Koppal Gavisiddeshwar Jatre 2025: ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಬನ್ನಿ, ದೇಸಿ ಆಟಗಳಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಿ
ದಕ್ಷಿಣ ಭಾರತದ ಕುಂಭಮೇಳವೆಂದು ಪ್ರಸಿದ್ದಿಯಾದ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ 2025ರ ಗವಿಶ್ರೀ ಕ್ರೀಡಾ ಉತ್ಸವವು ಜನವರಿ 12 ರಿಂದ 17 ರವರೆಗೆ ಕೊಪ್ಪಳ ನಗರದಲ್ಲಿ ನಡೆಯಲಿದೆ
ಕೊಪ್ಪಳ: ಕೊಪ್ಪಳ ಜಾತ್ರೆಯಲ್ಲಿ ಏನುಂಟು ಏನಿಲ್ಲ. ಲಕ್ಷಾಂತರ ಭಕ್ತರು ಒಂದೆಡೆ ಕಲೆತು ಭಕ್ತಿಭಾವದಿಂದ ರಥ ಎಳೆಯುವ ಸಂತಸದ ಕ್ಷಣದ ನಡುವೆ ದೇಸಿ ಆಟಗಳಿಗೆ ಒತ್ತು ನೀಡಿ ಅವುಗಳಿಗೆ ಪುನರುತ್ಥಾನ ನೀಡುವ ಕ್ರೀಡಾ ಚಟುವಟಿಕೆಯೂ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಭಾಗವಾಗಿ ಇರಲಿದೆ. ಕೊಪ್ಪಳ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮಗಳ ಸಹಭಾಗಿತ್ವದಲ್ಲಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಗವಿಶ್ರೀ ಕ್ರೀಡಾ ಉತ್ಸವ-2025ರ ಕ್ರೀಡಾಕೂಟದಲ್ಲಿ 19 ರೀತಿಯ ವಿವಿಧ ಸಾಂಪ್ರದಾಯಿಕ ಹಾಗೂ ದೇಶಿಯ ಕ್ರೀಡೆಗಳು ಮತ್ತು ಪ್ರದರ್ಶನ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ.
ಯಾವ ಸ್ಪರ್ಧೆಗಳು ಎಂದು
ಆಹ್ವಾನಿತ ತಂಡಗಳಿಂದ ಕ್ರಿಕೆಟ್ ಪಂದ್ಯಾವಳಿಯು ಕೊಪ್ಪಳದ ತಾಲ್ಲೂಕು ಕ್ರೀಡಾಂಗಣದಲ್ಲಿ ಜ. 12 ಮತ್ತು 13 ರಂದು ಬೆಳಿಗ್ಗೆ 11 ಗಂಟೆಗೆ ಹಾಗೂ ಫೈನಲ್ ಪಂದ್ಯಾವಳಿ ಜ. 14 ರಂದು ಬೆಳಿಗ್ಗೆ 11 ಗಂಟೆಗೆ ಜರುಗಲಿದ್ದು, ಪಂದ್ಯ ವಿಜೇತರಿಗೆ ಆರ್ಕಷಕ ಟ್ರೋಫಿ ನೀಡಲಾಗುವುದು.
ಜ. 14 ರಂದು ಬೆಳಿಗ್ಗೆ 6.30ಕ್ಕೆ 12 ಕಿ.ಮಿ. ಮ್ಯಾರಥಾನ್ ಓಟವನ್ನು ಕೊಪ್ಪಳ ನಗರದ ಕಿತ್ತೂರು ಚೆನ್ನಮ್ಮ ಸರ್ಕಲ್, ಅಶೋಕ ಸರ್ಕಲ್, ಕಿನ್ನಾಳ ರೋಡ್, ಭಾಗ್ಯನಗರ ಕ್ರಾಸ್, ಭಾಗ್ಯನಗರ, ಲೇಬರ್ ಸರ್ಕಲ್, ಸಿಂಪಿ ಲಿಂಗಣ್ಣ ರಸ್ತೆ ಮೂಲಕ ಗಡಿಯಾರ ಕಂಬ ಮಾರ್ಗವಾಗಿ ಗವಿಮಠ ಆವರಣದವರೆಗೆ ಪುರುಷ ಮತ್ತು ಮಹಿಳೆಯರಿಗೆ ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 20,000 ರೂ., ದ್ವಿತೀಯ 15,000 ರೂ., ತೃತೀಯ 12,000 ರೂಪಾಯಿ ಹಾಗೂ ಒಟ್ಟು ಎಂಟು ಹಂತಗಳಲ್ಲಿ ಬಹುಮಾನ ವಿತರಣೆ ಮಾಡಲಾಗುತ್ತದೆ
ಜ. 14 ರಂದು ಬೆಳಿಗ್ಗೆ 11 ಗಂಟೆಗೆ ಗವಿಮಠದ ರಥದ ಹತ್ತಿರ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಪ್ರಥಮ 10,000 ರೂ., ದ್ವಿತೀಯ ದ್ವಿತೀಯ 8000 ರೂ., ತೃತೀಯ 6000 ರೂ., ನಾಲ್ಕನೇ ಬಹುಮಾನ 4,000 ರೂಪಾಯಿ ಹಾಗೂ ಭಾಗವಹಿಸಿದವರೆಲ್ಲರಿಗೂ ಉಡುಗೊರೆ ನೀಡಲಾಗುತ್ತದೆ.
ಮಲ್ಲಕಂಬ ಪ್ರದರ್ಶನ
ಜ. 15 ರಂದು ಬೆಳಿಗ್ಗೆ 10 ಗಂಟೆಗೆ ಗವಿಮಠ ಆವರಣದಲ್ಲಿ ಆಕರ್ಷಕ ಮಲ್ಲಕಂಬ ಪ್ರದರ್ಶನ ಜರುಗಲಿದ್ದು, ಹೊಳೆಆಲೂರಿನ ಜ್ಞಾನ ಸಿಂಧು ಅಂಧ ಮಕ್ಕಳ ಶಾಲೆ, ಸಿರಗುಪ್ಪದ ಯೋಗ ಮಲ್ಲಕಂಬ ತಂಡ ಮತ್ತು ಕೊಪ್ಪಳದ ಮಹಿಳಾ ಮಲ್ಲಕಂಬ ತಂಡ ಪಾಲ್ಗೊಳ್ಳಲಿದ್ದಾರೆ.
ಜ. 15 ರಂದು ಬೆಳಿಗ್ಗೆ 11 ಗಂಟೆಗೆ ಗವಿಮಠ ಆವರಣದಲ್ಲಿ ನಡೆಯಲಿರುವ ಯುವಕರ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯು ಮುಕ್ತ ಆಹ್ವಾನವಿದ್ದು, ಪ್ರಥಮ 10,000 ರೂ., ದ್ವಿತೀಯ 8000 ರೂ., ತೃತೀಯ 6000 ರೂ.ಗಳ ಬಹುಮಾನವಿದೆ. ಅಂದು ಬೆಳಿಗ್ಗೆ 9.30ಕ್ಕೆ ಗವಿಮಠ ಆವರಣದಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಶ್ವಾನ ಪ್ರದರ್ಶನವಿದೆ.
ಕರಾಟೆ, ಕುಸ್ತಿ
ಜ. 16ರಂದು ಬೆಳಿಗ್ಗೆ 10 ಗಂಟೆಗೆ ಕರಾಟೆ ಪ್ರದರ್ಶನವಿದೆ. ಬೆಳಿಗ್ಗೆ 10 ಗಂಟೆಗೆ ಯುವಕರಿಂದ ಎತ್ತಿನ ಬಂಡಿ ಜಗ್ಗುವ ಸ್ಪರ್ಧೆ ಜರುಗಲಿದ್ದು, ಪ್ರಥಮ 10,000 ರೂ., ದ್ವಿತೀಯ 8000 ರೂ., ತೃತೀಯ 6000 ರೂ. ಬಹುಮಾನವಿದೆ. ಅಂದು ಬೆಳಿಗ್ಗೆ 11 ಗಂಟೆಗೆ ಆಹ್ವಾನಿತ ರಾಷ್ಟ್ರ ಹಾಗೂ ರಾಜ್ಯ ಮಟ್ಟದ, ಪುರುಷ ಮತ್ತು ಮಹಿಳಾ ಕುಸ್ತಿ ಪಟುಗಳಿಂದ ಕುಸ್ತಿ ಪಂದ್ಯಾವಳಿ ನಡೆಯಲಿದ್ದು, ಕೊಪ್ಪಳ ಕೇಸರಿಗೆ ಬೆಳ್ಳಿ ಗಧೆ ನೀಡಲಾಗುವುದು. ತಾಲ್ಲೂಕು ಕ್ರೀಡಾಂಗಣದಲ್ಲಿ ಸಂಜೆ 4 ಗಂಟೆಗೆ ನಡೆಯುವ ಪುರುಷ ವಿಕಲಚೇತನರ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ 15,000 ರೂ., ದ್ವಿತೀಯ 13,000 ರೂ., ತೃತೀಯ 10,000 ರೂ.ಗಳ ಬಹುಮಾನವಿದೆ.
ಅದೇ ದಿನ ಬೆಳಿಗ್ಗೆ 10 ಗಂಟೆಗೆ ತಾಲ್ಲೂಕು ಕ್ರೀಡಾಂಗಣದಲ್ಲಿ ಮಹಿಳೆಯರಿಗೆ ಥ್ರೋಬಾಲ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಥಮ 20,000 ರೂ., ದ್ವಿತೀಯ 18,000 ರೂ., ತೃತೀಯ 15,000 ರೂ. ಮತ್ತು ನಾಲ್ಕನೇ ಸ್ಥಾನಕ್ಕೆ 12,000 ರೂ.ಗಳ ಬಹುಮಾನವಿದೆ.
ಅಂದೇ ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಪುರುಷರ ಡಬಲ್ಸ್ ಶೆಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ 15,000 ರೂ., ದ್ವಿತೀಯ 12,000 ರೂ., ತೃತೀಯ 10,000 ರೂ., ನಾಲ್ಕನೇ ಸ್ಥಾನಕ್ಕೆ 5,000 ರೂ.ಗಳ ಬಹುಮಾನ ಸಿಗಲಿದೆ.
ಅಂದು ಮಧ್ಯಾಹ್ನ 3 ಗಂಟೆಗೆ ಗವಿಮಠ ಆವರಣದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಹಗ್ಗ ಜಗ್ಗಾಟ ಸ್ಪರ್ಧೆ ಏರ್ಪಡಿಸಲಾಗಿದ್ದು, ಪ್ರಥಮ 10,000 ರೂ., ದ್ವಿತೀಯ 8000 ರೂ., ತೃತೀಯ 6,000 ರೂ.ಗಳ ಬಹುಮಾನ ನೀಡಲಾಗುವುದು
ಅಂದು ಮಧ್ಯಾಹ್ನ 3 ಗಂಟೆಗೆ ತಾಲ್ಲೂಕು ಕ್ರೀಡಾಂಗಣದಲ್ಲಿ 15 ವರ್ಷದ ಒಳಗಿನ ಮಕ್ಕಳಿಗಾಗಿ ಹಮ್ಮಿಕೊಂಡ ಛದ್ಮವೇಷ/ ಫ್ಯಾಷನ್ ಷೋನಲ್ಲಿ ಪ್ರಥಮ 15,000 ರೂ., ದ್ವಿತೀಯ 12,000 ರೂ., ತೃತೀಯ 10,000 ರೂ. ಬಹುಮಾನವಿದ್ದು, ಭಾಗವಹಿಸಿದವರೆಲ್ಲರಿಗೂ ಆಕರ್ಷಕ ಬಹುಮಾನ ನೀಡಲಾಗುವುದು.
ಮಿ. ಕೊಪ್ಪಳ ಪ್ರಶಸ್ತಿ
ಜ. 17 ರಂದು ಸಂಜೆ 5 ಗಂಟೆಯಿಂದ ಕೊಪ್ಪಳ ತಾಲ್ಲೂಕು ಕ್ರೀಡಾಂಗಣದಲ್ಲಿ ಆಹ್ವಾನಿತ ಪುರುಷರ ದೇಹದಾರ್ಡ್ಯ ಸ್ಪರ್ಧೆಯಲ್ಲಿ ನೂರಕ್ಕೂ ಅಧಿಕ ಸ್ಪರ್ಧಿಗಳು, ಮೊದಲ ಮೂವತ್ತು ವಿಜೇತರಿಗೆ ಬಹುಮಾನ ನೀಡಲಾಗುವುದು. ಮಿ.ಕೊಪ್ಪಳ ಪ್ರಶಸ್ತಿಯನ್ನು ಸಹ ಪ್ರದಾನ ಮಾಡಲಾಗುತ್ತದೆ.
ಅಂದು ಬೆಳಿಗ್ಗೆ 10 ಗಂಟೆಗೆ ಪುರುಷ ಹಾಗೂ ಮಹಿಳೆಯರ ಮುಕ್ತ ವಾಲಿಬಾಲ್ ಪಂದ್ಯಾವಳಿಗಳು ನಡೆಯಲಿದ್ದು, ಫೈನಲ್ ಪಂದ್ಯಾವಳಿ ಜ. 18ರ ಮಧ್ಯಾಹ್ನ 3 ಗಂಟೆಗೆ ಗವಿಮಠ ಆವರಣದಲ್ಲಿ ಜರುಗಲಿದೆ. ಇದರಲ್ಲಿ ವಿಜೇತರಾದವರಿಗೆ ಪ್ರಥಮ 30,000 ರೂ., ದ್ವಿತೀಯ 25,000 ರೂ, ತೃತೀಯ 20,000 ರೂ., ಚತುರ್ಥ 15,000 ರೂ. ಮತ್ತು ಆಕರ್ಷಕ ಟ್ರೋಫಿ ಸಿಗಲಿದೆ.
ಕಬ್ಬಡ್ಡಿ ಪಂದ್ಯಾವಳಿ
ಜ. 17ರ ಬೆಳಿಗ್ಗೆ 10 ಗಂಟೆಗೆ ಪುರುಷ ಹಾಗೂ ಮಹಿಳೆಯರಿಗೆ ಮುಕ್ತ ಕಬಡ್ಡಿ ಪಂದ್ಯಾವಳಿಯನ್ನು ಹಮ್ಮಿಕೊಂಡಿದ್ದು, ಫೈನಲ್ ಪಂದ್ಯಾವಳಿ ಜ. 18ರ ಮಧ್ಯಾಹ್ನ 3 ಗಂಟೆಗೆ ಗವಿಮಠ ಆವರಣದಲ್ಲಿ ಜರುಗಲಿದೆ. ಇದರಲ್ಲಿ ಪ್ರಥಮ ಬಹುಮಾನ ರೂಪಾಯಿ 30,000 ರೂ., ದ್ವಿತೀಯ 25,000 ರೂ., ತೃತೀಯ - 20,000 ರೂ., ಚತುರ್ಥ 15,000 ರೂ. ಮತ್ತು ಆಕರ್ಷಕ ಟ್ರೋಫಿ ದೊರೆಯಲಿದೆ.
ಜ. 17ರ ಬೆಳಿಗ್ಗೆ 10 ಗಂಟೆಯಿಂದ 12 ಗಂಟೆವರೆಗೆ ಗವಿಮಠ ಆವರಣದಲ್ಲಿ ಸಾರ್ವಜನಿಕರಿಗೆ ಮುಕ್ತ ಗಾಳಿಪಟ ಹಾರಾಟ ಸ್ಪರ್ಧೆ ಏರ್ಪಡಿಸಲಾಗಿದ್ದು, ಭಾಗವಹಿಸಿದ ಎಲ್ಲರಿಗೂ ಆಕರ್ಷಕ ಉಡುಗೊರೆ ಸಿಗಲಿದೆ. ಅಲ್ಲದೇ ಅಂದು ಮಧ್ಯಾಹ್ನ 1 ರಿಂದ ಸಂಜೆ 6 ಗಂಟೆಯವರೆಗೆ ದೇಶದ ಪ್ರಸಿದ್ಧ 5 ತಂಡಗಳಿಂದ ಬೃಹತ್ ಗಾತ್ರದ ಗಾಳಿಪಟ ಪ್ರದರ್ಶನ ಮತ್ತು ರಾತ್ರಿ 10 ರಿಂದ 12 ಗಂಟೆವರೆಗೆ ಎಲ್.ಇ.ಡಿ ಗಾಳಿಪಟ ಪ್ರದರ್ಶನ ಜರುಗಲಿದೆ.
ಜನವರಿ 17ರ ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಕ್ರೀಡಾಂಗಣದಿಂದ ಗವಿಮಠದ ವರೆಗೆ ಎತ್ತಿನ ಬಂಡಿ ಶೃಂಗಾರ ಸ್ಪರ್ಧೆ ಹಮ್ಮಿಕೊಂಡಿದ್ದು, ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬೆಳ್ಳಿಯ ಎತ್ತು ಬಂಡಿ, ದ್ವಿತೀಯ ಬೆಳ್ಳಿಯ ಬಂಡಿ, ತೃತೀಯ ಬೆಳ್ಳಿಯ ಎತ್ತು ಬಹುಮಾನದ ರೂಪದಲ್ಲಿ ನೀಡಲಾಗುವುದು. ಸಾಂಪ್ರದಾಯಿಕ, ಜನಪದ ಶೈಲಿಯಲ್ಲಿ ಎತ್ತು ಬಂಡಿಗಳನ್ನು ಬಣ್ಣ ಹಚ್ಚಿ ಶೃಂಗಾರಗೊಳಿಸಿದ ರೈತನು ಕೂಡ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ ಎನ್ನುವುದು ಗವಿಶ್ರೀ ಕ್ರೀಡಾ ಉತ್ಸವದ ಸಂಚಾಲಕರೂ ಆಗಿರುವ, ಸಂಸದ ಕೆ.ರಾಜಶೇಖರ ಹಿಟ್ನಾಳ ಅವರ ವಿವರಣೆ.