Tunga Bhadra Reservoir: ಹವಾಮಾನ ಮುನ್ಸೂಚನೆಯಂತೆ ತುಂಗಭದ್ರಾ ಜಲಾಶಯ ತುಂಬುವ ನಿರೀಕ್ಷೆ; ಗೇಟ್ ವೀಕ್ಷಿಸಿ ಸಿದ್ದರಾಮಯ್ಯ ಹೇಳಿದ್ದೇನು?
Koppal News ತುಂಗಭದ್ರಾ ಜಲಾಶಯದ ಸ್ಥಿತಿಯನ್ನು ಪರಿಶೀಲಿಸಿದ ಸಿಎಂ ಸಿದ್ದರಾಮಯ್ಯ ಬೇಗನೇ ಜಲಾಶಯ ತುಂಬಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ 105 ಟಿಎಂಸಿ ನೀರು ತುಂಬಿತ್ತು. ಆದರೆ ತುಂಡಾಗಿರುವ ಗೇಟ್ ನ ದುರಸ್ತಿಗಾಗಿ 50 ರಿಂದ 60 ಟಿಎಂಸಿ ನೀರು ಹೊರಗೆ ಬಿಡಬೇಕಾಗಿದೆ. ಈ ವರ್ಷದ ಅಕ್ಟೋಬರ್ ವರೆಗೆ ಮಳೆಯಾಗಲಿದ್ದು, ಜಲಾಶಯದಲ್ಲಿ ಪುನ: ನೀರು ತುಂಬುವ ಸಾಧ್ಯತೆಯಿದೆ. ಹವಾಮಾನ ಮುನ್ಸೂಚನೆಯಂತೆ ಆಗಸ್ಟ್ 15 ರ ನಂತರ ಪುನ: ಮಳೆಬರುವ ನಿರೀಕ್ಷೆಯಿದೆ. ಆದ್ದರಿಂದ ಈಗ ಪೋಲಾಗಿರುವ ನೀರು ಮತ್ತೊಮ್ಮೆ ಜಲಾಶಯದಲ್ಲಿ ತುಂಬಲಿದ್ದು, ರೈತರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ.
ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಸ್ಪಷ್ಟನೆ. ಮೂರು ದಿನದ ಹಿಂದೆ ತುಂಗಭದ್ರಾ ಜಲಾಶಯದಲ್ಲಿ ಗೇಟ್ ತುಂಡಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ ಹೊಸಪೇಟೆ ಸಮೀಪ ಇರುವ ತುಂಗಭದ್ರಾ ಜಲಾಶಯಕ್ಕೆ ಅವರು ಭೇಟಿ ನೀಡಿದ್ದರು. ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದರು.
ಯಾರನ್ನೂ ದೂಷಿಸೋಲ್ಲ
ಹವಾಮಾನ ಮುನ್ಸೂಚನೆಯಂತೆ ತುಂಗಭದ್ರಾ ಜಲಾಶಯದಿಂದ ಪೋಲಾಗಿರುವ ನೀರು ಮತ್ತೆ ತುಂಬಿಕೊಳ್ಳಲಿದ್ದು, ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದುಸಿದ್ದರಾಮಯ್ಯ ತಿಳಿಸಿದರು.
ತುಂಗಭದ್ರಾ ಜಲಾಶಯದ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪ ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ,ಬಿಜೆಪಿಯವರು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದರೆ ಇದು ರಾಜಕೀಯ ಮಾಡುವ ವಿಷಯವಲ್ಲ. ತುಂಗಭದ್ರಾ ಮಂಡಳಿಯ ನೇತೃತ್ವವನ್ನು ಭಾರತ ಸರ್ಕಾರ ನೇಮಿಸಿದ ಅಧ್ಯಕ್ಷರು ನಿರ್ವಹಿಸುತ್ತಾರೆ. ಆಂಧ್ರ, ಕರ್ನಾಟಕ, ತೆಲಂಗಾಣ ರಾಜ್ಯದ ಸದಸ್ಯರು ಮಂಡಳಿಯಲ್ಲಿರುತ್ತಾರೆ.. ಈ ಜಲಾಶಯದ ನಿರ್ವಹಣೆಯ ಜವಾಬ್ದಾರಿ ತುಂಗಭದ್ರಾ ಮಂಡಳಿಗೆ ಸೇರಿರುತ್ತದೆ. ಆದರೆ ಈ ವಿಷಯದಲ್ಲಿ ನಾನು ಯಾರನ್ನೂ ದೂಷಿಸುವುದಿಲ್ಲ ಎಂದರು.
ತುಂಗಭದ್ರಾ ಜಲಾಶಯದ ನೀರನ್ನು ಗೇಟ್ ಗಳ ಮೂಲಕ ಬಿಡಲಾಗುತ್ತಿತ್ತು. ನೀರಿನ ಹರಿವನ್ನು ತಡೆಯುವಂತಹ ಗೇಟ್ ಗಳಲ್ಲಿ19ನೇ ಗೇಟ್ ತುಂಡಾಗಿದೆ. ಜಲಾಶಯ ಗೇಟ್ ಗಳ ನಿರ್ಮಾಣ ತಜ್ಞ ಹಾಗೂ ಸುರಕ್ಷತೆ ತಜ್ಞ ಎಂಜಿನಿಯರ್ ಕನ್ನಯ್ಯ ನಾಯ್ಡು ಅವರ ಜೊತೆ ಚರ್ಚಿಸಿದ್ದೀನಿ. ಅವರಿಂದ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗಿದೆ. ತುಂಗಭದ್ರಾ ಜಲಾಶಯದ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿ ತುಂಗಭದ್ರಾ ಜಲಶಾಯ ಮಂಡಳಿಯದಾಗಿದ್ದು, ಭಾರತ ಸರ್ಕಾರ ನೇಮಿಸಿದ ಅಧ್ಯಕ್ಷರು, ಕೇಂದ್ರ ಜಲ ಆಯೋಗ, ಆಂಧ್ರ, ತೆಲಂಗಾಣ ಮತ್ತು ಕರ್ನಾಟಕದ ಸದಸ್ಯರು ಮಂಡಳಿಯಲ್ಲಿರುತ್ತಾರೆ. ಈ ಜಲಾಶಯದ ನಿರ್ಮಾಣ ದೇಶಕ್ಕೆ ಸ್ವಾತಂತ್ರ್ಯ ಬಂದ ಮರು ವರ್ಷವೇ ಕೈಗೆತ್ತಿಕೊಂಡು 1948 ರಲ್ಲಿ ಪ್ರಾರಂಭವಾಗಿ 1953 ರಲ್ಲಿ ಪೂರ್ಣಗೊಂಡು, 1954 ರಿಂದ ಜಲಾಶಯದಿಂದ ನಾಲೆಗಳಿಗೆ ನೀರು ಬಿಡಲು ಪ್ರಾರಂಭಿಸಲಾಯಿತು. ಸುಮಾರು 70 ವರ್ಷಗಳಷ್ಟು ಹಳೆಯದಾದ ಡ್ಯಾಂನಲ್ಲಿ ಇಲ್ಲಿನವರೆಗೆ ಯಾವುದೇ ಗೇಟ್ ನ ಚೈನ್ ತುಂಡಾಗಿರಲಿಲ್ಲ ಎಂದು ವಿವರಿಸಿದರು.
ತಜ್ಞರ ಸಲಹೆ ಮೇರೆಗೆ ದುರಸ್ತಿ ಕಾರ್ಯ
ಜಲಾಶಯದಲ್ಲಿ ಈ ವರ್ಷ 115 ಟಿಎಂಸಿ ನೀರಿದ್ದು, ಈಗಾಗಲೇ 25 ಟಿಎಂಸಿ ನೀರನ್ನು ರೈತರ ಜಮೀನಿಗೆ ಬಿಡಲಾಗಿದೆ. ರೈತರ ಮೊದಲನೇ ಬೆಳೆಗೆ 90 ಟಿಎಂಸಿ ನೀರು ಬೇಕಾಗಿದ್ದು, ಈ ಪ್ರಮಾಣದ ನೀರು ಜಲಾಶಯದಲ್ಲಿ ಲಭ್ಯವಿದೆ. ಆದರೆ ಜಲಾಶಯದ 19 ನೇ ಗೇಟ್ ತುಂಡಾಗಿರುವುದರಿಂದ 35 ಸಾವಿರ ಕ್ಯೂಸೆಕ್ ನೀರು ಹೋಗುತ್ತಿದೆ. ಜಲಾಶಯದ ನೀರನ್ನು ಬಿಡದೇ ದುರಸ್ತಿ ಕಾರ್ಯವನ್ನು ಕೈಗೊಳ್ಳಲು ಸಾಧ್ಯವಿಲ್ಲ. ನೀರಿನ ಮಟ್ಟವನ್ನು ಕಡಿಮೆ ಮಾಡಲಾಗುತ್ತಿದ್ದು, ನಂತರವೂ 64 ಟಿಎಂಸಿ ನೀರು ಉಳಿಯುತ್ತದೆ. ಗೇಟ್ ನ ದುರಸ್ತಿ ಕಾರ್ಯಕ್ಕೆ ಕನಿಷ್ಟ 4 ರಿಂದ 5 ದಿನಗಳು ಬೇಕಾಗುತ್ತವೆ. ಹಿಂದುಸ್ಥಾನ್ ಇಂಜಿನಿಯರಿಂಗ್ಸ್ ಹಾಗೂ ನಾರಾಯಣ ಇಂಜಿನಿಯರಿಂಗ್ಸ್ ಅವರಿಗೆ ಹೊಸ ಗೇಟ್ ತಯಾರಿ ಹೊಣೆ ವಹಿಸಲಾಗಿದ್ದು, ಕನ್ನಯ್ಯ ನಾಯ್ಡು ಅವರ ಸಲಹೆ ಮೇರೆಗೆ ದುರಸ್ತಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು.
ಆಗಸ್ಟ್ 17 ರಿಂದ ರಾಜ್ಯದಲ್ಲಿ ಹೆಚ್ಚಿನ ಮಳೆ ನಿರೀಕ್ಷೆ
ಕರ್ನಾಟಕದಲ್ಲಿ ಸುಮಾರು 9 ಲಕ್ಷ ಹಾಗೂ ಆಂಧ್ರ ತೆಲಂಗಾಣಗಳಲ್ಲಿ ಸುಮಾರು 3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾಕಿರುವ ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಅದಲ್ಲದೇ, ಆಗಸ್ಟ್ 17 ರಿಂದ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಬರುವ ನಿರೀಕ್ಷೆ ಇದೆ ಎಂದರು.
ಘಟನೆ ಬಗ್ಗೆ ವಿಶ್ಲೇಷಣೆ ಅಗತ್ಯ
ಕೆಲವರ್ಷಗಳಿಂದ ಜಲಾಶಯದ ದುರಸ್ತಿಯಿಂದಾಗಿ ನೀರು ಪೋಲಾಗುತ್ತಿರುವ ಬಗ್ಗೆ ಪ್ರಶ್ನಿಸಿದ ಮಾಧ್ಯಮದರಿಗೆ ಉತ್ತರಿಸಿದ ಮುಖ್ಯಮಂತ್ರಿಗಳು, 2019 ಜಲಾಶಯದ ನೀರು ಬಿಡುವ ಕಾಲುವೆಗಳಲ್ಲಿ ಸಮಸ್ಯೆ ಆಗಿತ್ತೇ ಹೊರತು, ಜಲಾಶಯದ ಗೇಟ್ ಗಳಲ್ಲಿ ಯಾವುದೇ ಸಮಸ್ಯೆ ಆಗಿರಲಿಲ್ಲ . 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗೇಟ್ ನ ಸರಪಳಿ ತುಂಡಾಗಿರುವ ಘಟನೆ ನಡೆದಿದೆ. ತಜ್ಞರ ಸಲಹೆಯಂತೆ 50 ವರ್ಷಗಳಿಗೊಮ್ಮೆ ಗೇಟ್ ಹಾಗೂ ಸರಪಳಿಗಳನ್ನು ಬದಲಾಯಿಸಬೇಕಾಗಿದ್ದು, ಇನ್ನು ಮುಂದೆ ತಜ್ಞರ ಸಲಹೆಯಂತೆ ತುಂಗಭದ್ರಾ ಮಂಡಳಿ ಹಾಗೂ ಸಂಬಂಧಪಟ್ಟ ಸರ್ಕಾರಗಳು ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
ನವಲಿ ಜಲಾಶಯ: ಒಪ್ಪಿಗೆ ನಂತರ ಕಾಮಗಾರಿ ಪ್ರಾರಂಭ
ನವಲಿ ಜಲಾಶಯ ನಿರ್ಮಾಣಕ್ಕೆ15 ಸಾವಿರ ಕೋಟಿ ರೂ.ಗಳ ಡಿಪಿಆರ್ ತಯಾರಾಗಿದ್ದು, ಇದು ಅಂತರರಾಜ್ಯ ಯೋಜನೆಯಾಗಿದೆ. ಡಿಪಿಆರ್ ಗೆ ಒಪ್ಪಿಗೆ ದೊರೆತ ನಂತರ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.
ತುಂಗಭದ್ರಾ ಜಲಾಶಯ ಮತ್ತೆ ತುಂಬುವ ವಿಶ್ವಾಸವಿದ್ದು, ಬಾಗಿನ ಅರ್ಪಿಸಲು ನಾನು ಮತ್ತೊಮ್ಮೆ ಆಗಮಿಸುವುದಾಗಿ ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ತಿಳಿಸಿದರು.
ನಾನು ರೈತರ ಪರ: ಬೆಳೆಗಳಿಗೆ ತೊಂದರೆ ಆಗಲು ಬಿಡಲ್ಲ
ನಮ್ಮ ರೈತರು ಬೇರೆಯಲ್ಲ, ನಿಮ್ಮ ರಾಜ್ಯದ ರೈತರು ಬೇರೆಯಲ್ಲ. ರೈತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಥಳದಲ್ಲಿ ಉಪಸ್ಥಿತರಿದ್ದ ಆಂಧ್ರ, ತೆಲಂಗಾಣ ರಾಜ್ಯಗಳ ಕೃಷಿ ಸಚಿವರಿಗೆ ಸಿಎಂ ಭರವಸೆ ನೀಡಿದರು.
ವಿವರ ಒದಗಿಸಿದ ತಜ್ಞರು
ಈಗಾಗಲೇ ನಾನಾ ಭಾಗಗಳಿಂದ ಆಗಮಿಸಿ ತುಂಗಭದ್ರಾ ಜಲಾಶಯ ಪ್ರದೇಶದಲ್ಲಿಯೇ ಬೇಟು ಬಿಟ್ಟಿರುವ ತಜ್ಞರು ಈಗಾಗಲೇ ಜಲಾಶಯದ ಗೇಟ್ ದುರಸ್ಥಿಗೆ ತುರ್ತು ಕ್ರಮ ಕೈಗೊಂಡಿದ್ದಾರೆ. ನೀರು ಹೋಗುತ್ತಿರುವ ನಡುವೆಯೇ ಹಾಳಾಗಿರುವ ಗೇಟ್ ಅನ್ನು ದುರಸ್ಥಿಗೆ ಮುಂದಾಗಿದ್ದಾರೆ. ಈಗಾಗಲೇ ಕೆಲಸವೂ ಚುರುಕಿನಿಂದ ನಡೆದಿದೆ.
ಇದೆಲ್ಲವನ್ನೂ ಸಿಎಂ ಸಿದ್ದರಾಮಯ್ಯ ಅವರು ವೀಕ್ಷಿಸಿದರು. ಗೇಟ್ ಹಾಳಾಗಿರುವ ಸ್ಥಳ, ನೀರು ಹರಿದು ಹೋಗುತ್ತಿರುವುದು, ಕೆಲಸ ನಡೆದಿರುವುದೂ ಸೇರಿದಂತೆ ಎಲ್ಲವನ್ನೂ ಖುದ್ಧಾಗಿ ಗಮನಿಸಿ ಮಾಹಿತಿಯನ್ನು ಪಡೆದುಕೊಂಡರು.
ಕ್ರಸ್ಟ್ ಗೇಟ್ ಹಾಳಾಗಿರುವುದನ್ನು ದುರಸ್ಥಿ ಮಾಡುವ ಕಾರ್ಯ ಸಾಗಿದೆ. ಆದಷ್ಟು ಬೇಗನೇ ಇದನ್ನು ಸರಿಪಡಿಸುತ್ತೇವೆ. ಮುಂದೆ ಈ ರೀತಿ ಆಗದಂತೆ ಮುನ್ನೆಚ್ಚರಿಕೆಯನ್ನೂ ವಹಿಸಲಾಗುತ್ತದೆ. ಆತಂಕ ಪಡುವ ಅಗತ್ಯವಿಲ್ಲ. ನೀರು ಹರಿದು ಹೋಗುತ್ತಿರುವುದರಿಂದ ಮಾತ್ರ ನಷ್ಟ ಆಗಿದೆ. ಮಳೆ ಬಂದರೆ ಅದೂ ಸರಿದೂಗಲಿದೆ ಎಂದು ತಜ್ಞರು ಸಿಎಂ ಅವರಿಗೆ ಮಾಹಿತಿ ಒದಗಿಸಿದರು.
ಸಚಿವರಾದ ಶಿವರಾಜತಂಗಡಗಿ, ಎಸ್.ಎನ್.ಬೋಸರಾಜು, ಶಾಸಕ ರಾಘವೇಂದ್ರ ಹಿಟ್ನಾಳ್, ಎಚ್‌ಆರ್ ಗವಿಯಪ್ಪ, ಸಂಸದರಾದ ತುಕಾರಾಂ, ರಾಜಶೇಖರ ಹಿಟ್ನಾಳ, ನೀರಾವರಿ ಇಲಾಖೆ ಅಪರ ಆಯುಕ್ತ ಗೌರವ್ ಗುಪ್ತ, ಕೊಪ್ಪಳ ಡಿಸಿ ನಳಿನ್ ಅತುಲ್ ಸಹಿತ ಹಲವರು ಈ ವೇಳೆ ಹಾಜರಿದ್ದರು.