ಕನ್ನಡ ಸುದ್ದಿ  /  Karnataka  /  Lok Sabha Election 2024 Bangalore Rural Constituency Prestige To Hd Devegowda And Dk Shivakumar Family Mrt

ಹೆಚ್‌ಡಿಡಿ-ಡಿಕೆಶಿ ಕುಟುಂಬಗಳ ಪ್ರತಿಷ್ಠೆಯ ಕಣ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ; ಡಾ ಮಂಜುನಾಥ್ ಕೈ ಹಿಡಿತಾನಾ ಮತದಾರ

HDD vs DKS: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಈ ಬಾರಿ ರಾಜ್ಯದ ಎರಡು ಪ್ರಬಲ ಕುಟುಂಬಗಳ ನಡುವಿನ ಪ್ರತಿಷ್ಠೆ ಹಾಗೂ ಪ್ರಬಲ ಪೈಪೋಟಿಗೆ ಕಾರಣವಾಗಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಅಳಿಯ ಖ್ಯಾತ ವೈದ್ಯ ಡಾ ಸಿಎನ್ ಮಂಜುನಾಥ್ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸಿರುವುದು ತೀವ್ರ ಕುತೂಹಲ ಮೂಡಿಸಿದೆ. ಹೆಚ್‌ಡಿಡಿ-ಡಿಕೆಶಿ ಕುಟುಂಬಗಳ ನಡುವೆ ಪ್ರತಿಷ್ಠೆಯ ಕದನವಾಗಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಅಳಿಯ ಖ್ಯಾತ ವೈದ್ಯ ಡಾ ಸಿಎನ್ ಮಂಜುನಾಥ್ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸಿರುವುದು ತೀವ್ರ ಕುತೂಹಲ ಮೂಡಿಸಿದೆ. ಹೆಚ್‌ಡಿಡಿ-ಡಿಕೆಶಿ ಕುಟುಂಬಗಳ ನಡುವೆ ಪ್ರತಿಷ್ಠೆಯ ಕದನವಾಗಿದೆ.

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ದೇಶದ ಗಮನ ಸೆಳೆಯುತ್ತಿರುವ ಕ್ಷೇತ್ರಗಳಲ್ಲಿ ಬೆಂಗಳೂರು ಗ್ರಾಮಾಂತರವೂ ಒಂದಾಗಲಿದೆ. ಈ ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ ಅಳಿಯ ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್. ಮಂಜುನಾಥ್ ಅವರು ಬಿಜೆಪಿ ಚಿನ್ಹೆಯ ಮೇಲೆ ಸ್ಪರ್ಧೆ ಮಾಡುತ್ತಿರುವುದು ಮೊದಲ ಕಾರಣ. ಚೊಚ್ಚಲ ಪ್ರಯತ್ನದಲ್ಲೇ ಅವರು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಹೋದರ ಹ್ಯಾಟ್ರಿಕ್ ಹೊಡೆಯಲು ಸಜ್ಜಾಗಿರುವ ಡಿಕೆ ಸುರೇಶ್ ವಿರುದ್ಧ ಸ್ಪರ್ಧೆ ಮಾಡಿದ್ದಾರೆ. ಎರಡೂ ಕುಟುಂಬಗಳಿಗೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಡಾ. ಮಂಜುನಾಥ್ ಸರಳ ಮತ್ತು ಸಂಭಾವಿತ ವೈದ್ಯ ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ. ಮೊದಲು ಚಿಕಿತ್ಸೆ ನಂತರ ಹಣ ಎಂಬ ಧ್ಯೇಯ ವಾಕ್ಯ ಅವರದ್ದು. ಅವರ ಈ ಒಳ್ಳೆಯತನ ಚುನಾವಣೆಯಲ್ಲಿ ಪ್ರಯೋಜನಕ್ಕೆ ಬರಲಿದೆ ಎಂಬ ನಿರೀಕ್ಷೆಯಿದೆ. ಜೊತೆಗೆ ಪ್ರಧಾನಿ ಮೋದಿ ಅವರ ನಾಮಬಲವೂ ಮಂಜುನಾಥ್ ಅವರ ಕೈ ಹಿಡಿಯುವ ಸಾಧ್ಯತೆಗಳಿವೆ.

ಒಂದು ವೇಳೆ ಡಾ ಸಿಎನ್ ಮಂಜುನಾಥ್ ಅವರು ಗೆದ್ದರೆ ಮೋದಿ ಸಂಪುಟದಲ್ಲಿ ಆರೋಗ್ಯ ಸಚಿವರಾಗಲಿದ್ದಾರೆ ಎಂದೂ ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಹೇಳುತ್ತಾರೆ. ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿಯೂ ಸಚಿವರನ್ನಾಗಿ ಮಾಡುವ ಅವಕಾಶವಿತ್ತಲ್ಲವೇ ಎಂದು ಕಾಂಗ್ರೆಸ್ ಮರು ಪ್ರಶ್ನೆ ಹಾಕುತ್ತಿದೆ.

ಮಂಜುನಾಥ್ ಹೊರಗಿನಿಂದ ಬಂದಿರುವ ಅಭ್ಯರ್ಥಿ. ನಾನು ಕ್ಷೇತ್ರದ ಮಣ್ಣಿನ ಮಗ. ಆದ್ದರಿಂದ ನನ್ನನ್ನು ಬೆಂಬಲಿಸಿ ಎಂದು ಸುರೇಶ್ ಜೆಡಿಎಸ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ತನ್ನದೇ ಆದ ಬೆಂಬಲದಿಂದ ಗೆಲ್ಲುವ ಶಕ್ತಿ ಹೊಂದಿಲ್ಲವಾದರೂ ಚುನಾವಣೆಯಿಂದ ಚುನಾವಣೆಗೆ ಮತಗಳಿಕೆಯನ್ನು ವೃದ್ದಿಸಿಕೊಳ್ಳುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿಎನ್ ಅಶ್ವತ್ಥನಾರಾಯಣ 6,71,388 ಮತಗಳನ್ನು ಪಡೆದಿದ್ದರೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸುರೇಶ್ 8,78,258 ಮತಗಳನ್ನು ಪಡೆದಿದ್ದರು. ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್‌ನ ಬಹುತೇಕ ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನು ಡಿಕೆ ಸಹೋದರರು ಸೆಳೆದುಕೊಂಡಿದ್ದಾರೆ.

ಈ ಬಾರಿ ಜೆಡಿಎಸ್ ಬಿಜೆಪಿ ಒಂದಾಗಿರುವುದು ಸುರೇಶ್ ಅವರ ನಿದ್ದೆಗೆಡಿಸಿರುವುದು ಸುಳ್ಳಲ್ಲ. ಗೆಲುವಿಗಾಗಿ ಅವರು ಸಾಕಷ್ಟು ಬೆವರು ಹರಿಸಬೇಕಾಗಿದೆ. ಡಿಸಿಎಂ ಶಿವಕುಮಾರ್ ಪಕ್ಷದ ಅಧ್ಯಕ್ಷರಾಗಿ ಇಡೀ ರಾಜ್ಯದ ಉಸ್ತುವಾರಿ ವಹಿಸುವುದರ ಜೊತಗೆ ತಮ್ಮನ ಕ್ಷೇತ್ರಕ್ಕೆ ಹೆಚ್ಚಿನ ಗಮನ ಹರಿಸಬೇಕಾಗಿ ಬರಬಹುದು. ಕಾಂಗ್ರೆಸ್ ಕಾರ್ಯಕರ್ತರೂ ಇದನ್ನು ಒಪ್ಪುತ್ತಾರೆ. ಮಂಜುನಾಥ್ ಅವರು ಗೌಡರ ಕುಟುಂಬದ ಸದಸ್ಯ ಎಂಬ ಅಂಶವನ್ನು ಹೊರತುಪಡಿಸಿ ಅವರನ್ನು ಟೀಕಿಸಲು ಕಾಂಗ್ರೆಸ್ ಬಳಿ ಅಸ್ತ್ರಗಳೇ ಇಲ್ಲ. ಆದ್ದರಿಂದ ಮತಗಳಿಕೆ ಪ್ರಮಾಣ ಕಡಿಮೆಯಾಗಬಹುದು. ಆದರೆ ಗೆಲುವು ಸುರೇಶ್ ಅವರದ್ದೇ ಎಂದು ಖಡಾಖಂಡಿತವಾಗಿ ಹೇಳುತ್ತಾರೆ. ಕಳೆದ ಚುನಾವಣೆಯಲ್ಲಿ ಕನಕಪುರ ಹೊರತುಪಡಿಸಿ ಇಡೀ ಕ್ಷೇತ್ರದಲ್ಲಿ ಬಿಜೆಪಿ ಮತಗಳಿಕೆ ಆಶಾದಾಯಕವಾಗಿತ್ತು. ಈ ಬಾರಿ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ತಮ್ಮ ಕಡುವೈರಿ ಡಿಕೆ ಸಹೋದರರನ್ನು ಮಣಿಸಲು ಎಚ್.ಡಿ.ಕುಮಾರಸ್ವಾಮಿ ಮತ್ತು ಮಂಜುನಾಥ್ ಅವರ ಜೊತೆ ನಿಕಟ ಸಂಪರ್ಕ ಸಾಧಿಸಿದ್ದಾರೆ.

ಗೌಡರ ಕುಟುಂಬದ ಜೊತೆ ಘರ್ಷಣೆ ಡಿ.ಕೆ ಸಹೋದರರಿಗೆ ಹೊಸದೇನಲ್ಲ. 2013ರ ಲೋಕಸಭಾ ಉಪ ಚುನಾವಣೆಯಲ್ಲಿ ಸುರೇಶ್, ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಮಣಿಸಿದ್ದರು. 2014 ಮತ್ತು 2019ರಲ್ಲಿ ಮೋದಿ ಅಲೆಯ ನಡುವೆಯೂ ಗೆಲುವಿನ ನಗೆ ಬೀರಿದ್ದರು. 1989ರಲ್ಲಿ ಶಿವಕುಮಾರ್ ಕನಕಪುರದಲ್ಲಿ ದೇವೇಗೌಡ ಅವರನ್ನೇ ಸೋಲಿಸಿದ್ದರು. 2002ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಶಿವಕುಮಾರ್ ಅವರನ್ನು ಸೋಲಿಸಿದ ದೇವೇಗೌಡರು ಮತ್ತೆ ರಾಜಕೀಯ ಪುನರ್ಜನ್ಮ ಪಡೆದಿದ್ದರು. 1999ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಹಾಸನದಲ್ಲಿ ಗೌಡರು ಪುಟ್ಟಸ್ವಾಮಿ ಗೌಡರ ವಿರುದ್ಧ ಪರಾಭವಗೊಂಡಿದ್ದರು. ಇದೀಗ ಮತ್ತೊಂದು ಹಣಾಹಣಿಗೆ ಎರಡು ಕುಟುಂಬಗಳು ಸಜ್ಜಾಗಿವೆ. ಯಾರೇ ಗೆದ್ದರೂ ಅಂತರ ಕಡಿಮೆ ಎನ್ನುವುದಂತೂ ಸತ್ಯ.

IPL_Entry_Point