Koppal News: ಕೊಪ್ಪಳದ ಬಂಕಾಪುರ ವನ್ಯ ಧಾಮದಲ್ಲಿ ಸಂತಾನ ಸಂಭ್ರಮ, 5 ಮರಿಗೆ ಜನ್ಮ ನೀಡಿದ ಮತ್ತೊಂದು ತೋಳ; ಈಗ 13 ಮರಿಗಳ ಖುಷಿ
Koppal News: ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಬಂಕಾಪುರ ತೋಳಧಾಮದಲ್ಲಿ ಸಂತಾನ ಸಂಭ್ರಮ. ಕಳೆದ ತಿಂಗಳು ತೋಳವೊಂದು ಎಂಟು ಮರಿಗೆ ಜನ್ಮ ನೀಡಿತ್ತು.ಈಗ ಇನ್ನೊಂದು ತೋಳ ಐದು ಮರಿಗೆ ಜನ್ಮ ನೀಡಿದೆ.

ಬೆಂಗಳೂರು: ಕೊಪ್ಪಳ ಜಿಲ್ಲೆ ಬಂಕಾಪೂರ ತೋಳಧಾಮದಲ್ಲಿ ಎರಡು ವಾರದ ಹಿಂದೆಯಷ್ಟೇ ತೋಳವೊಂದು ಎಂಟು ಮರಿಗಳಿಗೆ ಜನ್ಮ ನೀಡಿದ ಖುಷಿಯ ನಡುವೆಯೇ ಮತ್ತೊಂದು ತೋಳ ಐದು ಮರಿಗಳಿಗೆ ಜನ್ಮ ನೀಡಿದ್ದು, ಸಂರಕ್ಷಿತ ತೋಳ ಧಾಮದಲ್ಲಿ ಅಳಿವಿನಂಚಿನಲ್ಲಿರುವ ಬೂದು ತೋಳ (ಇಂಡಿಯನ್ ಗ್ರೇ ಉಲ್ಫ್)ದ ಸಂತತಿಯಲ್ಲಿ ಹೆಚ್ಚಳವಾಗುತ್ತಿದೆ. ಕರ್ನಾಟಕ ಅರಣ್ಯ ಇಲಾಖೆಯು ಕೊಪ್ಪಳ ಭಾಗದಲ್ಲಿರುವ ತೋಳಗಳ ಪುನರುತ್ಥಾನಕ್ಕೆ ಒತ್ತು ನೀಡುತ್ತಿದೆ. ಈಗಾಗಲೇ ಕೊಪ್ಪಳದ ಬಂಕಾಪುರ ಧಾಮದಲ್ಲಿ ನೆಲೆ ಕಂಡುಕೊಂಡಿರುವ ತೋಳಗಳಿಗೆ ಪ್ರತ್ಯೇಕ ಧಾಮ ಘೋಷಿಸಿ ಸಂರಕ್ಷಣೆ ಕೈಗೊಳ್ಳಲಾಗಿದೆ. ಇದರ ಫಲವಾಗಿ ಸಂತಾನಾಭಿವೃದ್ದಿ ಯಶಸ್ವಿಯಾಗಿ ಆಗುತ್ತಿದೆ.
ಗಂಗಾವತಿ ಅರಣ್ಯ ಪ್ರಾದೇಶಿಕ ವಲಯದ ವ್ಯಾಪ್ತಿಯಲ್ಲಿರುವ ಸುಮಾರು 332 ಹೆಕ್ಟರ್ ಬಂಕಾಪೂರ ತೋಳ ಧಾಮದ ಸಂರಕ್ಷಣೆಗೆ ಅರಣ್ಯ ಇಲಾಖೆ ಕಾಳಜಿ ವಹಿಸಿದ್ದು, ಇದು ವನ್ಯಜೀವಿಗಳಿಗೆ ಸುರಕ್ಷಿತ ತಾಣವಾಗಿದೆ. ತೋಳಗಳ ಸಂತತಿಯಲ್ಲಿ ಹೆಚ್ಚಳಕ್ಕೂ ಇದೆ ಕಾರಣವಾಗಿದೆ ಎನ್ನುವುದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ವಿವರಣೆ.
ಕಳೆದ ತಿಂಗಳು ಇದೇ ಕುರುಚಲು ಕಾಡಿನಲ್ಲಿ ತೋಳವೊಂದು 8 ಮರಿಗಳಿಗೆ ಜನ್ಮ ನೀಡಿತ್ತು, ಈಗ ಮತ್ತೊಂದು ತೋಳ ಐದು ಮರಿಗೆ ಜನ್ಮಕೊಟ್ಟಿದೆ. ನೈಸರ್ಗಿಕ ಗುಹೆಗಳು, ಬೆಟ್ಟ ಗುಡ್ಡಗಳನ್ನೂ ಹೊಂದಿರುವ ಈ ಧಾಮದಲ್ಲಿ, ತೋಳ, ಚಿರತೆ, ನವಿಲು, ಕತ್ತೆಕಿರುಬ, ನರಿ, ಮೊಲ, ಮುಳ್ಳುಹಂದಿಯೇ ಮೊದಲಾದ ಹಲವು ವನ್ಯಜೀವಿಗಳಿವೆ. ಕಳ್ಳಬೇಟೆ ತಡೆಗೂ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಪ್ರಸ್ತುತ ಈ ಕಾಡಿನಲ್ಲಿ ಬೂದು ತೋಳಗಳ ಸಂಖ್ಯೆ 40-45ಕ್ಕೆ ಹೆಚ್ಚಳವಾಗಿದೆ. ನವಜಾತ ತೋಳದ ಮರಿಗಳಿಗೆ ಜನರಿಂದಲಾಗಲೀ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದ್ದು, ಗುಹೆಗಳ ಬಳಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಬೂದು ಬಣ್ಣದ ತೋಳಗಳ ಸಂರಕ್ಷಣೆಗಾಗಿ ರಾಜ್ಯ ವನ್ಯಜೀವಿ ಮಂಡಳಿ ಕಲ್ಯಾಣ ಕರ್ನಾಟಕದಲ್ಲಿ ತೋಳಗಳ ಅಭಯಾರಣ್ಯ ನಿರ್ಮಿಸುವ ಉದ್ದೇಶ ಹೊಂದಿತ್ತು. ನಾಲ್ಕು ವರ್ಷದ ಹಿಂದೆಯೇ ಇಂತಹದೊಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು, ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಬಂಕಾಪುರ ಪ್ರದೇಶ ಉತ್ತಮವಾಗಿದೆ. ಈ ಹಿನ್ನಲೆ ಇಲ್ಲಿನ ಬಂಕಾಪುರದ ಒಣ ಪ್ರದೇಶದ ಸುಮಾರು 822. 03 ಎಕರೆ ಪ್ರದೇಶದಲ್ಲಿ ತೋಳ ಅಭಯಾರಣ್ಯ ನಿರ್ಮಾಣ ಮಾಡಲು ಸೂಕ್ತವಾಗಿದ್ದು, ಇದಕ್ಕೆ ಅನುಮೋದಿಸುವಂತೆ ಸರ್ಕಾರದ ಮುಂದೆ ಮಂಡಳಿ ಪ್ರಸ್ತಾಪ ಸಲ್ಲಿಸಿತ್ತು. ಈ ಪ್ರದೇಶವೂ ಅಳಿವಿನಂಚಿನಲ್ಲಿರುವ ಪ್ರಭೇದಗಳ ಸಂರಕ್ಷಣೆಗೆ ಜಿಲ್ಲೆಯಲ್ಲಿ ಉತ್ತಮ ಪರಿಸರವನ್ನು ಹೊಂದಿದೆ. ತೋಳಗಳು ಮಾತ್ರವಲ್ಲದೇ ಪಟ್ಟೆ ಹೈನಾ, ಭಾರತದ ನರಿ, ಚಿನ್ನದ ನರಿ ಮತ್ತು ಇತರೆ ಪ್ರಾಣಿಗಳ ಸಂರಕ್ಷಣೆಗೆ ಇದು ಉತ್ತಮವಾಗಿದೆ ಎಂದು ತಿಳಿಸಿದ್ದಕ್ಕೆ ಕರ್ನಾಟಕ ಸರ್ಕಾರವು ಅನುಮತಿ ನೀಡಿತ್ತು. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಸಚಿವ ಸಂಪುಟದ ಅನುಮತಿ ಬಳಿಕ ಈಗಾಗಲೇ ತೋಳಧಾಮ ರೂಪುಗೊಂಡು ನಾಲ್ಕು ವರ್ಷವೇ ಆಗಿದೆ. ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲೂ ತೋಳಧಾಮವಿದ್ದು. ಅಲ್ಲಿಯೂ ತೋಳಗಳಿವೆ.
ಕೊಪ್ಪಳ ಭಾಗದಲ್ಲಿ ತೋಳಗಳ ಕುರಿತಾಗಿ ಕರ್ನಾಟಕದ ಖ್ಯಾತ ವನ್ಯಜೀವಿ ತಜ್ಞರಾದ ಕೃಪಾಕರ್ ಸೇನಾನಿ ಅವರು ಸಂಶೋಧನಾ ಚಟುವಟಿಕೆಗಳನ್ನು ನಿಯಮಿತವಾಗಿ ಕೈಗೊಂಡಿದ್ದರು. ಹಲವಾರು ವರ್ಷ ತೋಳದ ಸಂಚಾರ ಇರುವ ಉತ್ತರ ಕರ್ನಾಟಕದ ಕೊಪ್ಪಳ, ರಾಯಚೂರು, ಬಾಗಲಕೋಟೆ, ವಿಜಯಪುರ, ಯಾದಗಿರಿ, ಕಲಬುರಗಿ ಜಿಲ್ಲೆಗಳಲ್ಲಿ ಕ್ಷೇತ್ರ ಕಾರ್ಯವನ್ನು ಕೈಗೊಂಡಿದ್ದರು. ಇಲ್ಲಿನ ತೋಳಗಳ ಕುರಿತು ಸಾಕ್ಷ್ಯಚಿತ್ರಗಳನ್ನೂ ರೂಪಿಸಿದ್ದು ಗಮನ ಸೆಳೆದಿದೆ. ಈ ಮಾಹಿತಿ ಆಧರಿಸಿಯೇ ಹಿಂದಿನ ಸರ್ಕಾರ ಬಂಕಾಪುರ ತೋಳ ಧಾಮ ರೂಪಿಸಲಾಗಿತ್ತು.
