ಬಿಜೆಪಿ ಮುಖಂಡ ಜನಾರ್ಧನ ರೆಡ್ಡಿ ಶಾಸಕ ಸ್ಥಾನದಿಂದ ಅನರ್ಹ:ಆರು ತಿಂಗಳಲ್ಲಿ ಗಂಗಾವತಿ ಕ್ಷೇತ್ರಕ್ಕೆ ಚುನಾವಣೆ ಸಂಭವ
ಜನಾರ್ದನ ರೆಡ್ಡಿ ಅವರ ಶಾಸಕತ್ವ ರದ್ದಾಗಿರುವುದರಿಂದ ಗಂಗಾವತಿ ಕ್ಷೇತ್ರಕ್ಕೆ ಹೊಸದಾಗಿ ಚುನಾವಣೆ ನಡೆಯುವ ಸಾಧ್ಯತೆಯಿದೆ. ರೆಡ್ಡಿ ಶಿಕ್ಷೆ ಆದೇಶಕ್ಕೆ ತಡೆಯಾಜ್ಞೆ ಸಿಗದೇ ಇದ್ದರೆ ಆರು ತಿಂಗಳಲ್ಲಿ ಚುನಾವಣೆ ಆಗಬಹುದು.ವರದಿ: ಎಚ್. ಮಾರುತಿ, ಬೆಂಗಳೂರು

ಬೆಂಗಳೂರು: ಸಿಬಿಐ ಕೋರ್ಟ್‌ನಿಂದ ಶಿಕ್ಷೆಗೆ ಗುರಿಯಾಗಿರುವ ಬಿಜೆಪಿ ಮುಖಂಡ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವರೂ ಆಗಿರುವ ಜನಾರ್ದನ ರೆಡ್ಡಿ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯ ಅಪರಾಧಿ ಎಂದು ತೀರ್ಪು ಪ್ರಕಟಿಸಿದ ಬೆನ್ನಲ್ಲೇ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಈ ಅನರ್ಹತೆ ಜನಾರ್ದನ ರೆಡ್ಡಿ ಶಿಕ್ಷೆ ಮುಗಿಸಿ ಬಿಡುಗಡೆಯಾಗುವವರೆಗೆ ಅಥವಾ ಈ ಶಿಕ್ಷೆಗೆ ಕೋರ್ಟ್ ತಡೆ ನೀಡುವವರೆಗೆ ಅಸ್ತಿತ್ವದಲ್ಲಿ ಇರಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.ಜನಪ್ರತಿನಿಧಿಗಳ ಕಾಯ್ದೆಯಡಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾದ ಜನಪ್ರತಿನಿಧಿಗಳ ಸದಸ್ಯತ್ವ ಸ್ವಾಭಾವಿಕವಾಗಿ ರದ್ದಾಗಲಿದೆ. ಜನಾರ್ದನ ರೆಡ್ಡಿ ಅವರು ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾದ ನಂತರವೂ 6 ವರ್ಷಗಳ ಕಾಲ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಆರು ತಿಂಗಳ ಒಳಗೆ ಗಂಗಾವತಿ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗಬಹುದು ಎನ್ನುವ ಚರ್ಚೆಗಳು ನಡೆದಿವೆ.
ಹೈದರಾಬಾದ್ ನಲಿರುವ ಸಿಬಿಐ ವಿಶೇಷ ನ್ಯಾಯಾಲಯದ ಪ್ರಧಾನ ವಿಶೇಷ ನ್ಯಾಯಾಧೀಶರು ಈ ಮಹತ್ವದ ತೀರ್ಪು ನೀಡಿದ್ದರು. ಕೋರ್ಟ್ ತೀರ್ಪು ಪ್ರಕಟವಾದ ಮೇ 6 ರಿಂದಲೇ ಅನ್ವಯವಾಗುವಂತೆ ಜನಾರ್ದನ ರೆಡ್ಡಿ ಅವರನ್ನು ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ವಿಧಾನಸಭೆ ಸಚಿವಾಲಯ ಕಾರ್ಯದರ್ಶಿ ಎಂ.ವಿಶಾಲಾಕ್ಷಿ ಅವರು ಗುರುವಾರ ಅಧಿಸೂಚನೆ ಹೊರಡಿಸಿದ್ದಾರೆ. ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಕಲಂ 191(1) (ಇ) ಅನ್ವಯ ಶಾಸಕಸ್ಥಾನದಿಂದ ಅನರ್ಹಗೊಳಿಸಲಾಗಿದೆ. ವಿಧಾನಸಭೆಯ ಒಂದು ಸ್ಥಾನ ತೆರವಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಓಬಳಾಪುರಂ ಮೈನಿಂಗ್ ಕಂಪನಿ(ಒಎಂಸಿ) ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಮತ್ತು ಅವರ ಸಂಬಂಧಿ ಓಎಂಸಿ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಬಿವಿ ಶ್ರೀನಿವಾಸ ರಡ್ಡಿ ಅವರಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಸಿಬಿಐ ವಿಶೇಷ ಕೋರ್ಟ್ ಮಂಗಳವಾರ ತೀರ್ಪು ನೀಡಿತ್ತು. ಶಿಕ್ಷೆ ಪ್ರಮಾಣ ಪ್ರಕಟವಾಗುತ್ತಿದ್ದಂತೆ ಶಾಸಕ ಸ್ಥಾನ ಉಳಿಸಿಕೊಳ್ಳಲು ರೆಡ್ಡಿ ಅವರು ಶಿಕ್ಷೆಯನ್ನು ಕಡಿಮೆ ಮಾಡುವಂತೆ ಕೋರ್ಟ್ ಮುಂದೆ ಅಂಗಲಾಚಿ ಬೇಡಿಕೊಂಡಿದ್ದರು. ಆದರೆ ನ್ಯಾಯಾಲಯ ರೆಡ್ಡಿ ಮನವಿಯನ್ನು ತಿರಸ್ಕರಿಸಿತ್ತು.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಓಬಳಾಪುರಂನಲ್ಲಿ ನಡೆದಿದೆ ಎನ್ನಲಾದ ಅಕ್ರಮ ಗಣಿಗಾರಿಕೆ ಪ್ರಕರಣ ಕುರಿತು 13 ವರ್ಷಗಳಿಂದ ಸುದೀರ್ಘ ವಿಚಾರಣೆ ನಡೆದಿತ್ತು. ಈ ಪ್ರಕ್ರಿಯೆಯಲ್ಲಿ 3,400ಕ್ಕೂ ಹೆಚ್ಚು ದಾಖಲೆಗಳನ್ನು ಪರಿಶೀಲಿಸಿ, 219 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿ ತೀರ್ಪು ನೀಡಲಾಗಿತ್ತು.
2008ರಿಂದ 2013ರ ಅವಧಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ಆರೋಪದಲ್ಲಿ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಕರ್ನಾಟಕ ಮತ್ತು ಆಂಧ್ರಪ್ರದೇಶ ಗಡಿಭಾಗದಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ಓಬಳಾಪುರಂ ಕಂಪನಿಯು ಕಾನೂನುಬಾಹಿರವಾಗಿ ಗಣಿಗಾರಿಕೆ ನಡೆಸಿದೆ ಎಂದು ಆರೋಪಿಸಲಾಗಿತ್ತು. ಈ ಅಕ್ರಮ ಚಟುವಟಿಕೆಗಳಿಂದ ಪರಿಸರ ನಾಶ, ಸರ್ಕಾರ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂಬ ಆರೋಪ ಇದಾಗಿತ್ತು.
ಈ ಪ್ರಕರಣದಲ್ಲಿ ಒಟ್ಟು ಒಂಬತ್ತು ಆರೋಪಿಗಳಿದ್ದು, ಓರ್ವ ಆರೋಪಿಯಾಗಿರುವ ಐಎಎಸ್ ಅಧಿಕಾರಿ ಶ್ರೀಲಕ್ಷ್ಮಿ ಅವರನ್ನು ಹೈಕೋರ್ಟ್ ಖುಲಾಸೆಗೊಳಿಸಿದೆ. ಮತ್ತೊಬ್ಬ ಆರೋಪಿ ಲಿಂಗರೆಡ್ಡಿ ಮೃತಪಟ್ಟಿದ್ದಾರೆ. ಉಳಿದ ಏಳು ಆರೋಪಿಗಳ ಪೈಕಿ ಇಬ್ಬರಿಗೆ ಸಿಬಿಐ ಯಾಲಯ ಕ್ಲೀನ್ ಚಿಟ್ ನೀಡಿದೆ. ಉಳಿದ 5 ಅಪರಾಧಿಗಳಿಗೆ 7 ವರ್ಷ ಜೈಲು ಶಿಕ್ಷೆ ಪ್ರಕಟಿಸಿತ್ತು. ನ್ಯಾಯಾಲಯದ ಈ ಆದೇಶವನ್ನು ಆಧರಿಸಿಯೇ ವಿಧಾನಸಭೆಯ ಕಾರ್ಯದರ್ಶಿ ಅವರು ಆದೇಶ ಹೊರಡಿಸಿದ್ದು. ಈ ಆದೇಶದ ಪ್ರತಿ ಕೇಂದ್ರ ಚುನಾವಣೆ ಆಯೋಗವನ್ನೂ ಒಂದೆರಡು ದಿನದಲ್ಲಿ ತಲುಪಲಿದೆ.
ವರದಿ: ಎಚ್. ಮಾರುತಿ, ಬೆಂಗಳೂರು