ಉದ್ಯಮಿಗೆ ಜೀವ ಬೆದರಿಕೆ, ಮಾಜಿ ರೌಡಿ ಶೀಟರ್‌ ಫೈಟರ್ ರವಿ ಬಂಧನ; ಮಹಿಳೆಯೊಬ್ಬರಿಗೆ 2 ಲಕ್ಷ ವಂಚಿಸಿದ ಸೈಬರ್‌ ವಂಚಕರು
ಕನ್ನಡ ಸುದ್ದಿ  /  ಕರ್ನಾಟಕ  /  ಉದ್ಯಮಿಗೆ ಜೀವ ಬೆದರಿಕೆ, ಮಾಜಿ ರೌಡಿ ಶೀಟರ್‌ ಫೈಟರ್ ರವಿ ಬಂಧನ; ಮಹಿಳೆಯೊಬ್ಬರಿಗೆ 2 ಲಕ್ಷ ವಂಚಿಸಿದ ಸೈಬರ್‌ ವಂಚಕರು

ಉದ್ಯಮಿಗೆ ಜೀವ ಬೆದರಿಕೆ, ಮಾಜಿ ರೌಡಿ ಶೀಟರ್‌ ಫೈಟರ್ ರವಿ ಬಂಧನ; ಮಹಿಳೆಯೊಬ್ಬರಿಗೆ 2 ಲಕ್ಷ ವಂಚಿಸಿದ ಸೈಬರ್‌ ವಂಚಕರು

ಉದ್ಯಮಿಯೊಬ್ಬರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ರೌಡಿ ಶೀಟರ್‌ ಫೈಟರ್ ರವಿ ಬಂಧನವಾಗಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಸೈಬರ್‌ ವಂಚಕರು ಮಹಿಳೆಯೊಬ್ಬರಿಗೆ 2 ಲಕ್ಷ ರೂಪಾಯಿ ವಂಚಿಸಿದ್ದಾರೆ. (ವರದಿ-ಎಚ್.‌ ಮಾರುತಿ)

ಉದ್ಯಮಿಗೆ ಜೀವ ಬೆದರಿಕೆ, ಮಾಜಿ ರೌಡಿ ಶೀಟರ್‌ ಫೈಟರ್ ರವಿ ಬಂಧನ; ಮಹಿಳೆಯೊಬ್ಬರಿಗೆ 2 ಲಕ್ಷ ವಂಚಿಸಿದ ಸೈಬರ್‌ ವಂಚಕರು
ಉದ್ಯಮಿಗೆ ಜೀವ ಬೆದರಿಕೆ, ಮಾಜಿ ರೌಡಿ ಶೀಟರ್‌ ಫೈಟರ್ ರವಿ ಬಂಧನ; ಮಹಿಳೆಯೊಬ್ಬರಿಗೆ 2 ಲಕ್ಷ ವಂಚಿಸಿದ ಸೈಬರ್‌ ವಂಚಕರು

ಬೆಂಗಳೂರು: ಉದ್ಯಮಿಯೊಬ್ಬರಿಗೆ ಜೀವ ಬೆದರಿಕೆ ಹಾಕಿದ್ದ ಆರೋಪದಡಿಯಲ್ಲಿ ಮಾಜಿ ರೌಡಿಶೀಟರ್‌ ಬಿಎಂ ಮಲ್ಲಿಕಾರ್ಜುನ್‌ ಅಲಿಯಾಸ್ ಫೈಟರ್ ರವಿ ಹಾಗೂ ಆತನ ಗನ್‌ಮ್ಯಾನ್‌ ವಿಜೇಶ್‌ ಕುಮಾರ್‌ ಎಂಬಾತನನ್ನು ಸದಾಶಿವನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉದ್ಯಮಿ ಸೋಮಶೇಖರ್‌ ಅವರು ಫೈಟರ್ ರವಿ ಹಾಗೂ ಆತನ ಗನ್‌ಮ್ಯಾನ್‌ ಇಬ್ಬರೂ ಪಿಸ್ತೂಲ್ ತೋರಿಸಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ಇವರು ನೀಡಿದ್ದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು, ಇಬ್ಬರನ್ನೂ ಬಂಧಿಸಲಾಗಿದೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಎರಡು ದಿನ ಪೊಲೀಸ್‌ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಉದ್ಯಮಿ ಸೋಮಶೇಖರ್ ಅವರು ಶ್ರೀಕಾಂತ್ ಎಂಬಾತನಿಗೆ ಸಾಲದ ರೂಪದಲ್ಲಿ ರೂ.75 ಲಕ್ಷ ಕೊಟ್ಟಿದ್ದರು. ಮರಳಿ ಹಣ ಪಡೆಯುವ ಸಲುವಾಗಿ ಆಗಾಗ್ಗೆ ಶ್ರೀಕಾಂತ್‌ ಅವರನ್ನು ಸೋಮಶೇಖರ್ ಭೇಟಿ ಮಾಡುತ್ತಿದ್ದರು. ಆಗ ಮಧ್ಯಪ್ರವೇಶಿಸಿದ್ದ ಫೈಟರ್‌ ರವಿ, ಯಾವುದೇ ಕಾರಣಕ್ಕೂ ಶ್ರೀಕಾಂತ್ ಬಳಿ ಹಣ ಕೇಳಬಾರದು ಎಂದು ಪಿಸ್ತೂಲ್‌ ತೋರಿಸಿ ಜೀವ ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಫೈಟರ್‌ ರವಿ ಯಾರು?

ಹಲವು ವರ್ಷಗಳ ಹಿಂದೆ ಫೈಟರ್ ರವಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ. 2023ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್​​ಗೆ ಪ್ರಯತ್ನ ನಡೆಸಿದ್ದ. ಆದರೆ ಟಿಕೆಟ್‌ ಸಿಕ್ಕಿರಲಿಲ್ಲ. ನಂತರ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವ ಹೊಂದಿದ್ದ. ರವಿ ಈ ಹಿಂದೆ ರೌಡಿ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದ. ಈ ಸಂಬಂಧ ಹಲವು ಪ್ರಕರಣಗಳು ಫೈಟರ್ ರವಿ ಮೇಲೆ ದಾಖಲಾಗಿವೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸೈಬರ್‌ ಕ್ರೈಂ; ಮಹಿಳೆಯೊಬ್ಬರಿಗೆ 2 ಲಕ್ಷ ರೂ ವಂಚಿಸಿದ ಸೈಬರ್‌ ವಂಚಕರು

ಅಮಾಯಕ ಸಾರ್ವಜನಿಕರನ್ನು ವಂಚಿಸಲು ಸೈಬರ್‌ ವಂಚಕರು ಒಂದಿಲ್ಲೊಂದು ಹೊಸ ಮಾರ್ಗವನ್ನು ಹುಡುಕಿಕೊಳ್ಳುತ್ತಲೇ ಇರುತ್ತಾರೆ. ಮತ್ತೊಂದು ಕಡೆ ಎಷ್ಟೇ ಅರಿವು ಮೂಡಿಸಿದರೂ ಸಾರ್ವಜನಿಕರು ಸೈಬರ್‌ ವಂಚನೆಗೆ ಒಳಗಾಗುತ್ತಲೇ ಇರುತ್ತಾರೆ. ಇದೀಗ ಬ್ಯಾಂಕ್​​ಗಳ ಹೆಸರಿನಲ್ಲಿ ವಂಚನೆ ಮಾಡುವುದು ಹೊಸ ಸೇರ್ಪಡೆಯಾಗಿದೆ. ಬ್ಯಾಂಕ್‌ ಹೆಸರಿನಲ್ಲಿ ಕರೆ ಮಾಡಿದ ಸೈಬರ್‌ ವಂಚಕರು ಮಹಿಳೆಯೊಬ್ಬರಿಗೆ 2 ಲಕ್ಷ ವಂಚಿಸಿದ್ದಾರೆ. ದೊಡ್ಡ ಮೊತ್ತದ ಹಣ ವರ್ಗಾಯಿಸುವ ವೇಳೆ ಬ್ಯಾಂಕ್‌ಗಳು ಖಚಿತಪಡಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಹಕರಿಗೆ ಇ-ಮೇಲ್ ಅಥವಾ ಸಂದೇಶ ಕಳುಹಿಸುತ್ತವೆ. ಅದೇ ರೀತಿ ರಾಷ್ಟ್ರೀಕೃತ ಬ್ಯಾಂಕ್‌ವೊಂದರ ಪ್ರತಿನಿಧಿಗಳ ಹೆಸರಿನಲ್ಲಿ ಸೈಬರ್ ವಂಚಕರು 58 ವರ್ಷದ ಮಹಿಳೆಯೊಬ್ಬರಿಗೆ ನಿಮ್ಮ ವಹಿವಾಟು ಖಚಿತಪಡಿಸಿ ಎಂದು ಕರೆಮಾಡಿ ಅವರ ಖಾತೆಯಿಂದ ಸೆಕೆಂಡ್​​ಗಳಲ್ಲಿ 2 ಲಕ್ಷ ಹಣ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.

ಜನವರಿ 20 ರಂದು ಬ್ಯಾಂಕ್ ಪ್ರತಿನಿಧಿ ಎಂದು ಹೇಳಿಕೊಂಡು ಕರೆ ಮಾಡಿದ್ದ ಸೈಬರ್ ವಂಚಕನೊಬ್ಬ ನಿಮ್ಮ ಖಾತೆಯಿಂದ ಬೇರೆ ಖಾತೆಗೆ ಹಣ ವರ್ಗಾವಣೆ ಆಗುತ್ತಿದೆ. ಈ ಹಣವನ್ನು ನೀವೇ ವರ್ಗಾಯಿಸಿದ್ದರೆ ಸಂಖ್ಯೆ ಮೂರನ್ನು ಒತ್ತಿ ಇಲ್ಲದಿದ್ದರೆ ಒಂದನ್ನು ಒತ್ತಿ ಎಂದು ಹೇಳಿದ್ದ. ಇದನ್ನು ನಂಬಿದ ಮಹಿಳೆ ಒಂದನ್ನು ಒತ್ತಿದ್ದರು. ಆಗ ಸೈಬರ್ ವಂಚಕರು ನಿಮ್ಮ ಬ್ಯಾಂಕ್ ಸಂಪರ್ಕಿಸಿ ಎಂದು ತಿಳಿಸಿ ಕರೆಯನ್ನು ಸ್ಥಗಿತಗೊಳಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಸಂಪರ್ಕ ಕಡಿತಗೊಂಡ ನಂತರ ಅನುಮಾನಗೊಂಡ ಮಹಿಳೆ ತಾವು ಖಾತೆ ಹೊಂದಿದ್ದ ಬ್ಯಾಂಕ್‌ಗೆ ತೆರಳಿ ವಿಚಾರಿಸಿದ್ದರು. ಆಗ ತಮ್ಮ ಖಾತೆಯಿಂದ ರೂ.2 ಲಕ್ಷ ಹಣ ವರ್ಗಾವಣೆ  ಆಗಿರುವುದು ತಿಳಿದು ಬಂದಿತ್ತು ಎಂದು ದೂರುದಾರ ಮಹಿಳೆ ತಿಳಿಸಿದ್ದಾರೆ.

Whats_app_banner