KSRTC Bus Accident: ಬೆಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಮದ್ದೂರು ಬಳಿ ಅಪಘಾತ, ಮೂವರ ಸ್ಥಿತಿ ಗಂಭೀರ
ಕನ್ನಡ ಸುದ್ದಿ  /  ಕರ್ನಾಟಕ  /  Ksrtc Bus Accident: ಬೆಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಮದ್ದೂರು ಬಳಿ ಅಪಘಾತ, ಮೂವರ ಸ್ಥಿತಿ ಗಂಭೀರ

KSRTC Bus Accident: ಬೆಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಮದ್ದೂರು ಬಳಿ ಅಪಘಾತ, ಮೂವರ ಸ್ಥಿತಿ ಗಂಭೀರ

KSRTC Bus Accident: ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನಲ್ಲಿ ಬೆಂಗಳೂರಿಗೆ ಹೊರಟಿದ್ದ ಸಾರಿಗೆ ಬಸ್‌ ಅಪಘಾತಕ್ಕೆ ಒಳಗಾಗಿ ಹಲವರು ಗಾಯಗೊಂಡಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ.

ಮದ್ದೂರು ಬಳಿ ಕೆಎಸ್‌ಆರ್‌ಟಿಸಿ ಬಸ್‌ ಅಪಘಾತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮದ್ದೂರು ಬಳಿ ಕೆಎಸ್‌ಆರ್‌ಟಿಸಿ ಬಸ್‌ ಅಪಘಾತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

KSRTC Bus Accident: ಚಾಮರಾಜನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಸೋಮವಾರದಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ರುದ್ರಾಕ್ಷಿಪುರದ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೆ ಒಳಗಾಗಿದೆ. ವೇಗವಾಗಿ ಹೊರಟಿದ್ದ ಬಸ್‌ ಏಕಾಏಕಿ ಚಾಲಕನ ನಿಯಂತ್ರಣ ಕಳೆದುಕೊಂಡು ಉರುಳಿ ಬಿದ್ದಿತು. ಬಿದ್ದ ರಭಸಕ್ಕೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ. ಬಸ್‌ನಲ್ಲಿದ್ದ ಸುಮಾರು 33 ಜನರಿಗೆ ಗಾಯವಾಗಿದ್ದು, ಗಾಯಗೊಂಡಿರುವ ಎಲ್ಲಾ ಪ್ರಯಾಣಿಕರಿಗೆ ಮದ್ದೂರು ತಾಲೂಕು ಆಸ್ಪತ್ರೆಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಮೂವರ ಸ್ಥಿತಿ ಗಂಭೀರವಾಗಿದ್ದು ಅವರನ್ನು ಮಂಡ್ಯದ ಮಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.

ಚಾಮರಾಜನಗರದಿಂದ ಬೆಳಗಿನ ಜಾವ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್‌ ಬೆಳಿಗ್ಗೆ ಬೆಂಗಳೂರು ಕಡೆಗೆ ಹೋಗುತ್ತಿತ್ತು. ಅದೂ ಮದ್ದೂರು ತಾಲ್ಲೂಕಿನ ರುದ್ರಾಕ್ಷಿಪುರ ಬಳಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿತು. ಬಸ್‌ನಲ್ಲಿ ಸಾಕಷ್ಟು ಪ್ರಯಾಣಿಕರು ಇದ್ದರು. ಕೂಡಲೇ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಕೆಳಕ್ಕೆ ಇಳಿಸಲಾಯಿತು. ಆನಂತರ ಗಾಯಗೊಂಡವರನ್ನು ಮದ್ದೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವು ಬೆಂಗಳೂರಿನ ನಿವಾಸಿಗಳಾಗಿದ್ದರೆ, ಇನ್ನು ಕೆಲವರು ಚಾಮರಾಜನಗರ, ಮಂಡ್ಯದಿಂದಲೂ ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಮಹಿಳೆಯರು ಕೂಡ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೆಲವರಿಗೆ ಗಂಭೀರ ಏಟುಗಳಾಗಿದ್ದು, ಅವರಿಗೆ ಮಂಡ್ಯದ ಮಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ವಿಷಯ ತಿಳಿದು ಮಂಡ್ಯ ಜಿಲ್ಲಾಧಿಕಾರಿ ಡಾ: ಕುಮಾರ ಅವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ‌ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಮೋಹನ್, ಕೆಎಸ್ಆರ್‌ಟಿ‌ಸಿ ಜಿಲ್ಲಾ ನಿಯಂತ್ರಕ ನಾಗರಾಜು ಕೂಡ ಜತೆಗಿದ್ದು ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಅತಿ ಅವಶ್ಯಕತೆ ಇರುವಂತಹ ತುರ್ತು ಪರಿಸ್ಥಿತಿಯಲ್ಲಿರುವ ಪ್ರಯಾಣಿಕರನ್ನು ಅವಶ್ಯಕವಿದ್ದಲ್ಲಿ ಮಿಮ್ಸ್ ಗೆ ಹಾಗೂ ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಿ ಚಿಕಿತ್ಸೆ ಕೊಡಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರಲ್ಲದೇ ಒಂದು ವೇಳೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಲ್ಲಿ, ಅದರ ಖರ್ಚು ವೆಚ್ಚವನ್ನು ಕೆ ಎಸ್ ಆರ್ ಟಿಸಿ ವತಿಯಿಂದ ಭರಿಸುವಂತೆ ನಿರ್ದೇಶನ ನೀಡಿದರು.

ಪರಿಸ್ಥಿತಿ ಅವಲೋಕಿಸಿದರೆ ಅಪಘಾತದಲ್ಲಿ ಸಣ್ಣ ಪುಟ್ಟ ಗಾಯಗಳಾಗಿದ್ದು ಎರಡು-ಮೂರು ಜನರಿಗೆ ಹೆಚ್ಚು ಗಾಯಗೊಂಡಿದ್ದು, ಅವರನ್ನು ಮಿಮ್ಸ್ ಅಥವಾ ಚಿಕಿತ್ಸೆಗೆ ಉನ್ನತ ಆಸ್ಪತ್ರೆಗೆ ಪ್ರಥಮ ಆದ್ಯತೆ ಮೇಲೆ ಸ್ಥಳಾಂತರ ಗೊಳಿಸಲು ವೈದ್ಯಾಧಿಕಾರಿಗಳಿಗೆ ತಿಳಿಸಿದರು.

Whats_app_banner