Koppal News: ಅದ್ಧೂರಿಯಾಗಿ ನಡೆದ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ; ಮಹಾರಥೋತ್ಸವ ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು
ಕನ್ನಡ ಸುದ್ದಿ  /  ಕರ್ನಾಟಕ  /  Koppal News: ಅದ್ಧೂರಿಯಾಗಿ ನಡೆದ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ; ಮಹಾರಥೋತ್ಸವ ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು

Koppal News: ಅದ್ಧೂರಿಯಾಗಿ ನಡೆದ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ; ಮಹಾರಥೋತ್ಸವ ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು

Koppal Gavisiddeshwara Jatre: ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಅಜ್ಜನ ಜಾತ್ರೆ ಅದ್ಧೂರಿಯಾಗಿ ಜರುಗಿದೆ.

ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಸೇರಿರುವ ಭಕ್ತಸಾಗರ (ಫೋಟೊ ಕೃಪೆ ಕುಮಾರಸ್ವಾಮಿ ಮೂರ್ತಿ ಎಕ್ಸ್ ಖಾತೆ)
ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಸೇರಿರುವ ಭಕ್ತಸಾಗರ (ಫೋಟೊ ಕೃಪೆ ಕುಮಾರಸ್ವಾಮಿ ಮೂರ್ತಿ ಎಕ್ಸ್ ಖಾತೆ)

ಕೊಪ್ಪಳ: ದಕ್ಷಿಣ ಭಾರತದ ಕುಂಭ ಮೇಳ ಅಂತಲೇ ಖ್ಯಾತಿ ಪಡೆದಿರುವ ಕೊಪ್ಪಳದ ಗವಿಸಿದ್ದೇಶ್ವರ ಅಜ್ಜನ ಜಾತ್ರೆ (Koppal Gavisiddeshwara Jatre) ಅದ್ಧೂರಿಯಾಗಿ ನಡೆದಿದ್ದು, ಲಕ್ಷಾಂತರ ಮಂದಿ ಭಕ್ತರು ಅಜ್ಜನ ದರ್ಶನ ಪಡೆದು ಪುನೀತರಾಗಿದ್ದಾರೆ.

ರೊಟ್ಟಿ ಜಾತ್ರೆ ಎಂದು ಕರೆಯಲ್ಪಡುವ ಗವಿಸಿದ್ದೇಶ್ವರ ಜಾತ್ರೆಯನ್ನು ಗವಿಮಠದ ಮುಂಭಾಗದಲ್ಲಿರುವ ವಿಶಾಲವಾದ ಆವರಣದಲ್ಲಿ ನಿನ್ನೆ (ಜನವರಿ 27, ಶನಿವಾರ) ನಡೆಯಸಲಾಯಿತು. ಕಣ್ಣು ಹಾಯಿಸಿದಷ್ಟೂ ದೂರ ಭಕ್ತ ಸಾಗರವೇ ಕಾಣಿಸುತ್ತಿತ್ತು. ಪಲ್ಲಕ್ಕಿಯಲ್ಲಿ ಗವಿಸಿದ್ದೇಶ್ವರ ಅಜ್ಜನ ಮೂರ್ತಿಯನ್ನು ತಂದು ರಥದಲ್ಲಿ ಇಡಲಾಯಿತು. ಧಾರ್ಮಿಕ ವಿಧಿ ವಿಧಾನಗಳ ಬಳಿಕ ಮೈಸೂರಿನ ಸುತ್ತೂರು ದೇಶಿಕೇಂದ್ರದ ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಥ ಮುಂದೆ ಸಾಗುತ್ತಿದ್ದಂತೆ ಭಕ್ತರ ಹರ್ಷೋದ್ಗಾರಗಳು ಮುಗಿಲು ಮುಟ್ಟಿತ್ತು. ಗವಿಸಿದ್ದೇಶ್ವರ ಮಹಾರಾಜ್ ಕಿ ಜೈ ಎಂಬ ಘೋಷಣೆಗಳನ್ನು ಕೂಗಿ ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೆದ್ದರು. ಜಾತ್ರೆಯ ನಿಮಿತ್ತ ಗವಿಮಠದಲ್ಲಿ ಸಂಭ್ರಮ, ಸಡಗರ ಮನೆ ಮಾಡಿತ್ತು.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೇಂದ್ರ ಸಚಿವ ಭಗವಂತ ಖೂಬಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಸಂಸದ ಕರಣಿ ಸಂಗಣ್ಣ, ಶಾಸಕ ರಾಘವೇಂದ್ರ ಹಿಟ್ನಾಳ್ ಸೇರಿದಂತೆ ಹಲವು ಗಣ್ಯರು ಅಜ್ಜನ ಜಾತ್ರೆಯಲ್ಲಿ ಭಾಗವಹಿಸಿದ್ದರು.

ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ವಿವಿಧ ರಾಜಕೀಯ ಮುಖಂಡರು ಕೂಡ ಜಾತ್ರೆಗೆ ಸಾಕ್ಷಿಯಾದರು. ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಈ ಬಗ್ಗೆ ಫೋಟೊಗಳ ಸಹಿತ ಮಾಹಿತಿ ಹಂಚಿಕೊಂಡಿರುವ ಡಿಕೆ ಶಿವಕುಮಾರ್, ದಕ್ಷಿಣ ಭಾರತದ ಮಹಾ ಕುಂಭಮೇಳ ಎಂದೇ ಪ್ರಸಿದ್ಧವಾದ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಸಾಗರೋಪಾದಿಯಲ್ಲಿ ಸೇರಿದ್ದ ಭಕ್ತರೊಂದಿಗೆ ನಾನು ಪಾಲ್ಗೊಂಡು, ಸ್ವಾಮಿಯ ಪ್ರಸಾದ ಸೇವಿಸಿದೆ. ಹೊಟ್ಟೆ ಹಸಿದವರಿಗೆ ಅನ್ನ, ನೆತ್ತಿ ಹಸಿದವರಿಗೆ ವಿದ್ಯೆ ಹಾಗೂ ಆಧ್ಯಾತ್ಮದ ಹಸಿವಿರುವವರಿಗೆ ಬೋಧನೆ ನೀಡುವುದರ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯ ಮೂಲಕವೂ ಕೊಪ್ಪಳದ ಗವಿಮಠ ನಾಡಿನ‌ ಭಕ್ತರ ಹೃದಯದಲ್ಲಿ ಶ್ರದ್ಧಾಕೇಂದ್ರವಾಗಿ ಸ್ಥಾನ ಪಡೆದಿದೆ ಎಂದಿದ್ದಾರೆ.

ಜೈ ಗವಿಸಿದ್ದೇಶ್ವರ. ಕರ್ನಾಟಕದ ಸುಪ್ರಸಿದ್ಧ ಕ್ಷೇತ್ರ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಇಂದು ಪಾಲ್ಗೊಳ್ಳಲಾಯಿತು. ಲಕ್ಷಾಂತರ ಭಕ್ತರನ್ನು ಹೊಂದಿರುವ ಶ್ರೀಮಠದ ದಾಸೋಹಕ್ಕೆ ಭೇಟಿನೀಡಿ, ಇಷ್ಟು ಜನರಿಗೆ ಅಡುಗೆ ತಯಾರಿ ಕುರಿತು ವಿಕ್ಷಿಸಿ, ದಾಸೋಹದಲ್ಲಿ ಪಾಲ್ಗೊಂಡು ತದನಂತರ ಪ್ರಸಾದ ಸ್ವಿಕರಿಸಲಾಯಿತು ಎಂದು ಕೇಂದ್ರ ಭಗವಂತ ಖೂಬಾ ಬರೆದುಕೊಂಡಿದ್ದಾರೆ.

ಗವಿಸಿದ್ದೇಶ್ವರ ಜಾತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳ ಮುಖಂಡರು ಭಾಗವಹಿಸಿದ್ದರು. (This copy first appeared in Hindustan Times Kannada website. To read more like this please logon to kannada.hindustantime.com).

Whats_app_banner