ಕೆಆರ್‌ಎಸ್ ಅಣೆಕಟ್ಟೆಯಲ್ಲಿ 100 ಅಡಿಗಿಂತ ಕೆಳಕ್ಕೆ ಕುಸಿದ ನೀರಿನ ಮಟ್ಟ, ಕಳೆದ 10 ವರ್ಷ ಏಪ್ರಿಲ್‌ನಲ್ಲಿ ಎಷ್ಟಿತ್ತು ನೀರಿನ ಪ್ರಮಾಣ
ಕೆಆರ್‌ಎಸ್ ನೀರಿನ ಮಟ್ಟ: ಬೆಂಗಳೂರಿಗೂ ಕುಡಿಯುವ ನೀರು ಪೂರೈಸುವ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಭಾನುವಾರ ಬೆಳಿಗ್ಗೆ ನೀರಿನ ಮಟ್ಟ 100 ಅಡಿಗಿಂತ ಕೆಳಗೆ ಕುಸಿದಿದೆ. ಇನ್ನೆರಡು ತಿಂಗಳಿಗೆ ನೀರು ಸಾಕಾದೀತಾ, ಕಳೆದ 10 ವರ್ಷ ಏಪ್ರಿಲ್‌ನಲ್ಲಿ ನೀರಿನ ಮಟ್ಟ ಎಷ್ಟು ಇತ್ತು ಎಂಬಿತ್ಯಾದಿ ವಿವರ ಇಲ್ಲಿದೆ.

ಕೆಆರ್‌ಎಸ್ ನೀರಿನ ಮಟ್ಟ: ಕರ್ನಾಟಕದ ರಾಜಧಾನಿ ಬೆಂಗಳೂರಿಗೂ ಕುಡಿಯುವ ನೀರು ಪೂರೈಸುವ ಕೆಆರ್‌ಎಸ್ ಅಣೆಕಟ್ಟೆಯ ನೀರಿನ ಮಟ್ಟ ಭಾನುವಾರ ಬೆಳಿಗ್ಗೆ 99.60 ಅಡಿಗೆ ಇಳಿಕೆಯಾಗಿದೆ. ಇದರೊಂದಿಗೆ ಇನ್ನೆರಡು ತಿಂಗಳು ಅಂದರೆ ಮಳೆ ಬರುವ ತನಕ ಕುಡಿಯುವ ನೀರಿಗೆ ಉಳಿಕೆ ನೀರು ಸಾಕಾದೀತಾ ಎಂಬ ಪ್ರಶ್ನೆ ಮೂಡಿದೆ. ಆದಾಗ್ಯೂ, ಕಳೆದ 10 ವರ್ಷಗಳ ಅವಧಿಯಲ್ಲಿ ಏಪ್ರಿಲ್‌ನಲ್ಲಿ ನೀರಿನ ಪ್ರಮಾಣ ಎಷ್ಟು ಇತ್ತು ಎಂಬ ದತ್ತಾಂಶ ಗಮನಿಸಿದರೆ ಪರಿಸ್ಥಿತಿ ಹೇಗಿದೆ ಎಂಬ ಚಿತ್ರಣ ಮನದಟ್ಟು ಮಾಡಿಕೊಳ್ಳುವುದು ಸಾಧ್ಯವಾದೀತು.
ಕೆಆರ್‌ಎಸ್ ಅಣೆಕಟ್ಟೆಯಲ್ಲಿ 100 ಅಡಿಗಿಂತ ಕೆಳಕ್ಕೆ ಕುಸಿದ ನೀರಿನ ಮಟ್ಟ
ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಏಪ್ರಿಲ್ 19 ರಂದು ನೀರಿನ ಮಟ್ಟ 100.8 ಅಡಿ ಇತ್ತು. ಭಾನುವಾರ ಬೆಳಿಗ್ಗೆ (ಏಪ್ರಿಲ್ 20) ನೀರಿನ ಮಟ್ಟ 100 ಅಡಿಗಿಂತ ಕೆಳಕ್ಕೆ ಅಂದರೆ 99.60 ಅಡಿಗೆ ಇಳಿಕೆಯಾಗಿದೆ. ಆದಾಗ್ಯೂ, ಇನ್ನು ಎರಡು ತಿಂಗಳುಗಳ ಕಾಲ ಕುಡಿಯುವ ಹಾಗೂ ಬೆಳೆಗೆ ನೀರಿನ ಕೊರತೆ ಎದುರಾಗುವುದಿಲ್ಲ ಎಂದು ಸರ್ಕಾರದ ಮೂಲಗಳು ಭರವಸೆ ವ್ಯಕ್ತಪಡಿಸಿವೆ.
ಕಳೆದ ವರ್ಷ ಏಪ್ರಿಲ್‌ನಲ್ಲಿ ಕೆಆರ್‌ಎಸ್ ಆಣೆಕಟ್ಟೆಯ ನೀರಿನ ಮಟ್ಟ 16 ಅಡಿ ಇಳಿಕೆಯಾಗಿತ್ತು. ಈ ಬಾರಿ 16 ಅಡಿ ನೀರಿನ ಸಂಗ್ರಹ ಹೆಚ್ಚಾಗಿದೆ. ನೀರಿನ ಒಳ ಹರಿವು 68 ಕ್ಯುಸೆಕ್ ಮತ್ತು ಹೊರಹರಿವು 3,846 ಕ್ಯುಸೆಕ್ ಇದೆ. ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದರೂ, ಬೆಳೆಗಳಿಗೆ ಕಟ್ಟು ಪದ್ಧತಿ ಯಂತೆ ನಾಲೆಯಿಂದ ನೀರು ಹರಿಸಲಾಗುತ್ತಿದೆ. ಕುಡಿಯುವ ನೀರಿಗಾಗಿ ಕಾವೇರಿ ನದಿಯನ್ನು ಅವಲ೦ಬಿಸಿರುವ ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಜನತೆ ಇನ್ನು ಮೇ, ಜೂನ್ ತಿಂಗಳಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆ ಎದುರಾಗದು. ಮುಂದಿನ ದಿನಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದೆ ಇದ್ದರೆ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೂ ನೀರಿನ ತೊಂದರೆ ಉ೦ಟಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ 10 ವರ್ಷ ಏಪ್ರಿಲ್‌ನಲ್ಲಿ ಎಷ್ಟಿತ್ತು ಕೆಆರ್‌ಎಸ್ ನೀರಿನ ಪ್ರಮಾಣ
ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 2020 ಮತ್ತು 2022ರಲ್ಲಿ ಮಾತ್ರವೇ ಏಪ್ರಿಲ್‌ನಲ್ಲಿ ಮಾತ್ರವೇ 100 ಅಡಿಗಿಂತ ಹೆಚ್ಚಿತ್ತು. ಉಳಿದಂತೆ 10 ವರ್ಷಗಳ ಕೆಆರ್‌ಎಸ್ ನೀರಿನ ಮಟ್ಟದ ವಿವರ ಹೀಗಿದೆ
ಕೆಆರ್‌ಎಸ್ ನೀರಿನ ಮಟ್ಟ 2016- 2025 (ಏಪ್ರಿಲ್)
ವರ್ಷ | ನೀರಿನ ಮಟ್ಟ (ಅಡಿ) |
---|---|
2016 | 80.87 |
2017 | 74.17 |
2018 | 73.87 |
2019 | 82.32 |
2020 | 103 |
2021 | 97.21 |
2022 | 102.9 |
2023 | 93.38 |
2024 | 83.08 |
2025 | 99.60 |
ಕೆಆರ್‌ಎಸ್ ನೀರಿನ ಮಟ್ಟ ಏಪ್ರಿಲ್‌ನ ಗರಿಷ್ಠ, ಕನಿಷ್ಠ ಮಟ್ಟದ ದಾಖಲೆ
ಕಳೆದ ವರ್ಷ ಕಾವೇರಿ ಜಲಾನಯನವ್ಯಾಪ್ತಿಯಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕಳೆದ ಜುಲೈ 24 ರಂದು ಕೆಆರ್‌ಎಸ್ ಜಲಾಶಯ ಭರ್ತಿಯಾಗಿತ್ತು. ನಂತರ ಜುಲೈ 29 ರಂದು 2ನೇ ಬಾರಿಗೆ ಭರ್ತಿಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿಗೆ ಬಾಗಿನ ಅರ್ಪಿಸಿದ್ದರು. ಅದಾದ ಬಳಿಕ ಒಳ ಹರಿವು ಕಡಿಮೆಯಾಗಲೇ ಇಲ್ಲ. ಇದರಿಂದ ಸತತವಾಗಿ 157 ದಿನಗಳ ಕಾಲ ಗರಿಷ್ಠ 124.80 ಅಡಿ ಕಾಯ್ದುಕೊಳ್ಳುವ ಮೂಲಕ ದಾಖಲೆ ಬರೆಯಿತು. ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಭಾನುವಾರ ನೀರಿನ ಮಟ್ಟ 99.64 ಅಡಿಗೆ ಇಳಿದಿದೆ. ಪ್ರಸ್ತುತ ಅಣೆಕಟ್ಟೆಯಲ್ಲಿ 60 ಅಡಿಯ ತನಕ ಇರುವ ನೀರು ಬಳಸಬಹುದು.
ಈ ಹಿಂದೆ, 2003ರಲ್ಲಿ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಏಪ್ರಿಲ್ ತಿಂಗಳಲ್ಲಿ ನೀರಿನ ಮಟ್ಟ 65.90 ಆಡಿ ತಲುಪಿದ್ದೇ ಕನಿಷ್ಠ ಮಟ್ಟದ ದಾಖಲೆಯಾಗಿದೆ. ಅಂದು ಮುಖ್ಯಮಂತ್ರಿಯಾಗಿದ್ದ ಎಸ್‌ಎಂ ಕೃಷ್ಣ ಅವರು ಮಳೆಗಾಗಿ ಪಾದಯಾತ್ರೆ ನಡೆಸಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ್ದರು.