ಕನ್ನಡ ಸುದ್ದಿ  /  Karnataka  /  Lok Sabha Election 2023 Karnataka Congress Planning Operation Jds Bjp Mla Former Ministers Bengaluru News In Kannada Kub

Karnataka Politics: ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಆಪರೇಷನ್‌ಗೆ ಕಾಂಗ್ರೆಸ್‌ ತಯಾರಿ: ಹಲ ಶಾಸಕರು, ಮಾಜಿ ಸಚಿವರ ಮೇಲೆ ಕಣ್ಣು

lok sabha elections Karnataka Politics ಲೋಕಸಭೆ ಚುನಾವಣೆಗೆ ಪೂರ್ವಭಾವಿ ತಯಾರಿ ಆರಂಭಿಸಿರುವ ಆಡಳಿತಾರೂಢ ಕರ್ನಾಟಕ ಕಾಂಗ್ರೆಸ್‌ ಬಿಜೆಪಿ, ಜಾ.ದಳ ಮುಖಂಡರ ಮೇಲೆ ಕಣ್ಣಿಟ್ಟಿದೆ. ಈಗಾಗಲೇ ವಲಸೆ ಶುರುವಾಗಿದ್ದು, ಇನ್ನೂ ಹೆಚ್ಚುವ ಮುನ್ಸೂಚನೆ ನೀಡಿದೆ.

ಕರ್ನಾಟಕದಲ್ಲಿ ಶಾಸಕರು, ಮಾಜಿ ಸಚಿವರನ್ನು ಸೆಳೆಯಲು ಕಾಂಗ್ರೆಸ್‌ ಮುಂದಾಗಿದೆ.
ಕರ್ನಾಟಕದಲ್ಲಿ ಶಾಸಕರು, ಮಾಜಿ ಸಚಿವರನ್ನು ಸೆಳೆಯಲು ಕಾಂಗ್ರೆಸ್‌ ಮುಂದಾಗಿದೆ.

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ತಯಾರಿ ನಡೆಸಿರುವ ಕಾಂಗ್ರೆಸ್‌ ಪಕ್ಷ ಬಿಜೆಪಿ ಹಾಗೂ ಜಾ.ದಳ ಶಾಸಕರು, ಮುಖಂಡರಿಗೆ ಗಾಳ ಹಾಕಿದೆ.

ಟ್ರೆಂಡಿಂಗ್​ ಸುದ್ದಿ

ಈಗಾಗಲೇ ಇಪ್ಪತ್ತಕ್ಕೂ ಹೆಚ್ಚು ಮುಖಂಡರು, ಶಾಸಕರೊಂದಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನಿರಂತರ ಸಂಪರ್ಕದಲ್ಲಿದ್ದಾರೆ. ಈಗಾಗಲೇ ಹಲವು ಸುತ್ತುಗಳ ಮಾತುಕತೆಗಳೂ ನಡೆದಿವೆ. ಪಕ್ಷದ ಹಿರಿಯ ನಾಯಕರ ಅನುಮತಿ ಪಡೆದು ಯಾವುದೇ ಕ್ಷಣದಲ್ಲಾದರೂ ಶಾಸಕರು ಹಾಗೂ ಮುಖಂಡರು ಕಾಂಗ್ರೆಸ್‌ ಪಕ್ಷ ಸೇರುವ ಸಾಧ್ಯತೆಯಿದೆ. ಈಗಾಗಲೇ ಶಿವಮೊಗ್ಗದ ಮಾಜಿ ಸಂಸದ ಹಾಗೂ ಮಾಜಿ ಶಾಸಕ ಅಯನೂರು ಮಂಜುನಾಥ್‌ ಮೂರು ದಿನದ ಹಿಂದೆಯೇ ಕಾಂಗ್ರೆಸ್‌ ಸೇರಿದ್ದಾರೆ. ಈ ಪಕ್ಷಾಂತರ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ಹೆಚ್ಚಲಿದೆ.

ಯಾರ್ಯಾರು ಪಟ್ಟಿಯಲ್ಲಿ

ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್‌, ಯಲ್ಲಾಪುರ ಶಾಸಕ ಅರೇಬೈಲು ಶಿವರಾಂ ಹೆಬ್ಬಾರ್‌, ಮಹಾಲಕ್ಷ್ಮಿಪುರ ಶಾಸಕ ಗೋಪಾಲಯ್ಯ, ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ, ಕೆಆರ್‌ಪುರಂ ಶಾಸಕ ಬೈರತಿ ಬಸವರಾಜು ಸಹಿತ ಹಲವರು ಕಾಂಗ್ರೆಸ್‌ನ ಸಂಪರ್ಕದಲ್ಲಿದ್ದಾರೆ. ಧಾರವಾಡದಲ್ಲಿ ಮಾಜಿ ಸಚಿವ ಹಾಗೂ ಜಗದೀಶ್‌ ಶೆಟ್ಟರ್‌ ಬೆಂಬಲಿಗ ಶಂಕರ್‌ ಪಾಟೀಲ್‌ ಮುನೇನಕೊಪ್ಪ, ಉಡುಪಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ, ಮಾಜಿ ಸಚಿವ ಪಾಂಡವಪುರದ ಪುಟ್ಟರಾಜು, ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್‌, ಹೊನ್ನಾಳಿಯ ಎಂ.ಪಿ.ರೇಣುಕಾಚಾರ್ಯ, ರೋಣದ ಕಳಕಪ್ಪ ಬಂಡಿ ಸಹಿತ ಹಲವರ ಹೆಸರು ಚಾಲ್ತಿಯಲ್ಲಿದೆ.

ಲೋಕಸಭೆ ಚುನಾವಣೆಗೆ

ಇವರಲ್ಲಿ ಮುನೇನಕೊಪ್ಪ ಅವರಿಗೆ ಪ್ರಹ್ಲಾದಜೋಶಿ ವಿರುದ್ದ ಧಾರವಾಡದಿಂದ ಅಭ್ಯರ್ಥಿಯಾಗಿಸುವ ಯೋಚನೆ ಕಾಂಗ್ರೆಸ್‌ ನಾಯಕರಲ್ಲಿದೆ. ಈ ಕ್ಷೇತ್ರ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರಿಗೆ ಸವಾಲಿನ ಕ್ಷೇತ್ರವೂ ಹೌದು. ಇಲ್ಲಿ ತಮ್ಮ ಶಕ್ತಿ ಪ್ರರ್ದಶನದ ಮೂಲಕ ಜೋಶಿ ಅವರಿಗೆ ಸೋಲಿಸಬೇಕು ಎನ್ನುವ ರಾಜಕೀಯ ಲೆಕ್ಕಾಚಾರವನ್ನು ಶೆಟ್ಟರ್‌ ಹಾಕಿಕೊಂಡಿದ್ದಾರೆ. ಇದಲ್ಲದೇ ಹಾವೇರಿ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರಯತ್ನಿಸುವಾಗಿ ಶೆಟ್ಟರ್‌ ಹೇಳಿರುವುದರಿಂದ ಆ ಭಾಗದಲ್ಲಿ ಬಿಜೆಪಿಯ ಕೆಲವರನ್ನು ಸೆಳೆಯುವ ಪ್ರಯತ್ನ ನಡೆದಿವೆ.

ಇದಲ್ಲದೇ ಉಡುಪಿ ಚಿಕ್ಕಮಗಳೂರಿನಿಂದ ಜಯಪ್ರಕಾಶ್‌ ಹೆಗ್ಡೆ, ರೇಣುಕಾಚಾರ್ಯ ದಾವಣಗೆರೆಯಿಂದ , ಡಾ.ಸುಧಾಕರ್‌ ಅವರನ್ನು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕಣಕ್ಕಿಳಿಸಿದರೆ ಹೇಗೆ ಎನ್ನುವ ಚರ್ಚೆಗಳು ಕಾಂಗ್ರೆಸ್‌ ವಲಯದಲ್ಲಿ ನಡೆದಿವೆ. ಇದೇ ರೀತಿ ಶಿವರಾಂ ಹೆಬ್ಬಾರ್‌ ಅವರಿಗೆ ಕೆನರಾ ಹಾಗೂ ಎಸ್‌.ಟಿ.ಸೋಮಶೇಖರ್‌ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಕಣಕ್ಕಿಳಿಸಿ ಅವರ ಮಕ್ಕಳಿಗೆ ವಿಧಾನಸಭೆ ಚುನಾವಣೆಯಲ್ಲಿ ಅವಕಾಶ ಮಾಡಿಕೊಡುವ ಕುರಿತು ಮಾತುಕತೆಗಳು ನಡೆದಿವೆ ಎನ್ನಲಾಗುತ್ತಿದೆ.

ಜಾ.ದಳ ಶಾಸಕರ ಕಡೆಗೆ

ಇದಲ್ಲದೇ ಜಾ.ದಳ ಶಾಸಕರಾದ ಮೈಸೂರಿನ ಜಿ.ಟಿ.ದೇವೇಗೌಡ ಅವರೊಂದಿಗೂ ಕಾಂಗ್ರೆಸ್‌ ನಾಯಕರು ಮಾತುಕತೆ ನಡೆಸಿದ್ದರೂ ಅವರು ಪೂರಕವಾಗಿ ಸ್ಪಂದಿಸಿಲ್ಲ. ಸದ್ಯಕ್ಕೆ ಅಂತಹ ಯಾವುದೇ ಯೋಚನೆ ಇಲ್ಲ ಎನ್ನುವ ಸಂದೇಶವನ್ನು ಜಿ.ಟಿ.ದೇವೇಗೌಡ ರವಾನಿಸಿದ್ದಾರೆ. ಇದಲ್ಲದೇ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾ ನಾಯಕ್‌ ಅವರನ್ನು ಸಂಪರ್ಕಿಸಿದ್ದು, ಅವರಿಂದಲೂ ಪೂರಕ ಪ್ರತಿಕ್ರಿಯೆ ದೊರೆತಿಲ್ಲ.

ಇನ್ನು ಮಂಡ್ಯದಿಂದ ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು ಅವರನ್ನು ಸೆಳೆದು ಮಂಡ್ಯದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿಸುವ ಪ್ರಯತ್ನವೂ ಸದ್ದಿಲ್ಲದೇ ನಡೆದಿದೆ. ಪುಟ್ಟರಾಜು ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಆಪ್ತರು. ಕಳೆದ ವಿಧಾನಸಭೆ ಚುನಾವಣೆಯಲ್ಲಿಯೇ ಪುಟ್ಟರಾಜು ಅವರನ್ನು ಕಾಂಗ್ರೆಸ್‌ಗೆ ಸೆಳೆಯುವ ಪ್ರಯತ್ನಗಳು ನಡೆದಿದ್ದವು.

ಸಂಸದರ ಮೇಲೂ ಕಣ್ಣು

ಹಾಲಿ ಸಂಸದರಾಗಿರುವ ಕೊಪ್ಪಳದ ಕರಡಿ ಸಂಗಣ್ಣ, ತುಮಕೂರಿನ ಜಿ.ಎಸ್‌.ಬಸವರಾಜು ಅವರ ಮೇಲೂ ನಾಯಕರ ಕಣ್ಣಿಟ್ಟಿದ್ದಾರೆ. ಅವರನ್ನು ಸೆಳೆದರೆ ಹೇಗೆ ಎನ್ನುವ ಕುರಿತು ಮಾತುಕತೆಗಳು ಪ್ರಾಥಮಿಕ ಹಂತದಲ್ಲಿದ್ದು, ಮುಂದೆ ಇದು ಇನ್ನಷ್ಟು ವಿಸ್ತರಣೆಯಾಗಬಹುದು ಎನ್ನಲಾಗುತ್ತಿದೆ.

ಅನಾಥ ಭಾವ

ವಿಧಾನ ಸಭೆ ಚುನಾವಣೆ ಮುಗಿದು ನೂರು ದಿನ ಕಳೆದರೂ ಬಿಜೆಪಿಯಲ್ಲಿ ಪ್ರತಿಪಕ್ಷ ನಾಯಕರ ನೇಮಕ ಆಗಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯೂ ಆಗಿಲ್ಲ. ಇದರಿಂದ ಬಿಜೆಪಿಯಲ್ಲಿ ನಾಯಕರಲ್ಲಿಯೇ ಅನಾಥಭಾವ ಕಾಡುತ್ತಿದೆ. ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ತಯಾರಿ ಆರಂಭಿಸಿದ್ದರೂ ನಾಯಕರ ವೈಮನಸ್ಯದಿಂದ ಏನು ಆಗುತ್ತಿಲ್ಲ ಎನ್ನುವ ಬೆಳವಣಿಗೆಗಳು ಬಿಜೆಪಿಯಲ್ಲಿ ಚಟುವಟಿಕೆಯಿಂದ ದೂರವಾಗಿಸಿದೆ. ಈ ಕಾರಣದಿಂದ ಕಾಂಗ್ರೆಸ್‌ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ತಯಾರಿ ನಡೆಸುತ್ತಿದೆ.

ಸಿದ್ದು ಹೇಳಿದ್ದೇನು

ಬಿಜೆಪಿ ಕರ್ನಾಟಕದಲ್ಲಿ ದಿವಾಳಿಯಾಗಿದೆ. ಸರ್ಕಾರ ಅಸ್ತಿತ್ವಕ್ಕೆ ಬಂದು ನೂರು ದಿನಗಳಾದರೂ ಒಬ್ಬ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗಿಲ್ಲ. ಕರ್ನಾಟಕದ ಇತಿಹಾಸದಲ್ಲಿ ವಿರೋಧ ಪಕ್ಷಕ್ಕೆ ಇಂಥ ಪರಿಸ್ಥಿತಿ ಎದುರಾಗಿರಲ್ಲಿಲ್ಲ. ನಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿ ಬರುವವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಸೋಮವಾರ ತಿಳಿಸಿದರು.

ಶೆಟ್ಟರ್‌ ಹೇಳಿಕೆಯೇನು?

ಬಿಜೆಪಿಯಿಂದ 10 ರಿಂದ 30 ಮುಖಂಡರು, ಪ್ರಮುಖರು ಕಾಂಗ್ರೆಸ್ ಸೇರ್ಪಡೆಯಾಗಬಹುದು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ಬಿಜೆಪಿ ಕೆಲ ನಾಯಕರು ಕಾಂಗ್ರೆಸ್ ಸೇರ್ತಾರೆ. ಯಾರ ಹೆಸರು ಹೇಳೋಕೆ ಆಗಲ್ಲ. ಬಿಜೆಪಿಯ ಹಲವಾರು ನಾಯಕರು ಕರೆ ಮಾಡುತ್ತಿದ್ದಾರೆ. ತಳ ಮಟ್ಟದ ಕಾರ್ಯಕರ್ತರು ಕರೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಗೆ ಬರೋರ ಹೆಸರು ಹೇಳಿದ್ರೆ ಅವರಿಗೆ ತೊಂದರೆಯಾಗುತ್ತೆ. ಸಮಯ ಬಂದಾಗ ಹೇಳುವೆ. ದಿನೇ ದಿನೇ ಬಿಜೆಪಿ ಅಧೋಗತಿಗೆ ತಲುಪಿರುವುದಂತೂ ಸತ್ಯ ಎಂದು ಹೇಳಿದರು.

ಜೋಶಿ ಹೇಳಿಕೆ

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಪಕ್ಷ ಬಿಡುವುದಿಲ್ಲ ಎನ್ನುವ ವಿಶ್ವಾಸವಿದೆ. ಅವರೊಂದಿಗೆ ಮಾತನಾಡಲಾಗಿದೆ. ಪಕ್ಷದ ಶಾಸಕರೊಂದಿಗೆ ಸೇರಿ ಮುಂದಿನ ಲೋಕಸಭೆ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿರಿ