ಕೆಎಸ್‌ಆರ್‌ಟಿಸಿ ಹೊಸ ಟಿಕೆಟ್‌ ದರ ಭಾನುವಾರದಿಂದ ಜಾರಿ; ಬೆಂಗಳೂರಿನಿಂದ ವಿವಿಧ ನಗರಗಳಿಗೆ ಬಸ್‌ ಪ್ರಯಾಣ ಎಷ್ಟು ದುಬಾರಿಯಾಗಬಹುದು ನೋಡಿ
ಕನ್ನಡ ಸುದ್ದಿ  /  ಕರ್ನಾಟಕ  /  ಕೆಎಸ್‌ಆರ್‌ಟಿಸಿ ಹೊಸ ಟಿಕೆಟ್‌ ದರ ಭಾನುವಾರದಿಂದ ಜಾರಿ; ಬೆಂಗಳೂರಿನಿಂದ ವಿವಿಧ ನಗರಗಳಿಗೆ ಬಸ್‌ ಪ್ರಯಾಣ ಎಷ್ಟು ದುಬಾರಿಯಾಗಬಹುದು ನೋಡಿ

ಕೆಎಸ್‌ಆರ್‌ಟಿಸಿ ಹೊಸ ಟಿಕೆಟ್‌ ದರ ಭಾನುವಾರದಿಂದ ಜಾರಿ; ಬೆಂಗಳೂರಿನಿಂದ ವಿವಿಧ ನಗರಗಳಿಗೆ ಬಸ್‌ ಪ್ರಯಾಣ ಎಷ್ಟು ದುಬಾರಿಯಾಗಬಹುದು ನೋಡಿ

KSRTC Fare Hike: ನಾಲ್ಕು ವರ್ಷಗಳ ಬಳಿಕ ಕೆಎಸ್‌ಆರ್‌ಟಿಸಿ ಬಸ್‌ ಟಿಕೆಟ್‌ ದರ ಏರಿಕೆಯಾಗುತ್ತಿದೆ. ಶೇಕಡ 15ರಷ್ಟು ಬಸ್ ಪ್ರಯಾಣ ದರ ಏರಿಕೆಗೆ ಸರ್ಕಾರ ಒಪ್ಪಿಗೆ ನೀಡಿದೆ. ಕೆಎಸ್‌ಆರ್‌ಟಿಸಿ ಹೊಸ ದರ ಭಾನುವಾರದಿಂದ ಜಾರಿಯಾಗುತ್ತಿದ್ದು, ಬೆಂಗಳೂರಿನಿಂದ ವಿವಿಧೆಡೆಗೆ ಪರಿಷ್ಕೃತ ದರ ಎಷ್ಟಿರಬಹುದು ಎಂಬ ವಿವರ ಇಲ್ಲಿದೆ.

ಕೆಎಸ್‌ಆರ್‌ಟಿಸಿ ಹೊಸ ಬಸ್ ದರ ಭಾನುವಾರದಿಂದ ಜಾರಿಯಾಗಲಿದೆ (ಸಾಂಕೇತಿಕ ಚಿತ್ರ)
ಕೆಎಸ್‌ಆರ್‌ಟಿಸಿ ಹೊಸ ಬಸ್ ದರ ಭಾನುವಾರದಿಂದ ಜಾರಿಯಾಗಲಿದೆ (ಸಾಂಕೇತಿಕ ಚಿತ್ರ) (HT File Photo)

KSRTC Fare Hike: ಕರ್ನಾಟಕದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಶೇಕಡ 15 ಏರಿಕೆಯಾಗಿದ್ದು, ಇದೇ ಭಾನುವಾರ (ಜನವರಿ 5) ಜಾರಿಗೆ ಬರಲಿದೆ. ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಬಸ್ ಪ್ರಯಾಣ ದರ ನಾಲ್ಕು ವರ್ಷಗಳ ಬಳಿಕ ಏರಿಕೆಯಾಗುತ್ತಿದೆ. ಬಿಎಂಟಿಸಿ ಬಸ್‌ಗಳ ಪ್ರಯಾಣ ದರ 10 ವರ್ಷಗಳ ನಂತರ ಏರಿಕೆಯಾಗುತ್ತಿದೆ. ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣ ದರ ಪರಿಷ್ಕರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ನಿನ್ನೆಯಷ್ಟೇ ಒಪ್ಪಿಗೆ ನೀಡಿದೆ. ಶೇಕಡ 15 ದರ ಹೆಚ್ಚಳಕ್ಕೆ ಅನುಮತಿ ಸಿಕ್ಕಿದ ಕಾರಣ ಈಗ ನಾಲ್ಕೂ ನಿಗಮಗಳು ಹಂತಗಳ ಪ್ರಕಾರ ಪರಿಷ್ಕೃತ ದರವನ್ನು ಲೆಕ್ಕಹಾಕಿ ಪ್ರಕಟಿಸಬೇಕಾಗಿದೆ.

ಬೆಂಗಳೂರು ನಗರ ಸಾರಿಗೆ ಬಿಎಂಟಿಸಿ ಬಸ್ ಪ್ರಯಾಣ ದರ ಎಷ್ಟು ಹೆಚ್ಚಾಗಬಹುದು?

ಬಿಎಂಟಿಸಿ ಬಸ್ ದರ ಕೊನೆಯದಾಗಿ 2014ರ ಏಪ್ರಿಲ್ 25 ರಂದು ಶೇಕಡ 17 ಏರಿಕೆಯಾಗಿ ಪರಿಷ್ಕರಣೆಯಾಗಿದ್ದರೆ, ಮರುವರ್ಷವೇ 2015ರ ಜನವರಿ 10 ರಂದು ಶೇಕಡ 2 ಇಳಿಕೆ ಮಾಡಿ ದರ ಪರಿಷ್ಕರಿಸಲಾಗಿತ್ತು. ಇದಾದ ಬಳಿಕ ಈಗ ಶೇಕಡ 15 ದರ ಏರಿಕೆಗೆ ಸರ್ಕಾರ ಅನುಮತಿ ನೀಡಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮೂಲಗಳ ಪ್ರಾಕರ, ಬಿಎಂಟಿಸಿ ಬಸ್‌ಗಳಲ್ಲಿ ಸದ್ಯ ಒಂದು ಸ್ಟೇಜ್‌ಗೆ 5 ರೂಪಾಯಿ ದರ ವಿಧಿಸಲಾಗುತ್ತಿದೆ. ಶೇಕಡ 15 ಏರಿಕೆ ಬಳಿಕ ಪರಿಷ್ಕೃತ ಪ್ರಯಾಣದ ದರ 75 ಪೈಸೆ ಹೆಚ್ಚಾಗಲಿದೆ. 25 ಪೈಸೆ ಚಲಾವಣೆ ಇಲ್ಲದ ಕಾರಣ, 1 ರೂಪಾಯಿ ದರ ಏರಿಸುವ ಸಾಧ್ಯತೆ ಇದೆ. ಹೀಗಾಗಿ ಬಿಎಂಟಿಸಿ ಬಸ್ ಪ್ರಯಾಣ ದರ ಕನಿಷ್ಠ 6 ರೂಪಾಯಿ ಆಗಬಹುದು. ಪರಿಷ್ಕೃತ ಬಸ್‌ ಪ್ರಯಾಣ ದರ ಈ ಭಾನುವಾರದಿಂದಲೇ ಜಾರಿಗೆ ಬರಲಿದೆ. ಭಾರಿ ನಷ್ಟದ ಸುಳಿಗೆ ಸಿಲುಕಿರುವ ಸಾರಿಗೆ ನಿಗಮಗಳಿಗೆ ಪ್ರಯಾಣ ದರ ಏರಿಕೆ ಕೊಂಚ ನಿರಾಳ ಭಾವವನ್ನು ನೀಡಿದೆ.

ಬಿಎಂಟಿಸಿ ಬಸ್‌ನಲ್ಲಿ ಮೆಜೆಸ್ಟಿಕ್ ಬಸ್‌ ನಿಲ್ದಾಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈಗ 246 ರೂಪಾಯಿ ಟಿಕೆಟ್ ದರ ಇದ್ದು, ಜನವರಿ 5 ರಿಂದ ಇದು 282 ರೂಪಾಯಿ ಆಗಲಿದೆ.

ಬೆಂಗಳೂರು ನಗರದಿಂದ ವಿವಿಧೆಡೆಗೆ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಎಷ್ಟಾಗಬಹುದು

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ಕೊನೆಯದಾಗಿ 2020ರ ಫೆಬ್ರವರಿ 26 ರಂದು ದರ ಪರಿಷ್ಕರಣೆ ಶೇಕಡ 12 ಆಗಿದ್ದು ಆನಂತರ ಪರಿಷ್ಕರಣೆಯಾಗಿಲ್ಲ. ಈಗ ಮಾಡಿರುವ ದರ ಏರಿಕೆ ಜನವರಿ 5 ರಿಂದ ಜಾರಿಗೆ ಬರಲಿದೆ. ಪ್ರತಿ ಸ್ಟೇಜ್ ದರದ ಮೇಲೆ ಇದು ಅನ್ವಯವಾಗಲಿದೆ. ಸಾಮಾನ್ಯ ಹಾಗೂ ಐಷಾರಾಮಿ ಬಸ್ ಗಳ ಪ್ರಯಾಣ ದರ ಏರಿಕೆ ಆಗಲಿದೆ.

ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಎಷ್ಟಾಗಬಹುದು (ಆವರಣದಲ್ಲಿರುವುದು ಈಗಿನ ದರ)

ಬೆಂಗಳೂರು - ಮಂಗಳೂರು

ಸಾಮಾನ್ಯ ಸಾರಿಗೆ - 487 ರೂ. (424)

ನಾನ್ ಎಸಿ ಸ್ಲೀಪರ್‌ 1153 ರೂ. (1002)

ಎಸಿ ಸ್ಲೀಪರ್ - 1382 ರೂ. (1201)

ಐರಾವತ ಕ್ಲಬ್ ಕ್ಲಾಸ್‌ - 1389 ರೂ (1208)

ಬೆಂಗಳೂರು - ಮೈಸೂರು

ಸಾಮಾನ್ಯ ಸಾರಿಗೆ - 233 ರೂ. (203)

ನಾನ್ ಎಸಿ ಸ್ಲೀಪರ್‌ 398 ರೂ. (346)

ಎಸಿ ಸ್ಲೀಪರ್ - 531 ರೂ. (461)

ಐರಾವತ ಕ್ಲಬ್ ಕ್ಲಾಸ್‌ - 594 ರೂ (516)

ಬೆಂಗಳೂರು- ಹುಬ್ಬಳ್ಳಿ

ಸಾಮಾನ್ಯ ಸಾರಿಗೆ - 599 ರೂ. (521)

ನಾನ್ ಎಸಿ ಸ್ಲೀಪರ್‌ - 1187 ರೂ. (1032)

ಎಸಿ ಸ್ಲೀಪರ್ - 1229 ರೂ. (1086)

ಐರಾವತ ಕ್ಲಬ್ ಕ್ಲಾಸ್‌ - 1089 ರೂ (939)

ಬೆಂಗಳೂರು - ಕಲಬುರಗಿ

ಸಾಮಾನ್ಯ ಸಾರಿಗೆ - 835 ರೂ. (726)

ನಾನ್ ಎಸಿ ಸ್ಲೀಪರ್‌ - 1197 ರೂ. (1041)

ಎಸಿ ಸ್ಲೀಪರ್ - 1904 ರೂ. (1656)

ಐರಾವತ ಕ್ಲಬ್ ಕ್ಲಾಸ್‌ - 1555 ರೂ. (1352)

ಬೆಂಗಳೂರು - ಬೆಳಗಾವಿ

ಸಾಮಾನ್ಯ ಸಾರಿಗೆ - 748 ರೂ. (651)

ನಾನ್ ಎಸಿ ಸ್ಲೀಪರ್‌ - 1170 ರೂ. (1019)

ಎಸಿ ಸ್ಲೀಪರ್ - 1479 ರೂ. (1286)

ಐರಾವತ ಕ್ಲಬ್ ಕ್ಲಾಸ್‌ - 1175 ರೂ. (1022)

ಬೆಂಗಳೂರು- ದಾವಣಗೆರೆ

ಸಾಮಾನ್ಯ ಸಾರಿಗೆ - 391 ರೂ. (340)

ನಾನ್ ಎಸಿ ಸ್ಲೀಪರ್‌ - 770 ರೂ. (670)

ಐರಾವತ ಕ್ಲಬ್ ಕ್ಲಾಸ್‌ - 798 ರೂ. (694)

ಬೆಂಗಳೂರು- ಶಿವಮೊಗ್ಗ

ಸಾಮಾನ್ಯ ಸಾರಿಗೆ - 382 ರೂ. (332)

ನಾನ್ ಎಸಿ ಸ್ಲೀಪರ್‌ - 853 ರೂ. (742)

ಐರಾವತ ಕ್ಲಬ್ ಕ್ಲಾಸ್‌ - 945 ರೂ. (742)

ದರ ಏರಿಕೆಯಿಂದಾಗಿ ಪ್ರತಿ ತಿಂಗಳು ಹೆಚ್ಚುವರಿಯಾಗಿ 74.85 ಕೋಟಿ ರೂಪಾಯಿ ಸಂಗ್ರಹವಾಗುವ ನಿರೀಕ್ಷೆ ಇದೆ. ಶಕ್ತಿ ಯೋಜನೆಗಾಗಿ ಸರ್ಕಾರ ಪ್ರತಿ ತಿಂಗಳು 417.92 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕಿದೆ. ಈ ಆರ್ಥಿಕ ವರ್ಷದಲ್ಲಿ ಕರ್ನಾಟಕ ಸರ್ಕಾರ ಶಕ್ತಿ ಯೋಜನೆಗಾಗಿ 5,015 ಕೋಟಿ ರೂಪಾಯಿ ಮೀಸಲಿಟ್ಟಿದೆ. ಕೆಎಸ್‌ಆರ್‌ಟಿಸಿಯಲ್ಲಿ ಈಗ 8,800 ಬಸ್‌, ಎನ್‌ಡಬ್ಲ್ಯುಆರ್‌ಟಿಸಿಯಲ್ಲಿ 4866, ಕೆಕೆಆರ್‌ಟಿಸಿಯಲ್ಲಿ 4864 ಮತ್ತು ಬಿಎಂಟಿಸಿಯಲ್ಲಿ 6,539 ಬಸ್‌ಗಳು ಸಾರ್ವಜನಿಕರಿಗೆ ಸಂಚಾರ ಸೇವೆ ಒದಗಿಸುತ್ತಿವೆ.

Whats_app_banner