KSRTC Bus Fare: ಕೆಎಸ್‌ಆರ್‌ಟಿಸಿ ಪ್ರಯಾಣ ದರ ಶೇ 15 ಏರಿಕೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತ ಸಮಿತಿ ಶಿಫಾರಸು, 6 ಅಂಶಗಳು
KSRTC Bus Fare: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳು ನಷ್ಟದಲ್ಲಿದ್ದು, ಐದು ವರ್ಷಗಳಿಂದ ಪ್ರಯಾಣ ದರ ಪರಿಷ್ಕರಣೆ ಬಾಕಿ ಇರುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಕೆಎಸ್‌ಆರ್‌ಟಿಸಿ ಪ್ರಯಾಣ ದರ ಶೇ 15 ಏರಿಕೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತ ಸಮಿತಿ ಶಿಫಾರಸು ಮಾಡಿದೆ. 6 ಅಂಶಗಳ ವಿವರ ಇಲ್ಲಿದೆ.
KSRTC Bus Fare: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸೇರಿ ನಾಲ್ಕೂ ಸಾರಿಗೆ ನಿಗಮಗಳು ನಷ್ಟ ಅನುಭವಿಸುತ್ತಿದ್ದು, ಬಸ್ ಪ್ರಯಾಣ ದರ ಏರಿಸಬೇಕು ಎಂಬ ಬೇಡಿಕೆಗೆ ಈಗ ಮತ್ತೆ ಬಲ ಬಂದಿದೆ. ನಾಲ್ಕೂ ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಬಸ್ ಪ್ರಯಾಣ ದರವನ್ನು ಶೇಕಡ 15 ಹೆಚ್ಚಳ ಮಾಡಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ನೇತೃತ್ವದ ಉನ್ನತ ಮಟ್ಟದ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿರುವುದು ಅದಕ್ಕೆ ಕಾರಣ. 2019ರಿಂದ ಈಚೆಗೆ ಸಾರಿಗೆ ಸಂಸ್ಥೆ ಬಸ್ ಪ್ರಯಾಣ ದರ ಪರಿಷ್ಕರಣೆ ಆಗಿಲ್ಲ.
ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಏರಿಕೆ ಮುಖ್ಯಮಂತ್ರಿ ವಿವೇಚನೆಗೆ
ರಾಜ್ಯ ರಸ್ತೆ ಸಾರಿಗೆ ನಿಗಮಗಳು ಹಲವಾರು ಬಾರಿ ಪ್ರಯಾಣ ದರ ಏರಿಕೆ ಸಂಬಂಧ ಪ್ರಸ್ತಾವನೆ ಸಲ್ಲಿಸಿವೆ. ದರ ಏರಿಕೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆಯೂ ನಡೆದಿದ್ದು, ಅದು ಕೂಡ ಪ್ರಯಾಣ ದರ ಏರಿಕೆ ಸಂಬಂಧ ಶಿಫಾರಸು ಮಾಡಿದೆ. ಆದರೆ, ಇದನ್ನು ಮಂಡಳಿ ಸಭೆಯಲ್ಲಿ ಚರ್ಚೆ ಮಾಡಿಯೇ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ. ಸದ್ಯಕ್ಕಂತೂ ಪ್ರಯಾಣ ದರ ಏರಿಕೆ ಮಾಡುವ ಪ್ರಸ್ತಾಪ ಕರ್ನಾಟಕ ಸರ್ಕಾರದ ಮುಂದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಕೆಎಸ್ಆರ್‌ಟಿಸಿ ಬಸ್ ಪ್ರಯಾಣ ದರ; ಉನ್ನತ ಮಟ್ಟದ ಸಮಿತಿ ಶಿಫಾರಸುಗಳೇನು?
1) ಪ್ರಯಾಣ ದರ ಪರಿಷ್ಕರಣೆ ಅಗತ್ಯ: 2019ರಿಂದ ಪ್ರಯಾಣ ದರ ಏರಿಕೆ ಮಾಡದೇ ಇರುವುದರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸೇರಿ ಸಾರಿಗೆ ನಿಗಮಗಳು ಆದಾಯ ನಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ನಾಲ್ಕೂ ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಬಸ್ ಪ್ರಯಾಣ ದರವನ್ನು ಶೇಕಡ 15 ಹೆಚ್ಚಳ ಮಾಡಬೇಕು ಎಂದು ಸಮಿತಿ ಹೇಳಿದೆ. ಬಸ್ ಪ್ರಯಾಣ ದರ ಪರಿಷ್ಕರಣೆಯಿಂದ ನಷ್ಟದ ಪ್ರಮಾಣ 1,800 ಕೋಟಿ ರೂಪಾಯಿಗೆ ಇಳಿಕೆಯಾಗಬಹುದು ಎಂಬ ನಿರೀಕ್ಷೆ ಇದೆ.
2) ಶಕ್ತಿ ಯೋಜನೆ ಹಣ ಸಕಾಲಕ್ಕೆ ಬಿಡುಗಡೆ: ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಕಾಶ ನೀಡಿರುವ ಶಕ್ತಿ ಯೋಜನೆಯ ಹಣವನ್ನು ಸರ್ಕಾರ ಕಾಲಕಾಲಕ್ಕೆ ಬಿಡುಗಡೆ ಮಾಡಬೇಕು. ಸದ್ಯ ಇದು ಬಾಕಿ ಇದೆ. ಇದು ಕೂಡ ಸಾರಿಗೆ ನಿಗಮಗಳ ನಷ್ಟಕ್ಕೆ ಕಾರಣವಾಗಿದೆ. ಶಕ್ತಿ ಯೋಜನೆ ಜಾರಿ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 80 ಲಕ್ಷದಿಂದ 1.05 ಕೋಟಿಗೆ ಏರಿಕೆಯಾಗಿದೆ. ಈ ಪೈಕಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ದರ ಹೆಚ್ಚಳ ಅನಿವಾರ್ಯ. ಬಸ್‌ಗಳ ಸಂಖ್ಯೆಯನ್ನೂ ಹೆಚ್ಚಿಸಬೇಕು.
3) ಎಲೆಕ್ಟ್ರಿಕ್ ಬಸ್‌ಗಳ ಬಳಕೆ ಹೆಚ್ಚಾಗಬೇಕು: ಸಾರಿಗೆ ನಿಗಮಗಳನ್ನು ಲಾಭದತ್ತ ಕೊಂಡೊಯ್ಯಲು ಈಗಿರುವ ಡೀಸೆಲ್ ಚಾಲಿತ ಇಂಜಿನ್ ಬಸ್‌ಗಳ ಬದಲು ವಿದ್ಯುತ್ ಚಾಲಿತ ಎಲೆಕ್ಟ್ರಿಕ್ ಬಸ್‌ಗಳ ಬಳಕೆ ಹೆಚ್ಚಾಗಬೇಕು. ಇದು ನಷ್ಟದ ಪ್ರಮಾಣವನ್ನು ಕಡಿಮೆ ಮಾಡಲಿದೆ. ಪರಿಸರ ಸಂರಕ್ಷಣೆ ದೃಷ್ಟಿಯಿಂದ ಕೇಂದ್ರ ಸರ್ಕಾರ ರಿಯಾಯಿತಿ ದರದಲ್ಲಿ ನೀಡುವ ವಿದ್ಯುತ್ ಚಾಲಿತ ಬಸ್‍ಗಳನ್ನು ಪಡೆಯುವ ಕಡೆಗೆ ಗಮನಹರಿಸಬೇಕು.
4) ಕಾರ್ಗೋ ಸೇವೆ: ಸಾರಿಗೆ ನಿಗಮ ಆರಂಭಿಸಿರುವ ಕಾರ್ಗೋ ಸೇವೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಅದನ್ನು ಸ್ಥಗಿತಗೊಳಿಸಬಾರದು ಎಂದು ಸಮಿತಿ ಶಿಫಾರಸಿನಲ್ಲಿ ವಿವರಿಸಿದೆ.
5) ಸುರಕ್ಷಾ ಕ್ರಮ: ವಾಹನಗಳಿಗೆ ಜಿಪಿಎಸ್ ಅಳವಡಿಕೆ ಮತ್ತು ಇ-ಆಡಳಿತಕ್ಕೆ ಒತ್ತು ಕೊಡುವಂತೆ ಸಲಹೆ ನೀಡಿದ್ದು, ನಿಗದಿತ ದಿನಗಳೊಳಗೆ ಸೂಕ್ತ ಕಾರ್ಯಕ್ರಮ ರೂಪಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
6) ದರ ಏರಿಕೆಗೇನು ಕಾರಣ: ನಿವೃತ್ತ ನೌಕರರ ಬಾಕಿ 625 ಕೋಟಿ ರೂಪಾಯಿ, ಇಂಧನ ಬಾಕಿ 851 ಕೋಟಿ ರೂಪಾಯಿ, ಸಿಬ್ಬಂದಿಗೆ ಬಾಕಿ 625 ಕೋಟಿ ರೂಪಾಯಿ, ಬಿಡಿಭಾಗಗಳಿಗೆ ಬಾಕಿ 883 ಕೋಟಿ ರೂಪಾಯಿ, ಸಾಲ ಮಾಡಿರುವುದು 799 ಕೋಟಿ ರೂಪಾಯಿ. ನಷ್ಟದ ಪ್ರಮಾಣ ಎಲ್ಲ ಸಾರಿಗೆ ನಿಗಮಗಳಿಗೆ ವಾರ್ಷಿಕ ಒಟ್ಟು 3650 ಕೋಟಿ ರೂಪಾಯಿ ಹೊರೆಯಾಗುತ್ತಿದೆ.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.