ಕುಣಿಗಲ್ ವಿದ್ಯುತ್ ಚಿತಾಗಾರ ಉದ್ಘಾಟನೆಯಾಗಿ 9 ತಿಂಗಳು ಪೂರ್ಣವಾದರೂ ಬಳಕೆಗೆ ಇಲ್ಲದೆ ಪಾಳುಬಿದ್ದ ಕಟ್ಟಡ, ಪುರಸಭೆ ಎಚ್ಚೆತ್ತುಕೊಳ್ಳುವುದೇ
Tumakuru News; ತುಮಕೂರು ಜಿಲ್ಲೆಯ ಕುಣಿಗಲ್ ಪುರಸಭೆ ವ್ಯಾಪ್ತಿಯ ವಿದ್ಯುತ್ ಚಿತಾಗಾರ ಉದ್ಘಾಟನೆಯಾಗಿ 9 ತಿಂಗಳು ಕಳೆದಿದೆ. ಆದರೂ, ಅದು ಬಳಕೆಗಿಲ್ಲದೆ ಪಾಳುಬಿದ್ದಿದೆ. ಅದನ್ನು ಸಾರ್ವಜನಿಕ ಬಳಕೆಗೆ ಬಿಡುವುದಕ್ಕೆ ಪುರಸಭೆ ಎಚ್ಚೆತ್ತುಕೊಳ್ಳುವುದೇ ಎಂಬ ನಿರೀಕ್ಷೆಯಲ್ಲಿದ್ದಾರೆ ಸ್ಥಳೀಯರು. (ವರದಿ- ಈಶ್ವರ್, ತುಮಕೂರು)
ತುಮಕೂರು: ಕುಣಿಗಲ್ ಪುರಸಭೆಯ 19ನೇ ವಾರ್ಡ್‌ನಲ್ಲಿರುವ ವಿದ್ಯುತ್ ಚಿತಾಗಾರ ಉದ್ಘಾಟನೆಯಾಗಿದ್ದರೂ ಬಳಕೆಗೆ ಸಿಗದೆ ಪಾಳುಬಿದ್ದಿದೆ. ಸಂಸದರ ಪ್ರದೇಶಾಭಿವೃದ್ಧಿ ನಿಧಿಯ ಅನುದಾನದಲ್ಲಿ ಇದನ್ನು ನಿರ್ಮಿಸಲಾಗಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಚಿತಾಗಾರವನ್ನು ಬಳಕೆಗೆ ಬಿಡಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸಂಸದರ ಪ್ರದೇಶಾಭಿವೃದ್ಧಿ ನಿಧಿಯ ಅನುದಾನದಲ್ಲಿ ಈ ಚಿತಾಗಾರ 2018-19ರಲ್ಲೇ ನಿರ್ಮಾಣಗೊಂಡಿತ್ತು. ಆದರೂ ಕೋವಿಡ್ ಕಾರಣಕ್ಕೆ ತಾಂತ್ರಿಕ ಕಾಮಗಾರಿ ವಿಳಂಬವಾಗಿತ್ತು ಕೊನೆಗೆ ಕಳೆದ ವರ್ಷ ನವೆಂಬರ್‌ನಲ್ಲಿ ಇದರ ಉದ್ಘಾಟನೆಯಾಗಿದೆ. ಇದೀಗ ಒಂಭತ್ತು ತಿಂಗಳು ಕಳೆದರೂ ಇದು ಬಳಕೆಗೆ ಲಭ್ಯವಿಲ್ಲದೇ ಇರುವುದು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.
2.6 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ವಿದ್ಯುತ್ ಚಿತಾಗಾರ
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ಕುಣಿಗಲ್ ಪಟ್ಟಣದಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಹಿಂದಿನ ಸಂಸದ ಡಿ.ಕೆ.ಸುರೇಶ್, ಹಾಲಿ ಶಾಸಕ ಡಾ.ರಂಗನಾಥ ಯೋಜನೆ ರೂಪಿಸಿ ಸಂಸದರ ನಿಧಿಯ ಅನುದಾನ ಬಳಸಿದ್ದರು.
ಇದರಂತೆ, ರಾಮನಗರ ನಿರ್ಮಿತಿ ಕೇಂದ್ರ 2.60 ಕೋಟಿ ವೆಚ್ಚದಲ್ಲಿ 2017-18ರಲ್ಲಿ ಇದರ ನಿರ್ಮಾಣ ಕೈಗೊಂಡಿತ್ತು. 2018-19ರಲ್ಲಿ ಇದರ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಅದೇ ವರ್ಷ ಕುಣಿಗಲ್ ಪುರಸಭೆ ಇದನ್ನು ವಶಕ್ಕೆ ಪಡೆದುಕೊಂಡಿತ್ತಾದರೂ, ವಿದ್ಯುತ್ ಸಂಪರ್ಕ, ತಾಂತ್ರಿಕ ಕಾಮಗಾರಿ ಕೋವಿಡ್ ಸಂಕಷ್ಟದ ಕಾರಣಕ್ಕೆ ವಿಳಂಬವಾಗಿತ್ತು.
ಕೊನೆಗೆ 2023ರ ನವೆಂಬರ್‌ನಲ್ಲಿ ಅಂದಿನ ಸಂಸದ ಡಿಕೆ ಸುರೇಶ್ ಮತ್ತು ಶಾಸಕ ಡಾ. ರಂಗನಾಥ್ ಸೇರಿ ಈ ವಿದ್ಯುತ್ ಚಿತಾಗಾರವನ್ನು ಉದ್ಘಾಟಿಸಿದ್ದರು. ಇದೇ ವೇಳೆ ಪುರಸಭೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಲು 30 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ಕೈಲಾಸ ರಥಕ್ಕೂ ಚಾಲನೆ ನೀಡಲಾಯಿತು.
ಕುಣಿಗಲ್ ಪುರಸಭೆ ಎಚ್ಚೆತ್ತುಕೊಳ್ಳುವುದು ಯಾವಾಗ
ಚಿತಾಗಾರ ಉದ್ಘಾಟನೆಯಾಗಿ 9 ತಿಂಗಳು ಕಳೆಯುತ್ತಾ ಬಂದರೂ ಸಮರ್ಪಕ ಸಿಬ್ಬಂದಿ ಇಲ್ಲದೆ ಶವ ಸಂಸ್ಕಾರ ಆಗಿಲ್ಲ, ಇದರಿಂದಾಗಿ ಸಾರ್ವಜನಿಕರ ತೆರಿಗೆ ಹಣ 2.60 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಚಿತಾಗಾರ ಪಾಳು ಬೀಳುವಂತಾಗಿದೆ. ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದರೂ ಶಾಸಕರಾಗಿ ಕಾಂಗ್ರೆಸ್‌ನ ಡಾ.ರಂಗನಾಥ್ ಇದ್ದರೂ ಮಾಜಿ ಸಂಸದ ಡಿ.ಕೆ.ಸುರೇಶ್ ಜನಪರ ಕಾಳಜಿಯಿಂದ ಅವರ ಅನುದಾನದಲ್ಲಿ ನಿರ್ಮಿಸಿದ ಚಿತಾಗಾರ ಪಾಳು ಬೀಳುವಂತಾಗಿದ್ದು ಸ್ಥಳೀಯ ಆಡಳಿತದ ಇಚ್ಛಾಶಕ್ತಿ ಕೊರತೆ ಎನ್ನಲಾಗುತ್ತಿದೆ.
ಈ ಮಧ್ಯೆ ಶವ ಸಂಸ್ಕಾರಕ್ಕೆ ಒಂದು ಸಾವಿರ, ಶವ ಸಾಗಾಣೆಗೆ ಐದು ನೂರು ದರ ನಿಗದಿ ಮಾಡಲಾಗಿದೆ, ಕೈಲಾಸ ರಥ ವಾಹನ ಚಾಲನೆಗೊಂಡಿದ್ದರೂ ವಾಹನದ ನೋಂದಣಿ ಇತರೆ ದಾಖಲೆಗಳು ಸಮರ್ಪಕ ನಿರ್ವಹಣೆ ಆಗಿಲ್ಲ ಎಂಬ ದೂರು ವ್ಯಾಪಕವಾಗಿದೆ.
ಚಿತಾಗಾರ ಉದ್ಘಾಟನೆ ಹಂತದಲ್ಲೆ ಅಧಿಕಾರಿಗಳಿಗೆ ನಿರ್ವಹಣೆ ವೆಚ್ಚ ಹಾಗೂ ನಿರ್ವಹಣೆ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ನಡೆಸಲು ಶಾಸಕರು, ಕುಣಿಗಲ್ ಪುರಸಭೆ ಸದಸ್ಯರು ಸೂಚಿಸಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಗಿಲ್ಲ ಎಂದು ಪುರಸಭೆಯಲ್ಲಿ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿರುವ ಸದಸ್ಯ ಶ್ರೀನಿವಾಸ್ ಹೇಳಿದ್ದಾರೆ.
(ವರದಿ- ಈಶ್ವರ್, ತುಮಕೂರು)