Laxman Savadi: ಬೆಂಗಳೂರಿನಲ್ಲಿಂದು ಕೈ ನಾಯಕರನ್ನ ಭೇಟಿ ಮಾಡಿದ ಲಕ್ಷ್ಮಣ್ ಸವದಿ; ಅಥಣಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಹುತೇಕ ಖಚಿತ
ಬೆಳಗಾವಿಯ ಪ್ರಭಾವಿ ನಾಯಕ ಲಕ್ಷ್ಮಣ ಸವದಿ ಅವರು ಇಂದು ಕಾಂಗ್ರೆಸ್ ಸೇರುತ್ತಿದ್ದು, ಅವರ ನಂತರ ಇನ್ನು ಅನೇಕ ನಾಯಕರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರು: ಬಿಜೆಪಿಯಲ್ಲಿ (BJP) ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಬೆಳಗಾವಿ ನಾಯಕ, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ (Laxman Savadi) ಬೆಂಗಳೂರಿನ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಕಾಂಗ್ರೆಸ್ ನಾಯಕರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ಸಂಜೆಯೊಳಗೆ ಲಕ್ಷ್ಮಣ್ ಸವದಿ ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಾರೆ ಅಂತ ಕೆಲ ಮೂಲಗಳು ತಿಳಿಸಿದ್ದು, ಅಥಣಿಯಿಂದ ಸ್ಪರ್ಧಿಸೋದು ಪಕ್ಕಾ ಅಂತ ಹೇಳಲಾಗ್ತಿದೆ. ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ತಮ್ಮ ಬಳಗದಲ್ಲಿ ಗುರುತಿಸಿಕೊಂಡಿದ್ದ ಮಹೇಶ್ ಕುಮಟಹಳ್ಳಿಗೆ ಬಿಜೆಪಿ ಟಿಕೆಟ್ ಕೊಡಿಸುವಲ್ಲಿ ರಮೇಶ್ ಜಾರಕಿಹೊಳಿ ಯಶಸ್ವಿಯಾಗಿದ್ದರು.
ಲಕ್ಷ್ಮಣ್ ಸವದಿ ಅವರ ಭೇಟಿ ಬಳಿಕ ಮಾತನಾಡಿರುವ ಡಿಕೆ ಶಿವಕುಮಾರ್, ಮಾಜಿ ಉಪಮುಖ್ಯಮಂತ್ರಿ, ಬೆಳಗಾವಿಯ ಪ್ರಭಾವಿ ನಾಯಕ ಲಕ್ಷ್ಮಣ ಸವದಿ ಅವರು ಇಂದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದು, ಅವರ ನಂತರ ಇನ್ನು ಅನೇಕ ನಾಯಕರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಲಕ್ಷ್ಮಣ್ ಸವದಿ ಹಿರಿಯ ನಾಯಕರು. ಅವರು ಯಾವುದೇ ಷರತ್ತು ಇಲ್ಲದೇ ಪಕ್ಷಕ್ಕೆ ಸೇರುತ್ತಿದ್ದು, ನಮ್ಮ ಕುಟುಂಬದ ಸದಸ್ಯರಾಗುತ್ತಿದ್ದಾರೆ. ಅವರು ಪಕ್ಷದ ನಾಯಕತ್ವ, ಸಿದ್ಧಾಂತ ಒಪ್ಪಿ ಪಕ್ಷ ಸೇರುತ್ತಿದ್ದು ಅವರಿಗೆ ಶಕ್ತಿ ತುಂಬುವುದು ನಮ್ಮ ಜವಾಬ್ದಾರಿ. ಇಂದು ಪಕ್ಷದ ನಾಯಕರೆಲ್ಲರೂ ಲಕ್ಷ್ಮಣ ಸವದಿ ಅವರ ಜತೆ ಚರ್ಚೆ ಮಾಡಿದ್ದೇವೆ. ಅವರನ್ನು ಪಕ್ಷದ ಎಲ್ಲಾ ನಾಯಕರು ತುಂಬು ಹೃದಯದ ಸ್ವಾಗತ ಕೋರುತ್ತೇವೆ ಅಂತ ಹೇಳಿದ್ದಾರೆ.
ಲಕ್ಷ್ಮಣ ಸವದಿ ಅವರ ಜತೆಗೆ ಇನ್ನು ಅನೇಕ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ. ಎಲ್ಲರನ್ನೂ ನಾವು ಒಮ್ಮತದಿಂದ ಪಕ್ಷಕ್ಕೆ ಸ್ವಾಗತಿಸುತ್ತೇವೆ. ಸವದಿ ಅವರು ಇಂದು ಸಂಜೆ 4 ಗಂಟೆಗೆ ವಿಧಾನ ಪರಿಷತ್ ಸಭಾಪತಿಗಳನ್ನು ಭೇಟಿ ಮಾಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಸಂಜೆ 4.30ಕ್ಕೆ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಸವದಿ ಅವರು ಅಥಣಿಯಲ್ಲಿ ಕಾಂಗ್ರೆಸ್ ನಿಂದ ಕಣಕ್ಕಿಳಿದರೆ ಈ ಕ್ಷೇತ್ರವೂ ಪ್ರತಿಷ್ಠೆಯ ಕಣವಾಗುವುದರಲ್ಲಿ ಎರಡು ಮಾತಿಲ್ಲ. ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಖಾಡಕ್ಕೆ ಇಳಿದರೆ, ರಮೇಶ್ ಜಾರಕಿಹೊಳಿ ಕೂಡ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ತಮ್ಮ ಆಪ್ತನ ಪರ ಫೀಲ್ಡ್ ಗೆ ಇಳಿಯುತ್ತಾರೆ.
ಅಥಣಿ ಕ್ಷೇತ್ರದ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಲಕ್ಷ್ಮಣ್ ಸವದಿ ಅವರು ಈಗಾಗಲೇ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆಯ ಘೋಷಣೆ ಮಾಡಿದ್ದಾರೆ. ಲಕ್ಷ್ಮಣ್ ಸವದಿ ಅವರು ಇಂದು ತಮ್ಮ ನಿರ್ಧಾರವನ್ನ ತಿಳಿಸೋದಾಗಿ ನಿನ್ನೆಯಷ್ಟೇ ಹೇಳಿದ್ದರು.
ವಿಧಾನ ಪರಿಷತ್ ಸ್ಥಾನ ಮತ್ತು ಪಕ್ಷಕ್ಕೆ ರಾಜೀನಾಮೆ ಕೊಡಬೇಕು. ಇನ್ನೂ ಹಂಗಿನಲ್ಲಿ ಇದ್ದೇನೆ, ಅದರಿಂದ ಹೊರಬರಬೇಕು. ಬಳಿಕ ಏನು ಮಾಡಬೇಕು ಎನ್ನುವ ಬಗ್ಗೆ ತೀರ್ಮಾನ ಮಾಡುತ್ತೇನೆ ಅಂತ ಹೇಳಿದ್ದರು.
ಸಂಜೆಯೊಳಗೆ ಒಂದು ತೀರ್ಮಾನಕ್ಕೆ ಬರ್ತಿನಿ. ಏಪ್ರಿಲ್ 17 ಇಲ್ಲವೇ 18 ರಂದು ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಕ್ಷೇತ್ರದ ಜನರ ಒಪ್ಪಿಗೆ ಪಡೆದಿದ್ದೇನೆ. ಖಾಸಗಿಯಾಗಿಯೂ ಅನೇಕರು ತಮ್ಮ ನಿರ್ಧಾರವನ್ನು ಹೇಳಿದ್ದಾರೆ. ಮನೆ ಬಿಟ್ಟು ಹೊರಗೆ ಬಂದ ಮೇಲೆ ಸಂಪರ್ಕ ಮಾಡಿದರೇನು, ಬಿಟ್ಟರೇನು ಎಂದು ಬಿಜೆಪಿ ಹೈಕಮಾಂಡ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯಿಂದ ಟಿಕೆಟ್ ಕೈತಪ್ಪುತ್ತಿದ್ದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ಸವದಿ ಅವರನ್ನು ತಮ್ಮತ್ತ ಸೆಳೆಯಲು ಪ್ರಯತ್ನ ನಡೆಸಿದ್ದವು. ಅಂತಿಮವಾಗಿ ಅವರು ಕಾಂಗ್ರೆಸ್ ಸೋರದು ಪಕ್ಕಾ ಆಗಿದೆ.
ಇದನ್ನೂ ಓದಿ: BJP Ticket: ಬಿಜೆಪಿಯಲ್ಲಿ ಟಿಕೆಟ್ ವಂಚಿತರ ಬಿರುಗಾಳಿ