ಕೃಷ್ಣಾ ನ್ಯಾಯಾಧೀಕರಣ-2 ಕೇಂದ್ರದ ಗೆಜೆಟ್ ಅಧಿಸೂಚನೆ ಜಾರಿಗೆ ತಯಾರಿ; ಚರ್ಚೆಗೆ ಮುಂದಾದ ಕರ್ನಾಟಕ ಸರ್ಕಾರ, ಪ್ರಮುಖ ನಿರ್ಣಯ
ಕೃಷ್ಣಾ ನದಿ ನೀರು ಹಂಚಿಕೆ ವಿಚಾರವಾಗಿ ದಶಕಗಳಿಂದ ನಡೆದಿರುವ ಕಾನೂನು ಹೋರಾಟ, ಕೃಷ್ಣಾ ನ್ಯಾಯಾಧೀಕರಣದ ಗೆಜೆಟ್ ಜಾರಿ ವಿಚಾರವಾಗಿ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಮುನ್ನಾ ಕರ್ನಾಟಕದ ಸಭೆ ಶನಿವಾರ ನಡೆಯಿತು.

ಕೃಷ್ಣಾ ನದಿ ನೀರು ಹಂಚಿಕೆ ವಿಚಾರವಾಗಿ ಕೃಷ್ಣಾ ನ್ಯಾಯಾಧೀಕರಣದ ಮೂಲಕ ಕರ್ನಾಟಕದ ರಾಜ್ಯದ ರೈತರ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಾಗಿದ್ದು, ರಾಜ್ಯದ ಪಾಲಿನ ನೀರನ್ನು ಪಡೆದುಕೊಳ್ಳಲು ಕಾನೂನು ಕ್ರಮಗಳು ಸೇರಿದಂತೆ ಎಲ್ಲಾ ಪ್ರಯತ್ನ ನಡೆಸುವುದೂ ಸೇರಿದಂತೆ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಕೃಷ್ಣಾ ನ್ಯಾಯಾಧೀಕರಣ- ಗಜೆಟ್ ಅಧಿಸೂಚನೆ ಕುರಿತು ಚರ್ಚಿಸಲು ಕೇಂದ್ರ ಜಲಶಕ್ತಿ ಸಚಿವರು ಕರೆದಿರುವ ಕಣಿವೆ ರಾಜ್ಯಗಳ ಜಲಸಂಪನ್ಮೂಲ ಸಚಿವರ ಸಭೆಗೆ ಪೂರ್ವಭಾವಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಬೆಂಗಳೂರಿನ ಕಾವೇರಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು. ಕೃಷ್ಣಾ ಜಲವಿವಾದ ನ್ಯಾಯಮಂಡಳಿಯ ಅಂತಿಮ ತೀರ್ಪಿನ ಗಜೆಟ್ ಅಧಿಸೂಚನೆ ಪ್ರಕಟಿಸಲು ಮತ್ತು ಈ ಕುರಿತಾಗಿ ದಿನಾಂಕ 16-09-2011ರ ಸುಪ್ರೀಂಕೋರ್ಟ್ ಆದೇಶವನ್ನು ಮಾರ್ಪಡಿಸಲು ಕೋರಿ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲು ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಲು ನಿರ್ಧರಿಸಲಾಯಿತು.
ಕೃಷ್ಣಾ ಜಲವಿವಾದ ನ್ಯಾಯಮಂಡಳಿಯ ಅಂತಿಮ ತೀರ್ಪಿನ ಅನುಷ್ಠಾನ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸದ್ಯದಲ್ಲಿಯೇ ಸರ್ವಪಕ್ಷ ಸಭೆ ಕರೆಯಲಾಗುವುದು. ಎಲ್ಲಾ ಪಕ್ಷಗಳ ಪ್ರಮುಖರಿಂದ ಬರುವ ಸಲಹೆಗಳನ್ನೂ ಪರಿಗಣಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು
ಕಾವೇರಿ ಜಲವಿವಾದ ನ್ಯಾಯಮಂಡಳಿ ತೀರ್ಪಿಗೆ ಸಂಬಂಧಿಸಿದಂತೆ ಸಿವಿಲ್ ಮೇಲ್ಮನವಿಗಳು ಬಾಕಿ ಇರುವಾಗಲೂ ಕಾವೇರಿ ನ್ಯಾಯಾಧೀಕರಣದ ತೀರ್ಪು ಪ್ರಕಟಿಸಲು ಸುಪ್ರೀಂಕೋರ್ಟ್ ನಿರ್ದೇಶಿಸಿದೆ. ಇದೇ ರೀತಿ ಮಹದಾಯಿ ಜಲವಿವಾದ ನ್ಯಾಯಮಂಡಳಿಯ ಅಂತಿಮ ತೀರ್ಪಿನ ಪ್ರಕಟಣೆಗೆ ಸುಪ್ರೀಂಕೋರ್ಟ್ ದಿನಾಂಕ 20-02-2020ರ ತನ್ನ ಆದೇಶದಲ್ಲಿ ನಿರ್ದೇಶಿಸಿದೆ. ಅದರಂತೆ ಈ ಎರಡೂ ನ್ಯಾಯಾಧೀಕರಣಗಳ ತೀರ್ಪನ್ನು ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿರುತ್ತದೆ. ಇದೇ ರೀತಿಯಲ್ಲಿ ಕೃಷ್ಣಾ ನ್ಯಾಯಾಧೀಕರಣದ ತೀರ್ಪಿನ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ನಿರ್ಧರಿಸಲಾಯಿತು.
ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ-II ದಿನಾಂಕ 30-12-2010 ರಂದು ಕೃಷ್ಣಾ ನ್ಯಾಯಾಧೀಕರಣ-2 ರ ತೀರ್ಪು ನೀಡಿದ್ದು, ದಿನಾಂಕ 29-11-2013ರಂದು ಮುಂದಿನ ವರದಿ ನೀಡಿರುತ್ತದೆ. ನ್ಯಾಯಾಧೀಕರಣದ ಅಂತಿಮ ತೀರ್ಪಿನಡಿ ಕರ್ನಾಟಕ ರಾಜ್ಯಕ್ಕೆ 173 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿರುತ್ತದೆ. ಈ ಪೈಕಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಯೋಜನೆಗೆ 130 ಟಿಎಂಸಿ ಹಂಚಿಕೆ ನಿಗದಿಪಡಿಸಿದೆ.
ಆದರೆ ನ್ಯಾಯಮಂಡಳಿಯ ವರದಿ ಮತ್ತು ನ್ಯಾಯಾಧೀಕರಣದ ಅಂತಿಮ ಆದೇಶ ಪ್ರಶ್ನಿಸಿ ಆಂಧ್ರಪ್ರದೇಶ ಸುಪ್ರೀಂಕೋರ್ಟ್ನಲ್ಲಿ ಎಸ್ಎಲ್ಪಿ ದಾಖಲಿಸಿದೆ. ಈ ಕುರಿತು ಸುಪ್ರೀಂಕೋರ್ಟ್ ತನ್ನ ದಿನಾಂಕ 16-09-2011 ರ ಆದೇಶದಲ್ಲಿ ತನ್ನ ಮುಂದಿನ ಆದೇಶದವರೆಗೆ ನ್ಯಾಯಾಧೀಕರಣ ತೆಗೆದುಕೊಳ್ಳಬಹುದಾದ ಯಾವುದೇ ನಿರ್ಧಾರಗಳ ಅಧಿಸೂಚನೆ ಪ್ರಕಟಿಸದಂತೆ ಆದೇಶ ನೀಡಿತ್ತು.
ನ್ಯಾಯಾಧೀಕರಣದ ಅಂತಿಮ ತೀರ್ಪು ಕೇಂದ್ರ ಸರ್ಕಾರದ ಗಜೆಟ್ ಅಧಿಸೂಚನೆಗೆ ಒಳಪಟ್ಟಿದ್ದು, ಈ ಕುರಿತಾಗಿ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಇನ್ನೂ ಅಧಿಸೂಚನೆ ಆಗಿರುವುದಿಲ್ಲ. ನ್ಯಾಯಾಧೀಕರಣದ ಅಂತಿಮ ತೀರ್ಪು ನೀಡಿದ ದಿನಾಂಕದಿಂದ ಇದುವರೆಗೂ 15 ವರ್ಷಗಳೇ ಕಳೆದಿವೆ. ಉತ್ತರ ಕರ್ನಾಟಕದ ಯುಕೆಪಿ-3 ಯೋಜನೆಯ ಪ್ರದೇಶದಲ್ಲಿನ ರೈತರು ತಮ್ಮ ಹಕ್ಕಿನ ಪಾಲನ್ನು ಬಳಸಲು ಬಹಳ ವರ್ಷಗಳಿಂದ ಕಾಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಅವರು ಹೇಳಿದರು.
ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್, ಆರ್.ಬಿ.ತಿಮ್ಮಾಪುರ, ಶರಣಬಸಪ್ಪ ಗೌಡ ದರ್ಶನಾಪುರ, ಮಹಾದೇವಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್, ನ್ಯಾಯವಾದಿ ಮೋಹನ್ ಕಾತರಕಿ ಮತ್ತಿತರರು ಉಪಸ್ಥಿತರಿದ್ದರು.