ಆಂಜನೇಯನ ಭಕ್ತ ಕೊಪ್ಪಳದ ಪ್ರಕಾಶ ಶಿಲ್ಪಿ ಪರಿಶೀಲಿಸಿದ್ದ ಬಂಡೆಯಲ್ಲೇ ಅಯೋಧ್ಯೆ ಬಾಲರಾಮನ ವಿಗ್ರಹ ಕೆತ್ತನೆ
ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಗೆ ದಿನಗಣನೆ ಶುರುವಾಗಿದೆ. ಮೂವರು ಶಿಲ್ಪಿಗಳು 3 ಪ್ರತ್ಯೇಕ ಬಾಲರಾಮನ ಮೂರ್ತಿಗಳನ್ನು ಅಯೋಧ್ಯೆಯ ರಾಮಮಂದಿರ ಟ್ರಸ್ಟ್‌ಗೆ ಒಪ್ಪಿಸಿದ್ದಾರೆ. ಈ ಪೈಕಿ ಮೈಸೂರಿನ ಅರುಣ್ ಯೋಗಿರಾಜ್ ಅವರು ಕೆತ್ತನೆಗೆ ಬಳಸಿದ ಬಂಡೆಯನ್ನು ಕೊಪ್ಪಳದ ಪ್ರಕಾಶ ಶಿಲ್ಪಿ ಅವರು ಅವರ ಅಗತ್ಯಕ್ಕಾಗಿ ಮೊದಲೇ ಪರಿಶೀಲಿಸಿದ್ದರು!
ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮ ಮೂರ್ತಿಯನ್ನು ಸ್ಥಾಪಿಸಿ ಪ್ರಾಣ ಪ್ರತಿಷ್ಠೆಗೆ (ಜ.22) ದಿನಗಣನೆ ಶುರುವಾಗಿದೆ. ನಿತ್ಯವೂ ರಾಮನದ್ದೇ ಸುದ್ದಿ. ಅಯೋಧ್ಯೆ ರಾಮ ಮಂದಿರ ಉದ್ಘಾಟನೆ, ಬಾಲರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವು ದೇಶಾದ್ಯಂತ ಸಂಭ್ರಮದ ವಾತಾವರಣವನ್ನು ರೂಪಿಸತೊಡಗಿದೆ.
ಈ ನಡುವೆ, ಮೂವರು ಶಿಲ್ಪಿಗಳು ಬಾಲರಾಮನ ಮೂರ್ತಿಗಳನ್ನು ಕೆತ್ತನೆ ಮಾಡಿ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ಗೆ ಒಪ್ಪಿಸಿದ್ದಾರೆ. ಈ ಮೂರು ಮೂರ್ತಿಗಳ ಪೈಕಿ ಒಂದನ್ನು ರಾಮಮಂದಿರದ ಮುಖ್ಯ ಗರ್ಭಗುಡಿಯಲ್ಲಿ ಸ್ಥಾಪಿಸಿ, ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನೆರವೇರಿಸಲು ಟ್ರಸ್ಟ್ ಮುಂದಾಗಿದೆ.
ಕಾಕತಾಳೀಯವೆನಿಸುವಂತೆ, ಕೊಪ್ಪಳದ ಪ್ರಕಾಶ ಶಿಲ್ಪಿ ಎಂಬುವವರು ವಿಜಯದಾಸರ ಮೂರ್ತಿ ಕೆತ್ತನೆಗಾಗಿ ಮೈಸೂರಿನ ಆರೋಹಳ್ಳಿ ಬಳಿ ಪರಿಶೀಲಿಸಿದ್ದ ಬಂಡೆಯಲ್ಲೇ ಈಗ ಅಯೋಧ್ಯೆಯ ಬಾಲರಾಮ ರೂಪುಗೊಂಡಿದ್ದಾನೆ.
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಇದೇ ಬಂಡೆಯನ್ನು ಬಳಸಿ 5 ವರ್ಷ ವಯಸ್ಸಿನ ಬಾಲರಾಮನ ವಿಗ್ರಹವನ್ನು ಕೆತ್ತನೆ ಮಾಡಿದ್ದಾರೆ. ಟ್ರಸ್ಟ್ ನಿಬಂಧನೆಗಳ ಪ್ರಕಾರ ಬಾಲರಾಮನ ವಿಗ್ರಹ 51 ಇಂಚು ಎತ್ತರ ಇರಲಿದೆ. ಈ ಬಂಡೆಯ ಉಳಿದ ಭಾಗವನ್ನು ಕೊಪ್ಪಳಕ್ಕೆ ಸಾಗಿಸಲಾಗುತ್ತಿದ್ದು, ಅದನ್ನು ಪ್ರಕಾಶ ಶಿಲ್ಪಿ ಅವರು ಆಂಜನೇಯ ಮೂರ್ತಿ ಕೆತ್ತನೆಗೆ ಬಳಸಲಿದ್ದಾರೆ.
ವಿಜಯದಾಸದ ಮೂರ್ತಿ ಕೆತ್ತನೆಗಾಗಿ ಬಂಡೆಗಳನ್ನು ಹುಡುಕುತ್ತಿರುವಾಗ ಪ್ರಕಾಶ ಶಿಲ್ಪಿ ಅವರಿಗೆ ಶಿಲಾಬಂಡೆಗಳ ಮಾರಾಟಗಾರ ಶ್ರೀನಿವಾಸ್ ಪರಿಚಯವಾಗಿದೆ. ಅವರು ಮೈಸೂರು ಸಮೀಪದ ಆರೋಹಳ್ಳಿಗೆ ಕರೆದೊಯ್ದು ಅಲ್ಲಿನ ಬಂಡೆಯನ್ನು ತೋರಿಸಿದ್ದರು. ಅದು ವಿಜಯದಾಸರ ಮೂರ್ತಿ ಕೆತ್ತನೆಗೆ ಅಗತ್ಯ ಅಳತೆಗೆ ಹೊಂದಿಕೆಯಾಗದೆ ಕೈಬಿಟ್ಟಿದ್ದರು. ಆದರೆ, ಅವರು ಅದೇ ಬಂಡೆಯ ಒಂದು ತುಂಡನ್ನು ಬಳಸಿಕೊಂಡು 5741ನೇ ಆಂಜನೇಯನ ಮೂರ್ತಿಯನ್ನು ಕೆತ್ತನೆ ಮಾಡಿದ್ದರು.
ಪ್ರಕಾಶ ಶಿಲ್ಪಿ ಅವರು ತಮ್ಮ ತಂದೆ ಆಂಜನೇಯಸ್ವಾಮಿ ಭಕ್ತರಾಗಿದ್ದ ಶೇಖರಪ್ಪ ಶಿಲ್ಪಿ ಅವರ ಕಾಲಾನಂತರ, ನಿತ್ಯವೂ ಆಂಜನೇಯನ ಮೂರ್ತಿ ಕೆತ್ತುವುದನ್ನು ಮತ್ತು ಆರಾಧಿಸುವುದನ್ನು ರೂಢಿಸಿಕೊಂಡುಬಂದಿದ್ದಾರೆ. 2007ರ ಜನವರಿ 26 ರಂದು ಮೊದಲ ಆಂಜನೇಯನ ಮೂರ್ತಿ ಕೆತ್ತಿದ ಅವರು ಈಗ 2024ರ ಜನವರಿ 11ರ ಪ್ರಕಾರ ಅವರು 6,142ನೇ ಆಂಜನೇಯ ಮೂರ್ತಿಯನ್ನು ಕೆತ್ತಿದ್ದಾರೆ.
2006ರಲ್ಲಿ ತಂದೆ ಶೇಖರಪ್ಪ ಶಿಲ್ಪಿ ಅವರ ಕಾಲಾನಂತರ, ಅವರ ಸಮಾಧಿಯ ಬದಲು ಆಂಜನೇಯ ದೇವಸ್ಥಾನ ನಿರ್ಮಿಸಿ ದೇವರನ್ನು ಆರಾಧಿಸುವುದು ಉತ್ತಮವೆಂಬ ಸಮಾಜದ ಹಿರಿಯರ, ಪೀಠಾಧೀಶ್ವರರ ಮಾರ್ಗದರ್ಶನದಂತೆ ಕೊಪ್ಪಳದ ಗವಿಶ್ರೀನಗರದಲ್ಲಿ ಈಗಾಗಲೇ ಒಂದು ಸಣ್ಣ ಆಂಜನೇಯ ದೇವಸ್ಥಾನ ನಿರ್ಮಿಸಿದ್ದಾರೆ.
ಕಾಯಕವನ್ನೇ ದೇವರ ಪೂಜೆ ಎಂದು ನಂಬಿರುವ ಪ್ರಕಾಶ ಶಿಲ್ಪಿ, ನಿತ್ಯ ಶುಚೀರ್ಭೂತರಾಗಿ ಒಂದು ಆಂಜನೇಯನ ಮೂರ್ತಿ ಕೆತ್ತನೆ ಮಾಡಿ ಆ ಮೂರ್ತಿಗೆ ಪಂಚಾಮೃತಾಭಿಷೇಕ ಮಾಡುತ್ತಾರೆ. ನಂತರ ಉಳಿದ ಕೆಲಸಗಳ ಕಡೆಗೆ ಗಮನಹರಿಸುತ್ತಾರೆ. ತಂದೆ ಶೇಖರಪ್ಪ ಶಿಲ್ಪಿಯವರಂತೆ ಜನರಿಗೆ ತಮ್ಮಿಂದಾದ ಸಾಂತ್ವನ ಹೇಳುವ ಕೆಲಸವನ್ನೂ ಪ್ರಕಾಶ ಶಿಲ್ಪಿ ಮಾಡುತ್ತಿದ್ದಾರೆ. ಇದಕ್ಕಾಗಿಯೇ ಈ ರೀತಿ ಕಳೆದ 17 ವರ್ಷಗಳಿಂದ ನಿತ್ಯವೂ ಆಂಜನೇಯನ ಮೂರ್ತಿ ಕೆತ್ತುತ್ತ ಬಂದಿರುವ ಪ್ರಕಾಶ ಶಿಲ್ಪಿ ಕೊಪ್ಪಳದ ಗವಿಶ್ರೀನಗರದಲ್ಲಿ ಸಹಸ್ರಾಂಜನೇಯ ದೇವಾಲಯ ನಿರ್ಮಿಸುವ ಇಚ್ಛೆ ಹೊಂದಿದ್ದಾರೆ.