ಕವಲೂರು ಜಾತ್ರೆ 2025; ದುರ್ಗಾದೇವಿ ತೇರಿನ ಮೇಲಿರುವುದು ಧರ್ಮ ಧ್ವಜವಲ್ಲ, ರಾಷ್ಟ್ರಧ್ವಜ; ದೇಶಪ್ರೇಮ ಸಾರುವ ಇದು ವಿಶೇಷ
ಕನ್ನಡ ಸುದ್ದಿ  /  ಕರ್ನಾಟಕ  /  ಕವಲೂರು ಜಾತ್ರೆ 2025; ದುರ್ಗಾದೇವಿ ತೇರಿನ ಮೇಲಿರುವುದು ಧರ್ಮ ಧ್ವಜವಲ್ಲ, ರಾಷ್ಟ್ರಧ್ವಜ; ದೇಶಪ್ರೇಮ ಸಾರುವ ಇದು ವಿಶೇಷ

ಕವಲೂರು ಜಾತ್ರೆ 2025; ದುರ್ಗಾದೇವಿ ತೇರಿನ ಮೇಲಿರುವುದು ಧರ್ಮ ಧ್ವಜವಲ್ಲ, ರಾಷ್ಟ್ರಧ್ವಜ; ದೇಶಪ್ರೇಮ ಸಾರುವ ಇದು ವಿಶೇಷ

ಕವಲೂರು ಜಾತ್ರೆ 2025: ಕೊಪ್ಪಳ ತಾಲೂಕು ಕವಲೂರು ದುರ್ಗಾದೇವಿ ಜಾತ್ರೆ ಬಹಳ ವಿಶೇಷ. ಇಲ್ಲಿ ಇಂದು ರಥೋತ್ಸವ ನಡೆಯಲಿದ್ದು, ದುರ್ಗಾದೇವಿ ತೇರಿನ ಮೇಲಿರುವುದು ಧರ್ಮ ಧ್ವಜವಲ್ಲ, ರಾಷ್ಟ್ರಧ್ವಜ. ದೇಶಪ್ರೇಮ ಸಾರುವ ಇದು ವಿಶೇಷವಾಗಿದ್ದು, ಜಾತ್ರೆಯ ವಿವರ ಇಲ್ಲಿದೆ.

ಕವಲೂರು ಜಾತ್ರೆ ನಡೆಯುತ್ತಿದ್ದು, ಇಂದು ತೇರು ಇದೆ. ದುರ್ಗಾದೇವಿ ತೇರಿನ ಮೇಲಿರುವುದು ಧರ್ಮ ಧ್ವಜವಲ್ಲ, ರಾಷ್ಟ್ರಧ್ವಜ. (ಸಾಂಕೇತಿಕ ಚಿತ್ರ)
ಕವಲೂರು ಜಾತ್ರೆ ನಡೆಯುತ್ತಿದ್ದು, ಇಂದು ತೇರು ಇದೆ. ದುರ್ಗಾದೇವಿ ತೇರಿನ ಮೇಲಿರುವುದು ಧರ್ಮ ಧ್ವಜವಲ್ಲ, ರಾಷ್ಟ್ರಧ್ವಜ. (ಸಾಂಕೇತಿಕ ಚಿತ್ರ) (Special Arrangement)

ಕವಲೂರು ಜಾತ್ರೆ 2025: ಕೊಪ್ಪಳ ತಾಲೂಕು ಕವಲೂರು ಜಾತ್ರೆ ಆರಂಭವಾಗಿದ್ದು, ಇಂದು (ಮೇ 12) ದುರ್ಗಾದೇವಿ ತೇರು ನಡೆಯಲಿದೆ. ದುರ್ಗೆಯ ಜಾತ್ರೆ ಅಂದರೆ ಈ ಭಾಗದಲ್ಲಿ ಕುರಿ, ಕೋಣ ಬಲಿ ಕೊಟ್ಟು ಉತ್ಸವ ನಡೆಸುವುದು ಸಾಮಾನ್ಯ. ಆದರೆ, ಕವಲೂರು ಜಾತ್ರೆ ಹಾಗಲ್ಲ. ದುರ್ಗಾದೇವಿ ಹಾಗೂ ಪಾರ್ವತಿ ಪರಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಭಾವೈಕ್ಯ ಹಾಗೂ ರಾಷ್ಟ್ರಪ್ರೇಮ ಸಾರುವ ರಥೋತ್ಸವ ಇಂದು ನಡೆಯಲಿದೆ. ದೇಶಪ್ರೇಮ ಸಾರುವ ಈ ರಥೋತ್ಸವ ಬಹಳ ವಿಶೇಷ.

ಕವಲೂರು ದುರ್ಗಾದೇವಿ ತೇರಿನ ಮೇಲೆ ಧರ್ಮ ಧ್ವಜವಲ್ಲ, ರಾಷ್ಟ್ರಧ್ವಜ

ಕೊಪ್ಪಳ ತಾಲೂಕು ಕವಲೂರು ಗ್ರಾಮದ ದುರ್ಗಾದೇವಿ ಸ್ವಲ್ಪ ವಿಶೇಷ. ಜಾತಿ ಭೇದವಿಲ್ಲದೇ ಗ್ರಾಮಸ್ಥರು ಒಂದಾಗಿ ಕವಲೂರು ಜಾತ್ರೆಯನ್ನು ಆಚರಿಸುವ ಪರಿಪಾಠಕ್ಕೆ ಬಹಳ ಹಳೆಯದು. ಯಾವುದೇ ಜಾತ್ರೆ ನಡೆದಾಗಲೂ ರಥೋತ್ಸವಕ್ಕೆ ತೇರು ಅಲಂಕರಿಸುವಾಗ ಅದರ ತುತ್ತ ತುದಿಗೆ ಧರ್ಮ ಧ್ವಜ ಜೋಡಿಸುವುದು ವಾಡಿಕೆ. ಆದರೆ ದುರ್ಗಾ ದೇವಿ ತೇರು ಕೂಡ ವಿಶೇಷ. ಇಲ್ಲಿ ಧರ್ಮ ಧ್ವಜದ ಬದಲು ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ. ಈ ರೀತಿಯಾಗಿ ಇದು ರಾಷ್ಟ್ರಪ್ರೇಮ, ರಾಷ್ಟ್ರಪ್ರಜ್ಞೆಯನ್ನು ಜಾಗೃತಗೊಳಿಸುವ ಜಾತ್ರೆಯಾಗಿ ಆಚರಿಸಲ್ಪಡುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ನವದಂಪತಿಗಳಿಗೆ ಒಳಿತು ಮಾಡುವ ಪಂಚ ಕಳಸದ ರಥ

ಕವಲೂರು ಜಾತ್ರೆಯ ದುರ್ಗಾ ದೇವಿ ತೇರು ಪಂಚಕಳಸದ ರಥವಾಗಿದ್ದು, ಸಮೃದ್ಧಿಯ ಸಂಕೇತ ಎಂಬ ನಂಬಿಕೆ ಭಕ್ತರದ್ದು. ನವದಂಪತಿ ಈ ರಥದ ದರ್ಶನ ಮಾಡಬೇಕು ಎಂಬ ನಂಬಿಕೆ ಚಾಲ್ತಿಯಲ್ಲಿದ್ದು, ಪಂಚಕಳಸ ರಥ ದರ್ಶನ ಮಾಡಿದರೆ ಅವರ ಬಾಳಿನಲ್ಲಿ ಸುಖ, ಶಾಂತಿ, ನೆಮ್ಮದಿ ಸಿಗುವುದು ಎಂಬುದು ಐತಿಹ್ಯ. ಹೀಗಾಗಿ ನವದಂಪತಿ ಈ ರಥೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.

ಮುಂಡರಗಿಯ ಅನ್ನದಾನೇಶ್ವರ ಸ್ವಾಮೀಜಿ, ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ, ಮೈನಹಳ್ಳಿ ಬಿಕನಳ್ಳಿಯ ಸಿದ್ದೇಶ್ವರ ಶಿವಾಚಾರ್ಯರು, ಅಳವಂಡಿಯ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಗುಳೇದಗುಡ್ಡದ ಒಪ್ಪತೇಶ್ವರ ಸ್ವಾಮೀಜಿ, ಕುಕನೂರಿನ ಮಹಾದೇವ ಸ್ವಾಮೀಜಿ, ಯಲಬುರ್ಗಾದ ಬಸವಲಿಂಗೇಶ್ವರ ಶಿವಾಚಾರ್ಯರು ಹಾಗೂ ಗಣ್ಯರು, ಜನಪ್ರತಿನಿಧಿಗಳು ರಥೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.

ಮೇ 2 ರಿಂದ 16ರ ತನಕ ಕವಲೂರು ಜಾತ್ರೆ

ಕೊಪ್ಪಳ ಕವಲೂರು ಜಾತ್ರೆಗೆ ಮೇ 2 ರಿಂದಲೇ ಚಾಲನೆ ದೊರೆತಿದೆ. ಸಂಸ್ಕೃತಿ ಪರಂಪರೆಯನ್ನು ಎತ್ತಿಹಿಡಿದಿರುವ ದುರ್ಗಾದೇವಿ ದೇವಸ್ಥಾನದಲ್ಲಿ ಅಂದಿನಿಂದ ಮೇ 16ರವರೆಗೂ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಮೇ 12 ರಂದು ಅಂದರೆ ಇಂದು ದುರ್ಗಾದೇವಿ ಹಾಗೂ ಪಾರ್ವತಿ ಪರಮೇಶ್ವರ ದೇವರಿಗೆ ಕ್ಷೀರಾಭಿಷೇಕ, ಅಭಿಷೇಕ ಹಾಗೂ ವಿಶೇಷ ಪೂಜೆ, ಸಾಮೂಹಿಕ ವಿವಾಹ ಕಾರ್ಯಕ್ರಮ, ಪಾರ್ವತಿ ಪರಮೇಶ್ವರ ದೇವರ ಲಘು ರಥೋತ್ಸವ ಹಾಗೂ ನಂತರ ಸಂಜೆ ದುರ್ಗಾದೇವಿ ಪಂಚ ಕಳಸ ಮಹಾ ರಥೋತ್ಸವ ಜರುಗಲಿದೆ. ಮೇ 13ರಂದು ಅಂದರೆ ನಾಳೆ ಮಧ್ಯಾಹ್ನ ದುರ್ಗಾದೇವಿಯ ಅಗ್ನಿ ಹೊಂಡ ಹಾಯುವ ಕಾರ್ಯಕ್ರಮ, ಮೇ 16ರಂದು ಮುತೈದೆಯರಿಂದ ದುರ್ಗಾದೇವಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.