Postal export center: ಅಂಚೆ ರಫ್ತು ಕೇಂದ್ರ ಮೂಲಕವೂ ಕೃಷಿ ಉತ್ಪನ್ನಗಳ ಸಾಗಣೆಗೆ ಅವಕಾಶ: ಕರ್ನಾಟಕದಲ್ಲಿ 73 ಕಡೆ ಸೇವೆ-koppal news farmers can send products from postal export centers 73 across karnataka north karnataka news in kannada kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Postal Export Center: ಅಂಚೆ ರಫ್ತು ಕೇಂದ್ರ ಮೂಲಕವೂ ಕೃಷಿ ಉತ್ಪನ್ನಗಳ ಸಾಗಣೆಗೆ ಅವಕಾಶ: ಕರ್ನಾಟಕದಲ್ಲಿ 73 ಕಡೆ ಸೇವೆ

Postal export center: ಅಂಚೆ ರಫ್ತು ಕೇಂದ್ರ ಮೂಲಕವೂ ಕೃಷಿ ಉತ್ಪನ್ನಗಳ ಸಾಗಣೆಗೆ ಅವಕಾಶ: ಕರ್ನಾಟಕದಲ್ಲಿ 73 ಕಡೆ ಸೇವೆ

Postal export center ರೈತರು ಅಂಚೆ ಕಚೇರಿಗಳ ಮೂಲಕವೂ ಮಾವು ಸೇರಿದಂತೆ ತಮ್ಮೆಲ್ಲಾ ಉತ್ಪನ್ನಗಳನ್ನು ಸಾಗಣೆ ಮಾಡಬಹುದು. ಇದಕ್ಕೆ ಅಂಚೆ ಇಲಾಖೆ ರಫ್ತು ಕೇಂದ್ರಗಳ ಮೂಲಕ ಸೇವೆ ನೀಡಲಿದೆ. ಕರ್ನಾಟಕದಲ್ಲೂ ಈ ಸೇವೆ ಶುರುವಾಗಿದೆ.

ಕೊಪ್ಪಳದಲ್ಲಿ ಡಾಕ್ ಘರ್ ನಿರ್ಯಾತ ಕೇಂದ್ರಕ್ಕೆ ಚಾಲನೆ ನೀಡಿದ ಸಂಸದ ಸಂಗಣ್ಣ ಕರಡಿ.
ಕೊಪ್ಪಳದಲ್ಲಿ ಡಾಕ್ ಘರ್ ನಿರ್ಯಾತ ಕೇಂದ್ರಕ್ಕೆ ಚಾಲನೆ ನೀಡಿದ ಸಂಸದ ಸಂಗಣ್ಣ ಕರಡಿ.

ಹುಬ್ಬಳ್ಳಿ: ಕರ್ನಾಟಕದ ಭಾಗದ ರೈತರು ಅಂಚೆ ಮೂಲಕವೂ ಮಾವು ಸಹಿತ ಇತರೆ ಫಸಲುಗಳನ್ನು ಇತರೆ ಭಾಗಗಳಿಗೆ ಕಳುಹಿಸಬಹುದು. ಅದರಲ್ಲೂ ಕೊಪ್ಪಳ ಭಾಗದ ಕೇಸರ ಮಾವು ಸರಬರಾಜಿಗೆ ಅಂಚೆ ಸೇವೆ ನೀಡಲಿದೆ.

ಗುಜರಾತಿನ ಕೇಸರ ಮಾವು ಜೂನ್ ಮಾಹೆಯಲ್ಲಿ ಬರಲಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಏಪ್ರೀಲ್ ಮಾಹೆಯಿಂದಲೆ ಕೇಸರ ಹಣ್ಣು ಪ್ರಾರಂಭವಾಗಲಿದೆ. ದೇಶದಲ್ಲಿ ಈ ಹಣ್ಣಿಗೆ ಸಾಕಷ್ಟು ಬೇಡಿಕೆ ಇದ್ದು, ಅಂಚೆ ಕಚೇರಿ ರಫ್ತು ಕೇಂದ್ರಗಳ ಮೂಲಕ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಪ್ಪಳ ಕೇಸರ ಮಾವು ಪೂರೈಕೆ ಮಾಡಲು ಸ್ಥಳೀಯ ರೈತರಿಗೆ ಸುವರ್ಣವಕಾಶವಾಗಿದೆ.

ಅಂಚೆ ಕಚೇರಿ ರಫ್ತು ಕೇಂದ್ರದಿಂದ ಸಣ್ಣ ಹಿಡುವಳಿದಾರರಿಗೆ, ರೇಷ್ಮೆ ಕೃಷಿ, ಸಿರಿಧಾನ್ಯಗಳ ರಫ್ತಿಗೆ ಸೇರಿದಂತೆ ಎಲ್ಲ ರೈತರಿಗೂ ಅನುಕೂಲವಾಗಲಿದೆ. ಇದರಿಂದಾಗಿ ರೈತರು ತಮ್ಮ ಬದುಕನ್ನು ಕಟ್ಟಿಕೊಳ್ಳಬಲ್ಲರು. ರೈತರು ಸಹ ದೇಶದ ಆರ್ಥಿಕತೆಯನ್ನು ಹೆಚ್ಚಿಸಬಲ್ಲರು ಎಂಬ ಪರಿಕಲ್ಪನೆ ಮೂಡಿಸುವುದರ ಜೊತೆಗೆ ಆತ್ಮವಿಶ್ವಾಸ ಮೂಡಿಸುವ ಕೆಲಸ ಈ ರಫ್ತು ಕೇಂದ್ರಗಳಿಂದ ಆಗಲಿದೆ.

ಡಾಕ್‌ಘರ್‌ ಸೇವೆ

ಭಾರತೀಯ ಅಂಚೆ ಇಲಾಖೆಯು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಉತ್ಪನ್ನಗಳನ್ನು ಮಧ್ಯವರ್ತಿಗಳಿಲ್ಲದೆ ನೇರವಾಗಿ ವಿದೇಶಿ ಮಾರುಕಟ್ಟೆಗೆ ಸಾಗಿಸಲು ಡಾಕ್ ಘರ್ ನಿರ್ಯಾತ ಕೇಂದ್ರಗಳನ್ನು ರಾಜ್ಯದ 73 ಅಂಚೆ ಕಚೇರಿಗಳಲ್ಲಿ ಪ್ರಾರಂಭಿಸಲಾಗಿದೆ.

ಕೊಪ್ಪಳ ಜಿಲ್ಲೆಯ ಪ್ರಧಾನ ಅಂಚೆ ಕಚೇರಿಯಲ್ಲಿ ಆ.21ರಿಂದ ಅಂಚೆ ಕಚೇರಿ ರಫ್ತು ಕೇಂದ್ರದ (ಡಾಕ್ ಘರ್ ನಿರ್ಯಾತ ಕೇಂದ್ರ) ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಾಗಿದೆ. ರಾಜ್ಯದ ಕುಶಲ-ಕರ್ಮಿಗಳು ಸಣ್ಣ ಕೈಗಾರಿಕೆಗಳು ಹಾಗೂ ಜಿಲ್ಲೆಯ ಕೈಗಾರಿಕೆ ಉದ್ಯಮಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಇ-ಕಾಮರ್ಸ್ ಉತ್ತೇಜಿಸಲು ಕ್ರಮ

ಅಂಚೆ ಕಚೇರಿಗಳ ಮೂಲಕ ಇ-ಕಾಮರ್ಸ್ ಅನ್ನು ಉತ್ತೇಜಿಸಲು, ಅಂಚೆ ಇಲಾಖೆಯು ದಕ್ ಘರ್ ನಿರ್ಯತ್ ಕೇಂದ್ರಗಳನ್ನು (ಡಿಎನ್‌ಕೆ) ಸುಲಭವಾಗಿ ಬುಕಿಂಗ್ ಮತ್ತು ಪ್ರಸರಣ, ರಫ್ತು ಅಂಚೆ ಬಿಲ್‌ನ ಎಲೆಕ್ಟ್ರಾನಿಕ್ ಫೈಲಿಂಗ್ ಮತ್ತು ಕಸ್ಟಮ್ಸ್ ಕ್ಲಿಯರೆನ್ಸ್ ಅನ್ನು ಸ್ಥಾಪಿಸಲು ಉಪಕ್ರಮವನ್ನು ಪ್ರಾರಂಭಿಸಿದೆ

ಕೊಪ್ಪಳ-ಸಿಂಧನೂರು ಆಯ್ಕೆ

ರಾಷ್ಟ್ರದಲ್ಲಿ 1001 ಅಂಚೆ ಕಚೇರಿ ರಫ್ತು ಕೇಂದ್ರಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸಲಾಗಿದ್ದು, ಇದರ ಭಾಗವಾಗಿ ಕರ್ನಾಟಕ ರಾಜ್ಯದಲ್ಲಿ 73 ಡಾಕ್ ಘರ್ ನಿರ್ಯಾತ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ. ಈ ಯೋಜನೆಯಡಿ ಕೊಪ್ಪಳ ಲೋಕಸಭಾ ಕ್ಷೇತ್ರದ ಕೊಪ್ಪಳ ಮತ್ತು ಸಿಂಧನೂರು ನಗರಗಳು ಒಳಗೊಂಡಿವೆ.

ತೋಟಗಾರಿಕೆ ಬೆಳೆ ರಫ್ತು

ಕೊಪ್ಪಳ ಜಿಲ್ಲೆಯಲ್ಲಿ ಸಾಕಷ್ಟು ಕೃಷಿ ಮತ್ತು ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಈ ಹಿಂದೆ ದಾಳಂಬರಿಯನ್ನು ಯುರೋಪ ದೇಶಕ್ಕೆ ರಫ್ತು ಮಾಡಿದ ಕೀರ್ತಿ ನಮ್ಮ ಕೊಪ್ಪಳ ಹಾಗೂ ಕುಷ್ಟಗಿಗಿದೆ. ಅದೇ ರೀತಿ ಕೊಪ್ಪಳ ಕೇಸರ ಮಾವಿಗೂ ಸಹ ಎಲ್ಲಿಲ್ಲದ ಬೇಡಿಕೆಯಿದೆ. ಇತ್ತೀಚೆಗೆ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಸಸ್ಯಸಂತೆಯಲ್ಲಿ ಈ ತಳಿಯ ಸುಮಾರು 70 ಸಾವಿರಕ್ಕೂ ಅಧಿಕ ಸಸಿಗಳು ಮಾರಾಟವಾಗಿರುವುದು ವಿಶೇಷ. ಗುಜರಾತ ನಂತರ ಕೊಪ್ಪಳ ಜಿಲ್ಲೆಯಲ್ಲಿಯೇ ಹೆಚ್ಚು ಕೇಸರ ಮಾವು ಬೆಳೆಯಲಾಗುತ್ತಿದೆ.

ಕೊಪ್ಪಳದಲ್ಲಿ ಚಾಲನೆ

ಡಾಕ್ ಘರ್ ನಿರ್ಯಾತ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದ ಸಂಗಣ್ಣ ಕರಡಿ, ರಾಜ್ಯದ ಕೃಷಿ ಮತ್ತು ತೋಟಗಾರಿಕಾ ಕ್ಷೇತ್ರಗಳಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಜಿಲ್ಲೆ ಕೊಪ್ಪಳ ಆಗಿದೆ. ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂಚೆ ಕಚೇರಿ ರಫ್ತು ಕೇಂದ್ರಗಳ ಮಾಹಿತಿಯನ್ನು ಎಲ್ಲ ರೈತರಿಗೆ, ಬೆಳೆಗಾರರಿಗೆ ಸಿಗುವಂತಾಗಬೇಕು. ಎರಡು ಮೂರು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗದಗ ಅಂಚೆ ವಿಭಾಗದ ಅಧೀಕ್ಷಕ ಎನ್.ಜಿ ಭಂಗೀಗೌಡರ್ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ರೈತರಾದ ದೇವೇಂದ್ರಪ್ಪ ಬಳೂಟಗಿ ಹಾಗೂ ಯಂಕಣ್ಣ ಯರಾಶಿ, ನಗರಸಭೆ ಸದಸ್ಯರಾದ ರಾಜಶೇಖರ ಆಡೂರ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ್, ಅಂಚೆ ಇಲಾಖೆಯ ಅಧಿಕಾರಿಗಳಾದ ಭೀಮಚಂದ್, ಜಿ.ಎನ್ ಹಳ್ಳಿ, ಬಸವರಾಜ ಸೇರಿದಂತೆ ರೈತರು, ಗಣ್ಯರು ಇದ್ದರು.

( ವರದಿ: ಪ್ರಹ್ಲಾದಗೌಡ ಬಿ.ಜಿ.)