ಕನ್ನಡ ಸುದ್ದಿ  /  Karnataka  /  Late Ananth Kumar Jayanti Will Be Celebrated With Motivational Programs By Ananth Kumar Pratishtana And Adhamya Chetana On September 22

Ananth Kumar: 21,22ರಂದು ಪ್ರೇರಣಾದಾಯಿ ಕಾರ್ಯಕ್ರಮಗಳೊಂದಿಗೆ ದಿ.ಅನಂತ ಕುಮಾರ್‌ ಜಯಂತಿ; ಅನಂತಕುಮಾರ ಪ್ರತಿಷ್ಠಾನ ಅದಮ್ಯ ಚೇತನ ಆಯೋಜನೆ

ಕೇಂದ್ರದ ಮಾಜಿ ಸಚಿವ ದಿವಂಗತ ಅನಂತ ಕುಮಾರ್‌ ಅವರ 63ನೇ ಜನ್ಮದಿನ ನಿಮಿತ್ತ ಅನಂತಕುಮಾರ್‌ ಪ್ರತಿಷ್ಠಾನ ಮತ್ತು ಅದಮ್ಯ ಚೇತನ ಸಂಸ್ಥೆಗಳು ಸೆ.21 ಮತ್ತು 22ರಂದು ಕೆ.ಆರ್‌ ರಸ್ತೆ, ಶಂಕರಪುರಂನಲ್ಲಿರುವ ಜೈನ್‌ ಭವನ (ಗಾಯನ ಸಮಾಜದ ಹತ್ತಿರ) ದಲ್ಲಿ ಪ್ರೇರಣಾದಾಯಿ ಕಾರ್ಯಕ್ರಮಗಳನ್ನು ಆಯೋಜಿಸಿವೆ.

ಕೇಂದ್ರದ ಮಾಜಿ ಸಚಿವ ದಿವಂಗತ ಅನಂತ ಕುಮಾರ್‌
ಕೇಂದ್ರದ ಮಾಜಿ ಸಚಿವ ದಿವಂಗತ ಅನಂತ ಕುಮಾರ್‌

ಬೆಂಗಳೂರು: ಕೇಂದ್ರದ ಮಾಜಿ ಸಚಿವ ದಿವಂಗತ ಅನಂತ ಕುಮಾರ್‌ ಅವರ 63ನೇ ಜನ್ಮದಿನವನ್ನು ಸೆಪ್ಟೆಂಬರ್‌ 21 ಮತ್ತು 22ರಂದು ವಿಶೇಷವಾಗಿ ಪ್ರೇರಣಾದಾಯಿ ಆಗಿ ಆಚರಿಸಲು ಅನಂತಕುಮಾರ್‌ ಪ್ರತಿಷ್ಠಾನ ಮತ್ತು ಅದಮ್ಯ ಚೇತನ ಸಂಸ್ಥೆಗಳು ಕಾರ್ಯಕ್ರಮಗಳನ್ನು ರೂಪಿಸಿವೆ. ಈ ಎರಡೂ ದಿನಗಳ ಕಾರ್ಯಕ್ರಮ ಕೆ.ಆರ್‌ ರಸ್ತೆ, ಶಂಕರಪುರಂನಲ್ಲಿರುವ ಜೈನ್‌ ಭವನ (ಗಾಯನ ಸಮಾಜದ ಹತ್ತಿರ) ದಲ್ಲಿ ನಡೆಯಲಿದೆ. ಎಂದು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್‌ ಹಾಗೂ ಅನಂತಕುಮಾರ್‌ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಪಿ.ವಿ. ಕೃಷ್ಣ ಭಟ್‌ ತಿಳಿಸಿದ್ದಾರೆ.

ಅದಮ್ಯ ಚೇತನ ಸಂಸ್ಥೆ ಊಟ ಪೂರೈಸುತ್ತಿರುವ 70 ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸೆಪ್ಟೆಂಬರ್‌ 21 ರ ಸಂಜೆ 4.30 ಕ್ಕೆ ಹಮ್ಮಿಕೊಳ್ಳಲಾಗಿದೆ. ನಿವೃತ್ತ ನ್ಯಾಯಮೂರ್ತಿ ಎನ್‌ ಕುಮಾರ್‌ ಸೇರಿ ಹಲವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಂದು ಸಂಜೆ 6 ಗಂಟೆಗೆ ದಿವಂಗತ ಅನಂತಕುಮಾರ್‌ ಅವರ 1959 ರಿಂದ 1987 ರ ವರೆಗಿನ ಅವರ ಜೀವನದ ಬಗೆಗಿನ “ಅನಂತಯಾನ” ಪುಸ್ತಕದ ಮೊದಲ ಭಾಗವನ್ನು ವಿಧಾನಸಭೆಯ ಸನ್ಮಾನ್ಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಲೋಕಾರ್ಪಣೆ ಮಾಡಲಿದ್ದಾರೆ.

1987 ರಿಂದ 1997 ರ ದಶಕದಲ್ಲಿ ಅನಂತಕುಮಾರ್‌ ಅವರ ಜತೆ ಕೆಲಸ ಮಾಡಿದ ಪ್ರಮುಖ ಕಾರ್ಯಕರ್ತರ ಸಮಾವೇಶ ಸೆಪ್ಟೆಂಬರ್‌ 22 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌, ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ, ಹಿರಿಯ ನಾಯಕ ಡಿ ಹೆಚ್‌ ಶಂಕರಮೂರ್ತಿ ಸೇರಿ ಪ್ರಮುಖ ಭಾಗವಹಿಸಲಿದ್ದಾರೆ.

ಸೆಪ್ಟೆಂಬರ್‌ 22 ರಂದು ಸಂಜೆ 4.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪಬ್ಲಿಕ್‌ ಟಿವಿ ಮುಖ್ಯಸ್ಥರಾದ ಹೆಚ್‌ ಆರ್‌ ರಂಗನಾಥ್‌ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಿಕೊಡಲಿದ್ದಾರೆ.

ಅಂದು ಸಂಜೆ 6 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಅನಂತಪಥ ಮಾಸ ಪತ್ರಿಕೆಯ ಬಿಡುಗಡೆ, 63 ದೇವಸ್ಥಾನಗಳ ಸಮಗ್ರ ಮಾಹಿತಿಯನ್ನು ಒಳಗೊಂಡಿರುವಂತಹ “ದೇಗುಲ ದರ್ಶನ” ಪುಸ್ತಕ ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ, ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯರು ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪನವರು, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಯವರು, ಸಚಿವರಾದ ಅಶ್ವಥ್‌ ನಾರಾಯಣ, ಸೋಮಣ್ಣ, ಆರ್‌. ಅಶೋಕ, ಗೊವಿಂದ ಕಾರಜೋಳ ಸೇರಿ ಸಚಿವರು, ನಗರ ಹಾಗೂ ರಾಜ್ಯದ ಹಲವರು ವಿಧಾನಸಭಾ ಕ್ಷೇತ್ರಗಳ ಶಾಸಕರು ಮತ್ತು ಬಿಜೆಪಿ ಹಿರಿಯ ನಾಯಕರು ಭಾಗವಹಿಸಲಿದ್ದಾರೆ.