ಜನವರಿ 5 ರಿಂದ ಕೆಎಸ್‌ಆರ್‌ಟಿಸಿ ಬಸ್‌ ದರ ಏರಿಕೆ; ಖರ್ಚು ವೆಚ್ಚ, ನೆರೆ ರಾಜ್ಯಗಳ ದರ ವಿವರ ನೀಡಿದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು
ಕನ್ನಡ ಸುದ್ದಿ  /  ಕರ್ನಾಟಕ  /  ಜನವರಿ 5 ರಿಂದ ಕೆಎಸ್‌ಆರ್‌ಟಿಸಿ ಬಸ್‌ ದರ ಏರಿಕೆ; ಖರ್ಚು ವೆಚ್ಚ, ನೆರೆ ರಾಜ್ಯಗಳ ದರ ವಿವರ ನೀಡಿದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು

ಜನವರಿ 5 ರಿಂದ ಕೆಎಸ್‌ಆರ್‌ಟಿಸಿ ಬಸ್‌ ದರ ಏರಿಕೆ; ಖರ್ಚು ವೆಚ್ಚ, ನೆರೆ ರಾಜ್ಯಗಳ ದರ ವಿವರ ನೀಡಿದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು

KSRTC Bus Fare: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಪರಿಷ್ಕೃತ ಹೊಸ ಬಸ್ ಪ್ರಯಾಣ ದರ ಜನವರಿ 5 ರಿಂದ ಜಾರಿಗೆ ಬರಲಿದೆ. ಈ ಬಸ್ ಪ್ರಯಾಣ ದರ ಏರಿಕೆಯನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ಸಮರ್ಥಸಿಕೊಂಡಿವೆ. ಖರ್ಚು ವೆಚ್ಚಗಳ ವಿವರ ಮತ್ತು ನೆರೆ ರಾಜ್ಯಗಳ ಸಾರಿಗೆ ದರವನ್ನೂ ನೀಡಿವೆ. ಆ ವಿವರ ಇಲ್ಲಿದೆ.

ಕೆಎಸ್‌ಆರ್‌ಟಿಸಿ ಬಸ್‌ ದರ ಏರಿಕೆ ಸಮರ್ಥಿಸಿಕೊಂಡು, ಖರ್ಚು ವೆಚ್ಚ, ನೆರೆ ರಾಜ್ಯಗಳ ದರ ವಿವರಗಳನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ನೀಡಿವೆ. (ಕಡತ ಚಿತ್ರ)
ಕೆಎಸ್‌ಆರ್‌ಟಿಸಿ ಬಸ್‌ ದರ ಏರಿಕೆ ಸಮರ್ಥಿಸಿಕೊಂಡು, ಖರ್ಚು ವೆಚ್ಚ, ನೆರೆ ರಾಜ್ಯಗಳ ದರ ವಿವರಗಳನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ನೀಡಿವೆ. (ಕಡತ ಚಿತ್ರ) (KSRTC)

KSRTC Bus Fare: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಪರಿಷ್ಕೃತ ಬಸ್‌ ಪ್ರಯಾಣ ದರ ಇದೇ ಭಾನುವಾರದಿಂದ (ಜನವರಿ 5) ಜಾರಿಗೆ ಬರಲಿದೆ. ಶೇಕಡ 15 ದರ ಏರಿಕೆಯಾಗಲಿದ್ದು, ಈ ಏರಿಕೆಯನ್ನು ಕೆಎಸ್‌ಆರ್‌ಟಿಸಿ ಸಮರ್ಥಿಸಿಕೊಂಡು ಸಾರ್ವಜನಿಕ ಪ್ರಕಟಣೆಯನ್ನೂ ಹೊರಡಿಸಿದೆ. ಅದರಲ್ಲಿ ಕೆಎಸ್ಆರ್‌ಟಿಸಿ ಬಸ್‌ ಸಂಚಾರ ನಿರ್ವಹಣೆಗಾಗಿ ತಗಲುವ ಖರ್ಚು ವೆಚ್ಚ ಮತ್ತು ಈ ಹಿಂದಿನ ಪ್ರಯಾಣ ದರ ಪರಿಷ್ಕರಣೆ ದಿನಾಂಕ ಮತ್ತು ವಿವರಗಳನ್ನೂ ಸಂಸ್ಥೆ ನೀಡಿದೆ. ಉತ್ತಮ ಹಾಗೂ ಮಿತವ್ಯಯಕರ ಸಾರಿಗೆ ಸೌಲಭ್ಯವನ್ನು ಸಾರ್ವಜನಿಕ ಪ್ರಯಾಣಿಕರಿಗೆ ಒದಗಿಸಿ ದೇಶದಲ್ಲಿಯೇ ಅತ್ಯುತ್ತಮ ಸಾರಿಗೆ ಸಂಸ್ಥೆಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ತಮ್ಮನ್ನು ತಾವು ಸಮರ್ಥಿಸಿಕೊಂಡಿವೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ದಿನದ ಖರ್ಚು ವೆಚ್ಚದ ವಿವರ

ಸಾರಿಗೆ ಸಂಸ್ಥೆಗಳ ನಿರ್ವಹಣೆ ಸುಲಭದ ಮಾತಲ್ಲ. ಖರ್ಚು ವೆಚ್ಚಗಳು ಹೆಚ್ಚಾಗಿದ್ದು ಯಾವ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂಬುದನ್ನು ವಿವರಿಸುವುದಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ಆ ವಿವರವನ್ನೂ ಸಾರ್ವಜನಿಕ ಪ್ರಕಟಣೆಯಲ್ಲಿ ತೋರಿಸಿವೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಖರ್ಚು ವೆಚ್ಚದ ವಿವರಣೆ

ವೆಚ್ಚ ಯಾವುದಕ್ಕೆ (ದಿನದ ಲೆಕ್ಕಾಚಾರ)2020ರಲ್ಲಿ ಡೀಸೆಲ್ ದರ ಲೀಟರಿಗೆ 60.98 ರೂ. (ಕೋಟಿ ರೂಪಾಯಿ)2024ರಲ್ಲಿ ಡೀಸೆಲ್ ದರ ಲೀಟರ್‌ಗೆ 85.85 ರೂ. (ಕೋಟಿ ರೂಪಾಯಿ)ದಿನದ ವೆಚ್ಚದಲ್ಲಿ ಹೆಚ್ಚಳ (ಕೋಟಿ ರೂಪಾಯಿ)
ಡೀಸೆಲ್‌09.1613.214.05
ಸಿಬ್ಬಂದಿ 12.8518.365.51
ಒಟ್ಟು ಖರ್ಚು22.0131.579.56

ಕೋವಿಡ್ ಸಂಕಷ್ಟ ಎದುರಾದ ಸಂದರ್ಭದಲ್ಲಿ ಇದ್ದ ದಿನದ ಖರ್ಚು ವೆಚ್ಚಗಳಿಗೂ ಈಗ ಇರುವ ಖರ್ಚು ವೆಚ್ಚಗಳಿಗೂ ಬಹಳ ವ್ಯತ್ಯಾಸ ಇದೆ. ಡೀಸೆಲ್ ಖರ್ಚು 2020ಕ್ಕೆ ಹೋಲಿಸಿದರೆ ಈಗ 4.05 ಕೋಟಿ ರೂಪಾಯಿ ಹೆಚ್ಚಳವಾಗಿದೆ. ಸಿಬ್ಬಂದಿ ಖರ್ಚು 2020ಕ್ಕೆ ಹೋಲಿಸಿದರೆ ಈಗ 5.51 ಕೋಟಿ ರೂಪಾಯಿ ಏರಿಕೆಯಾಗಿದೆ. ಹೀಗಾಗಿ, ಡೀಸೆಲ್ ಹಾಗೂ ಸಿಬ್ಬಂದಿ ವೆಚ್ಚದಲ್ಲಿ ಉಂಟಾಗುತ್ತಿರುವ ಗಣನೀಯ ಹೆಚ್ಚಳವು ಸಾರಿಗೆ ಸಂಸ್ಥೆಗಳಿಗೆ ಬಹುದೊಡ್ಡ ಹೊಡೆತ ನೀಡಿವೆ ಎಂದು ಸಂಸ್ಥೆಗಳು ವಿವರಿಸಿವೆ.

ನೆರೆ ರಾಜ್ಯಗಳ ಸಾರಿಗೆ ದರಗಳ ಕಡೆಗೊಮ್ಮೆ ನೋಡಿ

ಡೀಸೆಲ್ ಹಾಗೂ ಸಿಬ್ಬಂದಿ ವೆಚ್ಚದಲ್ಲಿ ಉಂಟಾಗಿರುವ ಹೆಚ್ಚಳವನ್ನು ಸರಿದೂಗಿಸಲು ಪ್ರಯಾಣಿಕ ಬಸ್ ದರಗಳನ್ನು ಈ ಹಿಂದಿನಿಂದಲೂ ಜಾರಿಯಲ್ಲಿರುವ ಸರ್ಕಾರದ ಆದೇಶದನ್ವಯ ಪರಿಷ್ಕರಿಸಬೇಕು. ಸಾರಿಗೆ ನಿಗಮಗಳು ವಿಧಿಸುತ್ತಿರುವ ದರಗಳನ್ನು ಗಮನಿಸಬೇಕಾದ್ದು ಅಗತ್ಯ. ನೆರೆ ರಾಜ್ಯಗಳ ಸಾರಿಗೆ ದರಗಳ ಕಡೆಗೂ ನೋಟ ಹರಿಸಬೇಕು. ನೆರೆ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರಗಳ ಸಾರಿಗೆ ಸಂಸ್ಥೆಗಳ ದರ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ದರದ ತುಲನಾತ್ಮಕ ನೋಟ ಇಲ್ಲಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ದರ vs  ನೆರೆ ರಾಜ್ಯಗಳ ಸಾರಿಗೆ ಸಂಸ್ಥೆಗಳ ದರ

ಸಾರಿಗೆ ವರ್ಗ/ ರಾಜ್ಯನಗರ ಸಾರಿಗೆ (ರೂಪಾಯಿ/ಕಿಮೀ)ಸಾಮಾನ್ಯ ಸಾರಿಗೆ (ರೂಪಾಯಿ/ಕಿಮೀ)ವೇಗದೂತ ಸಾರಿಗೆ (ರೂಪಾಯಿ/ಕಿಮೀ)ರಾಜಹಂಸ/ ಡೀಲಕ್ಸ್‌ ಸಾರಿಗೆ (ರೂಪಾಯಿ/ಕಿಮೀ)
ಕರ್ನಾಟಕ 81.4765.90100.57145
ಆಂಧ್ರಪ್ರದೇಶ123.24102125162
ತೆಲಂಗಾಣ131104126164
ಮಹಾರಾಷ್ಟ್ರ145145145197

ಕೆಎಸ್‌ಆರ್‌ಟಿಸಿ ಬಸ್‌ ದರ ಪರಿಷ್ಕರಣೆಯಾಗಿ 4 ವರ್ಷ, ಬಿಎಂಟಿಸಿ ದರ ಪರಿಷ್ಕರಣೆಯಾಗಿ 10 ವರ್ಷ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ರಸ್ತೆ ಸಾರಿಗೆ ಕಾಯಿದೆ 1950ರ ಪ್ರಕಾರ ಅಸ್ತಿತ್ವಕ್ಕೆ ಬಂದಿದ್ದು, ರಸ್ತೆ ಸಾರಿಗೆ ಸಂಸ್ಥೆಗಳು ಉಳಿಯಬೇಕಾದರೆ ಕಾಲಕಾಲಕ್ಕೆ ಡೀಸೆಲ್ ತೈಲದ ಬೆಲೆ ಮತ್ತು / ಅಥವಾ ನೌಕರರ ತುಟ್ಟಿಭತ್ಯೆಯಲ್ಲಿ ಹೆಚ್ಚಳವಾದಾಗ ಪ್ರಯಾಣ ದರಗಳನ್ನು ಪರಿಷ್ಕರಣೆ ಮಾಡಿ, ಆದಾಯವನ್ನು ಕ್ರೋಢೀಕರಿಸಿ ಉತ್ತಮವಾದ ಸಾರಿಗೆ ಸೌಲಭ್ಯವನ್ನು ಒದಗಿಸಬೇಕಾಗಿರುತ್ತದೆ. ಸದ್ಯ ಕೆಎಸ್‌ಆರ್‌ಟಿಸಿ ಬಸ್‌ ದರ ಪರಿಷ್ಕರಣೆಯಾಗಿ 4 ವರ್ಷ ಮತ್ತು ಬಿಎಂಟಿಸಿ ಬಸ್ ದರ ಪರಿಷ್ಕರಣೆಯಾಗಿ 10 ವರ್ಷವಾಗಿದೆ.

ಕೊನೆಯದಾಗಿ, 2020ರ ಫೆಬ್ರವರಿ 26 ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ದರ ಪರಿಷ್ಕರಣೆ ಶೇಕಡ 12 ಆಗಿದ್ದು ಆನಂತರ ಪರಿಷ್ಕರಣೆಯಾಗಿಲ್ಲ. ಇದೇ ರೀತಿ ಬಿಎಂಟಿಸಿ ಬಸ್ ದರ ಕೊನೆಯದಾಗಿ 2014ರ ಏಪ್ರಿಲ್ 25 ರಂದು ಶೇಕಡ 17 ಏರಿಕೆಯಾಗಿ ಪರಿಷ್ಕರಣೆಯಾಗಿದ್ದರೆ, ಮರುವರ್ಷವೇ 2015ರ ಜನವರಿ 10 ರಂದು ಶೇಕಡ 2 ಇಳಿಕೆ ಮಾಡಿ ದರ ಪರಿಷ್ಕರಿಸಲಾಗಿತ್ತು. ಇದಾದ ಬಳಿಕ ಈಗ ಶೇಕಡ 15 ದರ ಏರಿಕೆಗೆ ಸರ್ಕಾರ ಅನುಮತಿ ನೀಡಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ಮನವಿ ಮಾಡಿವೆ.

Whats_app_banner