KSRTC Bus Fare: ಕರ್ನಾಟಕ ಸಾರಿಗೆ ಬಸ್ ಪ್ರಯಾಣ ದರ ಶೇ. 15ರಷ್ಟು ಹೆಚ್ಚಳ ಸಾಧ್ಯತೆ, ಬಿಎಂಟಿಸಿಯಲ್ಲೂ ಏರಿಕೆ ನಿರೀಕ್ಷೆ
KSRTC Bus Fare hike:ನಿರಂತರವಾಗಿ ಆಗುತ್ತಿರುವ ನಷ್ಟದ ಹೊರೆ ಸರಿದೂಗಿಸಿಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ರಸ್ತೆ ಸಾರಿಗೆ ನಿಗಮವೂ ಸೇರಿ ಸಾರಿಗೆ ಬಸ್‌ಗಳ ಪ್ರಯಾಣ ದರ ಏರಿಕೆ ಸಾಧ್ಯತೆ ಹೆಚ್ಚಿದೆ.
KSRTC Bus Fare hike: ವಾರದ ಹಿಂದೆಯಷ್ಟೇ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 5 ರೂ. ಏರಿಸಬೇಕು ಎಂದು ಕರ್ನಾಟಕ ಹಾಲು ಮಹಾಮಂಡಳದ ಅಧ್ಯಕ್ಷರು ಹೇಳಿಕೆ ನೀಡಿದ ಬೆನ್ನಲ್ಲೇ ಹೊಸ ವರ್ಷದ ಆರಂಭದಲ್ಲೇ ಸಾರಿಗೆ ಪ್ರಯಾಣ ಕರ್ನಾಟಕದಲ್ಲಿ ಏರಿಕೆಯಾಗುವ ಸಾಧ್ಯತೆಗಳು ದಟ್ಟವಾಗಿವೆ. ಈಗಾಗಲೇ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿನ ಸಮಿತಿಯು ಶೇ. 15ರಷ್ಟು ಸಾರಿಗೆ ಪ್ರಯಾಣ ದರ ಏರಿಕೆ ಮಾಡುವಂತೆ ಶಿಫಾರಸ್ಸು ಕೂಡ ಮಾಡಿದೆ. ಶಕ್ತಿ ಯೋಜನೆ ಜಾರಿಗೊಂಡ ನಂತರ ನಷ್ಟದ ಸುಳಿಗೆ ಸಿಲುಕಿರುವ ಕರ್ನಾಟಕ ಸಾರಿಗೆ ಸಂಸ್ಥೆಗಳ ನಷ್ಟದ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಪ್ರಯಾಣ ದರ ಅನಿವಾರ್ಯ ಎನ್ನಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಈ ಕುರಿತು ಸಭೆ ನಡೆಸಿ ತೀರ್ಮಾನ ಪ್ರಕಟಿಸಬಹುದು ಎನ್ನುವ ಚರ್ಚೆಗಳು ನಡೆದಿವೆ. ಇಂದೇ ಸಂಪುಟ ಸಭೆಯಲ್ಲೂ ಈ ಕುರಿತು ಚರ್ಚಿಸಿ ಅನುಮತಿ ನೀಡುವ ನಿರೀಕ್ಷೆಗಳೂ ಇವೆ.
ಹಳೆಯ ಬೇಡಿಕೆ
ಕರ್ನಾಟಕದಲ್ಲಿ ಸಾರಿಗೆ ಸಂಸ್ಥೆಗಳು ಪ್ರಯಾಣ ಟಿಕೆಟ್ ದರ ಏರಿಸಿ ಐದು ವರ್ಷಗಳೇ ಕಳೆದಿವೆ. 2019ರಲ್ಲಿ ಸಾರಿಗೆ ಸಂಸ್ಥೆಗಳು ಪ್ರಯಾಣ ದರ ಏರಿಸಿದ್ದವು. ಅದರಲ್ಲೂ ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆ ಮಾಡಿ ಹತ್ತು ವರ್ಷವೇ ಕಳೆದಿದೆ. ಆನಂತರ ಕೋವಿಡ್ ವೇಳೆಯೂ ಸಂಕಷ್ಟಕ್ಕೆ ಸಿಲುಕಿದ ಸಾರಿಗೆ ಸಂಸ್ಥೆಗಳು ನಂತರ ಚೇತರಿಕೆ ಹಾದಿಯಲ್ಲಿದ್ದವು. ಆನಂತರ ಒಂದೂವರೆ ವರ್ಷದ ಹಿಂದೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿಯಾದ ನಂತರ ಮತ್ತೆ ನಷ್ಟದ ಪ್ರಮಾಣ ಹೆಚ್ಚಳವಾಗಿದೆ ಎನ್ನುವುದು ಕೆಎಸ್‌ಆರ್‌ಟಿಸಿ ಸಹಿತ ನಾಲ್ಕೂ ಸಂಸ್ಥೆಗಳ ಬೇಡಿಕೆ.
ಇತ್ತೀಚೆಗೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ನೇತೃತ್ವದಲ್ಲಿ ಸಾರಿಗೆ ಇಲಾಖೆಗಳ ಸ್ಥಿತಿಗತಿ ಕುರಿತು ನಡೆದ ಸಭೆ ಸಭೆಯಲ್ಲಿ ಸಾರಿಗೆ ಇಲಾಖೆಗೆ 3650 ಕೋಟಿ ಹೊರೆಯಾಗುತ್ತಿದೆ ಎಂದು ಸಾರಿಗೆ ಅಧಿಕಾರಿಗಳು ಅಳಲು ತೋಡಿಕೊಂಡಿದ್ದರು. ನಷ್ಟ ಪರಿಹಾರಕ್ಕೆ ಶೇ. 15ರಷ್ಟು ಪ್ರಯಾಣದರ ಹೆಚ್ಚಳಕ್ಕೆ ಸಭೆಯಲ್ಲಿ ಚರ್ಚೆ ಮಾಡಲಾಗಿತ್ತು ಆದರೆ ಶೇ 15 ರ ಪ್ರಮಾಣದಲ್ಲಿ ದರ ಪರಿಷ್ಕರಣೆಯಾದರೂ ನಿಗಮಗಳು ಇನ್ನೂ 1,800 ಕೋಟಿ ನಷ್ಟ ಅನುಭವಿಸುತ್ತವೆ ಎಂಬುದು ಅಧಿಕಾರಿಗಳ ಲೆಕ್ಕಾಚಾರ.
ಮುಷ್ಕರ ವಾಪಸ್
ವೇತನ ಏರಿಕೆಯೂ ಸೇರಿದಂತೆ ಹಲವು ಬೇಡಿಕೆಗಳನ್ನಾಧರಿಸಿ ಸಾರಿಗೆ ಮುಷ್ಕರಕ್ಕೆ ನೌಕರರು ಅಣಿಯಾಗಿದ್ದರೂ ಸಿಎಂ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಇದನ್ನು ಸರಿಪಡಿಸುವ ಭರವಸೆ ನೀಡಿದ್ದರು. ಇದರಿಂದ ಮುಷ್ಕರ ಕೈಬಿಟ್ಟಿದ್ದರು. ಅಲ್ಲದೇ ಸಾರಿಗೆ ಸಂಸ್ಥೆಗಳು ಆರು ತಿಂಗಳ ಹಿಂದೆಯೇ ಸರ್ಕಾರಕ್ಕೆ ಪ್ರಯಾಣ ದರ ಏರಿಕೆ ಪ್ರಸ್ತಾವನೆ ಸಲ್ಲಿಸಿವೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆದು ತೀರ್ಮಾನವಾಗಬಹುದು. ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ ಪ್ರಯಾಣ ದರ ಎಷ್ಟು ಹೆಚ್ಚಳ ಆಗಲಿದೆ. ಯಾವಾಗಲಿನಿಂದ ಜಾರಿಯಾಗಲಿದೆ ಎನ್ನುವ ತೀರ್ಮಾನ ಸದ್ಯವೇ ಹೊರ ಬೀಳಲಿದೆ ಎನ್ನಲಾಗಿದೆ.
ನೌಕರರ ಬೇಡಿಕೆ ಏನು
ಕಳೆದ ವಾರ ಸಿಎಂ ಜೊತೆಗೆ ಸಾರಿಗೆ ಅಧಿಕಾರಿಗಳ ಜತೆ ನಡೆದಿದ್ದ ಸಭೆಯಲ್ಲಿ, ಟಿಕೆಟ್ ದರ ಏರಿಕೆ ಮಾಡಿದರೆ ಮಾತ್ರ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಉಳಿಸಲು ಸಾಧ್ಯ ಎಂದು ಸಿಎಂಗೆ ಅಧಿಕಾರಿಗಳು ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ. ಪೆಟ್ರೋಲ್-ಡೀಸೆಲ್ ದರ ಹಾಗೂ ಬಿಡಿ ಭಾಗಗಳ ದರ ಏರಿಕೆಯಾಗಿದೆ. ಇಂಧನ ದರ ನಾಲ್ಕೈದು ವರ್ಷದಲ್ಲಿ ಏರಿಕೆಯಾಗುತ್ತಲೇ ಬಂದಿದೆ. ಅದಕ್ಕೆ ಅನುಗುಣವಾಗಿ ಟಿಕೆಟ್ ದರ ಏರಿಕೆಯಾಗಬೇಕೆಂದು ನಾಲ್ಕೂ ನಿಗಮಗಳು ಮನವಿ ಮಾಡಿವೆ. ಸಂಕ್ರಾಂತಿ ಹಬ್ಬದ ನಂತರ ಸಿಎಂ ಸಿದ್ದರಾಮಯ್ಯ ಜೊತೆಯಲ್ಲಿ ನಡೆಯಲಿರುವ ಸಾರಿಗೆ ಮುಖಂಡರ ಸಭೆಯಲ್ಲಿ, ನಾಲ್ಕು ನಿಗಮಗಳ ಬಸ್ ಟಿಕೆಟ್ ದರ ಏರಿಕೆಗೆ ಅನುಮತಿ ನೀಡುವಂತೆ ಸಾರಿಗೆ ನೌಕರರು ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡುವ ಸಾಧ್ಯತೆಯಿದೆ.
ಟಿಕೆಟ್ ದರದಲ್ಲಿ ಶೇ. 25 ರಿಂದ 28 ರಷ್ಟು ಏರಿಕೆಗೆ ನಾಲ್ಕು ನಿಗಮಗಳು ಈ ಹಿಂದೆಯೇ ಪ್ರಸ್ತಾವನೆಯನ್ನು ಸಲ್ಲಿಸಿವೆ. ಸದ್ಯವೇ ಭೆಯ ನಂತರ ಶೇ. 25 ಅಲ್ಲದಿದ್ದರೂ, ಅದರ ಅರ್ಧದಷ್ಟು ಏರಿಕೆಯಾಗಬಹುದು ಎನ್ನುವುದು ಸಾರಿಗೆ ಮುಖಂಡ ಜಗದೀಶ್ ನೀಡುವ ವಿವರಣೆ.
ವಿಭಾಗ