ಸರ್ಕಾರಿ ಜಮೀನು ಒತ್ತುವರಿ ಪ್ರಕರಣ; ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಶವಿದ್ದ ಜಮೀನು ಮರುವಶಕ್ಕೆ ಜೆಸಿಬಿ ಕಾರ್ಯಾಚರಣೆ ಶುರು
ಸರ್ಕಾರಿ ಜಮೀನು ಒತ್ತುವರಿ ಪ್ರಕರಣದಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಹಿನ್ನಡೆ ಉಂಟಾಗಿದೆ. ಕರ್ನಾಟಕ ಹೈಕೋರ್ಟ್ ನಿರ್ದೇಶನ ಪ್ರಕಾರ, ಹೆಚ್ ಡಿ ಕುಮಾರಸ್ವಾಮಿ ಕುಟುಂಬದ ಸ್ವಾಧೀನ ಇದ್ದ 14 ಎಕರೆ ಜಮೀನು ಒತ್ತುವರಿ ತೆರವುಗೊಳಿಸಲು ಕಂದಾಯ ಇಲಾಖೆ ಅಧಿಕಾರಿಗಳು ಕ್ರಮ ಜರುಗಿಸಿದ್ದಾರೆ.

ಬೆಂಗಳೂರು: ರಾಮನಗರ ಜಿಲ್ಲೆಯಲ್ಲಿ 14 ಎಕರೆ ಸರ್ಕಾರಿ ಜಮೀನು ಒತ್ತುವರಿ ಪ್ರಕರಣದಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ ಹಿನ್ನಡೆಯಾಗಿದೆ. ಕರ್ನಾಟಕದ ಕಂದಾಯ ಇಲಾಖೆ ಅಧಿಕಾರಿಗಳು ಮಂಗಳವಾರ ಒತ್ತುವರಿ ತೆರವು ಕಾರ್ಯಾಚರಣೆ ಶುರುಮಾಡಿದ್ದಾರೆ. ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ಸ್ವಾಧೀನ ಇರುವಂತಹ 14 ಎಕರೆ ಸರ್ಕಾರಿ ಜಮೀನು ಒತ್ತುವರಿ ತೆರವು ಕಾರ್ಯಾಚರಣೆಗೆ ಅಧಿಕಾರಿಗಳು ಜೆಸಿಬಿಯೊಂದಿಗೆ ಸಿದ್ದತೆ ನಡೆಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಕುಮಾರಸ್ವಾಮಿ ವಶವಿದ್ದ ಜಮೀನು ಮರುವಶಕ್ಕೆ ಕಾರ್ಯಾಚರಣೆ ಶುರು
ಕರ್ನಾಟಕ ಹೈಕೋರ್ಟ್ ನಿರ್ದೇಶನಾನುಸಾರ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಅಧಿಕಾರಿಗಳು ರಾಮನಗರ ಜಿಲ್ಲೆಯ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ನೆರವಿನೊಂದಿಗೆ ಒತ್ತುವರಿ ತೆರವು ಕಾರ್ಯಾಚರಣೆ ಶುರುಮಾಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಒತ್ತುವರಿ ತೆರವು ಕಾರ್ಯಾಚರಣೆಗೆ ಜೆಸಿಬಿ (ಅರ್ಥ ಮೂವರ್) ಯಂತ್ರಗಳನ್ನು ನಿಯೋಜಿಸಲಾಗಿದೆ. ಕಾನೂನು ಕ್ರಮಗಳನ್ನು ಅನುಸರಿಸುವುದಕ್ಕಾಗಿ ಅಕ್ರಮ ನಿರ್ಮಾಣಗಳನ್ನು ಸರ್ಕಾರಿ ಜಮೀನಿನಿಂದ ತೆರವುಗೊಳಿಸುವ ಕೆಲಸ ಶುರುವಾಗಿದೆ ಎಂದು ವರದಿ ವಿವರಿಸಿದೆ.
ರಾಮನಗರ ಜಿಲ್ಲೆ ಬಿಡದಿಯ ಕೇತಗಾನಹಳ್ಳಿಯ ಸರ್ವೆ ನಂಬರ್ 7,8,9,10,16,17 ಮತ್ತು 79ರಲ್ಲಿ ಭೂ ಒತ್ತುವರಿಯಾಗಿದೆ ಎಂಬ ಆರೋಪ ವ್ಯಕ್ತವಾಗಿತ್ತು. ಹೆಚ್ ಡಿ ಕುಮಾರಸ್ವಾಮಿ ಮತ್ತು ಇತರೆ ಕೆಲವರು ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ವಿಚಾರ ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಒಳಪಟ್ಟಿದ್ದು, ಇದೀಗ ಹೈಕೋರ್ಟ್‌ನ ನಿರ್ದೇಶನಾನುಸಾರ ಕಂದಾಯ ಇಲಾಖೆ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆ ಶುರುಮಾಡಿದ್ದಾರೆ. ರಾಮನಗರ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಸಹ ಒತ್ತುವರಿ ತೆರವು ಕಾರ್ಯ ಪರಿಶೀಲನೆ ನಡೆಸಿದ್ದಾರೆ.
ಸರ್ಕಾರಿ ಜಮೀನು ಒತ್ತುವರಿ ಕೇಸ್ ತನಿಖೆಗೆ ಎಸ್‌ಐಟಿ ರಚನೆ
ಕರ್ನಾಟಕದಲ್ಲಿ ಸರ್ಕಾರಿ ಜಮೀನು ಒತ್ತುವರಿ ತನಿಖೆಗೆ ಕರ್ನಾಟಕ ಸರ್ಕಾರ ಈ ವರ್ಷ ಜನವರಿಯಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ವಿಶೇಷವಾಗಿ ರಾಮನಗರ ಜಿಲ್ಲೆ ಬಿಡದಿ ಕೇತಗಾನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಜಮೀನು ಒತ್ತುವರಿಯನ್ನು ತನಿಖೆ ನಡೆಸುವುದಕ್ಕೆ ಸಮಿತಿ ರಚಿಸಲಾಗಿತ್ತು. ಈ ಎಸ್‌ಐಟಿಯು ಕೇತಗಾನಹಳ್ಳಿಯಲ್ಲಿ ಸರ್ವೇ ನಂಬರ್ 7,8,9,10,16,17 ಮತ್ತು 79ರಲ್ಲಿ ಒಟ್ಟು 14.04 ಎಕರೆ ಜಮೀನು ಒತ್ತುವರಿಯಾಗಿದೆ ಎಂಬುದನ್ನು ಪತ್ತೆ ಹಚ್ಚಿದೆ. ಕಂದಾಯ ಇಲಾಖೆ ಮತ್ತು ಸರ್ವೇ ಸೆಟಲ್‌ಮೆಂಟ್ ಡಿಪಾರ್ಟ್‌ಮೆಂಟ್ ಜಂಟಿಯಾಗಿ ಸರ್ವೇಕ್ಷಣೆ ನಡೆಸಿ ಇದನ್ನು ಖಚಿತಪಡಿಸಿಕೊಂಡಿದೆ ಎಂದು ವರದಿ ಹೇಳಿದೆ.
ಈ ಕೇಸ್‌ನ ವಿಚಾರಣೆ ಸದ್ಯ ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಸೋಮವಾರದ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್, ಒತ್ತುವರಿ ತೆರವುಗೊಳಿಸುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿರುವುದನ್ನು ಗಮನಿಸಿ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ ಕೂಡಲೇ ಒತ್ತುವರಿ ತೆರವುಗೊಳಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಮಾರ್ಚ್ 19ಕ್ಕೆ ಮುಂದೂಡಿದಿದೆ.
ಇನ್ನೊಂದೆಡೆ, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ಪರವಾಗಿ ಆರ್ ದೇವರಾಜು ಎಂಬುವವರು ಜಿಲ್ಲಾ ಆಡಳಿತಕ್ಕೆ ಮಾರ್ಚ್ 15ಕ್ಕೆ ಪತ್ರಬರೆದಿದ್ದು, ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವುದಕ್ಕೆ ಅಡ್ಡಿ ಇಲ್ಲ. ಅದರೆ ಕೇತಗಾನ ಹಳ್ಳಿಯಲ್ಲಿ ಕಳೆದುಹೋಗಿರುವ ತನ್ನ ಭೂಮಿಯನ್ನು ಹುಡುಕಿ ಗುರುತಿಸಿ ಕೊಡುವ ಕೆಲಸವನ್ನು ಸರ್ಕಾರವೇ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿದ್ದರು ಎಂದು ಪಿಟಿಐ ವರದಿ ಹೇಳಿದೆ.
