ಮೈಸೂರು ಇನ್ಫೋಸಿಸ್ ಕ್ಯಾಂಪಸ್‍ನಲ್ಲಿ ಕಾಣಿಸಿಕೊಂಡ ಚಿರತೆ, ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಸೂಚನೆ
leopard at infosys campus: ಮೈಸೂರಿನ ಹೊರ ವಲಯದಲ್ಲಿರುವ ಇನ್ಫೋಸಿಸ್ ಕ್ಯಾಂಪಸ್ ಚಿರತೆ ಕಾಣಿಸಿಕೊಂಡ ಮಾಹಿತಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.
leopard at infosys campus: ಮೈಸೂರಿನ ಹೊರವಲಯದಲ್ಲಿರುವ ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಕಾಣಿಸಿಕೊಂಡ ನಂತರ ಇನ್ಫೋಸಿಸ್ ಉದ್ಯೋಗಿಗಳು ಮತ್ತು 4,000 ತರಬೇತಿದಾರರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಇನ್ಫೋಸಿಸ್ ಕ್ಯಾಂಪಸ್‌ನ ಒಳಗೆ ಮಂಗಳವಾರ ಮುಂಜಾನೆ ಚಿರತೆ ಸಂಚರಿಸುತ್ತಿರುವುದು ಕಾಣಿಸಿಕೊಂಡಿದೆ.ಇದರಿಂದ ಆಡಳಿತ ಮಂಡಳಿಯು ಇಂದು (ಡಿಸೆಂಬರ್ 31) ಮನೆಯಿಂದ ಕೆಲಸ ಮಾಡುವಂತೆ ಕಂಪನಿಯು ಉದ್ಯೋಗಿಗಳಿಗೆ ಸೂಚಿಸಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ. ಮಾಹಿತಿ ಆಧರಿಸಿ ಮೈಸೂರು ವನ್ಯಜೀವಿ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಚಿರತೆ ಕಾರ್ಯಪಡೆಯ ತಂಡವು ಇನ್ಫೋಸಿಸ್‍ನಲ್ಲಿಯೇ ಬೀಡು ಬಿಟ್ಟಿದೆ. ಚಿರತೆ ಚಲನವಲನ ಆಧರಿಸಿ ಅದನ್ನು ಸೆರೆ ಹಿಡಿಯಲು ಕಾರ್ಯ ತಂತ್ರವನ್ನು ರೂಪಿಸುತ್ತಿದೆ.
ಇನ್ಫೋಸಿಸ್ ಕ್ಯಾಂಪಸ್ ವಿಶಾಲವಾಗಿ ಸಂಪೂರ್ಣ ಹಸುರಿನಿಂದ ಕೂಡಿದೆ. ಅಕ್ಕಪಕ್ಕದಲ್ಲಿಯೂ ಪೊದೆಗಳಿರುವುದರಿಂದ ಈ ಭಾಗದಲ್ಲಿ ಚಿರತೆಗಳ ಸಂಚಾರವಿದೆ. ಆದರೆ ಕ್ಯಾಂಪಸ್‌ನ ಒಳಗೆ ಚಿರತೆ ಮಂಗಳವಾರ ಬೆಳಗಿನ ಜಾವ ಕಾಣಿಸಿಕೊಂಡಿದೆ. ಭದ್ರತಾ ಸಿಬ್ಬಂದಿ ಬೆಳಗಿನ ಜಾವ 2 ಗಂಟೆಗೆ ಚಿರತೆ ಸಂಚಾರ ಇರುವುದನ್ನು ಸಿಸಿಟಿವಿ ಕ್ಯಾಮರಾದಲ್ಲಿ ಗಮನಿಸಿದ್ದಾರೆ. ಸಿಬ್ಬಂದಿಗೂ ಕೂಡ ಅಲರ್ಟ್ ಮಾಡಿದ್ದಾರೆ. ಸಿಬ್ಬಂದಿಗಳೂ ಆಲ್ಲಿ ಚಿರತೆ ಸಂಚರಿಸಿದ್ದನ್ನು ಗಮನಿಸಿದ್ದಾರೆ. ಕೂಡಲೇ ಮೈಸೂರಿನ ಅರಣ್ಯ ಇಲಾಖೆಯ ಕಂಟ್ರೋಲ್ ರೂಂಗೆ ಕರೆ ಮಾಡಿ ಚಿರತೆ ಬಂದಿರುವ ಮಾಹಿತಿ ನೀಡಿದ್ದಾರೆ. ಅಲ್ಲದೇ ಇನ್ಫೋಸಿಸ್‌ನ ಹಿರಿಯ ಅಧಿಕಾರಿಗಳ ಗಮನಕ್ಕೂ ಇದನ್ನು ತಂದಿದ್ದಾರೆ.
ಸ್ಥಳಕ್ಕೆ ಅಧಿಕಾರಿಗಳ ದೌಡು
ಮೈಸೂರು ಉಪ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಐಬಿ ಪ್ರಭುಗೌಡ ಅವರು ನೀಡಿರುವ ಮಾಹಿತಿ ಪ್ರಕಾರ, "ಮುಂಜಾನೆ 2 ಗಂಟೆ ಸುಮಾರಿಗೆ ಚಿರತೆ ಇನ್ಫೋಸಿಸ್ ಸಿಸಿಟಿವಿಯಲ್ಲಿ ಕಾಣಿಸಿಕೊಂಡಿದೆ. ನಮಗೆ ಬಂದ ಮಾಹಿತಿ ಆಧರಿಸಿ ನಮ್ಮ ತಂಡವು ಮುಂಜಾನೆ 4 ಗಂಟೆ ಸುಮಾರಿಗೆ ಸ್ಥಳಕ್ಕೆ ತಲುಪಿತು ಮತ್ತು ತಕ್ಷಣ ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಈವರೆಗೂ ಚಿರತೆ ನಮಗೆ ಕಂಡು ಬಂದಿಲ್ಲ. ಕಾರ್ಯಾಚರಣೆ ಮುಂದುವರಿದಿದೆ ಎಂದು ಹೇಳುತ್ತಾರೆ.
2011ರಲ್ಲಿ ಇದೇ ರೀತಿಯಲ್ಲಿ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‍ನಲ್ಲಿ ಚಿರತೆಯೊಂದು ಕಾಣಿಸಿಕೊಂಡಿತ್ತು. ಹೆಬ್ಬಾಳ ಕೈಗಾರಿಕಾ ಪ್ರದೇಶದ ಬಳಿ ಇರುವ ಇನ್ಫೋಸಿಸ್ ಕ್ಯಾಂಪಸ್ ಚಿರತೆಗಳಿಗೆ ನೆಲೆಯಾಗಿರುವ ಮೀಸಲು ಅರಣ್ಯದ ಪಕ್ಕದಲ್ಲಿದೆ. ಆಹಾರವನ್ನು ಹುಡುಕೊಂಡು ಚಿರತೆಗಳು ಈ ಭಾಗದಲ್ಲಿ ಬರುತ್ತವೆ. ಭಯ ಪಡುವ ಅಗತ್ಯವೇನೂ ಇಲ್ಲ. ಎಚ್ಚರಿಕೆಯಿಂದ ಇರಬೇಕು ಎಂಬುದು ವನ್ಯಜೀವಿ ತಜ್ಞರ ಅಭಿಪ್ರಾಯ.
ಮನೆಯಿಂದಲೇ ಕೆಲಸಕ್ಕೆ ಸೂಚನೆ
ವಿಷಯ ತಿಳಿದ ನಂತರ ಕಂಪನಿಯ ಮಾನವ ಸಂಪನ್ಮೂಲ ವಿಭಾಗವು ಆಂತರಿಕ ಸಂವಹನದ ಮೂಲಕ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಇಂದು ಮೈಸೂರು ಕ್ಯಾಂಪಸ್‍ನಲ್ಲಿ ಕಾಡು ಪ್ರಾಣಿ ಕಾಣಿಸಿಕೊಂಡಿದೆ. ಕಾರ್ಯಪಡೆಯ ಸಹಯೋಗದೊಂದಿಗೆ ಕ್ಯಾಂಪಸ್ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ. ಇಂದು ಯಾರೂ ಕ್ಯಾಂಪಸ್ ಪ್ರವೇಶಿಸುವುದು ಬೇಡ. ಮನೆಯಿಂದಲೇ ಕೆಲಸ ಮಾಡಿ ಎನ್ನುವ ಸೂಚನೆಯನ್ನು ನೀಡಲಾಗಿದೆ.
ಎರಡು ದಶಕದ ಹಿಂದೆ ಆರಂಭಗೊಂಡಿರುವ ಮೈಸೂರಿನ ಇನ್ಫೋಸಿಸ್ ಗ್ಲೋಬಲ್ ಎಜುಕೇಶನ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದಾರೆ, ಕರ್ನಾಟಕ ಮಾತ್ರವಲ್ಲದೇ ಬೇರೆ ಕಡೆಯಿಂದಲೂ ಬಂದವರು ಇದ್ದಾರೆ. ಕೆಲವರು ಕ್ಯಾಂಪಸ್‌ನ ಹಾಸ್ಟೆಲ್‌ಗಳಲ್ಲಿದ್ದು ಅವರು ಅಲ್ಲಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ.
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.