ಕೊಪ್ಪಳ ಮೇಳದಲ್ಲಿ ಬಗೆಬಗೆಯ ಮಾವುಗಳ ಲೋಕ; 1 ಕೆ.ಜಿ.ಗೆ ರೂ.2.50 ಲಕ್ಷ ಬೆಲೆಯ ಮೀಯಾಜಾಕಿ ಮಾವು ಪ್ರಮುಖ ಆಕರ್ಷಣೆ
ಬಗೆಬಗೆಯ ಮಾವುಗಳನ್ನು ಬೆಳೆಯುವ ಕೊಪ್ಪಳ ಜಿಲ್ಲೆಯಲ್ಲಿ ಈ ಬಾರಿ ಮಾವು ಮೇಳವನ್ನು ತೋಟಗಾರಿಕೆ ಇಲಾಖೆಯು ಆರಂಭಿಸಿದ್ದು, ದುಬಾರಿ ಬೆಲೆಯ ಮೀಯಾಜಾಕಿ ಮಾವು ಗಮನ ಸೆಳೆಯುತ್ತಿದೆ.

ಕೊಪ್ಪಳ: ಕೊಪ್ಪಳ ವತಿಯಿಂದ ತೋಟಗಾರಿಕೆ ಇಲಾಖೆ 9ನೇ ವರ್ಷದ ಮಾವು ಮೇಳ ಆರಂಭಗೊಂಡಿದೆ. ಮೇ 13 ರಿಂದ ಮೇ 22ರ ವರೆಗೆ 10 ದಿನಗಳ ಕಾಲ ಕೊಪ್ಪಳ ತೋಟಗಾರಿಕೆ ಇಲಾಖೆ ಕಛೇರಿಯ ಆವರಣದಲ್ಲಿ ಮೇಳ ನಡೆಯಲಿದೆ. ಬಗೆಬಗೆಯ ಮಾವಿನ ಹಣ್ಣುಗಳು ಗ್ರಾಹಕರನ್ನು ಮೇಳದಲ್ಲಿ ಆಕರ್ಷಿಸುತ್ತಿವೆ. ಈ ವರ್ಷವೂ ಪ್ರಪಂಚದ ಅತ್ಯಂತ ದುಬಾರಿ ಮಾವಿನ ಹಣ್ಣಾದ “ಮೀಯಾಜಾಕಿ" ಎಂಬ ಜಪಾನ ತಳಿಯ ಹಣ್ಣನ್ನು ಪ್ರದರ್ಶನಕ್ಕೆ ಇಡಲಾಗಿದೆ. ಈ ಮಾವಿನ ತಳಿಯ ಬೆಲೆಯು 1 ಕೆ.ಜಿ.ಗೆ ರೂ.2.50 ಲಕ್ಷ ಬೆಲೆ ಬಾಳುತ್ತದೆ. ಈ ಮೇಳದಲ್ಲಿ ಮಿಯಾಜಾಕಿ ಹಣ್ಣಿನ ಗಿಡಗಳನ್ನು ಬೆಳೆಯಲು ಆಸಕ್ತಿ ಇರುವ ರೈತರಿಗೆ ಗುಣಮಟ್ಟ ಗಿಡಗಳನ್ನು ಸಹ ಮಾರಾಟ ಮಾಡಲಾಗುತ್ತಿದೆ. ಇದಲ್ಲದೇ ಕೊಪ್ಪಳ ಕೇಸರ್ ಮಾವು ಬ್ರಾಂಡ್‌ನ ಮಾವಿನ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇದ್ದು ಸಾರ್ವಜನಿಕರಿಗೆ ಬಾಕ್ಸ್ನಲ್ಲಿನ ಹಣ್ಣುಗಳನ್ನು ಸಿಗುವಂತೆ ಅನುಕೂಲ ಮಾಡಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ 6000 ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತಳಿಯ ಮಾವಿನ ಹಣ್ಣಿನ ಬೆಳೆಗಳನ್ನು ಬೆಳೆಯುತ್ತಿದ್ದು ಇವುಗಳಲ್ಲಿ ಮುಖ್ಯವಾಗಿ ಕೇಸರ್ ತಳಿಯು ಅತ್ಯಂತ ಬೇಡಿಕೆಯ ತಳಿಯಾಗಿದೆ ಹಾಗೂ ದಶಹರಿ, ತೋತಾಪೂರಿ, ಮಲ್ಲಿಕಾ, ಬೆನೆಶಾನ್, ಸಿಂಧೂರಿ. ಇಮಾಮ ಪಸಂದ, ಉಪ್ಪಿನಕಾಯಿ ತಳಿಗಳನ್ನು ಬೆಳೆಯತ್ತಿದ್ದು ರೈತರ ಅನುಕೂಲಕ್ಕಾಗಿ ಹಾಗೂ ಗ್ರಾಹಕರಿಗೆ ಯೋಗ್ಯ ಬೆಲೆಗೆ ಗುಣಮಟ್ಟದ ಹಣ್ಣುಗಳನ್ನು ಮಾರಾಟ ಮಾಡಲು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸಲು ಈ ಮೇಳವನ್ನು ಆಯೋಜಿಸಲಾಗಿದೆ.
ರೈತರಿಂದ ನೋಂದಣಿ
ಮೇಳದಲ್ಲಿ ಹಿಂದಿನ ವರ್ಷದ ಮೇಳಕ್ಕಿಂತಲೂ 100 ಕ್ಕೂ ಹೆಚ್ಚಿನ ರೈತರು ಭಾಗವಹಿಸಲು ಪೈಪೋಟಿ ಮೇಲೆ ತಾವು ಬೆಳೆದ ಹಣ್ಣುಗಳನ್ನು ಮಾರಾಟ ಮಾಡಲು ಸ್ಟಾಲ್‌ಗಳನ್ನು ನೊಂದಾಯಿಸಿರುತ್ತಾರೆ. ವರ್ಷದಿಂದ ವರ್ಷಕ್ಕೆ ಸಾರ್ವಜನಿಕರಿಗೆ ನೇರವಾಗಿ ಮಾರಾಟ ಮಾಡಲು ರೈತರು ಹೆಚ್ಚಾಗಿ ಮೇಳದಲ್ಲಿ ಭಾಗವಹಿಸುತ್ತಿದ್ದಾರೆ. ಈ ಮೇಳದಲ್ಲಿ ಉಪ್ಪಿನಕಾಯಿ ಮಾವನ್ನು ಸಹ ಮಾರಾಟ ಮಾಡಲಾಗುತ್ತಿದ್ದು ಹಾಗೂ ರೈತರೇ ತಯಾರಿಸಿದ ಉಪ್ಪಿನಕಾಯಿಗಳನ್ನು ಆಕರ್ಷಕವಾದ ಬಾಟಲ್‌ಗಳಲ್ಲಿ ಪ್ಯಾಕಿಂಗ್ ಮಾಡಿ ಮಾರಾಟ ಮಾಡಲಾಗುತ್ತಿದೆ.
ಮೇಳದಲ್ಲಿ 15 ಕ್ಕೂ ಹೆಚ್ಚಿನ ಮಾವಿನ ತಳಿಗಳನ್ನು ರೈತರು ನೇರವಾಗಿ ಮಾರಾಟ ಮಾಡುವ ಅನುಕೂಲ ಕಲ್ಪಿಸಲಾಗಿದೆ. ಮೇಳದಲ್ಲಿ ಸಾವಯವ ಪದ್ದತಿಯಲ್ಲಿ ಬೆಳೆದ ಹಾಗೂ ದೃಢೀಕರಣದ ಪ್ರಮಾಣ ಪತ್ರ ಹೊಂದಿದ ರೈತರು ಸಹ ಮಾವಿನ ಹಣ್ಣುಗಳನ್ನು ಮಾರಾಟ ಮಾಡಲು ಭಾಗವಹಿಸಿರುತ್ತಾರೆ. ಈ ಮೇಳದಲ್ಲಿ ವಿವಿಧ ತಳಿಗೆ ಯೋಗ್ಯ ಬೆಲೆಯನ್ನು ನಿರ್ಧರಿಸಲಾಗಿದೆ. ಈ ಮೇಳದಲ್ಲಿ ಭಾಗವಹಿಸಲು 100 ಕ್ಕೂ ಹೆಚ್ಚಿನ ರೈತರು ನೇರವಾಗಿ ನೊಂದಾಯಿಸಿರುತ್ತಾರೆ. ರೈತರಿಗಾಗಿ ಉಚಿತವಾಗಿ 30 ಕ್ಕೂ ಹೆಚ್ಚಿನ ಸ್ಟಾಲ್‌ಗಳನ್ನು ನಿರ್ಮಿಸಿ ಕೊಡಲಾಗಿದೆ ಮತ್ತು ಪ್ರದರ್ಶನದಲ್ಲಿ 100 ಕ್ಕೂ ಹೆಚ್ಚಿನ ದೇಶಿ ಮತ್ತು ವಿದೇಶಿ ಮಾವಿನ ತಳಿಗಳನ್ನು ಸುಸಜ್ಜಿತವಾಗಿ ಪ್ರದರ್ಶನದಲ್ಲಿ ಇಡಲಾಗಿದೆ. 10 ಕ್ಕೂ ಹೆಚ್ಚಿನ ತೋಟಗಾರಿಕೆ ರೈತ ಉತ್ಪಾದಕ ಕಂಪನಿಗಳಲ್ಲದೇ ಜಿಲ್ಲಾ ಹಾಪಕಾಮ್ಸ್ ಸಂಸ್ಥೆಗಳಿಗೆ ಮಾವಿನ ಹಣ್ಣು ಮಾರಲು ಸ್ಟಾಲ್‌ಗಳ ವ್ಯವಸ್ಥೆ ಮಾಡಲಾಗಿದೆ. ರೈತ ಉತ್ಪಾದಕ ಕಂಪನಿಗಳು ಹಾಗೂ ಜಿಲ್ಲಾ ಹಾಪಕಾಮ್ಸ್ ಕೊಪ್ಪಳ ನೂರಾರು ಸದಸ್ಯ ರೈತರಿಂದ ಮಾವಿನ ಹಣ್ಣುಗಳನ್ನು ಖರೀದಿಸಿ ಈ ಮೇಳದಲ್ಲಿ ಮಾರಾಟ ಮಾಡುವುದರಿಂದ ಈ ಮೇಳದಲ್ಲಿ ನೇರವಾಗಿ ಭಾಗವಹಿಸದ ರೈತರಿಗೂ ಅನುಕೂಲವಾಗಿ ಯೋಗ್ಯ ಬೆಲೆ ಸಿಗುವಂತಾಗಿದೆ.
ಮಾವು ಬಳಕೆ ತರಬೇತಿ
ಈ ಮೇಳದಲ್ಲಿ ಮಾವಿನ ಹಣ್ಣುಗಳನ್ನು ನೈಸರ್ಗಿಕವಾಗಿ ಹಾಗೂ ವೈಜ್ಞಾನಿಕವಾಗಿ ಮಾಗಿಸುವ ಕುರಿತು ಭಾರತೀಯ ತೋಟಗಾರಿಕೆ ಸಂಶೋದನಾ ಸಂಸ್ಥೆ (IIHR ), ಹೇಸರಘಟ್ಟ, ಬೆಂಗಳೂರು ರವರು ಅಭಿವೃದ್ಧಿಪಡಿಸಿರುವ ಹಣ್ಣು ಮಾಗಿಸುವ ಘಟಕಗಳನ್ನು ರೈತರಿಗೆ ಇಲಾಖೆಯು ಸಹಾಯಧನದ ಮೂಲಕ ಮಾವು ಬೆಳೆಯುವ ರೈತರಿಗೆ ನೀಡಲಾಗಿದೆ. ನೈಸರ್ಗಿಕವಾಗಿ ಹಣ್ಣುಗಳನ್ನು ಮಾಗಿಸಲು"ಎನ್-ರೈಪ್ (en-ripe) ”ಎಂಬ ನೈಸರ್ಗಿಕವಾಗಿ ಹಣ್ಣು ಮಾಗಿಸುವ ಪಂಚ್ ಹೋಲ್ ಪೌಚ್ ಗಳನ್ನು ರೈತರಿಗೆ ಪರಿಚಯಿಸಲಾಗುತ್ತಿದೆ. ಈ ಪೌಚ್‌ನ್ನು ಹೋಲ್ ಮಾಡಿ 10 ಕೆ.ಜಿ. ಮಾವಿನ ಕಾಯಿಯ ಕೆಳಗಡೆ ಇಟ್ಟಾಗ 48 ಗಟೆಗಳಲ್ಲಿ ಗುಣಮಟ್ಟದ ಆರೋಗ್ಯಕರ ಮಾವಿನ ಕಾಯಿಗಳು ಒಂದೇ ರೀತಿಯ ಬಣ್ಣ ಹೊಂದಿ ಹಣ್ಣಾಗುತ್ತವೆ. ಇದು ನೈಸರ್ಗಿಕವಾದ ಇಥಲಿನ್ ಹೊಂದಿರುತ್ತದೆ. ಈ ಪೌಚ್ ಗೆ ರೈತರಿಂದ ಸಾಕಷ್ಟು ಬೇಡಿಕೆ ವ್ಯಕ್ತವಾಗುತ್ತಿದೆ.
ಈ ಮೇಳದಲ್ಲಿ ಮಾವು ಬೆಳೆಯಲು ಆಸಕ್ತಿ ಹೊಂದಿದ ರೈತರಿಗೆ ಮಾವನ್ನು ಬೆಳೆಯುವ ಬಗ್ಗೆ ಹೊಸ ತಂತ್ರಜ್ಞಾನಗಳು ಹಾಗೂ ಮಾರುಕಟ್ಟೆ, ಗುಣಮಟ್ಟದ ಮಾವು ಮತ್ತು ಇಳುವರಿ ಹೇಗೆ ತೆಗೆಯಬೇಕೆಂಬುವುದರ ಬಗ್ಗೆಯು ತಿಳಿಸಿಕೊಡಲಾಗುತ್ತಿದೆ. ಸಾವಯವ ಪದ್ಧತಿಯಲ್ಲಿ ಮಾವು ಬೆಳೆಯುವ ಬಗ್ಗೆ ಹಾಗೂ ವಿವಿಧ ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡುವ ಕುರಿತು ಮಾಹಿತಿಯನ್ನು ಸಹ ನೀಡಲಾಗುತ್ತಿದೆ.
ಇದರಿಂದ ಕೊಪ್ಪಳ ಕೇಸರ್ ಮಾವು ಹೆಚ್ಚು ಜನಪ್ರಿಯವಾಗಿದೆ. ಅಲ್ಲದೇ ಸಾರ್ವಜನಿಕರು ಬಾಕ್ಸ್ಗಳನ್ನು ಮೆಚ್ಚಿಕೊಂಡಿರುತ್ತಾರೆ. ಹಾಗೂ ಈ ಬಾಕ್ಸ್ಗಳನ್ನು ರೈತರಿಗೆ ಆರ್.ಕೆ.ವಿ.ವಾಯ್.ಯೋಜನೆಯಡಿ ಸಹಾಯಧನದ ರೂಪದಲ್ಲಿ ನೀಡಲಾಗುತ್ತಿದೆ.
ಇದಲ್ಲದೇ ಮಾವಿನ ಹಣ್ಣುಗಳಲ್ಲಿ ಲಭ್ಯವಿರುವ ಪೋಷಕಾಂಶಗಳು, ಖನಿಜಗಳು ಮತ್ತು ಅವುಗಳ ಆರೋಗ್ಯದ ಬಗ್ಗೆ ಮಹತ್ವ ತಿಳಿಸುವ ಬ್ಯಾನರ್‌ಗಳನ್ನು ಪ್ರದರ್ಶಿಸಲಾಗುತ್ತಿದ್ದು, ಗ್ರಾಹಕರಿಗೆ ಇದೊಂದು ವಿಶಿಷ್ಟ ಅನುಭವ ನೀಡಬಲ್ಲದಾಗಿದೆ. ಈ ಮೇಳದಲ್ಲಿ ಮಕ್ಕಳು ಮತ್ತು ಸಾರ್ವಜನಿಕರಿಗೆ ಆಕರ್ಷಕ ಸೆಲ್ಪಿ ಪಾಯಿಂಟ್ ನಿರ್ಮಿಸಲಾಗಿದೆ. ಈ ಸೆಲ್ಸಿ ಪಾಯಿಂಟ್ ಮಾವಿನ ಮಾದರಿ ಹೊಂದಿದ್ದು ಅತ್ಯಾಕರ್ಷಣೆವಾಗಿ ಜನರನ್ನು ಆಕರ್ಷಿಸುತ್ತಿದೆ.
ದುಬಾರಿ ಮಾವು
ಹೆಚ್ಚು ಮಾವು ಬೆಳೆದ ರೈತರಿಗೆ ಮಾರ್ಕೆಟಿಂಗ್ ಆಗಬೇಕೆಂದು ತೋಟಗಾರಿಕೆ ಇಲಾಖೆ ಕೊಪ್ಪಳ ವತಿಯಿಂದ ಕೊಪ್ಪಳ ಮಾವು ಮೇಳ ಕಾರ್ಯಕ್ರಮವನ್ನು ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ. ಮಾವಿನ ಹಣ್ಣುಗಳನ್ನು ಬೆಳೆದ ರೈತರಿಗೆ ಸರಿಯಾದ ಬೆಲೆ ಸಿಗಬೇಕು ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಮಳೆಯಾಗಿರುವುದರಿಂದ ಮಾವಿನ ಬೆಲೆ ಸ್ವಲ್ಪ ಕಡಿಮೆಯಾಗಿದೆ ಎಂದರು. ಈ ಮೇಳದಲ್ಲಿ ಒಂದು ಕೆ. ಜಿ ಮೀಯಾಜಾಕಿ ಹಣ್ಣಿನ ಬೆಲೆ 2. 50 ಲಕ್ಷ ಇರುವ ಹಣ್ಣನ್ನು ಪ್ರದರ್ಶನಕ್ಕೆ ಇಟ್ಟಿರುವುದು ಮೇಳದ ಮತ್ತೊಂದ ವಿಶೇಷತೆಯಾಗಿದೆ ಇಂತಹ ಹಣ್ಣುಗಳನ್ನು ನಮ್ಮ ಭಾಗದಲ್ಲಿ ರೈತರು ಬೆಳೆಯುವಂತಾಗಬೇಕೆಂಬುದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ನುಡಿ.
ವೈಜ್ಞಾನಿಕವಾಗಿ ಹಣ್ಣುಗಳನ್ನು ಯಾವ ರೀತಿ ಮಾಗಿಸಬೇಕೆಂಬುವುದಕ್ಕೆ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಮಾಹಿತಿ ನೀಡಲಾಗುತ್ತಿದೆ. ನೈಸರ್ಗಿಕವಾಗಿ ಹಣ್ಣು ಮಾಡುವ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ. ಕೊಪ್ಪಳ ಜಿಲ್ಲೆಯ 6 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಈ ಮೇಳದಲ್ಲಿ ನಮ್ಮ ಜಿಲ್ಲೆಯ 10 ರಿಂದ 12 ತಳಿಯ ಮಾವಿನ ಹಣ್ಣುಗಳು ಮಾರಾಟಕ್ಕಿಡಲಾಗಿದ್ದು, ಕೊಪ್ಪಳ ಕೇಸರ್ ಮಾವಿನ ಹಣ್ಣಿಗೆ ಬೇಡಿಕೆ ಹೆಚ್ಚಿದೆ. ಮೇಳದಲ್ಲಿ ಉಪ್ಪಿನ ಕಾಯಿ ಮಾರಟಕ್ಕೂ ರೈತರು ಮುಂದೆ ಬಂದಿದ್ದಾರೆ ಹಾಗೂ ಇತರೆ ಮಾವಿನ ಉತ್ಪನ್ನಗಳನ್ನು ಸಹ ಪ್ರದರ್ಶನ ಮತ್ತು ಮಾರಾಟಕ್ಕಿವೆ ಎಂದು ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಸಿ. ಉಕ್ಕುಂದ ಹೇಳುತ್ತಾರೆ.