Land revenue act: ಭೂ ಕಂದಾಯ ಕಾನೂನು ಸರಳೀಕರಣಕ್ಕೆ ಪ್ರಯತ್ನ: ಸಿ ಎಂ ಬೊಮ್ಮಾಯಿ
ಕನ್ನಡ ಸುದ್ದಿ  /  ಕರ್ನಾಟಕ  /  Land Revenue Act: ಭೂ ಕಂದಾಯ ಕಾನೂನು ಸರಳೀಕರಣಕ್ಕೆ ಪ್ರಯತ್ನ: ಸಿ ಎಂ ಬೊಮ್ಮಾಯಿ

Land revenue act: ಭೂ ಕಂದಾಯ ಕಾನೂನು ಸರಳೀಕರಣಕ್ಕೆ ಪ್ರಯತ್ನ: ಸಿ ಎಂ ಬೊಮ್ಮಾಯಿ

Land revenue act: ಬಡವರು ನಿವೇಶನ ಕೊಳ್ಳಲು ಹಾಗೂ ಗೃಹ ನಿರ್ಮಾಣ ಮಾಡಿಕೊಳ್ಳಲು ಅನುಕೂಲವಾಗುವಂತೆ ಕಾನೂನು ಸರಳೀಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸಾಂಕೇತಿಕ ಚಿತ್ರ)
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸಾಂಕೇತಿಕ ಚಿತ್ರ) (CMO)

ಬೆಂಗಳೂರು: ರಾಜ್ಯದ ಆರ್ಥಿಕವಾಗಿ ಹಿಂದುಳಿದ ಜನರು ವಸತಿ ನಿವೇಶನ ಪಡೆಯಲು ಸುಲಭವಾಗುವಂತೆ ಈಗಿರುವ ಭೂ ಕಂದಾಯ ಕಾನೂನನ್ನು ಸರಳೀಕರಿಸಲು ಸರ್ಕಾರ ಪ್ರಯತ್ನಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಅವರು, ಯಲಹಂಕ ತಾಲ್ಲೂಕಿನ ಅಗ್ರಹಾರ ಪಾಳ್ಯದಲ್ಲಿ ವಸತಿ ಇಲಾಖೆಯ ವತಿಯಿಂದ 'ಮುಖ್ಯಮಂತ್ರಿ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ'ಯ ವಸತಿ ಸಮುಚ್ಛಯಗಳ ಲೋಕಾರ್ಪಣೆ ಮತ್ತು ಮನೆಗಳ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ದೊಡ್ಡ ಪ್ರಮಾಣದಲ್ಲಿ ನಗರಗಳು ಬೆಳೆಯುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬ ಬಡವರಿಗೂ ಅತ್ಯಗತ್ಯ ವಸತಿ ಸೌಲಭ್ಯ ದೊರಕಿಸಿಕೊಡುವುದು ಸರ್ಕಾರದ ಹೊಣೆಗಾರಿಕೆ ಎಂದರು.

ಆರು ವರ್ಷಗಳ ಹಿಂದೆ, ಹಿಂದಿನ ಸರ್ಕಾರ 15 ಲಕ್ಷ ಮನೆಗಳನ್ನು ಒದಗಿಸುವ ಘೋಷಣೆ ಮಾಡಿತ್ತು. ಆದರೆ, ಅದಕ್ಕೆ ಅನುದಾನ ನಿಗದಿಪಡಿಸಲು ವಿಫಲವಾಗಿತ್ತು. ಇದೀಗ ನಮ್ಮ ಸರ್ಕಾರವು 10 ಲಕ್ಚ ಮನೆಗಳನ್ನು ಒದಗಿಸಲು ಗುರಿ ಹೊಂದಿದ್ದು, ಈಗಾಗಲೇ 5 ಲಕ್ಷ ಮನೆಗಳ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಘೋಷಣೆಗಳು ಬಹಳಷ್ಟು ಆಗುತ್ತವೆ‌. ಅದಕ್ಕೆ ಹಣ ಮೀಸಲಿಡಬೇಕು. ಆರು ವರ್ಷಗಳ ಹಿಂದೆ 15 ಲಕ್ಷ ಮನೆ ಕಟ್ಟುವುದಾಗಿ ಘೋಷಣೆಯಾಯಿತು. ಹಿಂದಿನ ಸರ್ಕಾರ ಚುನಾವಣೆ ಸಂದರ್ಭದಲ್ಲಿ 15 ಲಕ್ಷ ಮನೆ ಘೋಷಣೆ ಮಾಡಿದರು. ಅದಕ್ಕೆ ಹಣ ಮೀಸಲಿಡದೇ ಹೋದರು‌. 15 ಸಾವಿರ ಕೋಟಿ ರೂ. ಅಗತ್ಯವಿದ್ದರೆ, 3 ಸಾವಿರ ಕೋಟಿ ಮೀಸಲಿಟ್ಟರು. ಅಗತ್ಯವಿರುವಷ್ಟು ಮನೆಗಳನ್ನು ಕಟ್ಟಲು ಸಾಧ್ಯವಾಗಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಗತ್ಯ ಅನುದಾನ ಒದಗಿಸಿ ಸುಮಾರು 10 ಲಕ್ಷ ಮನೆಗಳನ್ನು ಕಟ್ಟುವ ಗುರಿ ಹೊಂದಿ ಇಂದು 5 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಕೊನೆಯ ಹಂತದಲ್ಲಿ ಇದ್ದೇವೆ ಎಂದರು.

ವಸತಿ ಇಲಾಖೆಯಿಂದ ಬೆಂಗಳೂರಿನಲ್ಲಿ 50,000 ಮನೆಗಳ ನಿರ್ಮಾಣಕ್ಕೆ ವಿವಿಧ ಕ್ಷೇತ್ರಗಳಲ್ಲಿ ಒಟ್ಟಾರೆ 493 ಎಕರೆ ಪ್ರದೇಶವನ್ನು ಸ್ವಾಧೀನ ಪಡಿಸಿಕೊಂಡು ಕಾಮಗಾರಿ ಪೂರ್ಣಗೊಳಿಸುವ ಹಂತದಲ್ಲಿದೆ ಎಂದ ಅವರು ಅವುಗಳಲ್ಲಿ ಸುಮಾರು 5 ಸಾವಿರ ಮನೆಗಳನ್ನು ಇಂದು ಬೆಂಗಳೂರಿನ ವಿವಿಧ ಕ್ಷೇತ್ರಗಳಲ್ಲಿ ಒಮ್ಮೆಲೆ ಹಸ್ತಾಂತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ವಸತಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಸಚಿವ ವಿ ಸೋಮಣ್ಣ ಅವರು, ರಾಜ್ಯದಲ್ಲಿ ವಸತಿ ಕ್ರಾಂತಿಗೆ ನಾಂದಿ ಹಾಡಿದ್ದಾರೆ. ರಾಜ್ಯಾದ್ಯಂತ 3ಲಕ್ಷಕ್ಕೂ ಹೆಚ್ಚು ಮನೆಗಳನ್ನು ನೀಡಿ ದಾಖಲೆ ನಿರ್ಮಿಸಿದ್ದಾರೆ ಎಂದು ಮುಖ್ಯಮಂತ್ರಿಗಳು ಶ್ಲಾಘಿಸಿದರು.

ಯಲಹಂಕ ಕ್ಷೇತ್ರವು ಶಾಸಕ ಹಾಗೂ ಬಿ.ಡಿ.ಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ಅವರ ಶ್ರಮದಿಂದಾಗಿ ಸಾಕಷ್ಟು ಅಭಿವೃದ್ದಿ ಕಂಡಿದೆ. ಜನಪ್ರತಿನಿಧಿಗಳು ಕೇವಲ ಜನಪ್ರಯರಾಗದೆ ಅವರಂತೆ ಜನೋಪಯೋಗಿ ಶಾಸಕರಾಗಬೇಕು ಎಂದು ಕರೆಕೊಟ್ಟರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ವಸತಿ ಸಚಿವ ವಿ ಸೋಮಣ್ಣ, ಬರುವ ಮಾರ್ಚ್ ಅಂತ್ಯದೊಳಗಾಗಿ ಇಲಾಖೆಯು 20 ಸಾವಿರ ಮನೆಗಳ ಹಸ್ತಾಂತರ ಕಾರ್ಯವನ್ನು ಕೈಗೊಳ್ಳಲಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಅತ್ಯಂತ ಕಾಳಜಿ ವಹಿಸಿ ಇಂದು ಸಹಸ್ರಾರು ಬಡಜನರಿಗೆ ಕೈಗೆಟುಕುವ ಬೆಲೆಯಲ್ಲಿ ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ನಾರಾಯಣಗೌಡ, ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್, ತೇರದಾಳ್ ಶಾಸಕ ಸಿದ್ದು ಸವದಿ, ವಸತಿ ಇಲಾಖೆ ಕಾರ್ಯದರ್ಶಿ ರವಿಶಂಕರ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ ಎ ದಯಾನಂದ ಸೇರಿ ಇತರರು ಉಪಸ್ಥಿತರಿದ್ದರು.

Whats_app_banner