CM Bommai on HD Kumaraswamy: ಬಿಜೆಪಿ ಬಗ್ಗೆ ಕುಮಾರಸ್ವಾಮಿ ಚಿಂತಿಸಬೇಕಿಲ್ಲ; 'ಬ್ರಾಹ್ಮಣ ಸಿಎಂ' ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು
ಚುನಾವಣೆ ನಂತರ ಬಿಜೆಪಿಯಲ್ಲಿ ಬ್ರಾಹ್ಮಣ ಸಿಎಂ ಮಾಡಲು ಆರ್ ಎಸ್ಎಸ್ ನಿರ್ಧರಿಸಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಸಿಎಂ ಬೊಮ್ಮಾಯಿ ಸೇರಿ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ.
ನವದೆಹಲಿ: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆಯೊಂದು ಬಿಜೆಪಿ ನಾಯಕರು ಕೇರಳಿ ಕೆಂಡವಾಗುವಂತೆ ಮಾಡಿದೆ.
ಟ್ರೆಂಡಿಂಗ್ ಸುದ್ದಿ
ಹೆಚ್ಡಿಕೆ ನೀಡಿರುವ ಈ ವಿವಾದಾತ್ಮಕ ಹೇಳಿಕೆ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಎಂಎಲ್ಸಿ ಎನ್ ರವಿ ಕುಮಾರ್ ಸೇರಿದಂತೆ ಹಲವು ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿ ಹೇಳಿಕೆಯನ್ನು ಖಂಡಿಸಿದ್ದಾರೆ.
ಪ್ರಹ್ಲಾದ್ ಜೋಶಿಯವರನ್ನ ಚುನಾವಣೆ ನಂತರ ಸಿಎಂ ಮಾಡಬೇಕು ಅಂತ ಸಂಘ ಪರಿವಾರ ನಿರ್ಧರಿಸಿದೆ. ಜೋಶಿ ಅವರು ನಮ್ಮ ಹಳೆಯ ಕಾಲದ ಬ್ರಾಹ್ಮಣರಲ್ಲ. ಬ್ರಾಹ್ಮಣರಲ್ಲಿ ಎರಡು ಮೂರು ವಿಧಗಳಿವೆ. ಶೃಂಗೇರಿಯ ಮಠ ಒಡೆದ ಬ್ರಾಹ್ಮಣ ವರ್ಗ ಜೋಶಿ ಅವರದ್ದು. ಮಹಾತ್ಮ ಗಾಂಧಿ ಅವರನ್ನು ಕೊಂದ ಬ್ರಾಹ್ಮಣರು ಇವರು ಎಂದಿದ್ದರು.
ಕುಮಾರಸ್ವಾಮಿ ಅವರ ಈ ಹೇಳಿಕೆ ಹೊರ ಬೀಳುತ್ತಿದ್ದಂತೆ ಕೇಸರಿ ನಾಯಕರು ತಿರುಗೇಟು ನೀಡಿದ್ದಾರೆ. ದೆಹಲಿ ಪ್ರವಾಸದಲ್ಲಿದ್ದ ಸಿಎಂ ಬೊಮ್ಮಾಯಿ, ರಾಜಕಾರಣದಲ್ಲಿ ಜಾತಿ ಮಾತುಗಳು ಅಪ್ರಸ್ತುತ ಎಂದಿದ್ದಾರೆ.
ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ನಮ್ಮ ಪಕ್ಷ ಹಾಗೂ ಅದರ ಕಾರ್ಯಕ್ರಮಗಳು ಏನು ಮಾಡಲು ಸಾಧ್ಯ ಎಂಬ ಬಗ್ಗೆ ಮಾತನಾಡಿದರೆ ಜನ ಚಿಂತನೆ ಮಾಡುತ್ತಾರೆಯೇ ಹೊರತಾಗಿ ವೈಯಕ್ತಿಕ ಮಾತುಗಳು ಪ್ರಸ್ತುತವಲ್ಲ ಎಂದು ಹೇಳಿದ್ದಾರೆ.
ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಅವರು ನಮ್ಮ ಪಕ್ಷದ ಬಗ್ಗೆ ಅವರು ಚಿಂತಿಸಬೇಕಿಲ್ಲ. ಜೆಡಿಎಸ್ ಮೊದಲು ಅವರ ಪಕ್ಷ ಸರಿಮಾಡಿಕೊಳ್ಳಲಿ. ಬ್ರಾಹ್ಮಣರು ಎಂದೆಲ್ಲಾ ಜನ ನೋಡುವುದಿಲ್ಲ ಎಂದಿದ್ದಾರೆ.
ಸಿಡಿ ದಾಖಲೆ ನೀಡಿದರೆ ಕಾನೂನು ಕ್ರಮ
ಮದುವೆಯೊಂದರಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿರುವುದಾಗಿ ತಿಳಿಸಿರುವ ಸಿಎಂ ಬೊಮ್ಮಾಯಿ, ಶಾಸಕ ರಮೇಶ್ ಜಾರಳಿಹೊಳಿ ತಮ್ಮನ್ನು ಭೇಟಿಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸಿಡಿ ವಿಚಾರ ಸಂಬಂಧ ವಿವರಗಳನ್ನು ನೀಡಿದರೆ ಕಾನೂನು ಪ್ರಕಾರ ಕೆಲಸ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಹೆಚ್ಡಿಕೆ ವಿರುದ್ಧ ಎಂಎಲ್ಸಿ ರವಿಕುಮಾರ್ ವಾಗ್ದಾಳಿ
ಹೆಚ್ ಡಿ ಕುಮಾರಸ್ವಾಮಿ ಅವರು ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಎಂಎಲ್ಸಿ ಎನ್ ರವಿಕುಮಾರ್, ಕುಮಾರಸ್ವಾಮಿ ಕುರಿತ ಸಿಡಿ, ತೋಟದ ಮನೆ ಮತ್ತು ತಾಜ್ ವೆಸ್ಟ್ ಎಂಡ್ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದೇ ರೀತಿ ಮುಂದುವರಿದರೆ ನಾವು ಕೂಡ ಮುಂದೆ ಮಾತಾಡ್ತೇವೆ. ಹೆಚ್.ಡಿ.ಕುಮಾರಸ್ವಾಮಿ ಏನೂ ಬಹಳ ಸತ್ಯ ಹರಿಶ್ಚಂದ್ರ ಅಲ್ಲ. ತಾಜ್ ವೆಸ್ಟ್ ಎಂಡ್ ಹೋಟೆಲ್ ನಿಂದ ಆಡಳಿತ ನಡೆಸುತ್ತಿದ್ದರು. ಕುಮಾರಸ್ವಾಮಿ ಸ್ವಜಾತಿ ಬಿಟ್ಟು ಹೊರಬರದ ಕೂಪ ಮಂಡೂಕ ಎಂದು ಎನ್.ರವಿಕುಮಾರ್ ವಾಗ್ದಾಳಿ ಮಾಡಿದರು.