು. ಭೀಮವ್ವ ಮಾಡುತ್ತಿದ್ದ ಈ ಕಲಾ ವೃತ್ತಿ ಒಂದು ಕಾಲದಲ್ಲಿ ಬಹಳ ಜನಪ್ರಿಯ ಕಲೆಯಾಗಿತ್ತು. ಹಳ್ಳಿಗರಿಗೆ ತೊಗಲುಗೊಂಬೆಯಾಟ ಮನರಂಜನೆಯ ಸರಕಾಗಿತ್ತು.

ಇತ್ತೀಚೆಗೆ ಈ ಕಲೆ ಮತ್ತು ಕಾಲವಿದರು ಮರೆಯಾಗುತ್ತಿದ್ದಾರೆ. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಈ ಕಲೆ ಮತ್ತು ಕಲಾವಿದರು ಕಾಣಿಸಿಕೊಳ್ಳುತ್ತಾರೆ. ಇವರ ಕಥೆಗೆ ರಾಮಾಯಣ, ಮಹಾಭಾರತದ ಕಥೆಗಳೇ ಕಥಾವಸ್ತುಗಳಾಗಿದ್ದವು. ಹೆಚ್ಚು ಪೌರಾಣಿಕ ಕಥೆ ಆಧಾರಿತ ತೊಗಲುಗೊಂಬೆಯಾಟವನ್ನು ಪ್ರದರ್ಶನಗಳನ್ನು ನೀಡಿರುವ ಭೀಮವ್ವ, ರಾಮಾಯಾಣ, ಕುರುಕ್ಷೇತ್ರ, ವಿರಾಟ ಪರ್ವ, ಲವಕುಶ ಕಾಳಗ, ಕರ್ಣರ್ಪ, ದ್ರೌಪದಿ ವಸ್ತ್ರಾಪಹರಣ, ಆದಿಪರ್ವ, ಸರ್ಪಪರ್ವ ಸೇರಿದಂತೆ ಮಹಾಭಾರತದ 18 ಪರ್ವಗಳನ್ನು ಪ್ರದರ್ಶಿಸಿದ ಸಾಧನೆ ಮಾಡಿದ್ದಾರೆ. ಇದೀಗ ಭೀಮವ್ವಗೆ ದೇಶದ ಅತ್ಯುನ್ನತ ಗೌರವ ಸಂದಿರುವುದು ನಾಡಿಗೆ ಹೆಮ್ಮೆಯ ವಿಷಯವಾಗಿದೆ.

Whats_app_banner