ಕೆಸೆಟ್ 2024 ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ ಕೆಇಎ; 41 ವಿಷಯಗಳ 6,302 ಅಭ್ಯರ್ಥಿಗಳು ಅರ್ಹ, 7 ತೃತೀಯ ಲಿಂಗಿಗಳೂ ಪಾಸ್
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಳೆದ ವರ್ಷ ನಡೆಸಿದ್ದ ಸಹಾಯಕ ಪ್ರಾಧ್ಯಾಪಕರ ಕೆಸೆಟ್ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಪ್ರಕಟಿಸಿದೆ. ವೆಬ್‌ಸೈಟ್‌ನಲ್ಲಿ ಫಲಿತಾಂಶ ವೀಕ್ಷಿಸಬಹುದು.
ಬೆಂಗಳೂರು: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ (ಕೆ-ಸೆಟ್) ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ. ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದ ಒಟ್ಟು 41 ವಿಷಯಗಳಿಗೆ ನವೆಂಬರ್ 24ರಂದು ನಡೆದ ಪರೀಕ್ಷೆಯಲ್ಲಿ ಒಟ್ಟು 6,302 ಮಂದಿ ಅರ್ಹತೆ ಪಡೆದಿದ್ದು, ಅಷ್ಟೂ ಮಂದಿಯ ನೋಂದಣಿ ಸಂಖ್ಯೆಗಳನ್ನು ಕೆಇಎ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೆ-ಸೆಟ್ ಪರೀಕ್ಷೆಗೆ ಒಟ್ಟು 1,06,433 ಮಂದಿ ನೋಂದಾಯಿಸಿಕೊಂಡು, 89,416 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಅವರ ಪೈಕಿ 6,302 ಮಂದಿ ಅರ್ಹತೆ ಪಡೆದಿದ್ದಾರೆ. ಇವರಲ್ಲಿ ಪುರಷರು 3,275 ಹಾಗೂ ಮಹಿಳೆಯರು 3,020 ಹಾಗೂ ತೃತೀಯ ಲಿಂಗಿಗಳು 7 ಮಂದಿ ಇದ್ದಾರೆ. ವಿಶೇಷ ಸಾಮರ್ಥ್ಯವುಳ್ಳ 293 ಮಂದಿ ಕೂಡ ಈ ಪಟ್ಟಿಯಲ್ಲಿ ಸೇರಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಅರ್ಹತೆ ಪ್ರಮಾಣ ಎಷ್ಟು
ಅರ್ಹತೆ ಹೊಂದಿರುವ ಅಭ್ಯರ್ಥಿಗಳ ಸಂಖ್ಯೆಯು ಎರಡೂ ಪತ್ರಿಕೆಗಳಿಗೆ (ಪೇಪರ್ I ಮತ್ತು ಪೇಪರ್ II) ಹಾಜರಾದ ಒಟ್ಟು ಅಭ್ಯರ್ಥಿಗಳ ಶೇ 6ರಷ್ಟಿದೆ ಎಂದು ಅವರು ವಿವರಿಸಿದ್ದಾರೆ.
ಯುಜಿಸಿ ಹಾಗೂ ರಾಜ್ಯದ ಮೀಸಲಾತಿ ನಿಯಮಗಳ ಪ್ರಕಾರ ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ದಾಖಲೆಗಳ ಪರಿಶೀಲನೆ ನಂತರ ಅರ್ಹ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಫಲಿತಾಂಶ ಇಲ್ಲಿ ನೋಡಿ
https://cetonline.karnataka.gov.in ಮೂಲಕ ಫಲಿತಾಂಶವನ್ನು ವೀಕ್ಷಿಸಬಹುದು. ಇದರಲ್ಲಿ ಪ್ರತಿ ವಿಷಯವಾರು ಉತ್ತೀರ್ಣವಾಗಿರುವ ಅಭ್ಯರ್ಥಿಗಳ ಕಟ್ ಆಫ್ ಅಂಕವನ್ನು ನೀಡಲಾಗಿದೆ.
ಅದರಲ್ಲೂ ವಿವಿಧ ಪ್ರವರ್ಗಗಳ ಅಭ್ಯರ್ಥಿಗಳ ಉತ್ತೀರ್ಣ ಪ್ರಮಾಣವನ್ನೂ ಕೂಡ ಅದರಲ್ಲಿ ವಿಷಯವಾರು ನೀಡಲಾಗಿದೆ.
ಮೈಸೂರು ವಿವಿಯಿಂದ ಪ್ರಾಧಿಕಾರಕ್ಕೆ
ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ ಕೆಸೆಟ್ ಅನ್ನುಮೊದಲು ನೋಡಲ್ ಕೇಂದ್ರವಾಗಿ ಮೈಸೂರು ವಿವಿ ನಡೆಸುತ್ತಿತ್ತು. ಕರ್ನಾಟಕದ ಎಲ್ಲಾ ಅಭ್ಯರ್ಥಿಗಳ ಪರೀಕ್ಷೆಯನ್ನು ನಡೆಸಿ ಮೈಸೂರು ವಿವಿ ಫಲಿತಾಂಶ ನೀಡುತ್ತಿತ್ತು. ಇಲ್ಲಿ ಗೊಂದಲಗಳು ಉಂಟಾಗಿ ದೂರುಗಳ ಕೇಳಿ ಬಂದ ನಂತರ ಇದನ್ನು ಮೈಸೂರು ವಿವಿಗೆ ಬದಲಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಲಾಯಿತು. ಕೆಲ ವರ್ಷದಿಂದ ಪ್ರಾಧಿಕಾರವೇ ಪರೀಕ್ಷೆ ಆಯೋಜಿಸಿ ಫಲಿತಾಂಶ ನೀಡುತ್ತಿದೆ.
ಅಭ್ಯರ್ಥಿಗಳು ಒಟ್ಟು 300 ಅಂಕಗಳ ಪತ್ರಿಕೆ 1 ಮತ್ತು 2 ರ ಕೆಸೆಟ್ 2024 ಪ್ರವೇಶ ಪರೀಕ್ಷೆಯನ್ನು ನವೆಂಬರ್‌ನಲ್ಲಿ ಬರೆದಿದ್ದರು. ಬೆಳಗ್ಗೆ ಪರೀಕ್ಷೆ ಬರೆದ ಅಭ್ಯರ್ಥಿಗಳು ಕೀ ಉತ್ತರ ಹಾಗೂ ಫಲಿತಾಂಶ ಕುರಿತು ಉತ್ಸುಕರಾಗಿ ಕಾಯುತ್ತಿದ್ದರು. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಅಧ್ಯಾಪಕರ ಹುದ್ದೆಗೆ ಕೆಸೆಟ್ ಕಡ್ಡಾಯ
ಕರ್ನಾಟಕದ ವಿಶ್ವವಿದ್ಯಾಲಯಗಳು, ವಿವಿಗಳ ಅಧೀನ ಕಾಲೇಜುಗಳಲ್ಲಿ ಉಪನ್ಯಾಸಕ ಹುದ್ದೆಗಳ ನೇರ ನೇಮಕಾತಿಗೆ ಅಧಿಸೂಚಿಸಿದಾಗ ಅರ್ಜಿ ಸಲ್ಲಿಸಲು ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆಸೆಟ್) ಪಾಸ್ ಮಾಡಿರಬೇಕು. ಅಂತಹವರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಆದ್ದರಿಂದ ಉಪನ್ಯಾಸಕ ಹುದ್ದೆ ಆಕಾಂಕ್ಷಿಗಳು ಕೆಸೆಟ್ ಪರೀಕ್ಷೆ ಅರ್ಹತೆ ಪಡೆಯುವುದು ಕಡ್ಡಾಯ.
ಮುಂದೆ ಕರ್ನಾಟಕ ಸರ್ಕಾರವು ಸಹಾಯಕ ಅಧ್ಯಾಪಕರ ಹುದ್ದೆ ಅರ್ಜಿ ಆಹ್ವಾನಿಸಿದರೆ ಅಥವಾ ಅತಿಥಿ ಉಪನ್ಯಾಸಕರಾಗಿ ಪದವಿ ಕಾಲೇಜುಗಳಲ್ಲಿ ಸೇರಲು ಕೆ ಸೆಟ್ ಪರೀಕ್ಷೆ ಫಲಿತಾಂಶವು ಸಹಕಾರಿಯಾಗಲಿದೆ.