Kotekar Bank Robbery: ಮಾಸ್ಕ್ ಹಾಕಿಕೊಂಡು ಬಂದ ಐವರಿಂದ ಬ್ಯಾಂಕ್ ದರೋಡೆ, ಮಂಗಳೂರಿಗೆ ಸಿಎಂ ಬಂದಿದ್ದ ದಿನವೇ ನಡೆದ ಘಟನೆ; ಮುಖ್ಯಮಂತ್ರಿ ಗರಂ
Kotekar Bank Robbery: ಮಂಗಳೂರು ಸಮೀಪದ ಉಳ್ಳಾಲದ ಕೆಸಿ ರೋಡ್ ಜಂಕ್ಷನ್‌ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಶಾಖೆಯಲ್ಲಿ ಹಗಲುದರೋಡೆ ನಡೆದಿದೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣವನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Kotekar Bank Robbery: ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲದ ಕೆ ಸಿ ರೋಡ್ ಜಂಕ್ಷನ್‌ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ (ಕೋಟೆಕಾರು ಬ್ಯಾಂಕು) ಶಾಖೆಯಲ್ಲಿ ಇಂದು (ಜನವರಿ 17) ಮಧ್ಯಾಹ್ನವೇ ದರೋಡೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರಿಗೆ ಬಂದ ದಿನವೇ ಹಗಲು ದರೋಡೆ ನಡೆದಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಪೊಲೀಸರು ಮುಖ್ಯಮಂತ್ರಿ ಆಗಮನಕ್ಕೆ ಸಂಬಂಧಿಸಿದ ಕರ್ತವ್ಯಕ್ಕೆ ಹೋಗಿದ್ದ ಸಂದರ್ಭದಲ್ಲೇ ಈ ದರೋಡೆ ನಡೆದಿರುವುದು ಗಮನಸೆಳೆದಿದೆ.
ನಿನ್ನೆ ಬೀದರ್‌ನಲ್ಲಿ ಇಂದು ಮಂಗಳೂರಿನಲ್ಲಿ ಬ್ಯಾಂಕ್ ದರೋಡೆ; ಗಮನಸೆಳೆದ 5 ಅಂಶಗಳು
ಬ್ಯಾಂಕ್ ಶಾಖೆಗೆ ನುಗ್ಗಿದ ಐವರು ಮಾಸ್ಕ್ ಧಾರಿಗಳು ಒಳಗಿದ್ದ ಐವರು ಸಿಬ್ಬಂದಿಗಳಿಗೆ ಬಂದೂಕು, ತಲ್ವಾರ್ ತೋರಿಸಿ ದರೋಡೆ ನಡೆಸಿದ್ದಾರೆ. ಬೀದರಿನಲ್ಲಿ ನಿನ್ನೆ ಎಟಿಎಂ ಹಣ ತುಂಬುವಾಗ ಗನ್ ಶೂಟ್ ಮಾಡಿದ ದರೋಡೆ ಬೆನ್ನಲ್ಲೇ ದಕ್ಷಿಣ ಕರ್ನಾಟಕದ ತುದಿಯಲ್ಲಿ ಅಂತಹದ್ದೇ ಘಟನೆ ನಡೆದಿದೆ.
1) ಉಳ್ಳಾಲದ ಕೆಸಿ ರೋಡ್ ಜಂಕ್ಷನ್‌ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ (ಕೋಟೆಕಾರು ಬ್ಯಾಂಕು) ಶಾಖೆಗೆ ಶುಕ್ರವಾರ (ಜನವರಿ 17) ಮಧ್ಯಾಹ್ನ ಒಂದು ಗಂಟೆ ವೇಳೆಗೆ ಕಾರಿನಲ್ಲಿ ಬಂದ ಆಗಂತುಕರಲ್ಲಿ ಐವರು ನುಗ್ಗಿದ್ದರು.
2) ಕೋಟೆಕಾರು ಬ್ಯಾಂಕ್ ಶಾಖೆಯಲ್ಲಿದ್ದ ಸಿಬ್ಬಂದಿಗೆ ಮಾರಕಾಯುಧಗಳನ್ನ ತೋರಿಸಿ ಸುಮಾರು ಹತ್ತು ಕೋಟಿ ರೂಪಾಯಿಗೂ ಅಧಿಕ ಬೆಲೆಬಾಳುವ ಚಿನ್ನಾಭರಣ, ಸುಮಾರು ಐದು ಲಕ್ಷ ರೂಪಾಯಿ ನಗದು ಹಣವನ್ನು ದರೋಡೆಗೈದು ಮಂಗಳೂರು ಕಡೆ ಕಾರಿನಲ್ಲಿ ಪರಾರಿಯಾಗಿದ್ದಾರೆ.
3) ಕೆ.ಸಿ ರೋಡ್ ಜಂಕ್ಷನ್ನಲ್ಲಿರುವ ವಾಣಿಜ್ಯ ಕಟ್ಟಡದ ಮೊದಲ ಮಹಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಬ್ಯಾಂಕ್ ಶಾಖೆಯಲ್ಲಿ ದರೋಡೆ ನಡೆದಿದೆ. ಬ್ಯಾಂಕಿನ ಕೆಳಗಿನ ಅಂತಸ್ತಿನ ಬೇಕರಿಯಲ್ಲಿದ್ದ ನಾಲ್ವರು ಶಾಲಾ ವಿದ್ಯಾರ್ಥಿಗಳು ಬ್ಯಾಂಕಿನ ಸಿಬ್ಬಂದಿ ಕೂಗಾಡಿದ್ದು ಕೇಳಿ ಮೇಲೆ ಓಡಿದ್ದಾರೆ. ವಿದ್ಯಾರ್ಥಿಗಳಿಗೆ ಆಗಂತುಕರು ಗನ್ ತೋರಿಸಿ ಬೆದರಿಸಿದ್ದಾರೆ.
4) ವಿಶೇಷ ಅಂದ್ರೆ, ಬ್ಯಾಂಕ್ ಒಳಗಿನ ಸಿಸಿಟಿವಿ ಕ್ಯಾಮೆರಾವನ್ನು ಸರ್ವಿಸ್ ಮಾಡುತ್ತಿದ್ದ ವೇಳೆಯೇ ಘಟನೆ ನಡೆದಿದೆ. ಹೊರಗಿನ ಕ್ಯಾಮೆರಾದಲ್ಲಿ ಆರೋಪಿಗಳು ಪಲಾಯನಗೈಯುತ್ತಿರುವ ದೃಶ್ಯ ಸೆರೆಯಾಗಿದೆ. ಹೀಗಾಗಿ ಬ್ಯಾಂಕ್ ಬಗ್ಗೆ ತಿಳಿದಿರುವ ಮಂದಿಯೇ ದರೋಡೆ ನಡೆಸಿರುವಂತೆ ಕಂಡುಬಂದಿದೆ.
5) ಸಹಕಾರಿ ಬ್ಯಾಂಕ್ನಲ್ಲಿ ಭದ್ರತಾ ಸಿಬ್ಬಂದಿ ಇರಲಿಲ್ಲ. ಐದಾರು ಮಂದಿ ಮಾತ್ರ ಬ್ಯಾಂಕ್ ಸಿಬ್ಬಂದಿ ಇದ್ದರು. ಆರೋಪಿಗಳು ಕನ್ನಡ ಮತ್ತು ಹಿಂದಿಯಲ್ಲಿ ಮಾತನಾಡಿರುವುದು ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.
ಎಸಿಪಿ ಧನ್ಯ ನಾಯಕ್ ನೇತೃತ್ವದ ಪೊಲೀಸರ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಸ್ಥಳಕ್ಕೆ ಸ್ಪೀಕರ್ ಖಾದರ್ ಭೇಟಿ ನೀಡಿ ಆರೋಪಿಗಳನ್ನ ಶೀಘ್ರ ಬಂಧಿಸಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ನೀವೆಲ್ಲಾ ಇದ್ದೂ ಯಾಕೆ ಹೀಗಾಯ್ತು? ಬ್ಯಾಂಕ್ ದರೋಡೆ ಕುರಿತು ನಡೆದ ತುರ್ತು ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ
ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ ಗಮನಸೆಳೆದ ಕೂಡಲೇ ಮಂಗಳೂರಿನಲ್ಲೇ ಇದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ಪೊಲೀಸ್ ಅಧಿಕಾರಿಗಳ ಜತೆಗೆ ತುರ್ತು ಸಭೆ ನಡೆಸಿದರು. ಅದೇ ಸಭೆಯಲ್ಲಿ, ಬ್ಯಾಂಕ್ ದರೋಡೆ ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಿ ಬಂಧಿಸುವಂತೆ ಕಡಕ್ ಸೂಚನೆ ನೀಡಿದರು.
ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಈ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪಶ್ಚಿಮ ರೇಂಜ್ನ ಐಜಿ ಅಮಿತ್ ಸಿಂಗ್, ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್, ಎಸ್.ಪಿ ಯತೀಶ್, ಡಿವೈಎಸ್ಪಿ ಸೇರಿ ಹಿರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನೀವೆಲ್ಲಾ ಇದ್ದು ಯಾಕೆ ಹೀಗಾಯ್ತು? ಆರೋಪಿಗಳು ಸಲೀಸಾಗಿ ತಪ್ಪಿಸಿಕೊಂಡು ಹೋಗಿದ್ದು ಹೇಗೆ ? ಎಷ್ಟು ಟೋಲ್ಗಳನ್ನು ದಾಟಿ ಹೋಗಿದ್ದಾರೆ. ನೀವು ಟೋಲ್ಗಳನ್ನು ಏಕೆ ಟೈಟ್ ಮಾಡಲಿಲ್ಲ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿರುವುದಾಗಿ ಅವರ ಮಾಧ್ಯಮ ವಕ್ತಾರರು ಮಾಹಿತಿ ನೀಡಿದ್ದಾರೆ.
ಕೂಡಲೇ ರಾಜ್ಯದ ಗಡಿಭಾಗಗಳಲ್ಲಿ ಎಲ್ಲ ಟೋಲ್ಗಳಲ್ಲೂ ಬಿಗಿ ತಪಾಸಣೆ ನಡೆಸಬೇಕು. ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ನಾಕಾಬಂಧಿ ಹಾಕಿ ಆರೋಪಿಗಳ ಶೋಧಕ್ಕೆ ಕ್ರಮ ತೆಗೆದುಕೊಳ್ಳಿ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮಕ್ಕೆ ಒಪ್ಪಿಸಿ ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿರುವುದಾಗಿ ಮಾಧ್ಯಮ ವಕ್ತಾರರು ತಿಳಿಸಿದ್ದಾರೆ.
