Leopard at Infosys: ಮೈಸೂರು ಇನ್ಫೋಸಿಸ್‌ನಲ್ಲಿ ಸಿಗದ ಚಿರತೆ: ಕಾರ್ಯಾಚರಣೆ ನಿಲ್ಲಿಸಿದ ಅರಣ್ಯ ಇಲಾಖೆ, ಸಿಬ್ಬಂದಿಗೆ ಮನೆಯಿಂದಲೇ ಕೆಲಸ
ಕನ್ನಡ ಸುದ್ದಿ  /  ಕರ್ನಾಟಕ  /  Leopard At Infosys: ಮೈಸೂರು ಇನ್ಫೋಸಿಸ್‌ನಲ್ಲಿ ಸಿಗದ ಚಿರತೆ: ಕಾರ್ಯಾಚರಣೆ ನಿಲ್ಲಿಸಿದ ಅರಣ್ಯ ಇಲಾಖೆ, ಸಿಬ್ಬಂದಿಗೆ ಮನೆಯಿಂದಲೇ ಕೆಲಸ

Leopard at Infosys: ಮೈಸೂರು ಇನ್ಫೋಸಿಸ್‌ನಲ್ಲಿ ಸಿಗದ ಚಿರತೆ: ಕಾರ್ಯಾಚರಣೆ ನಿಲ್ಲಿಸಿದ ಅರಣ್ಯ ಇಲಾಖೆ, ಸಿಬ್ಬಂದಿಗೆ ಮನೆಯಿಂದಲೇ ಕೆಲಸ

Leopard at Infosys: ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಚಿರತೆ ಕಾಣಿಸಿಕೊಂಡು ಭಯ ಹುಟ್ಟಿಸಿದ ನಂತರ ಆರಂಭಗೊಂಡಿದ್ದ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ. ಚಿರತೆ ಪತ್ತೆಯಾಗದ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿದೆ.

ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಗಾಗಿ ಹುಡುಕಾಟ ನಡೆಸಿದರು.
ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಗಾಗಿ ಹುಡುಕಾಟ ನಡೆಸಿದರು.

ಮೈಸೂರು: ಮೈಸೂರಿನ ಪ್ರತಿಷ್ಠಿತ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಸಿಸಿಟಿವಿ ಕ್ಯಾಮರಾದ ನಂತರ ಸಿಬ್ಬಂದಿಯೊಬ್ಬರಿಗೆ ಕಾಣಿಸಿಕೊಂಡಿದ್ದ ಮಾಹಿತಿ ಆಧರಿಸಿ ಚಿರತೆ ಸೆರೆಗೆ ಕರ್ನಾಟಕ ಅರಣ್ಯ ಇಲಾಖೆ ನಿರಂತರವಾಗಿ ಪ್ರಯತ್ನ ನಡೆಸಿದರೂ ಚಿರತೆ ಪತ್ತೆಯಾಗಿಲ್ಲ. ಇದರಿಂದ ಅರಣ್ಯ ಇಲಾಖೆಯೂ ಹತ್ತು ದಿನಗಳ ಬಳಿಕ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಇನ್ಫೋಸಿಸ್‌ನ ವಿಶಾಲ ಕ್ಯಾಂಪಸ್‌ ಆವರಣದಲ್ಲಿ ಚಿರತೆ ಸೆರೆ ಕಾರ್ಯಾಚರಣೆ ನಡೆದಿತ್ತು. ಕಳೆದ 10 ದಿನಗಳಿಂದ ಇಲ್ಲಿಯವರೆಗೂ ಕ್ಯಾಮೆರಾ ಟ್ರ್ಯಾಪ್‌ಗಳಲ್ಲಿಯಾಗಲೀ, ಡ್ರೋಣ್‌ ಕ್ಯಾಮೆರಾ , ಕ್ಯಾಂಪಸ್‌ನಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿಯಾಗಲೀ, ವಿಭಿನ್ನಕಾರ್ಯಾಚರಣೆಯಲ್ಲಿಯಾಗಲೀ ಯಾವುದೇ ಚಲನ ವಲನಗಲಾಗಲೀ , ಹೆಜ್ಜೆ ಗುರುತು ಅಥವಾ ಯಾವುದೇ ರೀತಿಯ ಚಿರತೆ ಇರುವಿಕೆಯ ಕುರುಹುಗಳಾಗಲಿ ಕಂಡು ಬಂದಿಲ್ಲ.ಕಳೆದ 10 ದಿನಗಳಿಂದ ಇಲ್ಲಿಯವರೆಗೂ ಚಿರತೆ ಇರುವಿಕೆ ಬಗ್ಗೆ ಯಾವುದೇ ರೀತಿಯ ಪ್ರತ್ಯಕ್ಷ ಅಥವಾ ಪರೋಕ್ಷ ಕುರುಹುಗಳು ಕಂಡು ಬಾರದೇ ಇರುವುದರಿಂದ ಚಿ ರತೆ ಸೆರೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್‌.ಬಸವರಾಜ ಮಾಹಿತಿ ನೀಡಿದ್ದಾರೆ.

ಡಿಸಿಎಫ್‌ ಹೇಳೋದು ಏನು

ಇನ್ಫೋಸಿಸ್‌ ಕ್ಯಾಂಪಸ್‌ಗೆ ಹೊಂದಿಕೊಂಡಂತಿರುವ ಪ್ರದೇಶಗಳಲ್ಲಿಯೂ ಸಹಾ ಯಾವುದೇ ಚಿರತೆಯ ಚಲನ ವಲನಗಳು ಕಂಡು ಬಂದಿರುವುದಿಲ್ಲ. ಕಾರ್ಯಾಚರಣೆಯಲ್ಲಿ ಏರಿಯಲ್‌ ಮೂಲಕ ಹುಡುಕಾಟಕ್ಕಾಗಿ ಎರಡು ಡ್ರೋಣ್‌ಗಳನ್ನು ಹಾಗೂ ಪಶುವೈದ್ಯಕೀಯ ತಂಡವನ್ನು ಬಳಸಲಾಗಿದೆ ಎಂದು ತಿಳಿಸಿದ್ದಾರೆ.

ಇಂತಹ ಪ್ರಕರಣಗಳು ಮರುಕಳಿಸದಂತೆ ಇನ್ಫೋಸಿಸ್ ಕ್ಯಾಂಪಸ್ ನ್ನೂ ಬಲವರ್ಧನೆಗೊಳಿಸುವ ಬಗ್ಗೆ ಹಾಗೂ ಅನುಸರಿಸಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಗಿದೆ. ರಾತ್ರಿ ವೇಳೆ ಥರ್ಮಲ್ ಡ್ರೋಣ್‌ ಬಳಸಿ ಕ್ಯಾಂಪಸ್‌ನಲ್ಲಿ ನಿರಂತರ ನಿಗಾವಣೆ ಮಾಡುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ನಿರಂತರ ಪ್ರಯತ್ನ

ಹತ್ತು ದಿನಗಳ ಹಿಂದೆ ಮಧ್ಯರಾತ್ರಿ ವೇಳೆ ಚಿರತೆ ಇನ್ಫೋಸಿಸ್‌ನ ಆವರಣದಲ್ಲಿ ಸಂಚರಿಸುತ್ತಿದ್ದುದನ್ನು ಭದ್ರತಾ ಸಿಬ್ಬಂದಿ ಸಿಸಿಟಿವಿ ಕ್ಯಾಮರಾದಲ್ಲಿ ಗಮನಿಸಿದ್ದರು. ಅರಣ್ಯ ಇಲಾಖೆಗೆ ಈ ಕುರಿತು ಮಾಹಿತಿ ನೀಡಲಾಗಿತ್ತು. ಬಳಿಕ ಅರಣ್ಯ ಇಲಾಖೆಯು ಚಿರತೆ ಹಾಗೂ ಆನೆ ಕಾರ್ಯಪಡೆಗಳೊಂದಿಗೆ ನಿರಂತರ ಕಾರ್ಯಾಚರಣೆ ನಡೆಸಿತ್ತು.

ಈ ವೇಳೆ ಅಲ್ಲಿನ ಸಿಬ್ಬಂದಿ ಭಯ ಬೀಳದಂತೆ ಸೂಚಿಸಿ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿತ್ತು. ಮಾಸಾಂತ್ಯದವರೆಗೂ ಬಹುತೇಕ ಸಿಬ್ಬಂದಿ ಮನೆಯಿಂದ ಹಾಗೂ ಅಲ್ಲಿಯೇ ಇರುವವರು ಹಾಸ್ಟೆಲ್‌ನಿಂದ ಕೆಲಸ ಮಾಡಲು ಸೂಚಿಸಲಾಗಿದೆ. ಇದರ ನಡುವೆ ಸಿಬ್ಬಂದಿಯೊಬ್ಬರು ರಾತ್ರಿ ಹೋಗುವಾಗ ಚಿರತೆ ದಾಟಿದ್ದನ್ನು ನೋಡಿದ ನಂತರ ಕಾರ್ಯಾಚರಣೆ ಇನ್ನಷ್ಟು ಚುರುಕಾಗಿತ್ತು. ಇನ್ಫೋಸಿಸ್‌ ಕ್ಯಾಂಪಸ್‌ ಒಳಾವರಣ ಹಾಗೂ ಹೊರ ಭಾಗದಲ್ಲೂ ಹುಡುಕಾಟ ನಡೆಸಿದರೂ ಚಿರತೆ ಕಂಡಿಲ್ಲ. ಈ ಕಾರಣದಿಂದ ಕಾರ್ಯಾಚರಣೆ ಸ್ಥಗಿತಗೊಂಡಿದ್ದು ನಿಗಾ ಪ್ರಕ್ರಿಯೆ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ.

ಸಿಬ್ಬಂದಿಗೆ ಸೂಚನೆ

ಚಿರತೆ ಸೆರೆ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಚಿರತೆ ಕಾರ್ಯ ಪಡೆ, ಆನೆ ಕಾರ್ಯಪಡೆ ಸಿಬ್ಬಂದಿ ಮತ್ತು ಮೈಸೂರು ಪ್ರಾದೇಶಿಕ ವಿಭಾಗದ ಒಟ್ಟು 70 ಸಿಬ್ಬಂದಿಗಳು ಹಾಗೂ 70 ಇನ್ಫೋಸಿಸ್ ಸಿಬ್ಬಂದಿಗಳನ್ನು ಒಳಗೊಂಡ 11 ಜಂಟಿ ತಂಡಗಳನ್ನು ರಚಿಸಿ ಸಂಪೂರ್ಣವಾಗಿ ಎರಡನೇ ಹಂತದ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು. ಒಂದು ಚಿರತೆ ಕಾರ್ಯಪಡೆ ತಂಡವನ್ನು ಕ್ಯಾಂಪಸ್ ನಲ್ಲಿಯೇ ನಿಯೋಜಿಸಿ, ಕ್ಯಾಮೆರಾ ಟ್ರ್ಯಾಪ್ ಹಾಗೂ ಸಿಸಿಟಿವಿ ಕ್ಯಾಮೆರಾ ಮಾನಿಟರಿಂಗ್ ಮುಂದುವರಿಸಲಾಗಿತ್ತು. ಇನ್ಫೋಸಿಸ್ ಕ್ಯಾಂಪಸ್ ನ ಎಲ್ಲಾ ಸಿಬ್ಬಂದಿಗಳು ಹಾಗೂ ತರಬೇತಾರ್ಥಿಗಳು ಎಚ್ಚರಿಕೆಯಿಂದ ಇರುವ ಬಗ್ಗೆ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿತ್ತು.